ನಿರುಪಯುಕ್ತ ಶೌಚಗೃಹ ಈಗ ಗ್ರಂಥಾಲಯ

ರಬಕವಿ/ಬನಹಟ್ಟಿ: ನಿರುಪಯುಕ್ತ ಶೌಚಗೃಹವನ್ನೇ ಸ್ವಚ್ಛಗೊಳಿಸಿ ಅದನ್ನು ಗ್ರಂಥಾಲಯವನ್ನಾಗಿಸಿದ ಯುವಕರ ಗುಂಪೊಂದು ಜ್ಞಾನ ವೃದ್ಧಿಸಿಕೊಳ್ಳುವ ಜತೆಗೆ ನೂರಾರು ಬಡ ಮಕ್ಕಳಿಗೆ ನಿತ್ಯ ಪಾಠ ಹೇಳುತ್ತ ಮಾದರಿ ಹೆಜ್ಜೆ ಇಟ್ಟಿದೆ.

ಹೌದು, ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಿನ ಹರಿಜನಕೇರಿ ಯುವಕರು ಸದ್ದುಗದ್ದಲವಿಲ್ಲದೆ ಇಂತಹದೊಂದು ಕಾರ್ಯ ಮಾಡುತ್ತಿದ್ದಾರೆ.

ಇತ್ತೀಚೆಗೆ ನಗರಭೆ ಇಲ್ಲಿನ ಶೌಚಗೃಹ ಬಂದ್ ಮಾಡಿ ಬೇರೆ ಕಡೆ ಸುಸಜ್ಜಿತವಾದ ಶೌಚಗೃಹ ನಿರ್ಮಿಸಿತ್ತು. ಹೀಗಾಗಿ ನಿರುಪಯುಕ್ತ ಶೌಚಗೃಹ ಅನೈತಿಕ ಚಟುವಟಿಕೆ ತಾಣವಾಗಿತ್ತು. ವಿದ್ಯಾವಂತ ಯುವಕರ ತಂಡ ಅದನ್ನು ಸ್ವಚ್ಛಗೊಳಿಸಿ ಸಣ್ಣ ಪುಟ್ಟ ದುರಸ್ತಿ ಮಾಡಿ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳನ್ನು ಸಂಗ್ರಹಿಸಿ ಓದಲು ಅನುಕೂಲವಾಗುವಂತೆ ಮಾಡಿದ್ದಾರೆ. ಶೌಚಗೃಹವೆಂದು ಮುಜುಗರ ಪಟ್ಟುಕೊಳ್ಳದೆ ಅದನ್ನು ಜ್ಞಾನಾರ್ಜನೆ ಕೇಂದ್ರವನ್ನಾಗಿ ರೂಪಿಸಿದ್ದಾರೆ.

ಬಿ.ಇಡಿ. ಮುಗಿಸಿದ ಕೆಲವು ಜನ ವಿದ್ಯಾರ್ಥಿಗಳು ನಿತ್ಯ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದಾರೆ. ಜತೆಗೆ ಪ್ರತಿ ಭಾನುವಾರ ಮಕ್ಕಳಿಗೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದು, ಪರಿಸರ ಕುರಿತು ಕಾಳಜಿ ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ.

ಗ್ರಂಥಾಲಯಕ್ಕೆ ಹೋಗಲು ದಾರಿ ಇರಲಿಲ್ಲ. ಈಗ ದಾರಿ ಮಾಡಿಕೊಂಡಿದ್ದಾರೆ. ಕೂಗಳತೆಯಲ್ಲಿರುವ ಶೌಚಗೃಹದ ವಿದ್ಯುತ್ ಬೆಳಕು ಬಳಸಿ ರಾತ್ರಿ 12 ಗಂಟೆವರೆಗೆ ವಿದ್ಯಾರ್ಥಿಗಳು ಪರೀಕ್ಷೆ ತಯಾರಿ ನಡೆಸುತ್ತಾರೆ. ಪ್ರತಿ ಭಾನುವಾರ 50 ರಿಂದ 60 ಜನ ಮಕ್ಕಳು ಹಾಗೂ ಓಣಿಯ ಜನರನ್ನು ಕೂಡಿಸಿಕೊಂಡು ನಗರದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಾರೆ. ನಗರದ ವಿವಿಧೆಡೆ ಸಸಿಗಳನ್ನು ನೆಡುವ ಕಾಯಕದಲ್ಲೂ ನಿರತರಾಗಿದ್ದಾರೆ.

ದಾನಿಗಳಿಂದ ಪುಸ್ತಕ ಕೊಡುಗೆ
ಕೆಲವು ದಾನಿಗಳು ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದ್ದಾರೆ. ಇನ್ನಷ್ಟು ದಾನಿಗಳು ಗ್ರಂಥಾಲಯಕ್ಕೆ ಪುಸ್ತಕ, ದಿನಪತ್ರಿಕೆ ಒದಗಿಸಿದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಮೇಲ್ಛಾವಣಿ ಸರಿಯಾಗಿಲ್ಲ. ಸುತ್ತ ಮುತ್ತಲಿನ ಪರಿಸರದಲ್ಲಿ ಚರಂಡಿ ನೀರು ನಿಲ್ಲುತ್ತಿದ್ದು, ನಗರಸಭೆಯವರು ಸ್ವಚ್ಛಗೊಳಿಸಬೇಕು ಎಂಬುದು ಯುವಕರ ಬೇಡಿಕೆಯಾಗಿದೆ. ಕಾಡೇಶ ಇಂಗಳಗಿ, ಶಿವರಾಜ ಕೊಣ್ಣೂರ, ರವಿ ಜಗದಾಳ, ಮಂಜು ಡಾಳಗೋಳ, ರಾಘವೇಂದ್ರ ಇಂಗಳಗಾಂವಿ, ಶ್ರೀದೇವಿ ಗುಟಿ, ರುಕ್ಮಿಣಿ ಮಿಳ್ಳಿ, ಚಂದು ಮಳ್ಳಿ ಮತ್ತಿತರರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಮಕ್ಕಳು ಮೊಬೈಲ್ ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ಅದನ್ನು ಬಿಡಿಸಿ ಅವರಿಗೆ ಓದುವ ಹವ್ಯಾಸ, ಶ್ರಮದಾನದ ಮೂಲಕ ಸಾಮಾಜಿಕ ಕಾಳಜಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅವರಿಗೆ ತಿಳಿಯದ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದೇವೆ.
– ಶಿವರಾಜ ಕೊಣ್ಣೂರ ಸ್ಥಳೀಯ ಯುವಕ