ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ದೆಹಲಿ: ಫ್ರಾನ್ಸ್​ನ ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಮತ್ತು ಭಾರತದಲ್ಲಿ ಅದರ ಪಾಲುದಾರಿಕೆ ಸಂಸ್ಥೆಯ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇಂದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಮೇಲೆ ಕಾಂಗ್ರೆಸ್​ ಇಂದು ಸಂಸತ್​ನ ಒಳ-ಹೊರಗೆ ತೀವ್ರ ಸ್ವರೂಪದ ದಾಳಿ ನಡೆಸಿದೆ.

ಲೋಕಸಭೆಯ ಅಧಿವೇಶನದಲ್ಲಿ ಇಂದು ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ರಫೇಲ್​ ವಿಚಾರವಾಗಿ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಲವು ಪ್ರಶ್ನೆಗಳನ್ನು ಸರ್ಕಾರದ ಕಡೆಗೆ ಎಸೆದರು. “ರಫೇಲ್​ ಹಗರಣದ ವಿಚಾರದಲ್ಲಿ ಸಂಸತ್​ಗೆ ಬಂದು ಮಾತನಾಡಲು ಪ್ರಧಾನಿ ಮೋದಿ ಅವರಿಗೆ ಧೈರ್ಯವೇ ಇಲ್ಲ,” ಎಂದು ರಾಹುಲ್​ ಛೇಡಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಗೇಲಿ ಮಾಡಿದ ರಾಹುಲ್​, ” ಸದನದಲ್ಲಿ ರಫೇಲ್​ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಎಐಎಡಿಎಂಕೆ ಶಾಸಕರ ಹಿಂದೆ ಅವಿತುಕೊಳ್ಳುತ್ತಾರೆ,” ಎಂದು ವ್ಯಂಗ್ಯ ಮಾಡಿದರು.

ಇದಕ್ಕೂ ಮೊದಲು ಕಾಂಗ್ರೆಸ್​ ಸಂಸತ್​ನ ಹೊರಗೂ ರಫೇಲ್​ ಹಗರಣವನ್ನು ಪ್ರಸ್ತಾಪಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿತ್ತು. ರಫೇಲ್​ ಹಗರಣಕ್ಕೆ ಸಂಬಂಧಿಸಿದ ಆಡಿಯೋವೊಂದನ್ನು ಕಾಂಗ್ರೆಸ್​ನ ನಾಯಕ ರಣದೀಪ್​ ಸಿಂಗ್​ ಸುರ್ಜೆವಾಲ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

“ರಫೇಲ್​ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬೆಡ್ ​ರೂಂನಲ್ಲಿವೆ,” ಎಂದು ಗೋವಾದ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಕ್ಯಾಬಿನೆಟ್​ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯನ್ನು ಗೋವಾದ ಸಚಿವ ವಿಶ್ವಜಿತ್​ ರಾಣೆ ಅವರು ಮತ್ತೊಬ್ಬ ವ್ಯಕ್ತಿಯೊಂದಿಗೆ ಚರ್ಚಿಸಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತು. ಆದರೆ, ಈ ಆಡಿಯೋ ತಿರುಚಲಾದ ಆಡಿಯೋ ಎಂದು ಪರಿಕ್ಕರ್​ ಮತ್ತು ರಾಣೆ ಇಬ್ಬರೂ ನಿರಾಕರಿಸಿದರು.

ಹಾಗೇ ರಫೇಲ್​ ಡೀಲ್​ ಬಗ್ಗೆ ಮಾತುಕತೆ ನಡೆಸಿದ ಆಡಿಯೋವೊಂದು ತನ್ನ ಬಳಿ ಇದೆ. ಅದನ್ನು ಸದನದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ರಾಹುಲ್​ ಗಾಂಧಿ ಹೇಳಿದರು. ಆದರೆ ನಂತರ ಯಾವ ಆಡಿಯೋವನ್ನು ಬಿಡುಗಡೆ ಮಾಡಲಿಲ್ಲ.

ಅಲ್ಲದೆ, ರಫೇಲ್​ ವಿಚಾರವಾಗಿ ನನ್ನನ್ನು ಯಾರೂ ವೈಯಕ್ತಿಕವಾಗಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂಬ ಸುದ್ದಿ ಸಂಸ್ಥೆ ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮೋದಿ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್​ ಗಾಂಧಿ, “ರಫೇಲ್​ ವಿಚಾರವಾಗಿ ಇಡೀ ದೇಶ ನಿಮ್ಮನೇ ಕೇಳುತ್ತಿದೆ,” ಎಂದರು. ಅಷ್ಟು ಹೊತ್ತಿಗೆ ಸಂಸತ್​ನಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದಗಳು ಜೋರಾಗಿಯೇ ನಡೆದವು.

ಇನ್ನೊಂದೆಡೆ, ರಫೇಲ್​ ಹಗರಣದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾನು ನೀಡಿರುವ ಕ್ಲೀನ್​ ಚಿಟ್​ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಕೋರಿ ಮಾಜಿ ಸಚಿವ ಯಶವಂತ್​ ಸಿನ್ಹಾ, ಅರುಣ್​ ಶೌರಿ ಮತ್ತು ಖ್ಯಾತ ವಕೀಲ ಪ್ರಶಾಂತ್​ ಭೂಷಣ್​ ಅವರು ಇಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.