ರಫೇಲ್ ಸುಪ್ರೀಂ ತೀರ್ಪಿನ ಗೊಂದಲ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ ಶುಕ್ರವಾರ ನೀಡಿದ ತೀರ್ಪಿನಲ್ಲಿರುವ ಕೆಲ ಗೊಂದಲಗಳನ್ನು ಪರಿಹರಿಸುವಂತೆ ಕೇಂದ್ರ ಸರ್ಕಾರವೇ ಶನಿವಾರ ಅರ್ಜಿ ಸಲ್ಲಿಸಿದೆ. ಆದೇಶ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದೆ.

ವಿಮಾನದ ಬೆಲೆ ಕುರಿತು ಕೇಂದ್ರ ಸರ್ಕಾರ ನೀಡಿದ ಮಾಹಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದನ್ನೇ ಅವಕಾಶವನ್ನಾಗಿಸಿ ಕೆಲವರು ಸಾರ್ವಜನಿಕವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ತೀರ್ಪನ್ನು ತುರ್ತಾಗಿ ಪರಿಶೀಲಿಸಿ ಪರಿಷ್ಕರಿಸಬೇಕು ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಯುದ್ಧವಿಮಾನಗಳ ಖರೀದಿ ಬೆಲೆ ವಿವರವನ್ನು ಮಹಾ ಲೇಖಪಾಲಕರಿಗೆ (ಸಿಎಜಿ) ನೀಡಲಾಗಿದೆ. ಸಿಎಜಿ ವರದಿ ಬಂದ ಬಳಿಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಪರಿಶೀಲನೆ ನಡೆಸಲಿದೆ. ಪಿಎಸಿ ವರದಿಯು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೆಲ ಆಯ್ದ ಮಾಹಿತಿಗಳನ್ನು ಈಗಾಗಲೇ ಲೋಕಸಭೆಗೆ ನೀಡಲಾಗಿದೆ’ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿತ್ತು.

ಆದರೆ ಈಗಾಗಲೇ ಸಿಎಜಿ, ಪಿಎಸಿ ಪರಿಶೀಲನೆ ನಡೆದಿದೆ ಎನ್ನುವಂತೆ ತೀರ್ಪಿನಲ್ಲಿ ಹೇಳಲಾಗಿದೆ. ‘ಈಸ್’ ಬದಲು ‘ಹ್ಯಾಸ್ ಬೀನ್’ ಪದ ಬಳಕೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಸರ್ಕಾರ ಕೋರ್ಟ್​ಗೆ ಸ್ಪಷ್ಟನೆ ನೀಡಿದೆ.

ಎಚ್​ಎಎಲ್ ಬಗ್ಗೆ ರಾಹುಲ್-ಖರ್ಗೆ ಭಿನ್ನ ನಿಲುವು ರಫೇಲ್ ಯುದ್ಧ ವಿಮಾನ ಉತ್ಪಾದನೆಗೆ ಎಚ್​ಎಎಲ್ ಸಮರ್ಥವಾಗಿದ್ದರೂ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್​ಗೆ ನೀಡಲಾಗಿದೆ. ಈ ಮೂಲಕ ಸರ್ಕಾರಿ ಸ್ವಾಮ್ಯದ ಕಂಪನಿಗೆ ಬರಬೇಕಿದ್ದ ಸಾವಿರಾರು ಕೋಟಿ ರೂ. ವ್ಯವಹಾರ ಹಾಗೂ ಉದ್ಯೋಗ ಕಡಿತವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಅವರ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಿಗ್-ಬಿಸ್, ಮಿಗ್-29, ಮಿರಾಜ್-2000 ಹಾಗೂ ಜಾಗ್ವಾರ್ ವಿಮಾನವನ್ನು 20,037 ಕೋಟಿ ರೂ. ಮೊತ್ತದ ಯೋಜನೆ ಮೂಲಕ ಅಭಿವೃದ್ಧಿಪಡಿಸಬೇಕಿದೆ. ಆದರೆ ತೇಜಸ್ ಯುದ್ಧ ವಿಮಾನವನ್ನೇ ವೇಳಾಪಟ್ಟಿ ಪ್ರಕಾರ ಎಚ್​ಎಎಲ್​ಗೆ ಪೂರೈಕೆ ಮಾಡಲಾಗುತ್ತಿಲ್ಲ. ಇದರಿಂದ ವಾಯುಪಡೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. 200 ಯುದ್ಧವಿಮಾನಗಳ ಪೈಕಿ ಕೇವಲ 9 ವಿಮಾನ ಹಸ್ತಾಂತರವಾಗಿದೆ. 20 ತರಬೇತಿ ವಿಮಾನಗಳ ಪೈಕಿ ಒಂದನ್ನೂ ನೀಡಿಲ್ಲ ಎಂದು ಖರ್ಗೆ ನೇತೃತ್ವದ ಸಮಿತಿ ಎಚ್​ಎಎಲ್​ನ್ನು ತರಾಟೆ ತೆಗೆದುಕೊಂಡಿದೆ.

ಸುಪ್ರೀಂಕೋರ್ಟನ್ನು ದೇಶದ ಜನತೆ ನಂಬುತ್ತಾರೆ, ನಮಗೆ ಅದೇ ಸುಪ್ರೀಂಕೋರ್ಟ್ ತೀರ್ಪಿನ ಮುಂಚೆಯೇ ಜಂಟಿ ಸದನ ಸಮಿತಿ (ಜೆಪಿಸಿ) ರಚನೆಗೆ ಆಗ್ರಹಿಸಿದ್ದೆವು. ಆದರೆ ಈಗ ಕೋರ್ಟ್ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ನಮ್ಮ ಆಗ್ರಹದಿಂದ ಹಿಂದೆ ಸರಿಯಬೇಕಿದೆ.

| ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ

 

ಒಂದೊಮ್ಮೆ ಖರ್ಗೆ ಸಿಎಜಿ ವರದಿ ಪಡೆದಿಲ್ಲವಾದರೆ, ಅವರ ಮಾತನ್ನು ನಂಬಬೇಕಾಗುತ್ತದೆ. ಹಾಗೆಯೇ ಈ ಕುರಿತು ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಲಿ. ತಾವು ಯಾವುದೇ ವರದಿ ನೋಡಿಲ್ಲ ಎಂದು ಹೇಳಿ, ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ಪಿಎಸಿ ಅಧ್ಯಕ್ಷರಾಗಿ ಖರ್ಗೆಗೆ ಈ ಅಧಿಕಾರವಿದೆ.

| ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ

 

ಬಜೆಟ್ ಅಧಿವೇಶನದಲ್ಲಿ ಸಿಎಜಿ ವರದಿ ಮಂಡನೆ

ಯುದ್ಧವಿಮಾನ ಖರೀದಿ ಕುರಿತು ಸಿಎಜಿ ವರದಿಯು ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಹೀಗಾಗಿ ಮುಂದಿನ ಬಜೆಟ್ ಅಧಿವೇಶನದಲ್ಲಿ ಸಿಎಜಿ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಜಿ ವರದಿಯಲ್ಲಿನ ಅಂಶಗಳು ಆಡಳಿತ ಹಾಗೂ ಪ್ರತಿಪಕ್ಷಗಳಿಗೆ ನಿರ್ಣಾಯಕವಾಗಲಿವೆ.

ಸಿಎಜಿ, ಎಜಿಯಿಂದ ಮಾಹಿತಿ ಕೇಳಿದ ಖರ್ಗೆ

ಪಿಎಸಿ ಅಧ್ಯಕ್ಷನಾದ ನನಗೆ ಯಾವುದೇ ವರದಿ ಸಿಎಜಿಯಿಂದ ಬಂದಿಲ್ಲ. ಸಮಿತಿಯ ಸದಸ್ಯರು ಕೂಡ ವರದಿಯನ್ನು ನೋಡಿಲ್ಲ. ಹೀಗಾಗಿ ಸಿಎಜಿ ಹಾಗೂ ಅಟಾರ್ನಿ ಜನರಲ್​ಗೆ ಸಮನ್ಸ್ ನೀಡಿ ಮಾಹಿತಿ ಪಡೆಯುತ್ತೇನೆ. ಕೋರ್ಟ್​ಗೆ ಇಂತಹ ಮಾಹಿತಿ ನೀಡಿದವರು ಯಾರು ಎನ್ನುವ ಕುರಿತು ಪ್ರಮಾಣಪತ್ರ ಪಡೆಯುವುದಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪ್ರತಿಪಕ್ಷಗಳ ಆಕ್ಷೇಪವೇನು?

  • ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಹಾಗೂ ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿಗೆ ಸಂಬಂಧ ಕಲ್ಪಿಸಿದ್ದೇಕೆ?
  • ಯುದ್ಧವಿಮಾನ ಖರೀದಿ ಕುರಿತು ಸಿಎಜಿ ವರದಿ ನೀಡಿದ್ದು ಯಾವಾಗ?
  • ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪರಿಶೀಲನೆ ನಡೆಸಿದ್ದು ಯಾವಾಗ?
  • ಯಾವ ಆಧಾರದ ಮೇಲೆ ಈ ಅಂಶಗಳನ್ನು ತೀರ್ಪಿನಲ್ಲಿ ಸೇರಿಸಲಾಗಿದೆ?
  • ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ನ ದಿಕ್ಕು ತಪ್ಪಿಸಿದೆ.

 

ಸೇನೆಯ ನೈತಿಕತೆ ಕುಸಿದರೂ ಸಮಸ್ಯೆಯಿಲ್ಲ ಕಾಂಗ್ರೆಸ್​ಗೆ ಹಣ ಮಾಡುವ ಬಗ್ಗೆ ಮಾತ್ರ ಚಿಂತೆ. ಕಾಂಗ್ರೆಸ್ ಪಾಲಿಗೆ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣಾ ವಲಯ ಹಣ ಗಳಿಕೆಯ ಮೂಲ ಅಷ್ಟೇ.

| ನರೇಂದ್ರ ಮೋದಿ, ಪ್ರಧಾನಿ (ತಮಿಳುನಾಡು ಕಾರ್ಯಕರ್ತರ ಜತೆಗಿನ ವಿಡಿಯೋ ಸಂವಾದದಲ್ಲಿ)

’ರಾ’ಫೇಲ್ ಮೋದಿ ಪಾಸ್