ನೀರಿನ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲ

ರಬಕವಿ/ಬನಹಟ್ಟಿ: ರಾಜ್ಯ ಸರ್ಕಾರಗಳು ಕಾವೇರಿ ನದಿಗೆ ನೀಡುವ ಮಹತ್ವವನ್ನು ಉತ್ತರ ಕರ್ನಾಟಕದ ಜೀವನದಿಯಾದ ಕೃಷ್ಣೆಗೆ ನೀಡುತ್ತಿಲ್ಲ. ಕೃಷ್ಣೆಗೆ ಆದ್ಯತೆ ನೀಡುವ ಮೂಲಕ ಈ ಭಾಗದ ಜನತೆಯ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.

ಮಂಗಳವಾರ ಸಂಜೆ ನಗರಸಭೆ ಸಭಾಭವನದಲ್ಲಿ ನೀರಿನ ಸಮಸ್ಯೆ ನಿವಾರಣೆ ಕುರಿತು ಅವಳಿ ನಗರಗಳ 31 ವಾರ್ಡ್‌ಗಳ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಕೃಷ್ಣಾ ನದಿ ಬತ್ತಿ ಎರಡು ತಿಂಗಳಾದರೂ ರಾಜ್ಯದ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು, ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಮನವಿ ಮಾಡಿಲ್ಲ. ನೀರು ಬಿಡಿಸುವ ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ ಎಂದು ಆರೋಪಿಸಿದರು.

ಮತಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಿದೆ. ರಬಕವಿ-ಬನಹಟ್ಟಿ ಅವಳಿ ನಗರಗಳಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದೆ. ನಗರಸಭೆ ಅಕಾರಿಗಳು ಹಾಗೂ ಸದಸ್ಯರು ಹಗಲಿರುಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವಳಿ ನಗರಗಳಿಗೆ ಕುಡಿಯುವ ನೀರಿನ ಸಲುವಾಗಿ 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ. ನಗರಸಭೆಯ 14ನೇ ಹಣಕಾಸು ಯೋಜನೆಯಡಿ ಹೆಚ್ಚುವರಿಯಾಗಿ 20 ಬೋರ್‌ವೆಲ್ ಕೊರೆಯಲು ಕ್ರಿಯಾಯೋಜನೆ ತಯಾರಿಸಿದ್ದು, ಅವಶ್ಯಕತೆ ಇದ್ದ ಕಡೆ ಎರಡ್ಮೂರು ದಿನಗಳಲ್ಲಿ ಬೋರ್‌ವೆಲ್ ಕೊರೆಸಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 29 ಬೋರ್‌ವೆಲ್ ಕೊರೆಯಿಸಲಾಗುವುದು. ರಾಜ್ಯ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹಾಕಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ನೀರಿನ ಸಮಸ್ಯೆ ಪರಿಹಾರಕ್ಕೆ ಹಣಕಾಸಿನ ಕೊರತೆಯಿಲ್ಲ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರು.

ನೀರಿನ ಪರಿಸ್ಥಿತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಈ ವಿಷಯ ಕುರಿತು ಚರ್ಚಿಸಲು ಆದಷ್ಟು ಬೇಗ ಸಭೆ ಕರೆಯಲು ಒತ್ತಾಯಿಸುವುದಾಗಿ ಸವದಿ ತಿಳಿಸಿದರು.
ಪೌರಾಯುಕ್ತ ಆರ್.ಎಂ. ಕೊಡಗೆ ನೀರಿನ ಸಮಸ್ಯೆ ಕುರಿತು ವಿವರಿಸಿದರು. ನಗರಸಭೆ ಅಕಾರಿಗಳಾದ ವಿದ್ಯಾಧರ ಕಲಾದಗಿ, ಎಂ.ಎಂ. ಮುಗಳಖೋಡ, ಎಸ್. ಬಿ. ಪರಕಾಳಿ, ರಮೇಶ ಮಳ್ಳಿ, ಬಿ.ಎಸ್. ಮಠದ, ಸಿದ್ದರಾಜ ಅಳ್ಳಿಮಟ್ಟಿ ಮತ್ತು ನಗರಸಭೆ ಸದಸ್ಯರು ಇದ್ದರು.

Leave a Reply

Your email address will not be published. Required fields are marked *