ಮೈಸೂರು: ನಗರದ ರೇಸ್‌ಕೋರ್ಸ್ ಮೈದಾನದ ಗುತ್ತಿಗೆಯನ್ನು ರೇಸ್‌ಕ್ಲಬ್‌ಗೆ ನವೀಕರಣ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇಸ್‌ಕೋರ್ಸ್ ಮೈದಾನದ ಗುತ್ತಿಗೆಯನ್ನು ನವೀಕರಿಸದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ ನಗರದ ಹೊರ ವಲಯದಲ್ಲಿ ಜಾಗ ನೀಡಲು ತೀರ್ಮಾನಿಸಲಾಗಿತ್ತು. ಆ ಸಂದರ್ಭ ನಮ್ಮ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿದಿರಲಿಲ್ಲ ಎಂದರು.
ರೇಸ್‌ಕೋರ್ಸ್‌ನಲ್ಲಿ 600ಕ್ಕೂ ಹೆಚ್ಚು ಶೆಡ್‌ಗಳು ಇವೆ. 1,500ಕ್ಕೂ ಹೆಚ್ಚು ಜನ ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಸರ್ಕಾರದ ಆದೇಶ ವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ರೇಸ್‌ಕ್ಲಬ್‌ಗೆ ಮತ್ತೆ ಜಾಗ ನೀಡಿರುವುದು ಸರಿಯಲ್ಲ. ಜಾಗದ ಗುತ್ತಿಗೆ ನವೀಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ಬಹಿರಂಗ ಆಗಬೇಕಾಗಿದ್ದು, ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದರು.