ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

ರಬಕವಿ/ಬನಹಟ್ಟಿ: ರಾಜ್ಯ ಮತ್ತು ಮಹಾರಾಷ್ಟ್ರ ರಸ್ತೆ ಸಾರಿಗೆಯ ಎಲ್ಲ ವೇಗದೂತ ಮತ್ತು ಸಾಮಾನ್ಯ ಬಸ್ ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಅವಳಿನಗರದ ಮಧ್ಯಭಾಗದಲ್ಲಿನ ಹೊಸೂರ ಗ್ರಾಮಸ್ಥರು, ವಿದ್ಯಾರ್ಥಿಗಳು ಬುಧವಾರ ಎರಡು ಗಂಟೆಗೂ ಅಧಿಕ ಕಾಲ ಕೆಎಸ್​ಆರ್​ಟಿಸಿ ಬಸ್ ತಡೆದು ಪ್ರತಿಭಟಿಸಿದರು.

ಗ್ರಾಮದ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘಟನೆಗಳು ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದರಿಂದ ಬೆಳಗ್ಗೆ ದೂರದ ಪುಣೆ, ಸಾಂಗಲಿ, ಮಿರಜ್, ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ಬಳ್ಳಾರಿ, ವಿಜಯಪುರ, ಕಲಬುರಗಿ  ನಗರಗಳಿಗೆ ತೆರಳುವ ಬಸ್​ಗಳು ವಿಳಂಬವಾಗಿ ಹೋಗಬೇಕಾಯಿತು. ಆದರೆ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.  

ಹೊಸೂರಲ್ಲಿ ಬಸ್​ಗಳು ನಿಲ್ಲುವುದಿಲ್ಲ. ಬೇರೆ ಊರುಗಳಿಗೆ ಹೋಗಲು ಬನಹಟ್ಟಿ ಇಲ್ಲವೆ ರಬಕವಿಯವರೆಗೆ ದ್ವಿಚಕ್ರ ವಾಹನ ಇಲ್ಲವೆ ಟಂಟಂಗಳಲ್ಲಿ ಹೋಗಿ ಬಸ್​ನಲ್ಲಿ ಏರುವಂತಾಗಿದೆ. ಶಾಲೆ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಬಸ್​ಗಾಗಿ ಎರಡು ಕಿ.ಮೀ. ದೂರದವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಎಲ್ಲ ಡಿಪೋ ಬಸ್ ನಿಲುಗಡೆ ಮಾಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು. , 

ಸ್ಥಳಕ್ಕೆ ಆಗಮಿಸಿದ ಕೆಎಸ್​ಆರ್​ಟಿಸಿ ಅಧಿಕಾರಿ ಎ. ಆರ್. ತೇಲಿ, ಜಮಖಂಡಿ ಘಟಕದ ಬಸ್​ಗಳನ್ನು ನಿಲುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೊಸೂರ ಬಸ್ ನಿಲ್ದಾಣದಲ್ಲೇ ಒಬ್ಬ ಕಂಟ್ರೋಲರ್ ನೇಮಿಸುವ ಭರವಸೆ ನೀಡಿದರು. ಎಲ್ಲ ಡಿಪೋಗಳ ವೇಗದೂತ ಹಾಗೂ ಸಾಮಾನ್ಯ ಬಸ್​ಗಳನ್ನೂ ನಿಲುಗಡೆ ಮಾಡಬೇಕೆಂದು ಹೋರಾಟ ಗಾರರು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿ ತೇಲಿ ಅವರು ಎಲ್ಲ ಡಿಪೋಗಳ ಅಧಿಕಾರಿಗಳೊಂದಿಗೆ ಮಾತನಾಡಿ ಬಸ್ ನಿಲುಗಡೆ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಯಿತು. ಅರುಣ ಬುದ್ನಿ, ಶಿವರಾಜ ಕೊಣ್ಣೂರ, ಬಸವರಾಜ ಚಿಂಚಲಿ, ಅಲ್ಲಾವುದ್ದೀನ್ ಕುಳಲಿ, ಮಂಜುನಾಥ ಹಾವಿನಾಳ ಇದ್ದರು.