ಎಲ್ಲಿ ಗೌರವ ಇರುವುದಿಲ್ಲವೋ ಅಲ್ಲಿ ಕಾಲನ್ನು ಇಡಬಾರದೆಂದು ಹೇಳಿ ಲಾರೆನ್ಸ್​ ಅಕ್ಷಯ್​ ಚಿತ್ರದಿಂದ ಹೊರ ನಡೆದಿದ್ದೇಕೆ?

ಮುಂಬೈ: ಅಗೌರವ ತೋರಿಸಿದರು ಎಂಬ ಕಾರಣ ಹೇಳಿ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್​ ಅವರು ನಟ ಅಕ್ಷಯ್​ ಕುಮಾರ್​ ಅಭಿನಯದ ‘ಲಕ್ಷ್ಮೀ ಬಾಂಬ್’​ ಚಿತ್ರತಂಡದಿಂದ ಹೊರ ನಡೆದಿದ್ದಾರೆ.

ಹೌದು, ರಾಘವ ಲಾರೆನ್ಸ್​ ತಮಿಳು ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ತಮ್ಮ ಅಮೋಘ ಅಭಿನಯ, ಮನಸೆಳೆಯುವ ಡ್ಯಾನ್ಸ್​ ಹಾಗೂ ನಿರ್ದೇಶನದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ತಮ್ಮ ರಾಘವ ಲಾರೆನ್ಸ್​ ಚಾರಿಟಿ ಮೂಲಕ ಉತ್ತಮ ಕಾರ್ಯ ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ. ಇಂತಹ ಕಲಾವಿದನಿಗೆ ಹಿಂದಿ ಚಿತ್ರರಂಗದಲ್ಲಿ ಅಗೌರವ ತೋರಲಾಗಿದೆಯಂತೆ. ಹೌದು ಎಂದಿದ್ದಾರೆ ಲಾರೆನ್ಸ್.

ಕಾಲಿವುಡ್​ನಲ್ಲಿ ಅದ್ಭುತ ಯಶಸ್ಸು ಗಳಿಸಿದ ಕಾಮಿಡಿ ಮಿಶ್ರಿತ ಹಾರರ್​ ಚಿತ್ರ ‘ಕಾಂಚಣ’ ಬಾಲಿವುಡ್​ನಲ್ಲಿ ‘ಲಕ್ಷ್ಮೀ ಬಾಂಬ್​’ ಹೆಸರಿನಲ್ಲಿ ಮೂಡುಬರುತ್ತಿದ್ದು, ಅಕ್ಷಯ್​ ಕುಮಾರ್​ ನಾಯಕನಾಗಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೊದಲು ನಿರ್ದೇಶನದ ಜವಬ್ದಾರಿ ಹೊತ್ತಿದ್ದ ಲಾರೆನ್ಸ್​​ ಚಿತ್ರ ಸೆಟ್ಟೇರಿದ ಒಂದೇ ತಿಂಗಳಲ್ಲಿ ತನ್ನ ಜವಬ್ದಾರಿಯನ್ನು ಕೆಳಗಿಳಿಸಿ ಚಿತ್ರತಂಡದಿಂದ ಹೊರನಡೆದಿದ್ದಾರೆ.

ತಮ್ಮ ಗಮನಕ್ಕೆ ತರದೇ ಚಿತ್ರದ ಫಸ್ಟ್​ ಲುಕ್​ ಅನ್ನು ಬಿಡುಗಡೆ ಮಾಡಿ ನನಗೆ ಅಗೌರವ ತೊರಿದ್ದಾರೆ ಎಂದು ರಾಘವ ಲಾರೆನ್ಸ್​ ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಲಾರೆನ್ಸ್​ ಅವರು ನಮ್ಮ ಹಿರಿಯರು ಹೇಳುವ ಪ್ರಕಾರ ಎಲ್ಲಿ ಗೌರವ ಸಿಗುವುದಿಲ್ಲವೋ ಆ ಮನೆಗೆ ನಮ್ಮ ಕಾಲನ್ನು ಇಡಬಾರದು. ಈ ಪ್ರಪಂಚದಲ್ಲಿ ಹಣ ಹಾಗೂ ಖ್ಯಾತಿಗಿಂತ ಸ್ವಾಭಿಮಾನವೇ ಮುಖ್ಯವಾದದ್ದು, ಇದು ವ್ಯಕ್ತಿಯೊಬ್ಬನ ವ್ಯಕ್ತಿತ್ವದಲ್ಲಿ ಅತಿ ಮುಖ್ಯವಾದ ಗುಣ ಲಕ್ಷಣವೋ ಹೌದು, ಹೀಗಾಗಿ ನಾನು ಲಕ್ಷ್ಮೀ ಬಾಂಬ್​ ಚಿತ್ರತಂಡದಿಂದ ಹೊರಬರುವ ನಿರ್ಧಾರ ಮಾಡಿದ್ದೇನೆ. ಇದು ಕಾಂಚಣ ಚಿತ್ರದ ಹಿಂದಿ ರಿಮೇಕ್​ ಎಂದು ಲಾರೆನ್ಸ್​ ಬರೆದುಕೊಂಡಿದ್ದಾರೆ.

ನಾನು ಚಿತ್ರತಂಡದಿಂದ ಹೊರ ಬರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಅತಿ ಮುಖ್ಯವಾಗಿ ಚಿತ್ರದ ಫಸ್ಟ್​ ಲಕ್​ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡದೆ ನನ್ನ ಗಮನಕ್ಕೂ ತರದೇ ಬಿಡುಗಡೆ ಮಾಡಲಾಗಿದೆ. ಒಬ್ಬ ನಿರ್ದೇಶಕನಾಗಿ ನನ್ನ ಚಿತ್ರದ ಫಸ್ಟ್​ ಲುಕ್​ ಅನ್ನು ನನ್ನ ಗಮನಕ್ಕೆ ತರದೇ ಇನ್ನೊಬ್ಬರಿಂದ ಬಿಡುಗಡೆ ಮಾಡಿರುವುದು ನನಗೆ ತುಂಬಾ ನೋವಾಗಿದೆ ಎಂದು ನಾನು ಮೂರನೇ ವ್ಯಕ್ತಿ ಬಳಿ ಹೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ನಿರ್ಮಾಪಕರು ನನ್ನ ಜಾಗಕ್ಕೆ ಮತ್ತೊಬ್ಬರನ್ನು ಕರೆತರಬಹುದು. ನಾನು ಆದಷ್ಟು ಬೇಗ ಅಕ್ಷಯ್​ ಕುಮಾರ್​ ಅವರನ್ನು ಭೇಟಿ ಮಾಡಿ ಚಿತ್ರದ ಸ್ಕ್ರಿಪ್ಟ್​ ಅನ್ನು ಅವರಿಗೆ ನೀಡಿ ಒಳ್ಳೆಯ ರೀತಿಯಲ್ಲೇ ನಾನು ಚಿತ್ರತಂಡದಿಂದ ಹೊರಬರುತ್ತೇನೆ ಎಂದು ಲಾರೆನ್ಸ್​ ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *