ನಾನಿನ್ನೂ ಲವ್ನಲ್ಲಿ ಬಿದ್ದಿಲ್ಲ

ಈ ವರ್ಷ ಪುನೀತ್ ಜತೆ ‘ನಟಸಾರ್ವಭೌಮ’ ಮತ್ತು ‘ಸೀತಾರಾಮ ಕಲ್ಯಾಣ’ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ನಟಿ ರಚಿತಾ ರಾಮ್ ಈಗ ಅಭಿಮಾನಿಗಳಿಗೆ ‘ಐ ಲವ್ ಯೂ’ ಎನ್ನಲು ಸಜ್ಜಾಗಿದ್ದಾರೆ. ಅಂದರೆ, ಉಪೇಂದ್ರ ಜತೆ ಅವರು ನಟಿಸಿರುವ ‘ಐ ಲವ್ ಯೂ’ ಚಿತ್ರ ಜೂ.14ರಂದು ತೆರೆಕಾಣುತ್ತಿದೆ. ಟ್ರೇಲರ್ ಮೂಲಕ ತುಂಬ ಹೈಪ್ ಸೃಷ್ಟಿಸಿರುವ ಈ ಸಿನಿಮಾ ಬಗ್ಗೆ ‘ನಮಸ್ತೆ ಬೆಂಗಳೂರು’ ಜತೆ ರಚಿತಾ ಮಾತನಾಡಿದ್ದಾರೆ.

| ಮದನ್, ಬೆಂಗಳೂರು

  • ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾಗಿದ್ದು ಏನು?

ಮೊದಲನೆಯದಾಗಿ ಕಥೆ ಮತ್ತು ಪಾತ್ರ ನನಗೆ ತುಂಬ ಇಷ್ಟವಾಯ್ತು. ಧಾರ್ವಿುಕಾ ಎಂಬ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ಅದಲ್ಲದೆ, ಉಪೇಂದ್ರ ಜತೆ ಕೆಲಸ ಮಾಡಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಅವರ ಜತೆ ಮೊದಲ ಬಾರಿ ತೆರೆಹಂಚಿಕೊಳ್ಳಲು ಇದೇ ಸೂಕ್ತ ಕಥೆ ಎನಿಸಿತು. ಇನ್ನೊಂದು ಕಾರಣ ಎಂದರೆ, ಆರ್. ಚಂದ್ರು ನಿರ್ದೇಶನ.

  • ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ರಚಿತಾ ಯಾವ ರೀತಿ ಕಾಣಸಿಗುತ್ತಾರೆ?

ತುಂಬ ಸಿಂಪಲ್ ಹುಡುಗಿಯ ಪಾತ್ರ ನನ್ನದು. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಒಂದು ರೀತಿ ಕಾಣಿಸಿಕೊಂಡಿದ್ದೇನೆ. ಜನರು ಚಿತ್ರಮಂದಿರಕ್ಕೆ ಬರಲಿ ಎಂಬ ಕಾರಣಕ್ಕೆ ಕುತೂಹಲ ಮೂಡಿಸುವ ಉದ್ದೇಶದಿಂದ ಟ್ರೇಲರ್ ಕಟ್ ಮಾಡಲಾಗುತ್ತದೆ. ಕೇವಲ ಅದನ್ನು ನೋಡಿ ಇಡೀ ಸಿನಿಮಾ ಹೀಗೆ ಇದೆ ಎಂದು ಜಡ್ಜ್ ಮಾಡುವುದು ತಪು್ಪ. ಯಾವುದೋ ಒಂದು ಸನ್ನಿವೇಶದಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ ಎಂದ ಮಾತ್ರಕ್ಕೆ ಪೂರ್ತಿ ಅದೇ ಇರುತ್ತದೆ ಎಂದುಕೊಳ್ಳುವುದು ಸರಿಯಲ್ಲ. ಚಿತ್ರಕಥೆಗೆ ಅನಿವಾರ್ಯವಾದ್ದರಿಂದ ನಾನು ಅದನ್ನು ಮಾಡಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಇದು ಒಂದು ಫ್ಯಾಮಿಲಿ ಕಥೆ. ಫ್ಯಾಮಿಲಿ ಎಂದ ಮಾತ್ರಕ್ಕೆ ದೊಡ್ಡ ಪಾತ್ರವರ್ಗ ಇರಬೇಕು ಅಂತೇನಿಲ್ಲ. ಕೆಲವೇ ಪಾತ್ರಗಳ ಮೂಲಕವೂ ಅಂಥ ಒಂದು ಕಥೆಯನ್ನು ಹೇಳಬಹುದು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.

  • ‘ಐ ಲವ್ ಯೂ’ ಮೂಲಕ ಟಾಲಿವುಡ್​ಗೆ ಕಾಲಿಡುತ್ತಿದ್ದೀರಿ. ಹೇಗನಿಸುತ್ತಿದೆ?

ಈ ಸಿನಿಮಾ ತೆಲುಗಿಗೆ ಡಬ್ ಆಗಿ ತೆರೆಕಾಣುತ್ತಿರುವುದರಿಂದ ಇದನ್ನೇ ನನ್ನ ಚೊಚ್ಚಲ ಟಾಲಿವುಡ್ ಸಿನಿಮಾ ಎನ್ನಬೇಕೋ ಬೇಡವೋ ಎಂಬುದು ಗೊತ್ತಾಗುತ್ತಿಲ್ಲ. ನೇರವಾಗಿ ಯಾವುದೇ ತೆಲುಗು ಚಿತ್ರವನ್ನೂ ನಾನು ಈವರೆಗೆ ಮಾಡಿಲ್ಲ. ‘ಐ ಲವ್ ಯೂ’ ಮೂಲಕ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರಿಗೆ ಪರಿಚಯಗೊಳ್ಳುತ್ತಿದ್ದೇನೆ. ಅವರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಕರ್ನಾಟಕದಲ್ಲಿ ರಚಿತಾ ಎಂದರೆ ಎಲ್ಲರಿಗೂ ಗೊತ್ತು. ಆದರೆ ಉಪೇಂದ್ರ ಇಡೀ ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಪಡೆದವರು. ಈಗ ಅವರ ಜತೆಗೆ ನಾನು ಕೂಡ ಅಲ್ಲಿನ ಜನರಿಗೆ ಪರಿಚಯವಾಗುತ್ತಿದ್ದೇನೆ.

  • ‘ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ..’ ಅಂತ ಉಪೇಂದ್ರ ಅವರಿಗೇ ಡೈಲಾಗ್ ಹೊಡೆದಿದ್ದೀರಲ್ಲ..

ಈ ಹಿಂದೆ ಉಪೇಂದ್ರ ನಟಿಸಿದ್ದ ‘ಮುಕುಂದ ಮುರಾರಿ’ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಅವರ ಜತೆ ತೆರೆಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವರ ಜತೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿ ಆಯಿತು. ನಿರ್ದೇಶನದಲ್ಲಿ ಯಾರೂ ಅವರನ್ನು ಬೀಟ್ ಮಾಡಲು ಸಾಧ್ಯವಿಲ್ಲ. ನಟನೆಯಲ್ಲೂ ಅವರದ್ದೇ ಛಾಪು ಮೂಡಿಸಿ ದ್ದಾರೆ. ಅಂಥವರ ಎದುರಿಗೆ ನಿಂತು ‘ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ..’ ಅಂತ ಡೈಲಾಗ್ ಹೊಡೆಯಬೇಕಾದ ಸಂದರ್ಭ ಬಂದಿದ್ದು ವಿಶೇಷವಾಗಿತ್ತು. ಇಂಥ ಅವಕಾಶ ಯಾರಿಗೂ ಸಿಕ್ಕಿಲ್ಲ. ನಾನು ಅದೃಷ್ಟವಂತೆ ಎನಿಸಿತು. ಕೆಲವು ದೃಶ್ಯಗಳಲ್ಲಿ ಏನಾದರೂ ಸಲಹೆ ಇದ್ದರೆ ಉಪೇಂದ್ರ ಹೇಳುತ್ತಿದ್ದರು. ನಿರ್ದೇಶಕ ಚಂದ್ರುಗೆ ಇಷ್ಟವಾದರೆ ಅವರೂ ಅದನ್ನು ಸ್ವೀಕರಿಸುತ್ತಿದ್ದರು. ಒಟ್ಟಾರೆ ಶೂಟಿಂಗ್ ಅನುಭವ ಚೆನ್ನಾಗಿತ್ತು.

  • ನಿಜ ಜೀವನದಲ್ಲಿ ನಿಮಗೆ ಎಷ್ಟು ಹುಡುಗರು ‘ಐ ಲವ್ ಯೂ’ ಎಂದಿದ್ದಾರೆ?

‘ಐ ಲವ್ ಯೂ’ ಅಂತ ಹೇಳುವುದು ನಿಜಕ್ಕೂ ಕಷ್ಟದ ಕೆಲಸ. ಲವ್ ಎಂಬ ಪದಕ್ಕೆ ತುಂಬ ಪವರ್ ಇದೆ. ನಮ್ಮ ಜೀವನದ ವಿಶೇಷ ವ್ಯಕ್ತಿಗೆ ಮಾತ್ರ ಅದನ್ನು ಹೇಳಲು ಸಾಧ್ಯ. ನಾನು ಲವ್​ನಲ್ಲಿ ಬಿದ್ದಿಲ್ಲ. ಮದುವೆ ಆಲೋಚನೆಯೂ ಸದ್ಯಕ್ಕಿಲ್ಲ. ಹಾಗೇನಾದರೂ ಇದ್ದರೆ ಖಂಡಿತ ಎಲ್ಲರಿಗೂ ಹೇಳುತ್ತೇನೆ. ಸದ್ಯಕ್ಕೆ ನಾನು ಲವ್ ಮಾಡುತ್ತಿರುವುದು ನನ್ನ ಕೆಲಸವನ್ನು ಮಾತ್ರ. ಫ್ಯಾಮಿಲಿ, ಫ್ಯಾನ್ಸ್ ಮತ್ತು ಹಿತೈಷಿಗಳನ್ನು ಪ್ರೀತಿಸುತ್ತಿದ್ದೇನೆ. ಕಾಲೇಜಿನಲ್ಲಿ ನನ್ನ ನಡವಳಿಕೆ ಹುಡುಗರ ರೀತಿ ಇತ್ತು. ನಮ್ಮ ತಂದೆ-ತಾಯಿ ನನ್ನನ್ನು ಆ ರೀತಿಯೇ ಬೆಳೆಸಿದ್ದರು. ಆ ಕಾರಣಕ್ಕಾಗಿ ನನಗೆ ‘ಐ ಲವ್ ಯೂ’ ಎಂದು ಹೇಳಲು ಧೈರ್ಯ ಮಾಡಿದವರು ಸಂಖ್ಯೆ ಕಡಿಮೆ.

  • ಈ ವರ್ಷ ನಿಮ್ಮ ಇನ್ನಷ್ಟು ಸಿನಿಮಾಗಳು ಬರುತ್ತಿವೆ…

ಹೌದು, ಹಲವು ಚಿತ್ರಗಳಲ್ಲಿ ತೊಡಗಿ ಕೊಂಡಿದ್ದೇನೆ. ಶಿವರಾಜ್​ಕುಮಾರ್ ಜತೆಗೆ ‘ಆನಂದ್’ ಮತ್ತು ‘ರುಸ್ತುಂ’ ಸಿನಿಮಾ ಮಾಡುತ್ತಿದ್ದೇನೆ. ರಮೇಶ್ ಅರವಿಂದ್ ಅವರ ಹೊಸ ಚಿತ್ರದಲ್ಲೂ ನಟಿಸಲಿದ್ದೇನೆ. ‘ಏಕ್ ಲವ್ ಯಾ’ದಲ್ಲೂ ಒಂದು ಒಳ್ಳೆಯ ಪಾತ್ರವಿದೆ.

  • ಯುವ ಜನತೆ ಈ ಚಿತ್ರವನ್ನು ಯಾಕೆ ನೋಡಬೇಕು?

ಹೊಸ ತಲೆಮಾರಿನ ಬಹುತೇಕರಿಗೆ ಲವ್ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಒಂದು ವಾರಕ್ಕೆ, ತಿಂಗಳಿಗೆಲ್ಲ ಅವರ ಪ್ರೀತಿ ಬದಲಾಗುತ್ತಿದೆ. ಬ್ರೇಕಪ್ ಎಂಬುದು ತೀರಾ ಸಾಮಾನ್ಯ ಎಂಬಂತಾಗಿದೆ. ಟೈಮ್ಾಸ್​ಗಾಗಿ ಪ್ರೀತಿಯಲ್ಲಿ ಬೀಳುವವರೇ ಹೆಚ್ಚು. ಅಂಥವರಿಗೆಲ್ಲ ಒಂದು ಮೆಸೇಜ್ ಇದೆ. ಜೀವನದಲ್ಲಿ ಲವ್​ಗೆ ಇರುವ ಮಹತ್ವವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಯಾರ ಭಾವನೆಗಳ ಜತೆಗೂ ನಾವು ಆಟ ಆಡಬಾರದು ಎಂಬುದನ್ನು ಮನರಂಜನೆ ಮೂಲಕ ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ.

One Reply to “ನಾನಿನ್ನೂ ಲವ್ನಲ್ಲಿ ಬಿದ್ದಿಲ್ಲ”

  1. ಲವ್ ಮತ್ತು ಮದುವೆ ಅದು ವೈಯ್ಯಕ್ತಿಕವಾದದ್ದು. ಅದನ್ನು ಅವರವರೇ ನಿರ್ಧರಿಸಬೇಕು. ಸರಿಯಾದ ವಯಸ್ಸು ಮತ್ತು ಜವಾಬ್ದಾರಿ ಹೊರುವ ಶಕ್ತಿ ಹಾಗೂ ಸಮಯ ಬರುವವರೆಗೂ ಅವುಗಳಿಂದ ದೂರವಿರುವುದೇ ಕ್ಷೇಮ.

Leave a Reply

Your email address will not be published. Required fields are marked *