ಬೂದಿ ಮುಚ್ಚಿದ ಕೆಂಡಂತಿದೆ ಹಳಿಂಗಳಿ

ಬಸಯ್ಯ ವಸದ
ರಬಕವಿ/ಬನಹಟ್ಟಿ: ಕೆಲ ದಿನಗಳ ಹಿಂದೆ ಸವರ್ಣೀಯರು ಮತ್ತು ದಲಿತರ ಮಧ್ಯೆ ಉಂಟಾಗಿದ್ದ ಜಗಳ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಮುಗಿದಿದ್ದರೂ ಹಳಿಂಗಳಿ ಗ್ರಾಮ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡಂತಿದೆ.

ಘಟನೆ ವಿವರ: 25 ದಿನಗಳ ಹಿಂದೆ ಸವರ್ಣೀಯ ರಾಜು ನಂದೆಪ್ಪನವರ ಗುಡ್ಡದ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಮತ್ತು ಗರಸು ಗಣಿಗಾರಿಕೆ ಮಾಡುತ್ತಿದ್ದಾರೆಂದು ದಲಿತ ಸಮುದಾಯದ ರಘು ಬಾಳಪ್ಪ ಪೂಜೇರಿ ಪೊಲೀಸರಿಗೆ ತಿಳಿಸಿದ್ದಾನೆಂದು ಸಂಶಯ ವ್ಯಕ್ತಪಡಿಸಿ ರಾಜು ನಂದೆಪ್ಪನವರ ಆತನನ್ನು ಮನಬಂದಂತೆ ಥಳಿಸಿದ್ದಾನೆಂದು ಹೇಳಲಾಗುತ್ತಿದೆ. ಇದು ಎರಡು ಸಮುದಾಯಗಳ ನಡುವಿನ ಜಗಳಕ್ಕೆ ಕಾರಣವಾಗಿದೆ.

ಈ ಕುರಿತು ದಲಿತ ಕುಂಟುಂಬಗಳು ಸವರ್ಣೀಯ ಕುಟುಂಬಗಳ ಮುಖಂಡರಾದ ರಾಜು ನಂದೆಪ್ಪನವರ, ಪ್ರದೀಪ ನಂದೆಪ್ಪನವರ, ತವಣಪ್ಪ ನಂದೆಪ್ಪನವರ, ರಾಮು ನಂದೆಪ್ಪನವರ, ಅಪ್ಪಾಸಾಹೇಬ ದೇಸಾಯಿ ಎಂಬುವವರು ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಎರಡು ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಸವರ್ಣೀಯರು ದಲಿತರಿಗೆ ಗ್ರಾಮದಲ್ಲಿ ನಿಷೇಧ ಹೇರಿದ್ದರು. ಈ ಸಂಬಂಧ ಎರಡು ಸಮುದಾಯಗಳ ನಡುವೆ ಸಂಧಾನ ಸಭೆಗಳು ನಡೆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮಾ. 1 ರಂದು ಜಿಲ್ಲಾ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸಿದ್ದರು. ದಲಿತರ ಮೇಲೆ ಯಾವುದೇ ನಿಷೇಧ ಹೇರಬೇಡಿ ಎಂದು ಸವರ್ಣೀಯರನ್ನು ಒಪ್ಪಿಸಿದ್ದರು.

ಕೆಲಸ ನೀಡುತ್ತಿಲ್ಲ
ಜಿಲ್ಲಾಡಳಿತದ ಮಧ್ಯಸ್ಥಿತಿಯಿಂದ ಸವರ್ಣೀಯರು ನಿಲ್ಲಿಸಿದ್ದ ನೀರು, ಪಡಿತರವನ್ನು ಸದ್ಯ ನೀಡುತ್ತಿದ್ದಾರೆ. ಆದರೆ, ಉದ್ಯೋಗ ನೀಡುತ್ತಿಲ್ಲ. ಹೀಗಾಗಿ ನೂರಾರು ಕುಟುಂಬಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹರಿಜನ ಕುಟುಂಬಗಳ ಮಹಿಳೆಯರು, ಯುವಕರು ಕೆಲಸಕ್ಕೆಂದು ಸವರ್ಣೀಯರ ಹೊಲ ಗದ್ದೆಗಳಿಗೆ ತೆರಳಿದರೆ ಉದ್ದೇಶಪೂರ್ವಕವಾಗಿ ವಾಪಸ್ ಕಳಿಸುತ್ತಿದ್ದಾರೆಂದು ದಲಿತ ಮುಖಂಡ ಧನವಂತ ಬಾಬಲಿ ಮೂಲಿಮನಿ, ಲೋಕೇಶ ಹಾದಿಮನಿ, ಶ್ರೀಪತಿ ಪೂಜೇರಿ, ಧರ್ಮಣ್ಣ ಸರಿಕರ, ರಾಜು ಪೂಜೇರಿ ಆರೋಪಿಸಿದರು.

ಅವರೇ ಕೆಲಸಕ್ಕೆ ಬರುತ್ತಿಲ್ಲ
ದಲಿತರಾಗಲಿ, ಯಾರೇ ಆಗಲಿ ಕೂಲಿ ಕೆಲಸಕ್ಕೆ ಕಾರ್ಮಿಕರು ಬೇಕೆ ಬೇಕು. ಯಾರೋ ಮಾಡಿದ ಕೆಟ್ಟ ಕೆಲಸಕ್ಕೆ ಎಲ್ಲರನ್ನೂ ದೂರುವುದು ಸರಿಯಲ್ಲ. ಅವರೇ ನಮ್ಮವರ ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ಸರಿ ಸಮಾನರೆ. ಕೂಡಿ ಬಾಳಿದರೆ ಬದುಕು ಸುಂದರವಾಗುತ್ತದೆ ಎಂಬ ತಳಹದಿಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಗ್ರಾಮದ ಮುಖಂಡ ಬುಜಬಲಿ ವೆಂಕಟಾಪುರ ತಿಳಿಸಿದರು. ಆದರೆ, ಎರಡು ಸಮುದಾಯವರ ನಡುವೆ ಸಮಸ್ಯೆ ಮಾತ್ರ ಬೂದಿಮುಚ್ಚಿದ ಕೆಂಡಂತಿದೆ. ಕೂಡಲೇ ಜಿಲ್ಲಾಡಳಿತ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಗ್ರಾಮದ ಸಮಸ್ಯೆಗೆ ತಿಲಾಂಜಲಿ ಇಡಬೇಕಿದೆ.

ದಲಿತ ಪುಂಡ ಪೋಕರಿಗಳನ್ನು ನಿಯಂತ್ರಿಸಿ
ದಲಿತರ ಆರೋಪಗಳನ್ನು ನಿರಾಕರಿಸಿರುವ ಸವರ್ಣೀಯರು, ನಾವು ಯಾವುದೇ ಸಮುದಾಯಕ್ಕೂ ಬಹಿಷ್ಕಾರ ಹಾಕಿಲ್ಲ. ದಲಿತರೇ ಸಣ್ಣಪುಟ್ಟ ಜಗಳವಾದರೆ ಅದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಅಲ್ಲದೆ, ಕೆಲ ಪುಂಡ ಪೋಕರಿಗಳು ಸವರ್ಣೀಯ ಹುಡುಗಿಯರನ್ನು ಚುಡಾಯಿಸುವುದು, ಅಶ್ಲೀಲವಾಗಿ ಮಾತನಾಡುವುದು, ಭಾವಚಿತ್ರ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಮಾಡುತ್ತಾರೆ. ಇದು ಸರಿಯಲ್ಲ ತಮ್ಮ ಮಕ್ಕಳಿಗೆ ತಿಳಿ ಹೇಳಲಾಗದೆ ಸವರ್ಣೀಯರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸವರ್ಣೀಯ ಮುಖಂಡರು ತಿಳಿಸಿದ್ದಾರೆ.

ಶಾಂತಿ ಕದಡುವಂತೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಹೇಳಿದ್ದೇವೆ ವಿನಾ ಯಾವುದೇ ತೊಂದರೆ ನೀಡಿಲ್ಲ. ಪುಂಡ ಪೋಕರಿಗಳ ಮಾತು ಕೇಳಿ ನಮ್ಮ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ಯಾವುದೇ ಸಮುದಾಯಕ್ಕೆ ಬಹಿಷ್ಕಾರ ಹಾಕಿಲ್ಲ.
ರಾಜು ನಂದೆಪ್ಪನವರ, ಹಳಿಂಗಳಿ