25 ಮರಗಳಿಗೆ ಕೊಡಲಿ ಪೆಟ್ಟು!

ರಬಕವಿ/ಬನಹಟ್ಟಿ: ರಬಕವಿ-ಕುಡಚಿ ಹೆದ್ದಾರಿ ಅಕ್ಕಪಕ್ಕದಲ್ಲಿರುವ 25ಕ್ಕೂ ಅಧಿಕ ಹುಣಸೆ ಮರಗಳನ್ನು ವಿಸ್ತರಣೆ ನೆಪದಲ್ಲಿ ಧರೆಗುರುಳಿಸುವ ಕಾರ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ರಬಕವಿ ನಾಕಾದಿಂದ ಮಹಾಲಿಂಗಪುರ ರಸ್ತೆಯ ನಗರಸಭೆ ಸ್ವಾಗತ ಕಮಾನ್‌ದವರೆಗೆ, ರಬಕವಿ ಹೊಸ ಬಸ್ ನಿಲ್ದಾಣದಿಂದ ಕಂಠಿಬಸವೇಶ್ವರ ದೇವಸ್ಥಾನ, ಬನಹಟ್ಟಿ ಬಸ್ ನಿಲ್ದಾಣದಿಂದ ಬಸವೇಶ್ವರ ಸಮುದಾಯ ಭವನದವರೆಗೂ ದ್ವಿಪಥ ರಸ್ತೆ ಕಾಮಗಾರಿ ಶುರುವಾಗಿದೆ.

ಅವಳಿ ನಗರದಲ್ಲಿ ಜನದಟ್ಟಣೆ ಜತೆಗೆ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ಸಂಚಾರ ಸುಗಮಕ್ಕೆ ರಸ್ತೆಗಳ ವಿಸ್ತರಣೆ ಅನಿವಾರ್ಯವಾಗಿದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಮತ್ತೆ ರಸ್ತೆ ಪಕ್ಕದಲ್ಲಿ ಸಸಿಗಳನ್ನು ನೆಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಏಳು ದಶಕಗಳಿಂದ ನಮಗೆ ನೆರಳು, ಗಾಳಿ ಕೊಟ್ಟ ಬೃಹತ್ ಮರಗಳು ನೆಲಸಮವಾಗುತ್ತಿವೆಯಲ್ಲ ಎಂದು ಜನ ಮಮ್ಮಲ ಮರಗುವಂತಾಗಿದೆ.

ಈಗಾಗಲೇ ಲೋಕೋಪಯೋಗಿ ಇಲಾಖೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಯಾವ ಮರ ತೆಗೆಯಬೇಕು, ಎಲ್ಲಿ ಉಳಿಸಿಕೊಳ್ಳಬೇಕು ಎಂಬುದನ್ನು ಕೂಲಂಕಷವಾಗಿ ಯೋಚಿಸಿ ಅನಿವಾರ್ಯವಿದ್ದಲ್ಲಿ ಮಾತ್ರ ಮರಗಳನ್ನು ಕಡಿಯಲಾಗುವುದು. ಒಟ್ಟು 25 ಮರಗಳನ್ನು ರಸ್ತೆ ಅಭಿವೃದ್ಧಿಗಾಗಿ ಧರೆಗುರುಳಿಸಲಾಗುವುದೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅವಳಿ ನಗರದಲ್ಲಿ ಮೂರು ಕಡೆ ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆ ಪಕ್ಕ ಸಸಿಗಳನ್ನು ನೆಡಲಾಗುವುದು. ನಗರ ಸೌಂದರ್ಯಕ್ಕಾಗಿ ರಸ್ತೆ ಮಧ್ಯೆ ಬೀದಿ ದೀಪ ಅಳವಡಿಸಲಾಗುವುದು.
– ಸಿದ್ದು ಸವದಿ ತೇರದಾಳ ಶಾಸಕ

ಹಲವು ದಶಕಗಳಿಂದ ರಸ್ತೆ ಅಕ್ಕಪಕ್ಕದಲ್ಲಿರುವ ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕೈಗೊಳ್ಳಬೇಕು. ಪರಿಸರ ದಿನದ ನೆಪದಲ್ಲಿ ಒಂದೆಡೆ ಸಸಿ ನೆಡುವುದು, ಇಲ್ಲಿ ಬೃಹತ್ ಮರಗಳನ್ನು ಕತ್ತರಿಸುವುದು ಯಾವ ನ್ಯಾಯ? ಆದಷ್ಟು ಮರಗಳನ್ನು ಉಳಿಸಲು ಅಧಿಕಾರಿಗಳು ಮತ್ತು ಶಾಸಕರು ಪ್ರಯತ್ನಿಸಬೇಕು.
– ಬಾಳೇಶ ಇರಳಿ ಪರಿಸರ ಪ್ರೇಮಿ, ರಬಕವಿ

Leave a Reply

Your email address will not be published. Required fields are marked *