ಜಗಳಕ್ಕೂ ನನಗೂ ಯಾವ ಸಂಬಂಧವಿಲ್ಲ

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ ಹೊಟೇಲ್​ನಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಜಗಳಕ್ಕೂ ನನಗೂ ಸಂಬಂಧ ಇಲ್ಲ ಎಂದು ನಟಿ ರಾಗಿಣಿ ದ್ವಿವೇದಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಫೇಸ್​ಬುಕ್ ಖಾತೆಯಲ್ಲಿ ಬರೆದು ಕೊಂಡಿರುವ ರಾಗಿಣಿ, ‘ಗೌರವಯುತ ಮೌನ ಮತ್ತು ಪ್ರಾಮಾಣಿಕ ಜೀವನಶೈಲಿಯನ್ನು ಕಾಪಾಡಿಕೊಂಡು ಬಂದಿದ್ದೇನೆ. ರವಿಶಂಕರ್ ಮೇಲೆ ಶಿವಪ್ರಕಾಶ್ ಹಲ್ಲೆ ನಡೆಸಿರುವ ಘಟನೆ ಆಘಾತ ಕಾರಿ ಮತ್ತು ಬೇಸರದ ಸಂಗತಿ. ನಾನು ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದೆ. ಘಟ ನೆಗೂ ನನಗೆ ಸಂಬಂಧ ಇಲ್ಲ. ಇದು ಅವರಿಬ್ಬರ ನಡುವಿನ ವಿಷಯವಾಗಿದ್ದು, ಸ್ಥಳದಲ್ಲಿ ಇರುವವವರು ಸಾಕ್ಷಿಯಾಗುವಂತೆ ನಾನು ಕೂಡ ಘಟನೆಗೆ ಕೇವಲ ಸಾಕ್ಷಿಯಾಗಿದ್ದೇನೆ. ಅಗತ್ಯವೆನಿಸಿ ದರೆ ಪೊಲೀಸರ ಎದುರು ಹೇಳಿಕೆ ನೀಡುತ್ತೇನೆ. ನನ್ನ ಮತ್ತು ಆ ಇಬ್ಬರ ನಡುವೆ ನಂಟು ಇಲ್ಲ. ಹೀಗಾಗಿ, ನನ್ನ ಹೆಸರನ್ನು ಘಟನೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ. ನನ್ನ ಹೆಸರನ್ನು ಬಳಸಿ ನನ್ನ ತೇಜೋವಧೆ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾ.15ರಂದು ರಿಟ್ಜ್ ಕಾರ್ಲ್​ಟನ್ ಹೋಟೆಲ್​ನ ರೂಫ್​ಟಾಪ್ ಲಾಂಜ್​ನಲ್ಲಿ ರಾಗಿಣಿ ಹಾಗೂ ಇತರ ಸ್ನೇಹಿತರ ಜತೆ ಕುಳಿತಿದ್ದಾಗ ಶಿವಪ್ರಕಾಶ್ ಎಂಬಾತ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಸಾರಿಗೆ ಇಲಾಖೆ ನೌಕರ ರವಿಶಂಕರ್ ಅಶೋಕ ನಗರ ಠಾಣೆಗೆ ದೂರು ನೀಡಿದ್ದಾರೆ.

ಎತ್ತಂಗಡಿ: ಉದ್ಯಮಿ ಶಿವಪ್ರಕಾಶ್​ನಿಂದ ಹಲ್ಲೆಗೆ ಒಳಗಾಗಿರುವ ಬೆಂಗಳೂರು ಕೇಂದ್ರ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಎಫ್​ಡಿಎ ಆಗಿರುವ ಬಿ.ಕೆ ರವಿಶಂಕರ್ ಅವರನ್ನು ರಾಯಚೂರು ಆರ್​ಟಿಒ ಕಚೇರಿಗೆ ಎತ್ತಂಗಡಿ ಮಾಡಲಾಗಿದೆ. ಘಟನೆ ನಡೆದ ಬಳಿಕ ಹಲ್ಲೆ ಆರೋಪಿ ಶಿವಪ್ರಕಾಶ್​ನನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಅಶೋಕನಗರ ಪೊಲೀಸರು ತಿಳಿಸಿದ್ದಾರೆ.