ರಫೇಲ್​ ಒಪ್ಪಂದ ಎಚ್​ಎಎಲ್​ನ ಹಕ್ಕು; ದೇಶದಲ್ಲಿ ಯುದ್ಧ ವಿಮಾನ ಉತ್ಪಾದನೆ ಎಚ್ಎ​ಎಲ್​ಗೆ ಮಾತ್ರ ಸಾಧ್ಯ

ಬೆಂಗಳೂರು: ರಫೇಲ್​ ಜತೆಗಿನ ಒಪ್ಪಂದ ಹಿಂದೂಸ್ಥಾನ ಏರೋನಾಟಿಕ್ಸ್​ ಲಿಮಿಟೆಡ್​ನ (ಎಚ್​ಎಎಲ್​) ಹಕ್ಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.

ರಫೇಲ್​ ಹಗರಣದ ಕುರಿತು ಎಚ್​ಎಎಲ್​ ಸಿಬ್ಬಂದಿಯೊಂದಿಗೆ ಶನಿವಾರ ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್​ ಗಾಂಧಿ” ಈ ದೇಶದಲ್ಲಿ ಯುದ್ಧ ವಿಮಾನಗಳ ನಿರ್ಮಾಣದಲ್ಲಿ ಅನುಭವವಿರುವುದು ಎಚ್​ಎಎಲ್​ಗೆ ಮಾತ್ರ. ರಫೇಲ್​ ಒಪ್ಪಂದವನ್ನು ಪಡೆಯುವುದು ಎಚ್​ಎಎಲ್​ನ ಹಕ್ಕಾಗಿತ್ತು,” ಎಂದು ಅವರು ಅಭಿಪ್ರಾಯಪಟ್ಟರು.

” ಎಚ್​ಎಎಲ್​ ಎಂಬುದು ಕೇವಲ ಒಂದು ಕಂಪನಿಯಲ್ಲ. ಭಾರತ ಸ್ವತಂತ್ರಗೊಂಡಾಗ, ನಿರ್ದಿಷ್ಟ ರಂಗಗಳನ್ನು ಪ್ರವೇಶಿಸಲು ಕೆಲ ಕಾರ್ಯತಂತ್ರ ಆಸ್ತಿಗಳನ್ನು ನಿರ್ಮಾಣ ಮಾಡಿತ್ತು. ಅಂತರಿಕ್ಷಕ್ಕೆ ಕಾಲಿಡಲು ಭಾರತಕ್ಕೆ ಇದ್ದ ಕಾರ್ಯತಂತ್ರ ಆಸ್ತಿ ಎಚ್​ಎಎಲ್​ ಮಾತ್ರ. ಎಚ್​ಎಎಲ್​ ಮತ್ತು ಅದರ ಉದ್ಯೋಗಿಗಳು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಎಚ್​ಎಎಲ್​ಗೆ ಈ ದೇಶ ಎಂದೆಂದಿಗೂ ಋಣಿಯಾಗಿರುತ್ತದೆ,” ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

“ಎಚ್​ಎಎಲ್ ಆಧುನಿಕ ಭಾರತದ ದೇಗುಲ. ಈ ದೇಗುಲಗಳ ಮೇಲಿನ ಕೇಂದ್ರ ಸರ್ಕಾರದ ದಾಳಿ ಸರಿಯಲ್ಲ. ಯುದ್ಧ ವಿಮಾನಗಳನ್ನು ತಯಾರಿಸಲು ಎಚ್​ಎಎಲ್​ಗೆ ಅನುಭವವಿಲ್ಲ ಎಂದು ಈ ಕೇಂದ್ರ ಸರ್ಕಾರದ ಪ್ರಮುಖರೊಬ್ಬರು ಹೇಳುತ್ತಾರೆ. ಸರಿ, ಹಾಗಾದರೆ, ಈಗ ಒಪ್ಪಂದ ಪಡೆದುಕೊಂಡಿರುವ ವ್ಯಕ್ತಿಗೆ, ಅವರ ಸಂಸ್ಥೆಗೆ ಯಾವ ಅನುಭವವಿದೆ. ಅವರಿಗಿರುವ ಅರ್ಹತೆ ಏನು? ಈ ಸರ್ಕಾರದಲ್ಲಿ ಅನಿಲ್ ಅಂಬಾನಿಗೆ ಸಿಗುವ ಆದ್ಯತೆ HALಗೆ ಸಿಗುತ್ತಿಲ್ಲ. ಎಚ್​ಎಎಲ್​ಗೆ ಇರುವ 78 ವರ್ಷಗಳ ಅನುಭವವನ್ನು ನಾನಿಲ್ಲಿ ಸ್ಮರಿಸುತ್ತೇನೆ. ಎಚ್ಎಎಲ್ ಅನ್ನು ಅವಮಾನ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಕ್ಷಮೆ ಕೇಳಬೇಕು. ಆದರೆ, ಅವರು ಕೇಳುವುದಿಲ್ಲ. ಅವರ ಪರವಾಗಿ ನಾನು ನಿಮ್ಮ ಕ್ಷಮೆ ಕೇಳುತ್ತೇನೆ,” ಎಂದರು.

ಎಚ್​ಎಎಲ್ ಇರಲಿ ರಕ್ಷಣಾ ಸಾಮಗ್ರಿ ತಯಾರಿಸುವ ಯಾವುದೇ ಸಾರ್ವಜನಿಕ ಉದ್ಯಮವಾಗಲಿ. ನಾನು ಅದರ ಪರ ನಿಲ್ಲುತ್ತೇನೆ. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ಯಾವಾಗ ಬೇಕಾದರೂ ನೀವು ಸಾರ್ವಜನಿಕ ಉದ್ಯಮಗಳ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತರಬಹುದು. ನಾನು ನಿಮ್ಮ ನೆರವಿಗೆ ತಕ್ಷಣ ಧಾವಿಸುತ್ತೇನೆ ಎಂದು ರಾಹುಲ್​ ಗಾಂಧಿ ಎಚ್​ಎಎಲ್​ ಮತ್ತು ಅದರ ಉದ್ಯೋಗಿಗಳಿಗೆ ತಿಳಿಸಿದರು.

“ಅನಿಲ್ ಅಂಬಾನಿಗೆ 38,000 ಕೋಟಿ ರೂ.ಗಳ ಒಪ್ಪಂದವನ್ನು ಕೇಂದ್ರ ಸರ್ಕಾರ ಕೊಡಿಸಿದ್ದೇಕೆ. ಅನಿಲ್ ಅಂಬಾನಿಗಾಗಿ ಎಚ್​ಎಎಲ್ ನಾಶ ಮಾಡುವುದು ಸರಿಯೇ? ಪ್ರಧಾನಿಯವರ ಸೂಚನೆಯಂತೆಯೇ ಈ ಒಪ್ಪಂದವನ್ನು ಅನಿಲ್ ಅಂಬಾನಿಗೆ ಕೊಡಲಾಗಿದೆ. ಇದನ್ನೇ ಫ್ರಾನ್ಸ್​ನ ಮಾಜಿ ಪ್ರಧಾನಿಯೂ ಹೇಳಿದ್ದಾರೆ. ಅದು ಸುಳ್ಳು ಎಂದು ರಕ್ಷಣಾ ಸಚಿವೆ ಹೇಳುತ್ತಾರೆ. ಈಗ ರಕ್ಷಣಾ ಸಚಿವೆ ಫ್ರಾನ್ಸ್ ಗೆ ತೆರಳಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಆದರೆ, ನಾವು ಬಿಡುವುದಿಲ್ಲ,” ಎಂದರು.

ಕೇಂದ್ರ ಸರ್ಕಾರವೇ ಎಚ್​ಎಎಲ್ ಮುಚ್ಚಲು ಹೊರಟಿರುವಾಗ ನಾವು ಅನಿವಾರ್ಯವಾಗಿ‌ ಪ್ರತಿಪಕ್ಷ ನಾಯಕನ ಮೊರೆ ಹೋಗಿದ್ದೇವೆ. ಹೇಗಾದರೂ ಸರಿ ಎಚ್​ಎಎಲ್​ ಅನ್ನು ಉಳಿಸಿಕೊಳ್ಳಲೇಬೇಕಾಗಿದೆ
– ಉಮೇಶ್, ಎಚ್​ಎಎಲ್​ ನಿವೃತ್ತ ನೌಕರರ ಸಂಘ

ನಮ್ಮ ರಾಷ್ಟ್ರದ ಪ್ರಥಮ ಮಹಿಳಾ ರಕ್ಷಣಾ ಸಚಿವೆ ಮಿಗ್ ಯುದ್ಧ ವಿಮಾನದಲ್ಲಿ ಯಶಸ್ವಿ ಹಾರಾಟ ನಡೆಸಿ ಹೊಸ ದಾಖಲೆ ಮಾಡಿದರು. ಅವರು ಸುರಕ್ಷಿತವಾಗಿ, ಯಶಸ್ವಿ ಹಾರಾಟ ಮಾಡಿದ ಯುದ್ಧ ವಿಮಾನ ತಯಾರಿಸಿದ್ದು ಎಚ್​ಎಎಲ್​. ರಫೇಲ್ ಖರೀದಿ ಅಕ್ರಮದ ವಿರುದ್ಧ ಅಕ್ಟೋಬರ್ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನಾವು ಕರೆಕೊಟ್ಟಿದ್ದೇವೆ.
– ಅನಂತಪದ್ಮನಾಭನ್, ಎಚ್​ಎಎಲ್​ ನಿವೃತ್ತ ನೌಕರರ ಸಂಘ