ಬಾರದ ಮಳೆ ತುಂಬದ ಹನಗಂಡಿ ಕೆರೆ

ರಬಕವಿ/ಬನಹಟ್ಟಿ: ಜುಲೈ ತಿಂಗಳ ಮಧ್ಯ ಭಾಗ ಬಂದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಾರದೆ ತಾಲೂಕಿನ ಹನಗಂಡಿ ಗ್ರಾಮದ ಕೆರೆ ಸೇರಿ ಅನೇಕ ಕೆರೆಗಳು ಇಂದಿಗೂ ನೀರಿಲ್ಲದೆ ಭಣಗೂಡುತ್ತಿವೆ.

ಕೇವಲ ಜಿಟಿ ಜಿಟಿ, ತುಂತುರಿಗೆ ಮಾತ್ರ ವರುಣ ಸೀಮಿತವಾಗಿದ್ದು, ಮೋಡಗಳು ಹೀಗೆ ಬಂದು ಹಾಗೇ ಮಾಯವಾಗುತ್ತಿವೆ. ಇದರಿಂದ ಹನಗಂಡಿ ಕೆರೆಗೆ ಹನಿ ನೀರು ಕೂಡ ಬಂದಿಲ್ಲ. ನೀರಿಲ್ಲದೆ ಕೆರೆ ಖಾಲಿ ಖಾಲಿ ಕಾಣುತ್ತಿದ್ದು, ಗ್ರಾಮದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಕೆರೆ ತುಂಬ ಹೂಳು ತುಂಬಿಕೊಂಡಿತ್ತು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿಯವರು ಹೂಳು ತೆಗೆಯಿಸಿ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವಂತೆ ಮಾಡಿದ್ದಾರೆ. ಆದರೆ, ಮಳೆಯಾಗುತ್ತಿಲ್ಲ. ಈ ಕೆರೆಗೆ ನೀರು ಬಂದರೆ ಗ್ರಾಮದಲ್ಲಿನ ಅನೇಕ ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಕೊರತೆ ನೀಗುತ್ತದೆ.

ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಮುಂಗಾರು ಬೆಳೆಗಳಾದ ಮೆಕ್ಕೆ ಜೋಳ, ಕಬ್ಬು, ತೊಗರಿ, ಹೆಸರು ಸೇರಿ ಇನ್ನಿತರ ಕಾಯಿಪಲ್ಯೆ ಬೆಳೆಗಳು ಒಣಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಜಿಎಲ್‌ಬಿಸಿ ಕಾಲುವೆಗೆ ನೀರು ಹರಿಸಿ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕಿದೆ.

ನಾಮಫಲಕದಲ್ಲಿ ಎಡವಟ್ಟು
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂನವರು ಕೆರೆ ಹೂಳೆತ್ತಿ ಅಲ್ಲೊಂದು ನಾಮಲಕ ಅಳವಡಿಸಿದ್ದಾರೆ. ಅದು ಬೆಳಗಾವಿ ಜಿಲ್ಲೆಯಲ್ಲಿನ ನಾಮಲಕವಾಗಿದೆ. ಹನಗಂಡಿ ಗ್ರಾಮ ಯಾವ ಜಿಲ್ಲೆಯಲ್ಲಿ ಬರುತ್ತದೆ ಎಂಬುದು ಸಹ ಅಧಿಕಾರಿಗಳಿಗೆ ಗೊತ್ತಿಲ್ಲವೇ? ನೆಪಕ್ಕೆ ಮಾತ್ರ ಮಾಹಿತಿ ಲಕ ಅಳವಡಿಸಿ ಕೈತೊಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂಗಳತೆಯಲ್ಲಿಯೇ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ನದಿಯಿಂದ ಕೆರೆ ತುಂಬುವ ಯೋಜನೆಯಡಿ ನಮ್ಮೂರ ಕೆರೆಯನ್ನು ತುಂಬಿಸಬೇಕು. ಇದರಿಂದ ಗ್ರಾಮದ ಎಲ್ಲರಿಗೂ ಅನುಕೂಲವಾಗುತ್ತದೆ.
– ಪ್ರಸನ್ನಕುಮಾರ ದೇಸಾಯಿ ರೈತ ಮುಖಂಡ, ಹನಗಂಡಿ

 

Leave a Reply

Your email address will not be published. Required fields are marked *