ರಫೇಲ್ ಪಾಸೋ ಫೇಲೋ?

| ಕೆ. ರಾಘವ ಶರ್ಮ ನವದೆಹಲಿ

ಭಾರಿ ಕುತೂಹಲ ಹಾಗೂ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಕುರಿತ ವಿಚಾರಣೆ ಪೂರ್ಣಗೊಂಡಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 50 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪು ಮಹತ್ವ ಪಡೆದುಕೊಂಡಿದೆ. ಜತೆಗೆ ಇದು 2019ರ ಲೋಕಸಭಾ ಚುನಾವಣೆ ಪ್ರಚಾರದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇರುವುದರಿಂದ ಜನರಲ್ಲಿ ಸಾಕಷ್ಟು ಕುತೂಹಲವೂ ಮನೆಮಾಡಿದೆ.

ಮೂಲ ಒಪ್ಪಂದದ ಪ್ರಕಾರ ಯುದ್ಧ ವಿಮಾನ ತಯಾರಿಸುವ ಡಸಾಲ್ಟ್ ಕಂಪನಿ ಮೂರು ತಿಂಗಳ ಒಳಗಾಗಿ ಭಾರತೀಯ ಪಾಲುದಾರ ಕಂಪನಿ (ಆಫ್​ಸೆಟ್ ಪಾಟರ್°ರ್) ಕುರಿತ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಕೇಂದ್ರಕ್ಕೆ ನ್ಯಾಯಪೀಠ ಸೂಚಿಸಿದೆ.

ರಫೇಲ್ ಖರೀದಿಗೆ ಅಂತರ್ ಸರ್ಕಾರಿ ಒಪ್ಪಂದ (2 ದೇಶಗಳ ನಡುವೆ) ಏರ್ಪಟ್ಟಿರುವುದರಿಂದ ಈ ವ್ಯವಹಾರದ ಹೊಣೆಗಾರಿಕೆಯ ಖಾತ್ರಿಯನ್ನು ಫ್ರಾನ್ಸ್ ಸರ್ಕಾರ ನೀಡಿದೆಯೇ ಎಂದು ನ್ಯಾಯಪೀಠ ಕೇಂದ್ರವನ್ನು ಪ್ರಶ್ನಿಸಿತು. ಹೊಣೆಗಾರಿಕೆಯ ಖಾತ್ರಿಯನ್ನು ಫ್ರಾನ್ಸ್ ನೀಡಿಲ್ಲ ಎಂದು ವಕೀಲ ಕೆ.ಕೆ. ವೇಣುಗೋಪಾಲ್ ಒಪ್ಪಿಕೊಂಡರೂ, ಫ್ರಾನ್ಸ್ ಸರ್ಕಾರ ಭಾರತಕ್ಕೆ ವ್ಯವಹಾರದ ಕುರಿತ ‘ಭರವಸೆ ಪತ್ರ’ವನ್ನು ನೀಡಿದೆ ಎಂದರು.

ಒಂದುವೇಳೆ ಪಾಲುದಾರ ಕಂಪನಿ ಫೈಟರ್ ಜೆಟ್ ತಯಾರಿಸದಿದ್ದರೆ ಏನು ಮಾಡುತ್ತೀರಿ? ಆಗ ದೇಶದ ಹಿತಾಸಕ್ತಿ ಪ್ರಶ್ನೆ ಏನಾಗಲಿದೆ? ಜೆಟ್ ಖರೀದಿ ಮೂಲ ಒಪ್ಪಂದ ಮತ್ತು ಬದಲಾದ ಒಪ್ಪಂದವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲವಲ್ಲ ಎಂದು ನ್ಯಾ.ಕೆ.ಎಂ. ಜೋಸೆಫ್ ಹೇಳಿದರು. ಬದಲಾದ ಒಪ್ಪಂದ ಮೂಲ ಒಪ್ಪಂದದ ಜತೆಗೇ ಸಾಗುತ್ತದೆ ಎಂದು ಕೆ.ಕೆ. ವೇಣುಗೋಪಾಲ್ ಸ್ಪಷ್ಟಪಡಿಸಿದರು.

ವೇಣುಗೋಪಾಲ್ ವಾದ ಏನು?

# ಸರ್ಕಾರದ ಫೈಟರ್ ಜೆಟ್ ಖರೀದಿ ಪ್ರಕ್ರಿಯೆ ನ್ಯಾಯಾಂಗದ ವಿಮರ್ಶೆಯನ್ನು ನಾವು ಒಪ್ಪುವುದಿಲ್ಲ

# ರಕ್ಷಣಾ ಇಲಾಖೆಗೆ ಬೇಕಿರುವ ಶಸ್ತ್ರಾಸ್ತ್ರಗಳ ಬಗ್ಗೆ ವಿಚಾರಣೆ ನಡೆಸುವ ಅರ್ಹತೆ ಈ ನ್ಯಾಯಾಲಯಕ್ಕೆ ಇದೆಯೇ?

# ವಾಯು ಸೇನೆ ಶಸ್ತ್ರಾಸ್ತ್ರ, ಅದರಲ್ಲೊಳಗೊಂಡಿರುವ ತಂತ್ರಜ್ಞಾನಗಳು ಅಥವಾ ಸರಿ-ತಪ್ಪುಗಳ ಬಗ್ಗೆ ಸಂಬಂಧಪಟ್ಟ ತಜ್ಞರಷ್ಟೇ ವಿಶ್ಲೇಷಣೆ ನಡೆಸಬಹುದು

# ಭಾರತೀಯ ಪಾಲುದಾರ ಕಂಪನಿ ಆಯ್ಕೆಯಲ್ಲಿ ಕೇಂದ್ರದ ಪಾತ್ರವಿಲ್ಲ. ಇದು ಡಸಾಲ್ಟ್ ಸಂಸ್ಥೆ ಕ್ರಮ

ಏರ್ ಮಾರ್ಷಲ್​ಗೆ ಬುಲಾವ್

ಸಿಜೆಐ ರಂಜನ್ ಗೊಗೊಯ್ ಸೂಚನೆ ಮೇರೆಗೆ ಏರ್ ವೈಸ್ ಮಾರ್ಷಲ್ ಟಿ. ಚಲಪತಿ, ಏರ್ ಮಾರ್ಷಲ್ ವಿ.ಆರ್. ಚೌಧರಿ, ಏರ್ ಸ್ಟಾಫ್ ವಿಭಾಗದ ಡೆಪ್ಯುಟಿ ಚೀಫ್ ಏರ್ ಮಾರ್ಷಲ್ ಖೋಸ್ಲಾ ಇನ್ನಿತರ ಹಿರಿಯ ಅಧಿಕಾರಿಗಳು ಮಧ್ಯಾಹ್ನ 2 ಗಂಟೆಗೆ ನ್ಯಾಯಪೀಠದ ಮುಂದೆ ಹಾಜರಾಗಿ, ರಫೇಲ್ ವ್ಯವಹಾರದ ಮೂಲ ಒಪ್ಪಂದ ಹಾಗೂ ನಂತರದಲ್ಲಿ ಬದಲಾದ ನಿಯಮಗಳ ಬಗ್ಗೆ ವಿವರಣೆ ನೀಡಿದರು. 1985ರ ನಂತರದಲ್ಲಿ ಭಾರತ ಯಾವುದೇ ಯುದ್ಧ ವಿಮಾನ ಖರೀದಿ ಮಾಡಿಲ್ಲ ಎಂದು ತಿಳಿಸಿದರು.

ವೆಚ್ಚದ ಚರ್ಚೆ ಬೇಡ

ರಫೇಲ್ ಖರೀದಿಯ ಒಟ್ಟು ವೆಚ್ಚದ ಮಾಹಿತಿಯನ್ನು ಅರ್ಜಿದಾರರೊಂದಿಗೆ ಈ ಹಂತದಲ್ಲಿ ಹಂಚಿಕೊಳ್ಳುವ ಅಗತ್ಯವಿಲ್ಲ ಎಂದು ವಿಚಾರಣೆ ವೇಳೆ ಸ್ಪಷ್ಟಪಡಿಸಿದ ನ್ಯಾಯಪೀಠ, ರಫೇಲ್ ವ್ಯವಹಾರದ ಕುರಿತ ತೀರ್ಮಾನ ಪ್ರಕ್ರಿಯೆ ಹಾಗೂ ಪಾಲುದಾರ ಕಂಪನಿಯಾಗಿ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ದುಕೊಂಡ ನಿರ್ಧಾರ ಸರಿಯೇ ತಪ್ಪೇ ಎಂಬ ಬಗ್ಗೆ ಮಾತ್ರ ನಾವು ಗಮನಹರಿಸಲಿದ್ದೇವೆ ಎಂದಿದೆ.

ಅರ್ಜಿದಾರರ ವಾದ..

ಅರ್ಜಿದಾರ ಮತ್ತು ವಕೀಲ ಎಂ.ಎಲ್. ಶರ್ಮ ವಾದ ಮಂಡಿಸಿ, ಹೊಣೆಗಾರಿಕೆ ಖಾತ್ರಿ ಇಲ್ಲದಿರುವ ಕಾರಣ ಇದು ಅಕ್ರಮ ಒಪ್ಪಂದ. ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಮತ್ತೋರ್ವ ಅರ್ಜಿದಾರ ವಕೀಲ ಪ್ರಶಾಂತ್ ಭೂಷಣ್ ವಾದಿಸಿ, ಭಾರತೀಯ ವಾಯುಸೇನೆಗೆ 126 ಫೈಟರ್ ಜೆಟ್​ಗಳ ಅಗತ್ಯವಿತ್ತು. ಇದನ್ನು ರಕ್ಷಣಾ ಸ್ವಾಧೀನ ಸಮಿತಿಗೂ (ಡಿಎಸಿ) ತಿಳಿಸಲಾಗಿತ್ತು. ಆದರೆ ಹಠಾತ್ ಬೆಳವಣಿಗೆಯಲ್ಲಿ 126 ಫೈಟರ್ ಜೆಟ್ ಬದಲು 36 ಜೆಟ್​ಗಳನ್ನು ಡಸಾಲ್ಟ್ ಸಂಸ್ಥೆಯಿಂದ ಖರೀದಿಸಲಾಗುವುದು ಎಂದು ಘೊಷಿಸಲಾಯಿತು. ಈ ಒಪ್ಪಂದದ ಬಗ್ಗೆ ಅಂದಿನ ರಕ್ಷಣಾ ಸಚಿವ ಮನೋಹರ ಪರಿಕ್ಕರ್​ಗೂ ಮಾಹಿತಿ ಇರಲಿಲ್ಲ ಎಂದು ಕೋರ್ಟ್ ಗಮನಸೆಳೆದರು. ಇದಕ್ಕೆ ಆಕ್ಷೇಪಿಸಿದ ಕೆ.ಕೆ. ವೇಣುಗೋಪಾಲ್, ಯುದ್ಧ ವಿಮಾನ ತಯಾರಿಕೆಗೆ ಡಸಾಲ್ಟ್ ಸಂಸ್ಥೆ ಒಪ್ಪಿಕೊಂಡಿದ್ದ ಸಮಯಕ್ಕಿಂತ 2.7 ಪಟ್ಟು ಹೆಚ್ಚು ಸಮಯಾವಕಾಶವನ್ನು ಎಚ್​ಎಎಲ್ ಕೇಳಿತ್ತು. ಹೀಗಾಗಿಯೇ ಒಪ್ಪಂದದಿಂದ ಹೊರಗಿಡಲಾಯಿತು ಎಂದರು.