ಜಾತಿ ಮತ ಮರೆತು ಬಾಳೋಣ

ರಬಕವಿ/ಬನಹಟ್ಟಿ: ಭಾರತ ಮಾತೆಯ ಮಡಿಲಲ್ಲಿ ಜನಿಸಿರುವ ನಾವೆಲ್ಲರೂ ಜಾತಿ ಭೇದ ಮರೆತು ಬದುಕೋಣ ಎಂದು ಮುಧೋಳ ನಗರದ ಹಿಂದು ಜಾಗರಣೆ ವೇದಿಕೆ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಡಿಗೇರ ಹೇಳಿದರು.

ರಬಕವಿಯ ಎಂ.ವಿ. ಪಟ್ಟಣ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ಆಹಾರ, ಗಾಳಿ ಸೇವಿಸಿ ಅನ್ಯ ದೇಶದ ಪರ ಜೈಕಾರ ಹಾಕುವುದು ಯಾವ ನ್ಯಾಯ. ಪ್ರತಿಯೊಬ್ಬರಲ್ಲೂ ನಾನು ಭಾರತೀಯ ಎಂಬ ಮನೋಭಾವ ಬೆಳೆಯಬೇಕು. ವಿಶ್ವ ಶಾಂತಿ, ನೆಮ್ಮದಿ ಹಾಳು ಮಾಡುವ ಉಗ್ರರ ಸಂತತಿ ಸಂಪೂರ್ಣ ನಾಶ ಮಾಡಬೇಕು. ನಮ್ಮದು ಉಗ್ರರ ವಿರುದ್ಧದ ಹೋರಾಟ ಎಂದರು.

ಚೈತ್ರಾ ಕುಂದಾಪುರ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರ ಮೇಲೆ ಕಳ್ಳರಂತೆ ಮಾರು ವೇಷದಲ್ಲಿ ಬಂದು ಆತ್ಮಾಹುತಿ ಬಾಂಬ್ ದಾಳಿ ಮಾಡಿ ಕೊಲ್ಲುವುದನ್ನು ಯಾವ ಧರ್ಮದಲ್ಲೂ ಹೇಳಿಲ್ಲ. ದೇಶದ ಒಳಗಿರುವ ದೇಶದ್ರೋಹಿಗಳು ಅನ್ಯ ದೇಶಕ್ಕೆ ಜೈಕಾರ ಹಾಕುವುದು, ದೇಶದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ವಿಕೃತಿ ತೋರುವುದು ಖಂಡನೀಯ. ಅಂತವರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಮೈಗೂರ ಶಿವಾನಂದ ಮಠದ ಗುರುಪ್ರಸಾದ ಶ್ರೀಗಳು, ದೇಶ ಬದಲಾಗುತ್ತಿದೆ, ಮುಸ್ಲಿಮರು ಬದಲಾಗಬೇಕಿದೆ. ಪೂರ್ವದಿಂದಲೂ ಹಿಂದುಸ್ತಾನದ ಮುಸ್ಲಿಮರು ಭಾರತೀಯರು. ಅಬ್ದುಲ್ ಕಲಾಂ ಸೇರಿ ಅನೇಕ ಮುಸ್ಲಿಮರು ದೇಶಕ್ಕಾಗಿ ದುಡಿದಿದ್ದಾರೆ. ಅವರಿಗಾದರೂ ಗೌರವ ನೀಡಿ. ಬದಲಾಗದೆ ಹೋದರೆ ನಾವು ನಿಮ್ಮನ್ನು ಬದಲಾವಣೆ ಮಾಡಿಯೇ ತೀರುತ್ತೇವೆ ಎಂದು ಖಾರವಾಗಿ ಮಾತನಾಡಿದರು.

ತೇರದಾಳ ಶಾಸಕ ಸಿದ್ದು ಸವದಿ, ನಗರಸಭೆ ಸದಸ್ಯ ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ ಇತರರಿದ್ದರು. ಎಂ.ಎಂ. ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಕೆಂದೂಳಿ ವಂದಿಸಿದರು.