ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಪ್ಯಾರಿಸ್​ (ಫ್ರಾನ್ಸ್​): ರಫೇಲ್​ ಯುದ್ಧ ವಿಮಾನದ ಒಪ್ಪಂದದ ಷರತ್ತುಗಳ ಬಗ್ಗೆ ವಿವರಣೆ ನೀಡುವಂತೆ ಯುದ್ಧ ವಿಮಾನಗಳ ತಯಾರಕಾ ಸಂಸ್ಥೆ ಡಸಾಲ್ಟ್​ ಏವಿಯೇಷನ್ಸ್​ ವಿರುದ್ಧ ಫ್ರಾನ್ಸ್​ನ ಎನ್​ಜಿಒ ಶೆರ್ಪಾ ಪ್ರಕರಣ ದಾಖಲಿಸಿದೆ.

ಫ್ರಾನ್ಸ್​ನ ಅರ್ಥಿಕ ಅಪರಾಧಗಳ ವಿರುದ್ಧ ಹೋರಾಡುವ ಸರ್ಕಾರೇತರ ಸಂಸ್ಥೆ ಶೆರ್ಪಾ, ರಫೇಲ್​ ಒಪ್ಪಂದದ ಕುರಿತು ವಿವರಣೆಗೆ ಕೋರಿ ಫ್ರಾನ್ಸ್​ನ ರಾಷ್ಟ್ರೀಯ ಆರ್ಥಿಕ ವ್ಯಾಜ್ಯ ಕಚೇರಿಗೆ ದೂರು ದಾಖಲಿಸಿದೆ. ಅಲ್ಲದೆ, ” ಡಸಾಲ್ಟ್​ ಏವಿಯೇಷನ್​ ಸಂಸ್ಥೆ ಭಾರತದಲ್ಲಿ ರಿಲಾಯನ್ಸ್​ ಸಂಸ್ಥೆಯನ್ನೇ ತನ್ನ ಪಾಲುದಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ವಿವರಣೆ ನೀಡಬೇಕು,” ಎಂದು ಶೆರ್ಪಾ ತನ್ನ ಅರ್ಜಿಯಲ್ಲಿ ಕೇಳಿದೆ.

ಈ ಅರ್ಜಿ ಅಕ್ಟೋಬರ್​​ 26ರಂದೇ ದಾಖಲಾಗಿದೆಯಾದರೂ, ತಡವಾಗಿ ಬಹಿರಂಗಗೊಂಡಿದೆ. ರಫೇಲ್​ ಒಬ್ಬಂದದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಲಾಭಕ್ಕೆ ಯೋಜನೆಗಳನ್ನು ತಮಗೆ ಬೇಕಾದವರಿಗೆ ನೀಡಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್​ 4ರಂದು ಭಾರತದಲ್ಲಿ ಯಶವಂತ್​ ಸಿನ್ಹಾ ಸಿಬಿಐನಲ್ಲಿ ದೂರು ದಾಖಲಿಸಿದ್ದರು. ಇದೇ ಹಿನ್ನೆಲೆಯಲ್ಲಿ ಫ್ರಾನ್ಸ್​ನಲ್ಲಿ ಶೆರ್ಪಾ ಸಂಸ್ಥೆ ಅರ್ಜಿ ಸಲ್ಲಿಸಿದೆ. ಈ ಕುರಿತು ಶೆರ್ಪಾ ತನ್ನ ಅಧೀಕೃತ ಪ್ರಕಟಣೆಯಲ್ಲೇ ತಿಳಿಸಿದೆ.

” ಭಾರತ ಮತ್ತು ಫ್ರಾನ್ಸ್​ ನಡುವೆ ನಡೆದಿರುವ 56 ಸಾವಿರ ಕೋಟಿ ರೂ. 36 ರಫೇಲ್​ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಗಂಭೀರ ಅಂಶಗಳನ್ನು ಮತ್ತು ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು,” ಎಂದು ಎನ್​ಜಿಒ ಶರ್ಪಾ ತನ್ನ ಅರ್ಜಿಯಲ್ಲಿ ಕೋರಿದೆ.