ರಕ್ಷಣಾ ಸಚಿವರು ನನ್ನ ಪ್ರಶ್ನೆಗೆ ಉತ್ತರಿಸಲೇ ಇಲ್ಲ: ರಾಹುಲ್​ ಗಾಂಧಿ

ನವದೆಹಲಿ: ಸಂಸತ್ತಿನಲ್ಲಿ ರಫೇಲ್​ ಡೀಲ್​ ಗೆ ಸಂಬಂಧಪಟ್ಟಂತೆ ದೀರ್ಘವಾಗಿ ಮಾತನಾಡಿ ರಾಹುಲ್​ಗಾಂಧಿಯವರಿಗೆ ಟಾಂಗ್​ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ವಿರುದ್ಧ ಮತ್ತೆ ರಾಹುಲ್​ ವಾಗ್ದಾಳಿ ನಡೆಸಿದ್ದಾರೆ.
ರಕ್ಷಣಾ ಸಚಿವರು ಉದ್ದವಾದ ಭಾಷಣ ಮಾಡಿದ್ದಾರೆ ಬಿಟ್ಟರೆ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ವಿಷಯದಿಂದ ಪಲಾಯನವಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ನಾನು ರಫೇಲ್​ ಡೀಲ್​ ಬಗ್ಗೆ ಪ್ರಶ್ನೆ ಮಾಡಿದ್ದೆ. ಅನಿಲ್​ ಅಂಬಾನಿಯವರಿಗೆ ಸಂಬಂಧಪಟ್ಟಂತೆ ನಾನು ಕೇಳಿದ್ದ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ ಎಂದರು.
ಸಂಸತ್ತಿನಲ್ಲಿ ಡಿಬೇಟ್​ ಮುಗಿದ ಬಳಿಕ ನಿರ್ಮಲಾ ಸೀತಾರಾಮನ್​ ಅವರ ಬಳಿ ಎರಡು ಪ್ರಶ್ನೆ ಕೇಳಿದ್ದೆ. ಅದಕ್ಕೆ ಅವರು ಹೌದು ಅಥವಾ ಇಲ್ಲ ಎಂದು ಹೇಳಿದರೆ ಸಾಕಿತ್ತು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ನನ್ನ ಮೊದಲ ಪ್ರಶ್ನೆ, ರಫೇಲ್​ ಒಪ್ಪಂದದ ಕುರಿತಂತೆ ದೀರ್ಘ ಸಮಾಲೋಚನೆ ನಡೆಯುವ ಸಂದರ್ಭದಲ್ಲಿ ಏರ್​ ಫೋರ್ಸ್​ ಮುಖ್ಯಸ್ಥರು, ರಕ್ಷಣಾ ಸಚಿವರು, ಕಾರ್ಯದರ್ಶಿಗಳು, ಏರ್​ಫೋರ್ಸ್​ ಅಧಿಕಾರಿಗಳು ಇದ್ದರಾ ಎಂಬುದಾಗಿತ್ತು. ಇನ್ನೊಂದು, ಸಮಾಲೋಚನೆ ನಂತರ ಪ್ರಧಾನಿ ಮೋದಿಯವರು ರಫೇಲ್​ ವ್ಯವಹಾರಕ್ಕೆ ‘ಬೈಪಾಸ್​ ಸರ್ಜರಿ’ ಮಾಡಿದಾಗ ವಾಯುಪಡೆ ಅಧಿಕಾರಿಗಳು ಏನಾದರೂ ತಕರಾರು ತೆಗೆದಿದ್ದರಾ ಎಂದು ಪ್ರಶ್ನಿಸಿದ್ದೆ. ಇದೆರಡಕ್ಕೂ ಏನೂ ಉತ್ತರ ಸಿಗಲಿಲ್ಲ ಎಂದು ಆರೋಪಿಸಿದರು.

ಅಷ್ಟುದ್ದ ಭಾಷಣದಲ್ಲಿ ಏನು ಹೇಳಬೇಕೋ ಅದನ್ನು ಬಿಟ್ಟು ರಕ್ಷಣಾ ಸಚಿವರು ನಾಟಕವಾಡಿದ್ದಾರೆ. ‘ನನ್ನನ್ನು ಅವರು ಅವಮಾನಿಸಿದರು; ಒಬ್ಬ ಸುಳ್ಳುಗಾರನೆಂದು ಬಿಂಬಿಸಿದರು’ ಎಂದು ಹೇಳಿದರು.