ರಫೇಲ್ ಮರುಪರಿಶೀಲನೆಗೆ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠದ ನಿರ್ಧಾರ: ಕೇಂದ್ರಕ್ಕೆ ಹಿನ್ನಡೆ

ನವದೆಹಲಿ: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗುವ ಮುನ್ನವೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆಘಾತ ನೀಡಿದೆ. ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಕುರಿತಾದ ತೀರ್ಪು ಮರುಪರಿಶೀಲನೆಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಹೇಳಿದೆ. ಮರುಪರಿಶೀಲನೆ ಅರ್ಜಿಗೆ ಪೂರಕವಾಗಿ ಸಲ್ಲಿಕೆಯಾಗಿರುವ ದಾಖಲೆಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಅದನ್ನು ಪರಿಗಣಿಸಬಾರದು ಎಂದು ಸರ್ಕಾರ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಅರ್ಜಿಗಳ ವಿಸõತ ವಿಚಾರಣೆಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಿಜೆಐ ಹೇಳಿದ್ದಾರೆ.

ರಕ್ಷಣಾ ಸಚಿವಾಲಯದಲ್ಲಿನ ದಾಖಲೆಗಳು ಅಧಿಕೃತ ಗೌಪ್ಯತೆ ಕಾಯ್ದೆಗೆ ಒಳಪಟ್ಟಿರುತ್ತವೆ. ಇದನ್ನು ಸೋರಿಕೆ ಮಾಡುವ ಮೂಲಕ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲಾಗಿದೆ. ಸಾಕ್ಷ್ಯ ಕಾಯ್ದೆಯ ಸೆಕ್ಷನ್ 123 ಅನ್ವಯ ಸಚಿವಾಲಯದ ಒಪ್ಪಿಗೆ ಇಲ್ಲದೆ ದಾಖಲೆಗಳನ್ನು ಕೋರ್ಟ್ ಎದುರು ಹಾಜರುಪಡಿಸುವಂತಿಲ್ಲ. ಹಾಗಾಗಿ ಇದನ್ನು ತಿರಸ್ಕರಿಸಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಮತ್ತು ದಾವೆದಾರ ಪ್ರಶಾಂತ್ ಭೂಷಣ್, ರಫೇಲ್ ಖರೀದಿ ಒಪ್ಪಂದದ ಹಲವು ದಾಖಲೆಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪೆಂಟಗಾನ್ ಪೇಪರ್ಸ್ ಪ್ರಕರಣದಲ್ಲಿ ವಿಯೆಟ್ನಾಂ ಯುದ್ಧದ ಕುರಿತಾದ ದಾಖಲೆಗಳು ಕೂಡ ಮಾಧ್ಯಮದಲ್ಲಿ ಪ್ರಕಟಗೊಂಡಿದ್ದವು. ಆಗ ಅಮೆರಿಕ ಸರ್ಕಾರ ಸಲ್ಲಿಸಿದ್ದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂಬ ವಾದವನ್ನು ಅಲ್ಲಿನ ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು ಎಂದರು. ಇದಕ್ಕೆ ಮನ್ನಣೆ ನೀಡಿದ ನ್ಯಾಯಪೀಠ, ಮರುಪರಿಶೀಲನಾ ಅರ್ಜಿಗಳನ್ನು ನೂತನ ದಾಖಲೆಗಳ ಆಧಾರದ ಮೇಲೆ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿತು.

ದೇಶೀಯ ಪಾಲುದಾರ ಆಯ್ಕೆ ಪರಿಶೀಲನೆ?

ಒಪ್ಪಂದದಂತೆ ಫ್ರಾನ್ಸ್​ನ ರಫೇಲ್ ಯುದ್ಧವಿಮಾನ ತಯಾರಿಕೆ ಸಂಸ್ಥೆ ದಸಾಲ್ಟ್ ಏವಿಯೇಷನ್ ಭಾರತದಲ್ಲಿ ಆಫ್​ಸೆಟ್ (ದೇಶೀಯ) ಪಾಲುದಾರಿಕೆ ಕಂಪನಿ ಯನ್ನು ಆಯ್ಕೆ ಮಾಡಿಕೊಂಡ ಬಗ್ಗೆಯೂ ಕೋರ್ಟ್ ವಿಚಾರಣೆ ನಡೆಸಲಿದೆ. ಮರುಪರಿಶೀಲನಾ ಅರ್ಜಿಗಳಲ್ಲಿ ಪ್ರಶ್ನಿಸಲಾಗಿರುವಂತೆ ಯುದ್ಧವಿಮಾನಗಳ ದರ ನಿಗದಿ, ದಸಾಲ್ಟ್ ಜತೆಗೆ ರಕ್ಷಣಾ ಸಚಿವಾಲಯದ ಒಪ್ಪಂದ, ರಕ್ಷಣಾ ಸಾಧನ ಖರೀದಿ ಪ್ರಕ್ರಿಯೆ ಹಾಗೂ ಸಹಯೋಗಕ್ಕಾಗಿ ಭಾರತದ ಕಂಪನಿ ಆಯ್ಕೆ ಬಗ್ಗೆಯೂ ಸಿಜೆಐ ಪೀಠ ವಿಚಾರಣೆ ವೇಳೆ ಪರಿಗಣಿಸಲಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ರಫೇಲ್ ಒಪ್ಪಂದ ಸಂಬಂಧಿತ ದಾಖಲೆಗಳನ್ನು ಕೂಡ ಸಾಕ್ಷ್ಯವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.

ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ

ಮರುಪರಿಶೀಲನಾ ಅರ್ಜಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಪ್ರಧಾನಿ ಕಳ್ಳತನ ಮಾಡಿಸಿದ್ದಾರೆ ಎಂದು ಕೋರ್ಟ್ ಒಪ್ಪಿದೆ ಎಂದು ಎಲ್ಲಿಯೂ ಉಲ್ಲೇಖವಿಲ್ಲ. ಆ ರೀತಿ ಕೋರ್ಟ್ ಹೇಳಿಯೇ ಇಲ್ಲ. ಸುಪ್ರೀಂ ತೀರ್ಪನ್ನು ಜನರು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ರಾಹುಲ್ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಫೇಲ್ ಒಪ್ಪಂದದಲ್ಲಿ ಒಂದು ಮಾದರಿಯ ಭ್ರಷ್ಟಾಚಾರ ನಡೆದಿದೆ ಎಂದು ಸುಪ್ರೀಂ ಒಪ್ಪಿದೆ. ಚೌಕಿದಾರ್ ಕಳ್ಳತನ ಮಾಡಿಸಿದ್ದಾರೆ ಎಂದು ಕೋರ್ಟ್ ಪರೋಕ್ಷವಾಗಿ ಹೇಳಿದೆ. ಪ್ರಧಾನಿ ವಾಯುಪಡೆಯ ಹಣವನ್ನು ಅನಿಲ್ ಅಂಬಾನಿಗೆ ಕೊಟ್ಟಿದ್ದಾರೆ ಎಂದು ಮುಂಚಿನಿಂದಲೂ ನಾನು ಹೇಳುತ್ತಿದ್ದೇನೆ. ತನಿಖೆ ನಡೆಸಲಿದೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ (ಅಮೇಠಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ)

ಏನಿದು ಪ್ರಕರಣ?

ಫ್ರಾನ್ಸ್​ನಿಂದ 36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಪ್ರಶ್ನಿಸಿದ್ದ ಎಲ್ಲ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ 2018ರ ಡಿ.14ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಕ್ಲೀನ್​ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಹಾಗೂ ವಕೀಲ ಪ್ರಶಾಂತ್ ಭೂಷಣ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮರುಪರಿಶೀಲನಾ ಅರ್ಜಿ ಜತೆಗೆ ನೀಡಲಾಗಿರುವ ದಾಖಲೆಗಳನ್ನು ಸಚಿವಾಲಯದಿಂದ ಕದಿಯಲಾಗಿದೆ ಎಂದು ಕೇಂದ್ರ ಸರ್ಕಾರ ಆಕ್ಷೇಪಣಾ ಅರ್ಜಿ ಸಲ್ಲಿಸಿತ್ತು. ಮಾ.14ರಂದು ಈ ಕುರಿತಾದ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.

ಸುಪ್ರೀಂ ತೀರ್ಪಿನ ಅರ್ಧ ಪ್ಯಾರಾ ಕೂಡ ಕಾಂಗ್ರೆಸ್ ಅಧ್ಯಕ್ಷರು ಬಹುಶಃ ಓದುವುದಿಲ್ಲ. ಕೋರ್ಟ್ ಹೇಳದೆ ಇರುವ ಮಾತುಗಳನ್ನು ತಾವೇ ಸೃಷ್ಟಿಸಿ ಹೇಳುತ್ತಿದ್ದಾರೆ. ಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆಯಾಗಿಲ್ಲ. ಬದಲಿಗೆ ರಫೇಲ್ ಖರೀದಿ ಬಗ್ಗೆ ಜನರಿಗೆ ಮತ್ತಷ್ಟು ಸ್ಪಷ್ಟನೆ ಸಿಗಲಿದೆ.

| ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆ

ನ್ಯಾ. ಜೋಸೆಫ್ ಪ್ರತ್ಯೇಕ ಅಭಿಪ್ರಾಯ

ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನ್ಯಾ, ಎಸ್.ಕೆ. ಕೌಲ್ ಮತ್ತು ಮುಖ್ಯ ನ್ಯಾ. ರಂಜನ್ ಗೊಗೊಯ್ ಒಂದೇ ರೀತಿಯ ಕಾರಣಗಳನ್ನು ನೀಡಿ ಮರುಪರಿಶೀಲನಾ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದರು. ಆದರೆ ನ್ಯಾ. ಕೆ.ಎಂ. ಜೋಸೆಫ್ ಮಾಧ್ಯಮಗಳನ್ನು ಉಲ್ಲೇಖಿಸಿ ಪ್ರತ್ಯೇಕ ಅಭಿಪ್ರಾಯ ನೀಡಿದರು. ‘ಭಾರತದಲ್ಲಿ ಮಾಧ್ಯಮ ಹಾಗೂ ಪತ್ರಿಕೆಗಳು ಪ್ರಜಾಪ್ರಭುತ್ವ ಬಲವರ್ಧನೆಗೆ ಭಾರಿ ಕೊಡುಗೆ ನೀಡಿವೆ. ಒಬ್ಬ ಮುಕ್ತ ವ್ಯಕ್ತಿಗೆ ಯಾವುದೇ ಭಯ ಇರಬಾರದು. ಅಂಥ ವ್ಯಕ್ತಿ ಏಕಪಕ್ಷೀಯವಾಗಿ ಇರುವುದಿಲ್ಲ. ಯಾವುದೇ ಪ್ರಭಾವಕ್ಕೂ ಒಳಗಾಗುವುದಿಲ್ಲ’ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ರಫೇಲ್ ಖರೀದಿ ಕುರಿತಾದ ವರದಿಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಪರೋಕ್ಷವಾಗಿ ಉಲ್ಲೇಖಿಸಿದರು.

ಕೇಂದ್ರದ ವಾದ ತಿರಸ್ಕರಿಸಿದ ಒಮ್ಮತದ ತೀರ್ಪು ಇದು. ರಕ್ಷಣಾ ಒಪ್ಪಂದಗಳಲ್ಲಿ ತಪು್ಪ ಮಾಡಲು ಸಾಧ್ಯವೇ ಇಲ್ಲ ಎಂಬಂತೆ ಸರ್ಕಾರ ವಾದಿಸಿತ್ತು.

| ಅರುಣ್ ಶೌರಿ ಮರುಪರಿಶೀಲನಾ ಅರ್ಜಿದಾರ