ಏನೇ ಆದರೂ ರಫೆಲ್​ ಒಪ್ಪಂದ ರದ್ದಾಗದು

ನವದೆಹಲಿ: ರಫೆಲ್​ ಒಬ್ಬಂದದ ಎಲ್ಲ ಅಂಕಿ ಅಂಶಗಳೂ ಸಿಎಜಿ ಎದುರಿದೆ. ನಾವು ಅದರ ವರದಿಗಾಗಿ ಕಾಯುತ್ತಿದ್ದೇವೆ. ಯಾವುದೇ ಕಾರಣಕ್ಕೂ ರಫೆಲ್​ ಒಪ್ಪಂದವನ್ನು ಮಾತ್ರ ರದ್ದುಗೊಳಿಸುವುದಿಲ್ಲ ಎಂದು ಹಣಕಾಸು ಸಚಿವ ಅರುಣ್​ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ” ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಖರೀದಿಸಲು ಉದ್ದೇಶಿಸಿದ ವೆಚ್ಚಕ್ಕಿಂತಲೂ ನಮ್ಮ ಒಪ್ಪಂದ ಅತ್ಯಂತ ಅಗ್ಗದ್ದಾಗಿದೆ. ಅಂಕಿ ಅಂಶಗಳೆಲ್ಲವೂ ಸಿಎಜಿ ಎದುರಿಗಿದೆ. ನಮ್ಮ ಒಪ್ಪಂದ ಸ್ವಚ್ಛವಾಗಿದೆ. ಹೀಗಾಗಿ ಅದನ್ನು ರದ್ದುಪಡಿಸುವ ಮಾತೇ ಇಲ್ಲ,” ಎಂದು ಅವರು ತಿಳಿಸಿದ್ದಾರೆ.

“ಹಲವು ಕಾರಣಗಳಿಂದಾಗಿ ಒಪ್ಪಂದದ ವೆಚ್ಚದ ಕುರಿತ ವಿವರಗಳನ್ನು ಬಹಿರಂಗಪಡಿಸಲು ಸಾದ್ಯವಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದಂತೆ ತೀರ ಹತ್ತಿರದ ವಿಚಾರಗಳನ್ನು ಹೇಳುತ್ತೇನೆ. 2007ರ ಒಪ್ಪಂದಕ್ಕಿಂತಲೂ 2016ರ ಒಪ್ಪಂದದಲ್ಲಿ ಒಂದು ವಿಮಾನದ ಮೇಲೆ ಶೇ.20ರಷ್ಟು ದರ ಕಡಿತಗೊಳಿಸಲಾಗಿದೆ. ಬೆಲೆ ಮತ್ತು ವೆಚ್ಚದ ವಿಚಾರವನ್ನು ಸಿಎಜಿ ನೋಡಿಕೊಳ್ಳುತ್ತಿದೆ. ಮೂಲ ಒಪ್ಪಂದಕ್ಕಿಂತಲೂ ನಮ್ಮ ಒಪ್ಪಂದ ಅಗ್ಗವೋ ಅಲ್ಲವೋ ಎಂಬುದನ್ನು ಸಿಎಜಿ ಪರಿಶೀಲಿಸಲಿದೆ. ಕಾಂಗ್ರೆಸ್ ಕೂಡ ಸಿಎಜಿ ಎದುರು ತನ್ನದೇ ವಾದ ಮಂಡಿಸಿದೆ. ಶೀಘ್ರವೇ ಸತ್ಯಾಂಶ ಹೊರಬೀಳಲಿದೆ,” ಎಂದರು.

ಇನ್ನು ಒಪ್ಪಂದದ ಕುರಿತು ಎದ್ದಿರುವ ವಿವಾದ ಮತ್ತು ಸರ್ಕಾರದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಒಪ್ಪಂದ ರದ್ದಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅರುಣ್​ ಜೇಟ್ಲಿ, ” ದೇಶದ ಭದ್ರತೆ ದೃಷ್ಟಿಯಿಂದ ಭಾರತೀಯ ಸೇನೆಗೆ ರಫೆಲ್​ ಯುದ್ಧ ವಿಮಾನಗಳ ಅಗತ್ಯವಿದೆ. ಅವುಗಳು ಭಾರತಕ್ಕೆ ಬಂದೇ ಬರುತ್ತವೆ, ” ಎನ್ನುವ ಮೂಲಕ ಒಪ್ಪಂದ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.