56 ಇಂಚಿನ ಎದೆ ನಮ್ಮ ಪೈಲ್ವಾನರಿಗೂ ಐತಿ

ರಬಕವಿ-ಬನಹಟ್ಟಿ: 56 ಇಂಚಿನ ಎದೆ ನಮ್ಮ ಪೈಲ್ವಾನರಿಗೂ ಇದೆ. ರೈತ, ದಲಿತ, ಬಡವರ ಪರ ಹದಯ ಇರಬೇಕು. ಆ ಹದಯ ನಿನಗೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಬಕವಿ ಪಟ್ಟಣದ ಎಂ.ವಿ. ಪಟ್ಟಣ ಶಾಲೆ ಆವರಣದಲ್ಲಿ ಶನಿವಾರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಹಮ್ಮಿಕೊಂಡ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಶಾಸಕ ಏನ್ ಮಾಡಿದ್ದಾನೆ ಎಂಬುದನ್ನು ಹೇಳಲಿ, ನಾನು ಒಪನ್ ಚಾಲೆಂಜ್ ಮಾಡ್ತಿನಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಗದ್ದಿಗೌಡರು ಒಂದೇ ಒಂದು ಕೆಲಸ ಮಾಡಿದ್ದಾರಾ ? ಮೋದಿ ಮುಖ ನೋಡಿ ಮತ ಹಾಕ್ರಿ ಅಂತಾರ. ಮೋದಿ ಮುಖ ನೋಡಾಕ ಇವರ ಮುಖಕ್ಕ ಏನಾಗಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಹಿಂದಿನ ಎಲ್ಲ ಯೋಜನೆಗಳನ್ನು ಈಗಿನ ಸಮ್ಮಿಶ್ರ ಸರ್ಕಾರ ಮುಂದುವರಿಸಿಕೊಂಡು ಹೊರಟಿದೆ. ಇನ್ನೂ ಹತ್ತು ಹಲವು ಯೋಜನೆ ಜಾರಿಗೆ ತರುವ ಉದ್ದೇಶವಿದ್ದು. ಮೈತ್ರಿಪಕ್ಷದ ಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಮತ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ರಾಜ್ಯದ 27 ಸ್ಥಾನಗಳಲ್ಲಿ ಒಂದು ಸ್ಥಾನದಲ್ಲಿ ಹಿಂದುಳಿದವರಿಗೆ ಟಿಕೆಟ್ ಕೊಡಲು ಬಿಜೆಪಿಯವರಿಗೆ ಆಗಲಿಲ್ಲ. ಅದರೆ, ಮೈತ್ರಿ ಪಕ್ಷಗಳು ಅಲ್ಪಸಂಖ್ಯಾತ, ಕುರುಬ, ಬೆಸ್ತ, ರೆಡ್ಡಿ, ರುಜುಮಾನ ಸೇರಿ ಹಲವು ಹಿಂದುಳಿದ ಸಮಾಜಗಳಿಗೆ ಟಿಕೆಟ್ ನೀಡಿದೆ ಎಂದು ಸಮರ್ಥಿಸಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ತೇರದಾಳ ಮತಕ್ಷೇತ್ರದಲ್ಲಿ ಉಮಾಶ್ರೀ ಮತ್ತು ಬಸವರಾಜ ಕೊಣ್ಣೂರ ಜೋಡೆತ್ತಿನಂತೆ ಕೆಲಸ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ವೀಣಾ ಕಾಶಪ್ಪನವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಜೆಡಿಎಸ್ ಮುಖಂಡ ಪ್ರೊ. ಬಸವರಾಜ ಕೊಣ್ಣೂರ, ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು. ಜೆಡಿಎಸ್ ಮುಖಂಡ ನವಲಿಹಿರೇಮಠ, ಬಿ.ಎ.ದೇಸಾಯಿ, ಶ್ರೀಶೈಲ ದಳವಾಯಿ, ವಿಪ ಸದಸ್ಯ ಸುನೀಲಗೌಡ ಪಾಟೀಲ, ರಂಗನಗೌಡ ಪಾಟೀಲ, ಪಾರಸಮಲ್ಲ ಜೈನ್, ಎನ್.ಎಸ್. ದೇವರವರ, ಎಂ.ಬಿ. ಸೌದಾಗರ, ನಜೀರ ಕಂಗನೊಳ್ಳಿ, ಎ.ಆರ್. ಬೆಳಗಲಿ, ಶಂಕರ ಸೊರಗಾವಿ, ಡಾ. ಪದ್ಮಜೀತ ನಾಡಗೌಡ ಇತರರಿದ್ದರು.Leave a Reply

Your email address will not be published. Required fields are marked *