ರಬಕವಿ/ಬನಹಟ್ಟಿ: ವೀರಶೈವ ಧರ್ಮಾಚರಣೆಗಳಿಗೆ ಯಾವುದೇ ಸೂತಕ ಅಡ್ಡಿಯಾಗದು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಶ್ರೀಶೈಲದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಲಿಂಗಾಯತ ಧರ್ಮದ ಇಷ್ಟಲಿಂಗ ಧಾರಣೆ, ಲಿಂಗ ಪೂಜೆ, ಜಂಗಮಾರ್ಚನೆ, ಪಾದೋದಕ, ಪ್ರಸಾದ ಸ್ವೀಕಾರ ಮುಂತಾದ ಆಚರಣೆಗಳಿಗೆ ಯಾವುದೇ ಸೂತಕವಿಲ್ಲ. ಈ ಆಚರಣೆಗಳು ಜನನದಾರಂಭದಿಂದ ಮರಣಪರ್ಯಂತ ಪ್ರತಿನಿತ್ಯ ಆಚರಿಸುವ ಮಹಾವ್ರತವಾಗಿವೆ. ಮಹಾದೇವನ ಸಾಕ್ಷಾತ್ಕಾರಕ್ಕೆ ಕಾರಣೀ ಭೂತವಾದ ಲಿಂಗ ಪೂಜೆಗಳನ್ನು ಯಾವ ಕಾರಣಕ್ಕೂ ತಪ್ಪಿಸುವಂತಿಲ್ಲ ಎಂದರು.
ಲಿಂಗಧಾರಣೆ, ಲಿಂಗಪೂಜೆ ಮತ್ತು ಜಂಗಮಾರ್ಚನೆ ಮಾಡುವಲ್ಲಿ ಜನ್ಮಸೂತಕ, ಮರಣ ಸೂತಕ, ರಜಸೂತಕ ಮತ್ತು ಜಾತಿಸೂತಕಗಳು ಇರುವುದಿಲ್ಲ. ಸೂತಕಗಳನ್ನು ನೆಪ ಮಾಡಿಕೊಂಡು ಧರ್ಮಾಚರಣೆಗಳಿಂದ ಯಾರೂ ಹಿಂದೆ ಸರಿಯಬಾರದು ಎಂದು ಹೇಳಿದರು.
ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಸಂಸ್ಕಾರ ನೀಡಿದರೆ ಅವರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ಆಧುನಿಕ ಯುಗದಲ್ಲಿ ಮಕ್ಕಳು ಧರ್ಮ ಮತ್ತು ಸಂಸ್ಕೃತಿಗಳತ್ತ ಗಮನ ಹರಿಸುತ್ತಿಲ್ಲ. ಶಿಕ್ಷಣ ಶಿಕ್ಷಣ ಎಂದು ಪಾಲಕರು ವ್ಯಾಪಾರೀಕರಣದತ್ತ ಗಮನ ಹರಿಸುತ್ತಿದ್ದಾರೆ. ಪಾಲಕರು ಎಚ್ಚೆತ್ತು ಉತ್ತಮ ಶಿಕ್ಷಣ ನೀಡಿದರೆ ದೇಶಕ್ಕೆ ಒಳಿತಾಗುತ್ತದೆ ಎಂದರು.
ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಜೈಪುರ ಹಿರೇಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠ ಶತ ಶತಮಾನಗಳಿಂದ ವೀರಶೈವ ಲಿಂಗಾಯತ ಧರ್ಮಾಚರಣೆ ಕುರಿತು ಉತ್ತಮ ಸಂಸ್ಕಾರ, ಧರ್ಮದಿಂದ ನಡೆಯುವ ಮಾರ್ಗವನ್ನು ತೋರುತ್ತ ಬಂದಿದೆ. ಶ್ರೀಗಳ ಆಶಯದಂತೆ ನಾವೆಲ್ಲರೂ ನಡೆದುಕೊಂಡು ಭ್ರಮರಾಂಬ ಮಲ್ಲಿಕಾರ್ಜುನ ಸೇವೆಯಲ್ಲಿ ತಲ್ಲೀನರಾಗೋಣ ಎಂದರು.
ಕೌಲಗದ ನಾಗಲಿಂಗ ಶರಣರು, ಹೈದರಾಬಾದಿನ ಧನಲಕ್ಷ್ಮೀ ಯಲ್ಲಪ್ಪ ರಾಮುಡು, ಸದಾಶಿವ ಪೇಟದ ವೀರಣ್ಣ ದಂಪತಿ, ವಿಜಯಪುರದ ಗೌಡತಿ ನಾನಾಗೌಡ ಪಾಟೀಲ ದಂಪತಿ, ಆಲಮೇಲದ ನಾಗರಾಜ ಅಮರಗೊಂಡ ಮತ್ತು ಸಿದ್ಧರಾಮ ಮಳ್ಳಿ ಇತರರಿದ್ದರು. ವೇದಪಾಠ ಶಾಲೆ ಮಕ್ಕಳು ವೇದಮಂತ್ರ ಪಠಿಸಿದರು. ಮಂಜುನಾಥ ದೇವರು ನಿರೂಪಿಸಿದರು.