ಗಗನಮುಖಿಯಾದ ತರಕಾರಿ ಬೆಲೆ

ರಬಕವಿ/ಬನಹಟ್ಟಿ: ಸತತ ಬರದಿಂದ ಜಿಲ್ಲೆಯಲ್ಲಿ ನದಿ, ಅಣೆಕಟ್ಟೆಗಳು ಬರಿದಾಗಿದ್ದು, ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗಳು ಬತ್ತುತ್ತಿವೆ. ನೀರಿನ ಕೊರತೆಯಿಂದ ತೋಟಗಾರಿಕೆ ಬೆಳೆಗಳಿಗೆ ಹೊಡೆತ ಬಿದ್ದು ಸಂತೆಯಲ್ಲಿ ತರಕಾರಿ ಬೆಲೆ ಗಗನದತ್ತ ಮುಖ ಮಾಡಿದೆ.

ಬೋರ್‌ವೆಲ್‌ನಲ್ಲಿ ನೀರು ಹೊಂದಿರುವ ಕೆಲವೇ ಕೆಲ ರೈತರು ಅಲ್ಪಸ್ವಲ್ಪ ತರಕಾರಿ ಬೆಳೆದು ಪಟ್ಟಣಕ್ಕೆ ಸಾಗಿಸುತ್ತಿದ್ದಾರೆ. ನದಿಯಲ್ಲಿ ನೀರಿದ್ದಾಗ ಎಲ್ಲ ರೈತರು ತರಕಾರಿ ಬೆಳೆಯುತ್ತಿದ್ದರು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದರಿಂದ ಜನರಿಗೆ ಕೈಗೆಟುಕುವ ದರದಲ್ಲಿ ಕಾಯಿಪಲ್ಲೆ ಸಿಗುತ್ತಿತ್ತು. ಜೂನ್ ತಿಂಗಳು ಮುಗಿಯುತ್ತ ಬಂದರೂ ಮಳೆಯಾಗುತ್ತಿಲ್ಲ. ಇತ್ತ ನದಿ, ಕೊಳವೆ ಬಾವಿಗಳು ಬತ್ತಿದ್ದು, ತರಕಾರಿ ಬೆಳೆಯುವ ಪ್ರದೇಶ ಕಡಿಮೆಯಾಗಿದ್ದರಿಂದ ದರದಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ.
ತರಕಾರಿ ಕೊಳ್ಳಲು ಸಂತೆಗೆ ಬರುವ ಗ್ರಾಹಕರು ದರ ಕೇಳಿ ಬೆಚ್ಚಿ ಬೀಳುವಂತಾಗಿದೆ. ಯಾವುದೇ ತರಕಾರಿ ದರ ಕೇಳಿದರೂ ಕೆಜಿಗೆ 60 ರೂಪಾಯಿ ಕೆಳಗೆ ಇಲ್ಲ. ಬದನೆಕಾಯಿ ಕೆಜಿಗೆ 60 ರೂ., ಬೆಂಡೆ, ಸವತೆ, ಹೀರೆಕಾಯಿ 60 ರೂ. ಇದ್ದರೆ, ಹಾಗಲಕಾಯಿ 70 ರೂ., ಚವಳೆಕಾಯಿ 80 ರೂ.ಗೆ ಸಿಗುತ್ತಿದೆ. ಸೊಪ್ಪು ದರದಲ್ಲೂ ಏರಿಕೆ ಕಂಡುಬಂದಿದೆ.

ಸಂತೆಗೆ ತರಕಾರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ ಹೆಚ್ಚಿನ ಹಣ ನೀಡಿದರೂ ಬೇಕಾದ ತರಕಾರಿ ಸಿಗುತ್ತಿಲ್ಲ. ಸಂತೆ ಪ್ರಾರಂಭವಾಗಿ ಗಂಟೆಯೊಳಗೆ ಎಲ್ಲ ತರಕಾರಿ ಖಾಲಿಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ಸಂಜಯ ತೇಲಿ.

Leave a Reply

Your email address will not be published. Required fields are marked *