ಬಾರದ ‘ಮಹಾ’ ನೀರು ರೈತರು ಕಂಗಾಲು

ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಕೋಯ್ನ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುಸುತ್ತೇವೆ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ನೀಡಿದ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ.

ಕಳೆದ ತಿಂಗಳು ರಾಜ್ಯದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರ ನಿಯೋಗ ಮಹಾರಾಷ್ಟ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ನೀರು ಬಿಡುಗಡೆಗೆ ಮಹಾರಾಷ್ಟ್ರ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ನೀರು ಬರಲಿದೆ ಎಂದು ನಾ ಮುಂದು ತಾ ಮುಂದು ಎಂದು ಪತ್ರಿಕೆಗಳ ಮೂಲಕ ಮುಖಂಡರು ಹೇಳಿಕೆ ನೀಡಿದ್ದರು. ಆದರೆ, 15 ದಿನ ಕಳೆದರೂ ಮಹಾರಾಷ್ಟ್ರದ ಒಂದು ಹನಿ ನೀರು ಕೃಷ್ಣೆಗೆ ಬಂದಿಲ್ಲ. ನದಿ ತೀರದ ಜನ ನೀರಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಬೇಸಿಗೆ ಮುಗಿಯುತ್ತ ಬಂದರೂ ನೀರು ಬಾರದ್ದಕ್ಕೆ ಜನರು ಮುಖಂಡರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ರಾಜ್ಯದ ಉಭಯ ಪಕ್ಷಗಳ ನಿಯೋಗಕ್ಕೆ ‘ಮಹಾ’ ಸಿಎಂ ಭರವಸೆ ನೀಡಿದ್ದರೂ ನೀರು ಬಿಡದಿರುವುದಕ್ಕೆ ಕಾರಣ ಹುಡುಕುತ್ತ ಹೋದರೆ ಮಹಾರಾಷ್ಟ್ರ ಸರ್ಕಾರ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳಲು ಪಟ್ಟು ಹಿಡಿದು ಕುಳಿತಿದೆ. ಆದರೆ, ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ, ಸರ್ಕಾರದ ವಿಳಂಬ ನೀತಿಯಿಂದ ಈ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹಲವಾರು ಬಾರಿ ರೈತ ಸಂಘಟನೆ ಸೇರಿ ಅನೇಕ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿದರೂ ಸರ್ಕಾರ ಸೂಕ್ತ ಸ್ಪಂದನೆ ವ್ಯಕ್ತಪಡಿಸದಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಾ ನದಿ ಅಕ್ಕಪಕ್ಕದ ರೈತರ ಜಮೀನಿನಲ್ಲಿರುವ ಬೆಳೆ ಒಣಗುತ್ತಿವೆ. ನದಿಗೆ ನೀರು ಬಿಡಿಸುವ ಭರವಸೆ ಕೊಟ್ಟ ರಾಜಕಾರಣಿಗಳು ಈಗ ಎಲ್ಲಿ ಮಾಯಾವಾದರೋ ತಿಳಿಯುತ್ತಿಲ್ಲ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಯಾರೂ ಹೇಳುವುದೇ ಬೇಡ, ಮಹಾರಾಷ್ಟ್ರದವರು ತಾವೇ ನೀರು ಬಿಡುತ್ತಾರೆ.
– ಲಕ್ಷ್ಮಣ ಬಿರಡಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ

Leave a Reply

Your email address will not be published. Required fields are marked *