ಯುದ್ಧ ವಿಮಾನ ಖರೀದಿ ಎಂದರೆ ರಸ್ತೆ, ಸೇತುವೆ ಗುತ್ತಿಗೆಯಲ್ಲ!

>

ನವದೆಹಲಿ: ಸುಪ್ರೀಂಕೋರ್ಟ್ ಮುಂದೆ ಪ್ರಶ್ನಿಸಿರುವುದು ರಸ್ತೆ ಅಥವಾ ಸೇತುವೆಯ ಗುತ್ತಿಗೆ ವಿಚಾರವಲ್ಲ. ರಕ್ಷಣಾ ವಲಯದ ಯುದ್ಧ ವಿಮಾನಗಳ ಟೆಂಡರ್ ಇದಾಗಿದೆ ಎಂದು ಸಿಜೆಐ ಗೊಗೊಯ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಕಾನೂನು ಬಾಹಿರ, ಅರ್ತಾಕ ಹಾಗೂ ಆಡಳಿತಾತ್ಮಾಕ ಪ್ರಮಾದಗಳ ಬಗ್ಗೆ ಕೋರ್ಟ್ ಪರಿಶೀಲನೆ ಮಾಡಬಹುದಾಗಿದೆ. ಆದಾಗ್ಯೂ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸೂಕ್ಷ್ಮ ಪರಿಶೀಲನೆ ಮಾಡಿಯೇ ಈ ಒಪ್ಪಂದ ಮಾಡಿಕೊಂಡಿರಲಾಗುತ್ತದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಕೋರ್ಟ್ ಕೂಡ ತನ್ನ ಮಿತಿಯಲ್ಲೇ ಆದೇಶ ನೀಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ವಾದ ಪ್ರತಿವಾದ

ಡಸಾಲ್ಟ್: ಆಫ್​ಸೆಟ್ ಖರೀದಿ ಒಪ್ಪಂದದಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ. ರಿಲಯನ್ಸ್ ಹೊರತುಪಡಿಸಿ ಇನ್ನೂ 30 ಕಂಪನಿಗಳ ಜತೆ ಆಫ್​ಸೆಟ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಯಾವುದೇ ಅಕ್ರಮವಾಗಿಲ್ಲ.

ಎಚ್​ಎಎಲ್: ರಫೇಲ್ ಯುದ್ಧ ವಿಮಾನದ ಆಫ್​ಸೆಟ್ ಪ್ರಕ್ರಿಯೆಯಲ್ಲಿ ಎಚ್​ಎಎಲ್ ಆಸಕ್ತಿ ಹೊಂದಿರಲಿಲ್ಲ. ಪೂರ್ಣ ಪ್ರಮಾಣದ ತಂತ್ರಜ್ಞಾನ ವರ್ಗಾವಣೆ ಮಾಡಿದ್ದರೆ ಮಾತ್ರ ವಿಮಾನ ನಿರ್ವಣಕ್ಕೆ ಎಚ್​ಎಎಲ್ ಮುಂದಡಿ ಇಡುತ್ತಿತ್ತು.

ಖರೀದಿ ಪ್ರಕ್ರಿಯೆ 126 ಯುದ್ಧ ವಿಮಾನಗಳನ್ನೇ ಖರೀದಿಸಿ ಎಂದು ಕೋರ್ಟ್ ಹೇಳಲಾಗದು. ದೇಶ ನಡೆಸುವ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ. ಭಾರತದಲ್ಲಿ 5ನೇ ಜನರೇಷನ್​ನ (ಅತ್ಯಾಧುನಿಕ) ಒಂದೂ ಯುದ್ಧ ವಿಮಾನವಿಲ್ಲದಿರುವಾಗ ಕೋರ್ಟ್ ಮಧ್ಯಪ್ರವೇಶಿಸಲಾಗದು. ಭದ್ರತೆ ದೃಷ್ಟಿಯಿಂದ ದೇಶದ ಸೈನ್ಯವು ಸನ್ನದ್ಧವಾಗಿರಬೇಕಾಗುತ್ತದೆ. 2001ರಲ್ಲಿ ಆರಂಭವಾಗಿರುವ ಪ್ರಕ್ರಿಯೆಯಲ್ಲಿ 2016ರವರೆಗೆ ಯಾವುದೇ ತೀರ್ವನವಾಗಲಿಲ್ಲ. ಅಂತಾರಾಷ್ಟ್ರೀಯವಾಗಿ ಮಿತ್ರ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿರುವುದು ಪ್ರಮುಖ ಅಂಶವಾಗಿದೆ.

ಆಫ್​ಸೆಟ್ ಒಪ್ಪಂದ

2 ಖಾಸಗಿ ಕಂಪನಿಗಳ ವಾಣಿಜ್ಯ ಉದ್ದೇಶಕ್ಕೆ ಆಫ್​ಸೆಟ್ ಒಪ್ಪಂದ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರದ ಪಾತ್ರವಿರುವುದಿಲ್ಲ. ರಕ್ಷಣಾ ಸಾಮಗ್ರಿಗಳ ಸ್ವಾಧೀನ ಮಾರ್ಗಸೂಚಿ ಪ್ರಕಾರ ಡಸಾಲ್ಟ್ ಕಂಪನಿ ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಿ ಕೊಳ್ಳುವ ಅವಕಾಶ ಹೊಂದಿದೆ.

ವಿಮಾನ ಬೆಲೆ

ಯುಪಿಎ ಸರ್ಕಾರದ ಅವಧಿಯಲ್ಲಿ ಅಂತಿಮಗೊಳಿಸಿದ ಖರೀದಿ ಮೊತ್ತ ಹಾಗೂ ಸದ್ಯದ ಖರೀದಿ ಮೊತ್ತಕ್ಕೆ ಬದಲಾವಣೆಗೆ ರೂಪಾಯಿ-ಯೂರೋದಲ್ಲಿ ಮೌಲ್ಯ ಕೂಡ ಪರಿಗಣನೆಗೆ ಬರುತ್ತದೆ. ಹಾಗೆಯೇ ಹಾಲಿ ಒಪ್ಪಂದದಲ್ಲಿ ಆಧುನಿಕ ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನ ಸೇರಿಸಿಕೊಳ್ಳಲಾಗಿದೆ. ಇದರಿಂದ ಬೆಲೆ ಏರಿಕೆಯಾಗಿರಬಹುದು. ರಾಷ್ಟ್ರೀಯ ಭದ್ರತೆ ಕಾರಣದಿಂದ ಯುದ್ಧ ವಿಮಾನದ ಬೆಲೆ ವಿವರ ತಿಳಿಸಲು ಅಸಾಧ್ಯ ಎಂದು ಸರ್ಕಾರ ಹೇಳಿತ್ತು. ಆದಾಗ್ಯೂ ಕೋರ್ಟ್​ಗೆ ಮುಚ್ಚಿದ ಲಕೋಟೆಯಲ್ಲಿ ವಿವರಣೆ ನೀಡಿದೆ. ಅದನ್ನು ಕೋರ್ಟ್ ಪರಿಶೀಲಿಸಿದೆ. ಇನ್ನೊಂದೆಡೆ ಕೇಂದ್ರೀಯ ಲೆಕ್ಕ ಪರಿಶೋಧಕ (ಸಿಎಜಿ) ಕೂಡ ಬೆಲೆಯನ್ನು ಪರಿಶೀಲಿಸಿ ಸಾರ್ವಜನಿಕ ಲೆಕ್ಕ ಪರಿಶೋಧನೆ ಸಮಿತಿಗೆ ನೀಡಿದ್ದಾರೆ. ಸಮಿತಿ ಕೂಡ ಇದನ್ನು ಪರಾಮಶಿಸಿದೆ. ದರ ವಿವರವನ್ನು ಸಾರ್ವಜನಿಕಗೊಳಿಸಲು ಅಸಾಧ್ಯ ಎಂದು ಒಪ್ಪಂದ ದಲ್ಲಿಯೂ ಸೇರಿಸಲಾಗಿದೆ. ಹಿಂದಿನ ಸರ್ಕಾರದ ದರ ಪಟ್ಟಿಯನ್ನು ಕೋರ್ಟ್ ಪರಿಶೀಲಿಸಿದೆ.

ಸಿಎಜಿ, ಪಿಎಸಿ ಬಗ್ಗೆ ಪ್ರಶ್ನೆ

ಯುದ್ಧ ವಿಮಾನದ ಬೆಲೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಾಮಶಿಸಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿರುವುದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದರು.ಲೆಕ್ಕಪತ್ರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಜಿ ವರದಿ ನೋಡಿಲ್ಲ. ಹಾಗಿದ್ದರೆ ಕೋರ್ಟ್ ತೀರ್ಪಿನಲ್ಲಿ ಹೀಗೇಕೆ ಉಲ್ಲೇಖವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.

ದೇಶಾದ್ಯಂತ ಸುದ್ದಿಗೋಷ್ಠಿ

ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ರಾಹುಲ್ ರಫೇಲ್ ಆರೋಪ ಹೊರಿಸುತ್ತಿದ್ದ ಕಾರಣ ಸುಪ್ರೀಂತೀರ್ಪಿನ ಕುರಿತು ಬಿಜೆಪಿ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಿದೆ. ನವದೆಹಲಿಯ ಜತೆಗೆ ಎಲ್ಲ ರಾಜ್ಯಗಳ ಜನರಿಗೂ ಅವರವರ ಪ್ರಾದೇಶಿಕ ಭಾಷೆಗಳಲ್ಲೂ ಸುದ್ದಿಗೋಷ್ಠಿ ನಡೆಸಿ ಜನರಿಗೆ ವಿಷಯ ತಿಳಿಸುವಂತೆ ಸೂಚಿಸಲಾಗಿದ್ದು, ಪ್ರತಿ ರಾಜ್ಯದಲ್ಲೂ ಕನಿಷ್ಠ 1 ಸುದ್ದಿಗೋಷ್ಠಿ ನಡೆದಿದೆ.

ರಾಹುಲ್ ಕ್ಷಮೆಗೆ ಬಿಜೆಪಿ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಾಧಾರವಾಗಿ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಆರೋಪದ ಮೂಲ ಬಹಿರಂಗಪಡಿಸಿ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಇದನ್ನು ತಳ್ಳಿಹಾಕಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಫೇಲ್​ನಲ್ಲಿ ಅಕ್ರಮವಾಗಿರುವುದು ನಿಜ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಸೇನೆಗೆ ಶವಪೆಟ್ಟಿಗೆ ಖರೀದಿಸುವಲ್ಲಿ ಹಗರಣ ಮಾಡಿದ್ದಾರೆ ಎಂದು ಶುದ್ಧ ಚಾರಿತ್ರ್ಯದ ಜಾರ್ಜ್ ಫರ್ನಾಂಡೀಸ್ ಅವರಿಗೆ ಕಾಂಗ್ರೆಸ್ ನೋವುಂಟು ಮಾಡಿತ್ತು. ಅದರಂತೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ಸಂಚು ಹೆಣೆದಿದೆ. ಈ ಯತ್ನವನ್ನು ವಿಫಲಗೊಳಿಸುತ್ತೇವೆ.

| ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

 

ಯಾವುದೇ ವ್ಯಕ್ತಿಯ ಗ್ರಹಿಕೆಯನ್ನು ಆಧಾರವಾಗಿಟ್ಟು ಕೊಂಡು ಅಕ್ರಮ ನಡೆದಿದೆ ಎಂದು ಪರಿಗಣಿಸಿ ಕೋರ್ಟ್ ನಿಂದ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ರಫೇಲ್ ಯುದ್ಧ ವಿಮಾನ ಪ್ರಕರಣದಲ್ಲಿ ಮಧ್ಯಪ್ರವೇಶಿಸ ಬೇಕೆನ್ನುವುದಕ್ಕೆ ಯಾವುದೇ ದಾಖಲೆಗಳು ದೊರೆಯಲಿಲ್ಲ. ಹೀಗಾಗಿ ಎಲ್ಲ ಅರ್ಜಿಗಳನ್ನು ವಜಾಗೊಳಿಸುತ್ತಿದ್ದೇವೆ.

| ನ್ಯಾ.ರಂಜನ್ ಗೊಗೊಯ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ