ಬೆಂಗಳೂರು: ಮಲಯಾಳಂನ ಎರಡು-ಮೂರು ಸಿನಿಮಾಗಳಲ್ಲಿ ನಟಿಸಿ ಬಳಿಕ ‘ಲವ್ ಮಾಕ್ಟೇಲ್-2’ ಮೂಲಕ ಕನ್ನಡಕ್ಕೆ ಬಂದ ರೇಚೆಲ್ ಡೇವಿಡ್ ಸದ್ಯ ಡಬಲ್ ಖುಷಿಯಲ್ಲಿದ್ದಾರೆ. ಕಳೆದ ಅಕ್ಟೋಬರ್ 26ರಂದು ಆ್ಯಂಟೋ ಫಿಲಿಪ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಮದುವೆ ಬಳಿಕವೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ಶುಕ್ರವಾರ ‘ಅನ್‌ಲಾಕ್ ರಾಘವ’ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಈ ವಾರ ನಟಿಯ ಮತ್ತೊಂದು ಸಿನಿಮಾ ‘ಭುವನಂ ಗಗನಂ’ ರಿಲೀಸ್ ಆಗಲಿದೆ. ಇದೇ ಸಂಭ್ರಮದಲ್ಲಿ ವಿಜಯವಾಣಿ ಜತೆ ರೇಚೆಲ್ ಮಾತಿಗೆ ಸಿಕ್ಕಿದ್ದರು. ‘ಕಳೆದ ವಾರ ‘ಆನ್‌ಲಾಕ್ ರಾಘವ’ ತೆರೆಕಂಡು ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾದ ಬೆನ್ನಲ್ಲೇ ಈ ವಾರ ‘ಭುವನಂ ಗಗನಂ’ ರಿಲೀಸ್ ಅಗುತ್ತಿರುವುದು ಖುಷಿಯಿದೆ. ಈ ಎರಡು ವಿಭಿನ್ನ ಜಾನರ್ ಚಿತ್ರಗಳ ಜರ್ನಿ ಆರಂಭವಾಗಿದ್ದು 2022ರಲ್ಲಿ. ಕಾಕತಾಳೀಯ ಎಂಬಂತೆ ಇದೇ ವರ್ಷ ರಿಲೀಸ್ ಆಗುತ್ತಿವೆ. ಸದ್ಯ ‘ಭುವನಂ ಗಗನಂ’ ಪ್ರಚಾರದಲ್ಲಿ ಬಿಜಿಯಾಗಿದ್ದೇವೆ. ನಾನಿಲ್ಲಿ ಪ್ರಮೋದ್‌ಗೆ ಜೋಡಿಯಾಗಿ ನಂದಿನಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕಾಲೇಜು ಲೈಫ್, ಮದುವೆಯ ಮುಂಚೆ ಹಾಗೂ ಬಳಿಕ ಹುಡುಗಿಯರ ಜೀವನ ಹೇಗಿರುತ್ತದೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ. ಪಾತ್ರಕ್ಕಾಗಿ ವಿಶೇಷವಾಗಿ ತರಬೇತಿ ಏನು ಮಾಡಿಲ್ಲ. ಎಲ್ಲ ಪಾತ್ರಗಳು ನ್ಯಾಚುರಲ್ ಆಗಿವೆ. ಅದನ್ನು ಟ್ರೇಲರ್‌ನಲ್ಲಿ ಕಾಣಬಹುದು. ನನ್ನ ಹಾಗೂ ಪ್ರಮೋದ್ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ’ ಎಂದು ಮಾಹಿತಿ ನೀಡುತ್ತಾರೆ.
ಲವ್ ಈಸ್ ಯೂನಿವರ್ಸ್: ‘‘ಭುವನಂ ಗಗನಂ’ ಸಿನಿಮಾ ಲವ್‌ಸ್ಟೋರಿ ಅಷ್ಟೇ ಅಲ್ಲ, ಜೀವನದ ಹಲವು ಘಟ್ಟಗಳ ಹಲವು ಆಯಾಮಗಳನ್ನು ತಿಳಿಸುವ ಕಥೆ’ ಎನ್ನುವ ರೇಚೆಲ್, ‘ಪ್ರೀತಿ ಎನ್ನುವುದು ಯೂನಿವರ್ಸಲ್. ಅದನ್ನು ಕೇವಲ ಹುಡುಗ-ಹುಡುಗಿಗೆ ಸೀಮಿತಗೊಳಿಸಬಾರದು. ತಂದೆ-ತಾಯಿ, ಸ್ನೇಹಿತ, ಬಂಧುಗಳ ಮೇಲೆ ಕೂಡ ನಮಗೆ ವಿಶೇಷ ಒಲವಿರುತ್ತದೆ. ಹಾಗೆಯೇ ಆಕಾಶ, ಭೂಮಿ ಒಂದನ್ನೊಂದು ಬಿಟ್ಟಿಲ್ಲ. ಅವುಗಳ ಮಧ್ಯೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ನಮ್ಮ ಸಿನಿಮಾ ಹೇಳುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ.
ಪತಿಯೇ ಮೊದಲ ವಿಮರ್ಶಕ: ರೇಚೆಲ್ ಕಳೆದ ಅಕ್ಟೋಬರ್‌ನಲ್ಲಿ ಆ್ಯಂಟೋ ಫಿಲಿಪ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತಿ, ರೇಚೆಲ್‌ಗೆ ಬೆಂಬಲವಾಗಿದ್ದಾರಂತೆ. ‘ನನ್ನ ಪತಿ, ನನ್ನೆಲ್ಲಾ ಕೆಲಸಗಳನ್ನು ಪ್ರೋತ್ಸಾಹಿಸುತ್ತಾರೆ. ಅವರು ಕೂಡ ನಿರ್ದೇಶಕರಾದ ಕಾರಣ ನನ್ನ ಕೆಲಸದ ಮೊದಲ ವಿಮರ್ಶಕ ಅವರೇ. ಪ್ರತಿ ಸಿನಿಮಾ ನೋಡಿದ ಮೇಲೆ ಪಾತ್ರದ ಬಗ್ಗೆ ಅಭಿಪ್ರಾಯ ತಿಳಿಸುತ್ತಾರೆ’ ಎನ್ನುತ್ತಾರೆ. ರೇಚೆಲ್ ನಟಿಸಿರುವ ಒಂದು ಮಲಯಾಳಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆಯಂತೆ. ಜತೆಗೆ ಕನ್ನಡದಲ್ಲಿ ಎರಡು-ಮೂರು ಸ್ಕ್ರಿಪ್ಟ್ ಕೇಳಿರುವ ಅವರು, ಸದ್ಯಕ್ಕೆ ‘ಭುವನಂ ಗಗನಂ’ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.