ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯ

ರಬಕವಿ-ಬನಹಟ್ಟಿ: ಜಗತ್ತಿನ ಎಲ್ಲ ದಾರ್ಶನಿಕರ, ಸಂತರ, ಪ್ರವಾದಿಗಳ, ಋಷಿ, ಮಹರ್ಷಿಗಳ ಜೀವನ ದರ್ಶನ ಅನುಭಾವದಿಂದ ಕೂಡಿದೆ. ಅವರ ನಾಮಸ್ಮರಣೆಯಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಕಾಖಂಡಗಿಯ ಹಿರೇಮಠದ ನಿಜಲಿಂಗ ಶಾಸ್ತ್ರಿಗಳು ಹೇಳಿದರು.

ಬನಹಟ್ಟಿಯ ಹಿರೇಮಠದಲ್ಲಿ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಬೆಳಕು ಅಧ್ಯಾತ್ಮ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೆ ದೇವರು ಒಂದೊಂದು ಪಾತ್ರ ನೀಡಿದ್ದಾನೆ. ಈ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಜ್ಞಾನ ಮತ್ತು ಧ್ಯಾನ ಅಗತ್ಯವಾಗಿದೆ. ಇವೆರಡು ಅತ್ಯಂತ ಮಹತ್ವದ ಶಕ್ತಿಗಳು ಎಂದು ಹೇಳಿದರು.

ಉಪ್ಪಲಗಿರಿ-ಮಂಗಳೂರಿನ ಹಿರೇಠಮದ ಶ್ರೀಶೈಲಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿ, ಸ್ಥಳೀಯ ಹಿರೇಮಠದಲ್ಲಿ ಹುಣ್ಣಿಮೆ ನಿಮಿತ್ತ ಸತತವಾಗಿ ಅನುಭಾವ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷವಾಗಿದೆ. ಇಂದಿನ ದಿನಗಳಲ್ಲಿ ಆಧ್ಯಾತ್ಮಿಕ ಚಿಂತನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಬಹುದು ಎಂದು ಹೇಳಿದರು.

ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶ್ರೀಶೈಲ ಧಬಾಡಿ, ಶೇಖರ ಮುನ್ನೊಳ್ಳಿ, ಮಹಾದೇವ ಬಣಕಾರ, ಪ್ರಕಾಶ ಮಂಡಿ, ಶಂಕರ ಜಾಲಿಗಿಡದ, ರಾಜು ಪಿಟಗಿ, ಶಿವಾನಂದ ಹಿರೇಮಠ ಇತರರಿದ್ದರು.

ಅಶೋಕ ಬೀಳಗಿ ಮತ್ತು ಗೀತಾ ಎಸ್. ಪ್ರಾರ್ಥಿಸಿದರು. ಮಾಧ್ವಾನಂದ ಗುಟ್ಲಿ ಸ್ವಾಗತಿಸಿ, ನಿರೂಪಿಸಿದರು. ಶಶಿಕಾಂತ ಹುನ್ನೂರ ವಂದಿಸಿದರು.