ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿಗೆ ತಡೆ

ರಬಕವಿ/ಬನಹಟ್ಟಿ: ಬನಹಟ್ಟಿ ಬಸ್ ನಿಲ್ದಾಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಸಿದ್ದು ಸವದಿ ತಡೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಕಾಮಗಾರಿ ಪ್ರಾರಂಭವಾಗಿತ್ತು. ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾಮಗಾರಿ ಪರಿಶೀಲಿಸಿ, ಅಂದಾಜು ಪಟ್ಟಿಯಲ್ಲಿನ ಸಾಮಗ್ರಿ ಹಾಗೂ ನಿಯಮ ಬದ್ಧವಾಗಿ ಕಾಮಗಾರಿ ನಡೆಸದ ಕಾರಣ ನಿಲ್ಲಿಸಿ ಎಂದು ಅಲ್ಲಿದ್ದ ಕೆಲಸಗಾರರಿಗೆ ತಾಕೀತು ಮಾಡಿದರು. ಅಭಿಯಂತರ ಹಾಗೂ ಗುತ್ತಿಗೆದಾರ ಆಗಮಿಸುವವರೆಗೂ ಕಾಮಗಾರಿ ನಡೆಸದಂತೆ ಸೂಚಿಸಿದರು.

ರಸ್ತೆ ನಿರ್ಮಾಣಕ್ಕೂ ಮೊದಲು ಚರಂಡಿ, ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಹಾಗೂ ಶೌಚಗೃಹದ ಬಗ್ಗೆ ಯೋಚಿಸದೆ ಕೆಲಸ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ರಾಜು ಅಂಬಲಿ, ಕುಮಾರ ಕದಮ್, ಆನಂದ ಕಂಪು, ರಮೇಶ ಮಂಡಿ, ಅಮಿತ್ ಹಟ್ಟಿ, ಶೇಖರ ಹಕ್ಕಲದಡ್ಡಿ ಇತರರು ಇದ್ದರು.

ಸಾರಿಗೆ ಇಲಾಖೆ ಹಸ್ತಕ್ಷೇಪ
ಈಗಾಗಲೇ ರಬಕವಿ ಬಸ್ ನಿಲ್ದಾಣದಲ್ಲಿ 50 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿ ನಡೆಸಿದ್ದು, ಅದೂ ಸಹ ಕಳಪೆಯಾಗಿದೆ. ಇಂತಹ ಕಾಮಗಾರಿ ನಡೆಸುವಲ್ಲಿ ಸಾರಿಗೆ ಇಲಾಖೆ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಸಾರಿಗೆ ಸಚಿವರು ಕಳಪೆ ಕಾಮಗಾರಿಗಳನ್ನು ವೀಕ್ಷಿಸಿ ಕಳಪೆಯಾಗಿದ್ದರೆ ಮರುಕಾಮಗಾರಿ ನಡೆಸಬೇಕು. ಬನಹಟ್ಟಿಯ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪಾರದರ್ಶಕ ಹಾಗೂ ಕಾನೂನು ಬದ್ಧವಾಗಿ ನಡೆಸುವಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಶಾಸಕ ಸವದಿ ಒತ್ತಾಯಿಸಿದರು.

Leave a Reply

Your email address will not be published. Required fields are marked *