ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ನಿಯಮ ಪಾಲಿಸಿ

ರಬಕವಿ/ಬನಹಟ್ಟಿ: ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಅನುದಾನಿತ ಮತ್ತು ಅನುದಾನರಹಿತ ಶಾಲೆ ಮುಖ್ಯಸ್ಥರು ತಪ್ಪದೆ ಸಂಚಾರಿ ನಿಯಮವನ್ನು ಪಾಲಿಸಬೇಕು ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಹೇಳಿದರು.

ನಗರಸಭೆ ಸಭಾಭವನದಲ್ಲಿ ಶನಿವಾರ ಜರುಗಿದ ರಸ್ತೆ ಸಂಚಾರಿ ನಿಯಮ ಪಾಲಿಸುವ, ಡೊನೇಷನ್ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅನುದಾನಿತ ಹಾಗೂ ಅನುದಾನರಹಿತ ಶಾಲೆ ಮುಖ್ಯಶಿಕ್ಷಕರು, ಆಡಳಿತ ಮಂಡಳಿಯವರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಗೆ ಬಳಸುವ ವಾಹನಗಳು ಕಡ್ಡಾಯವಾಗಿ ಆರ್‌ಟಿಒ ಕಡೆಯಿಂದ ಅನುಮತಿ ಪತ್ರ ಪಡೆದಿರಬೇಕು. ಕಡ್ಡಾಯವಾಗಿ ಪ್ರತಿ ವರ್ಷ ರಿನಿವಲ್ ಮಾಡಿಸಲೇಬೇಕು. ಅನುಮತಿ ಇಲ್ಲದೆ ವಾಹನಗಳನ್ನು ಬಳಸಿದರೆ ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಪಂ ಇಒ ಪ್ರಶಾಂತ ಹನಗಂಡಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ಮಕ್ಕಳಿಗೆ ಪ್ರವೇಶ ಕೊಡುಸುತ್ತೇನೆ ಎಂದು ದಲ್ಲಾಳಿಗಳು ಹಣ ಪಡೆಯುತ್ತಿದ್ದಾರೆ. ಅಂತಹವರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು.
ಬಿಇಒ ಎಂ.ಬಿ. ಮೋರಟಗಿ ಮಾತನಾಡಿ, ಡೊನೇಷನ್ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಕೆಲವೊಂದು ಶಾಲೆಗಳ ವಿರುದ್ಧ ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗಿದೆ. ಡೊನೇಷನ್ ತೆಗೆದುಕೊಳ್ಳುವುದು ಕಂಡು ಬಂದಲ್ಲಿ ನಮಗೆ ತಿಳಿಸಿ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಶಾಲಾ ವಾಹನದಲ್ಲಿ ಸರಕು ಸಾಗಣೆ ಅಪರಾಧ
ಶಾಲಾ ವಾಹನದಲ್ಲಿ ಸರಕು ಸಾಗಣೆ ಮತ್ತು ಕೂಲಿ ಕಾರ್ಮಿಕರನ್ನು ಕೊಂಡೊಯ್ಯುವುದು ಅಪರಾಧ. ವಾಹನ ಚಾಲಕರಿಗೆ, ಮಾಲೀಕರಿಗೆ, ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಆರಂಭದಲ್ಲಿ ತಿಳಿವಳಿಕೆ ನೀಡಲಾಗುವುದು. ನಂತರವೂ ನಿಯಮ ಮೀರಿದರೆ ಅಂತಹ ವಾಹನ ಚಾಲಕರಿಗೆ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುತ್ತದೆ. ವಾಹನ ಚಲಾಯಿಸುವಾಗ ಮದ್ಯಪಾನ ಮಾಡಬಾರದು ಎಂದು ಸಿಪಿಐ ಬಿ.ಎಸ್. ಮಂಟೂರ ಹೇಳಿದರು.

Leave a Reply

Your email address will not be published. Required fields are marked *