ರಫೆಲ್​ ಒಪ್ಪಂದ​ : ಸಿಬಿಐ ನಿರ್ದೇಶಕ, ಅರುಣ್​ ಶೌರಿ, ಪ್ರಶಾಂತ್​ ಭೂಷಣ್​ ನಡೆಗೆ ಕೇಂದ್ರ ಅಸಮಾಧಾನ

ನವದೆಹಲಿ: ರಫೆಲ್​ ಡೀಲ್​ ಒಪ್ಪಂದಕ್ಕೆ ಸಂಬಂಧಪಟ್ಟ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬೇಡಿಕೆ ಇಟ್ಟಿರುವ ಮಾಜಿ ಕೇಂದ್ರ ಸಚಿವ ಅರುಣ್​ ಶೌರಿ ಹಾಗೂ ವಕೀಲ ಪ್ರಶಾಂತ್​ ಭೂಷಣ್​ ಅವರನ್ನು ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಭೇಟಿಯಾಗಿದ್ದು ಕೇಂದ್ರ ಸರ್ಕಾರಕ್ಕೆ ಅಸಮಾಧಾನ ಉಂಟುಮಾಡಿದೆ ಎಂದು ತಿಳಿದು ಬಂದಿದೆ.

ಸಿಬಿಐ ಹೀಗೆ ರಾಜಕಾರಣಿಗಳನ್ನು ಭೇಟಿಯಾಗುವುದು ಅಪರೂಪದ ಪ್ರಕರಣ ಎಂದು ಕೇಂದ್ರ ಸರ್ಕಾರದ ಹಿರಿಯ ಕಾರ್ಯಕಾರಿ ಹೇಳಿದೆ.
ಅರುಣ್​ ಶೌರಿ ಹಾಗೂ ಪ್ರಶಾಂತ್​ ಭೂಷಣ್​ ಕಳೆದ ವಾರ ಸಿಬಿಐ ನಿರ್ದೇಶಕ ಅಲೋಕ್​ ಅವರನ್ನು ಭೇಟಿಯಾಗಿ ಹಲವು ದಾಖಲೆಗಳನ್ನು ನೀಡಿದ್ದಲ್ಲದೆ, ರಫೆಲ್​ ಡೀಲ್​ ಹಗರಣವನ್ನು ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೇಂದ್ರ ಸರ್ಕಾರದ ಕಾರ್ಯಕಾರಿ ಕಚೇರಿ, ಬಹುಶಃ ರಾಜಕಾರಣಿಗಳು ಸಿಬಿಐ ನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದ್ದು ಇದೇ ಮೊದಲಸಲ. ಇಂಥ ಭೇಟಿಗಳು ತುಂಬ ಅಪರೂಪ ಎಂದು ಬೇಸರ ವ್ಯಕ್ತಪಡಿಸಿದೆ.

ಯಾರಾದರೂ ರಾಜಕಾರಣಿಗಳು ಸಿಬಿಐ ಮುಖ್ಯಸ್ಥರ ಭೇಟಿ ಮಾಡಲು ಇಂಗಿತ ವ್ಯಕ್ತಪಡಿಸಿ, ಅಪಾಯಿಂಟ್​ಮೆಂಟ್​ ಕೇಳಿದರೆ, ಅದೇನೆ ದೂರು, ದಾಖಲೆಗಳಿದ್ದರೂ ಕಚೇರಿಯ ರಿಸೆಪ್ಷನ್​ನಲ್ಲಿ ಕೊಟ್ಟು ಹೋಗಲು ಆ ಮುಖ್ಯಸ್ಥರು ಸೂಚಿಸುವುದು ಸಾಮಾನ್ಯ. ಆದರೆ ಇಲ್ಲಿ ನೇರವಾಗಿ ಹೋಗಿ ಮಾತುಕತೆ ನಡೆಸಿದ್ದು ಸಮಂಜಸವಲ್ಲ ಎಂದು ತಿಳಿಸಿದೆ.

ಶೌರಿ ಹಾಗೂ ಪ್ರಶಾಂತ್​ ಸಿಬಿಐ ನಿರ್ದೇಶಕನ ಜತೆ ನಡೆಸಿದ ಸಭೆಯಲ್ಲಿ ಅರುಣ್​ ಶೌರಿ ಮೋದಿ ಸರ್ಕಾರವನ್ನು ಟೀಕಿಸಿದ್ದು, ಪ್ರಶಾಂತ್​ ಭೂಷಣ್, ಸರ್ಕಾರದ ಅನುಮತಿ ಪಡೆದು ರಫೆಲ್​​ ಒಪ್ಪಂದ ಪ್ರಕರಣವನ್ನು ಕಾನೂನು ಪ್ರಕಾರ ತನಿಖೆ ನಡೆಸಿ. ಒಪ್ಪಂದಕ್ಕೆ ಸಂಬಂಧಪಟ್ಟಂತೆ ಅನಿಲ್​ ಅಂಬಾನಿ ನೇತೃತ್ವದ ರಿಲಯನ್ಸ್​ ಗ್ರೂಪ್​ನ್ನು ಆಯ್ಕೆ ಮಾಡಲು ಕಾರಣವೇನು ಎಂಬ ವಿಚಾರಗಳ ತನಿಖೆ ಪ್ರಾರಂಭಿಸಿ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ.