ವ್ಯಸನಿಗಳಿಗೆ ರಾಧಿಕಾ ಹಾಡಿನ ಸಂದೇಶ

ಬೆಂಗಳೂರು: ‘ಮುಂದಿನ ನಿಲ್ದಾಣ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ನಟಿ ರಾಧಿಕಾ ನಾರಾಯಣ್ ಹೊಸದೊಂದು ಹಾಡಿನ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹಾಗಂತ ಈ ಹಾಡು ಯಾವುದೇ ಸಿನಿಮಾಕ್ಕೆ ಸಂಬಂಧಿಸಿದ್ದಲ್ಲ. ‘ಕೆ ಆಂಡ್ ಯೂಐ’ ಮ್ಯೂಸಿಕ್ ಬ್ಯಾಂಡ್​ನ ಕೌಶಿಕ್ ಶುಕ್ಲಾ ಸಾಹಿತ್ಯ ಮತ್ತು ಸಂಗೀತದಲ್ಲಿ ‘ಲೆಟ್ ದ ಫೇಸ್ ಪಾಸ್..’ ಎಂಬ ಸಿಂಗಲ್ ಗೀತೆ ಮೂಡಿಬಂದಿದೆ.

ಧೂಮಪಾನ, ಮದ್ಯಪಾನ, ಡ್ರಗ್ಸ್ ಮುಂತಾದ ದುಶ್ಚಟಗಳಿಗೆ ದಾಸರಾಗಿರುವವರು ಅದರಿಂದ ಹೊರಬಂದರೆ ಮತ್ತೆ ಒಳ್ಳೆಯ ಬದುಕು ಸಿಗುತ್ತದೆ ಎಂಬ ಸಂದೇಶ ಸಾರುವ ಈ ಹಾಡಿಗೆ ನಿರ್ದೇಶನ ಮಾಡಿರುವುದು ನಿರ್ದೇಶಕ ವಿನಯ್ ಭಾರಧ್ವಜ್.

ಬೇರೆ ಭಾಷೆಯ ಚಿತ್ರರಂಗದ ಕಲಾವಿದರು ಈ ರೀತಿ ಸಿಂಗಲ್ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಸ್ಯಾಂಡಲ್​ವುಡ್ ನಟ-ನಟಿಯರು ಮಾಡಿರುವುದು ವಿರಳ. ರಾಧಿಕಾ ನಾರಾಯಣ್ ಕೂಡ ಇದೇ ಮೊದಲ ಬಾರಿಗೆ ಇಂಥದ್ದೊಂದು ಹಾಡಿನಲ್ಲಿ ನಟಿಸಿದ್ದಾರೆ. ‘ಎರಡು ಶೇಡ್ ಇರುವ ಗಾಯಕಿಯಾಗಿ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಒಂದರಲ್ಲಿ ಸಿಗರೇಟ್, ಡ್ರಗ್ಸ್, ಮದ್ಯಪಾನಕ್ಕೆ ಅಡಿಕ್ಟ್ ಆದವಳಂತೆ ನಟಿಸಬೇಕಿತ್ತು. ಹಾಗಾಗಿ ಕೊಂಚ ಅಳುಕಿತ್ತು. ಯುವಜನತೆಗೆ ಸಂದೇಶ ನೀಡುವುದು ಈ ಹಾಡಿನ ಉದ್ದೇಶ ಆಗಿರುವುದರಿಂದ ಒಪ್ಪಿಕೊಂಡೆ. ನಾನು ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮತ್ತು ಸೂಚ್ಯವಾಗಿ ಇಡೀ ಹಾಡನ್ನು ವಿನಯ್ ಚಿತ್ರಿಸಿದ್ದಾರೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ರಾಧಿಕಾ.

ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಲಾಯಿತಂತೆ. ಹಾಡಿಗಾಗಿ ವೃತ್ತಿಪರ ತಂತ್ರಜ್ಞರೇ ಕೆಲಸ ಮಾಡಿರುವುದರಿಂದ ಗುಣಮಟ್ಟ ಉತ್ತಮವಾಗಿದೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಹಾಗು ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಇದೇ ರೀತಿಯ ಒಳ್ಳೆಯ ತಂಡ ಮತ್ತು ಪರಿಕಲ್ಪನೆಯುಳ್ಳ ಸಿಂಗಲ್ ಅವಕಾಶಗಳು ಬಂದರೆ ಮತ್ತೆ ನಟಿಸುವುದಾಗಿ ಹೇಳುತ್ತಾರೆ ರಾಧಿಕಾ. ಸದ್ಯ ರಿಲೀಸ್​ಗೆ ಸಿದ್ಧವಾಗುತ್ತಿರುವ ‘ಶಿವಾಜಿ ಸುರತ್ಕಲ್’ ಸಿನಿಮಾದಲ್ಲೂ ಅವರು ರಮೇಶ್ ಅರವಿಂದ್ ಜತೆಗೆ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

Leave a Reply

Your email address will not be published. Required fields are marked *