ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ

ನವದೆಹಲಿ: ರಫೇಲ್​ ಡೀಲ್​ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಕ್ಲೀನ್​ಚಿಟ್​ ನೀಡಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು, ಕಾಂಗ್ರೆಸ್​ ಹಾಗೂ ಪಕ್ಷದ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಫೇಲ್​ ಡೀಲ್​ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ಸುಳ್ಳು ಆರೋಪ ಹೊರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತ್ಯಕ್ಕೆ ಜಯ ಸಿಕ್ಕಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶವನ್ನು ತಪ್ಪು ದಾರಿಯಲ್ಲಿ ಮುನ್ನಡೆಸಲಾಗುತ್ತಿತ್ತು. ಇವತ್ತಿನ ಸುಪ್ರೀಂಕೋರ್ಟ್​ ತೀರ್ಪಿನಿಂದ ಸುಳ್ಳುತನದ ರಾಜಕೀಯ ಮಾಡುವವರ ಮುಖದ ಮೇಲೆ ಹೊಡೆದಂತೆ ಆಗಿದೆ ಎಂದರು.

ವೃಥಾ ಆರೋಪ

ರಫೇಲ್​ ಡೀಲ್​ ವಿಮಾನ ಖರೀದಿ ಯಾವುದೇ ವಾಣಿಜ್ಯೋದ್ಯಮದ ಒಲವು ಹೊಂದಿದಂತೆ ಕಾಣುತ್ತಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳುವ ಮೂಲಕ ಪ್ರತಿಪಕ್ಷಗಳು ನಡೆಸುತ್ತಿದ್ದ ಅಭಿಯಾನವನ್ನು ಕೊನೆಗೊಳಿಸಿದೆ. ವೃಥಾ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ಸೈನಿಕರ, ಜನರ ಮನಸಿನಲ್ಲಿ ಅನುಮಾನಗಳು ಹುಟ್ಟುವಂತೆ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮೂಲ ಬಹಿರಂಗಪಡಿಸಿ

ರಾಹುಲ್​ ಗಾಂಧಿಯವರೇ ನಿಮ್ಮ ಮಾಹಿತಿಯ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಿ. ಇಂಥ ಆರೋಪಗಳನ್ನು ಯಾರ ಆಣತಿಯ ಪ್ರಕಾರ ಮಾಡಿದ್ದೀರಿ? ನಿಮ್ಮ ಸರ್ಕಾರದ ಆಡಳಿತವಿದ್ದ 2007-2014 ಅವಧಿಯಲ್ಲೇ ಏಕೆ ಒಪ್ಪಂದವನ್ನು ಅಂತಿಮಗೊಳಿಸಿಲ್ಲ? ನೀವೇನು ಕಮೀಷನ್​ಗಾಗಿ ಕಾಯುತ್ತಿದ್ದಿರಾ ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರತಿ ಸಭೆಯಲ್ಲೂ ರಫೇಲ್​ ಡೀಲ್​ ಬಗ್ಗೆ ರಾಹುಲ್​ ಗಾಂಧಿಯವರು ಅನುಮಾನ ವ್ಯಕ್ತಪಡಿಸುತ್ತಿದ್ದರು. ಈಗ ಎಲ್ಲದಕ್ಕೂ ಸುಪ್ರೀಂಕೋರ್ಟ್​ ಉತ್ತರ ನೀಡಿದೆ ಎಂದು ಷಾ ಹೇಳಿದರು.

ಎಲ್ಲ ಕಳ್ಳರೂ ಒಟ್ಟಾಗಿದ್ದಾರೆ. ಅವರನ್ನು ಕಾಯುವ ಕಾವಲುಗಾರ ಕೂಡ ಕಳ್ಳನೇ. ಈಗ ಆ ಕಳ್ಳರಿಗೆಲ್ಲ ಕಾವಲುಗಾರನಿಂದಲೇ ಭಯ ಶುರುವಾಗಿದೆ ಎಂದು ಕುಟುಕಿದ ಅಮಿತ್​ ಷಾ, ರಾಹುಲ್​ ಅವರು ಬಾಲಿಶವಾಗಿ ವರ್ತಿಸುವುದನ್ನು ಬಿಡಬೇಕು. ಸೂರ್ಯನತ್ತ ಹೊಲಸು ಎಸೆದರೆ, ಅದು ನಿಮ್ಮ ಮೇಲೆ ಬೀಳುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.