ಸುಪ್ರೀಂ ತೀರ್ಪಿನಿಂದ ರಫೇಲ್​ ಹಗರಣ ವಿಶ್ರಾಂತಿ ಪಡೆದಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಕುರಿತು ತನಿಖೆ ಅನವಶ್ಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಹಣಕಾಸು ಸಚಿವ ಅರುಣ್​ ಜೇಟ್ಲಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​, ‘ರಫೇಲ್​ ಹಗರಣ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ವಿಶ್ರಾಂತಿ ಪಡೆದಿದೆ’ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೇಟ್ಲಿ, ರಫೇಲ್​ ಯುದ್ಧ ವಿಮಾನ ಖರೀದಿಗೆ ಅಡ್ಡಿಪಡಿಸುತ್ತಿದ್ದವರು ಈಗ ಎಲ್ಲವನ್ನೂ ಕಳೆದುಕೊಂಡಂತಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಅಂಕಿ ಅಂಶ ಸತ್ಯವಾಗಿದ್ದು, ರಾಹುಲ್​ ಗಾಂಧಿ ಒದಗಿಸಿದ್ದ ಅಂಕಿ ಅಂಶ ಸುಳ್ಳು ಎಂದು ಸಾಬೀತಾಗಿದೆ. ಸತ್ಯಕ್ಕೆ ಕೇವಲ ಒಂದೇ ರೂಪವಿರುತ್ತದೆ. ಆದರೆ, ಸುಳ್ಳಿಗೆ ಹಲವು ಮುಖಗಳಿರುತ್ತವೆ. ಅದಕ್ಕಾಗಿಯೇ ರಾಹುಲ್​ ವಿಭಿನ್ನ ಅಂಕಿ ಅಂಶಗಳನ್ನು ನೀಡಿದ್ದರು ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್​ ತೀರ್ಪು ನೀಡಿದ ನಂತರವೂ ಕಾಂಗ್ರೆಸ್​ ಪಕ್ಷ ರಫೇಲ್​ ಹಗರಣಕ್ಕೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, “ಕಿವುಡರಿಗೆ ಎಂದಿಗೂ ಉತ್ತರ ಕೇಳಿಸುವುದಿಲ್ಲ” ಎಂದರು. (ಏಜೆನ್ಸೀಸ್)