ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ವೇದಿಕೆ

ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ವಿಶ್ವವಿದ್ಯಾಲಯ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕಾಗಿ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಂಯೋಜಕಿ ಡಾ. ಚಂದ್ರಿಕಾ ತಿಳಿಸಿದರು.

ಬನಹಟ್ಟಿ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಚನ್ನಮ್ಮ ಸಂಭ್ರಮ ಬಾಗಲಕೋಟೆ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ ನಾಲ್ಕು ಗೋಡೆ ಮಧ್ಯದಲ್ಲಿ ಕಲಿಯುವಂತಹದ್ದಲ್ಲ. ಶಿಕ್ಷಣ ಭೌತಿಕ, ಮಾನಸಿಕ, ಆಧ್ಯಾತ್ಮಿಕವಾಗಿ ವಿದ್ಯಾರ್ಥಿಗಳನ್ನು ಸದೃಢಗೊಳಿಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗಗಳು. ಯುವಜನೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಸಾಂಸ್ಕೃತಿಕ ಕಲೆ ಬಿಚ್ಚಿಡುವ ಪ್ರಯತ್ನ ಮಾಡುವುದರ ಜತೆಗೆ ಭಾರತೀಯ ಸಂಸ್ಕೃತಿ ಶ್ರೀಮಂತಗೊಳಿಸಬೇಕು ಎಂದು ಸಲಹೆ ನೀಡಿದರು.

ಜನತಾ ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ಜಯವಂತ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಸಲಹಾ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ ಜಾಡಗೌಡ, ನಿರ್ದೇಶಕ ಮಲ್ಲಿಕಾರ್ಜುನ ಬಾಣಕಾರ, ವಿಮಲಾ ಧಬಾಡಿ, ಎಸ್.ಟಿ. ಭದ್ರನ್ನವರ, ರಾಜಶೇಖರ ಮಾಲಾಪುರ, ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ ಇದ್ದರು. ವಿನಾಯಕ ಹೂಗಾರ ಮತ್ತು ಸಂಗಡಿಗರು ನಾಡ ಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕ ಡಾ. ಮಂಜುನಾಥ ಬೆನ್ನೂರ ಸ್ವಾಗತಿಸಿದರು. ವಿಶ್ವಜ ಕಾಡದೇವರ, ಆರತಿ ಅಡವಿತೋಟ ನಿರೂಪಿಸಿದರು. ಪ್ರೊ.ರಶ್ಮಿ ಕೊಕಟನೂರ ವಂದಿಸಿದರು.