ಕಾಡಿದ ರಬಾಡ, ಸನ್​ರೈಸರ್ಸ್ ಗಢಗಢ!

ಹೈದರಾಬಾದ್: ವೇಗಿಗಳಾದ ಕಗಿಸೊ ರಬಾಡ (22ಕ್ಕೆ 4), ಕ್ರಿಸ್ ಮಾರಿಸ್ (22ಕ್ಕೆ 3) ಹಾಗೂ ಕೀಮೊ ಪೌಲ್ (17ಕ್ಕೆ 3) ಮಾರಕ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿತು. ಉಪ್ಪಳದ ರಾಜೀವ್​ಗಾಂಧಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಳಗ 39 ರನ್​ಗಳಿಂದ ಆತಿಥೇಯ ಸನ್​ರೈಸರ್ಸ್ ತಂಡವನ್ನು ಸೋಲಿಸಿತು. 2013ರಲ್ಲಿ ಐಪಿಎಲ್​ಗೆ ಎಂಟ್ರಿ ಪಡೆದಿದ್ದ ಸನ್​ರೈಸರ್ಸ್​ಗೆ 100ನೇ ಪಂದ್ಯವನ್ನು ಸ್ಮರಣೀಯವಾಗಿಸಲು ವಿಫಲವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 7 ವಿಕೆಟ್​ಗೆ 155 ರನ್​ಗಳಿಸಿತು. ಪ್ರತಿಯಾಗಿ ಸನ್​ರೈಸರ್ಸ್ 18.5 ಓವರ್​ಗಳಲ್ಲಿ 116 ರನ್​ಗಳಿಗೆ ಸರ್ವಪತನ ಕಂಡಿತು. ಕೇವಲ 15 ರನ್​ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡ ಸನ್​ರೈಸರ್ಸ್ ತವರು ನೆಲದಲ್ಲಿ ಸತತ 2ನೇ ಹಾಗೂ ಒಟ್ಟಾರೆ ಸತತ 3ನೇ ಸೋಲು ಕಂಡಿತು. ಟೂರ್ನಿಯಲ್ಲಿ 5ನೇ ಜಯ ದಾಖಲಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ವಾರ್ನರ್-ಬೇರ್​ಸ್ಟೋ ಉತ್ತಮ ಆರಂಭ: ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್​ಸ್ಟೋ (41 ರನ್, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಮೂಲಕ 72 ರನ್ ಕಲೆಹಾಕಿ ಉತ್ತಮ ಆರಂಭ ನೀಡಿತು. ಈ ಜೋಡಿಯ ಅಬ್ಬರದಿಂದಾಗಿ ಸನ್​ರೈಸರ್ಸ್ ತಂಡ ಸುಲಭವಾಗಿ ಗೆಲುವಿನ ದಡ ಸೇರುವ ಭರವಸೆಯಲ್ಲಿತ್ತು. ಆದರೆ, ಬೇರ್​ಸ್ಟೋ ವಿಕೆಟ್ ಕಬಳಿಸಿದ ಕೀಮೊ ಪೌಲ್ ಸನ್​ರೈಸರ್ಸ್ ಅಬ್ಬರಕ್ಕೆ ಬ್ರೇಕ್ ಹಾಕಿದರು. ಈ ಜೋಡಿ ನಿರ್ಗಮನದ ಬೆನ್ನಲ್ಲೇ ತಂಡದ ರನ್​ವೇಗಕ್ಕೂ ಬ್ರೇಕ್ ಬಿದ್ದಿತು.

ಕ್ಯಾಪಿಟಲ್ಸ್​ಗೆ ಖಲೀಲ್ ಕಡಿವಾಣ

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವೇಗಿ ಖಲೀಲ್ ಅಹ್ಮದ್ ಆರಂಭದಲ್ಲೇ ಕಡಿವಾಣ ಹಾಕಿದರು. ಕಳೆದ ಪಂದ್ಯದಲ್ಲಿ ಕೇವಲ 3 ರನ್​ಗಳಿಂದ ಶತಕವಂಚಿತರಾಗಿದ್ದ ಶಿಖರ್ ಧವನ್ (7) ಹಾಗೂ ಪೃಥ್ವಿ ಷಾ (4) ಜೋಡಿಯನ್ನು ಡಗ್​ಔಟ್​ಗೆ ಅಟ್ಟಿದ ಖಲೀದ್ ಅಹ್ಮದ್, ಪ್ರಸಕ್ತ ಲೀಗ್​ನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಗಮನಸೆಳೆದರು. 20 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದರೂ ಕಾಲಿನ್ ಮನ್ರೊ (40ರನ್, 24 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಕೆಲಕಾಲ ತಂಡಕ್ಕೆ ಆಸರೆಯಾದರು. ಆರಂಭಿಕ ವೈಫಲ್ಯವನ್ನು ಲೆಕ್ಕಿಸದೆ ಆತಿಥೇಯ ಬೌಲರ್​ಗಳನ್ನು ದಂಡಿಸಿದ ಮನ್ರೊ, ನಾಯಕ ಶ್ರೇಯಸ್ ಅಯ್ಯರ್ ಜತೆಗೂಡಿ 3ನೇ ವಿಕೆಟ್​ಗೆ ಬಿರುಸಿನ 49 ರನ್ ಗಳಿಸಿ ಬೇರ್ಪಟ್ಟರು.

15 ರನ್​ಗಳಿಗೆ 8 ವಿಕೆಟ್ ಕಿತ್ತ ಡೆಲ್ಲಿ

ಆರಂಭಿಕರು ಉತ್ತಮ ಆರಂಭ ನೀಡಿದ ಬಳಿಕ ಸನ್​ರೈಸರ್ಸ್, ಕೀಮೊ ಪೌಲ್ (17ಕ್ಕೆ 3) ಮಾರಕ ದಾಳಿಗೆ ದಿಢೀರ್ ಕುಸಿತ ಕಂಡಿತು. ನಾಯಕ ಕೇನ್ ವಿಲಿಯಮ್ಸನ್(3) ಹಾಗೂ ರಿಕಿ ಭುಯಿ (7) ಪೌಲ್​ಗೆ ವಿಕೆಟ್ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ, ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಡೇವಿಡ್ ವಾರ್ನರ್, ರಬಾಡ ಎಸೆತದಲ್ಲಿ ಮಿಡ್​ಆಫ್​ನಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಸನ್​ರೈಸರ್ಸ್ ಪತನ ಕೂಡ ಆರಂಭಗೊಂಡಿತು. ಮರು ಎಸೆತದಲ್ಲಿಯೇ ವಿಜಯ್ ಶಂಕರ್ (1) ಬೌಲ್ಡ್ ಆದರು. ನಂತರ ಕ್ರಿಸ್ ಮಾರಿಸ್ ಒಂದೇ ಓವರ್​ನಲ್ಲಿ ದೀಪಕ್ ಹೂಡಾ, ರಶೀದ್ ಖಾನ್ ಹಾಗೂ ಅಭಿಷೇಕ್ ಶರ್ಮಗೆ ಡಗೌಟ್ ದಾರಿ ತೋರಿಸಿದರು. 19ನೇ ಓವರ್ ಎಸೆದ ರಬಾಡ, ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹ್ಮದ್ ವಿಕೆಟ್ ಕಿತ್ತರು.

ವಿಲಿಯಮ್ಸನ್ ವಾಪಸ್, ಮನೀಷ್ ಪಾಂಡೆ ಔಟ್

ಸನ್​ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ ವಾಪಸಾದರೆ, ಅವರಿಗೆ ಮೊಹಮದ್ ನಬಿ ದಾರಿಮಾಡಿಕೊಟ್ಟರು. ಕನ್ನಡಿಗ ಮನೀಷ್ ಪಾಂಡೆ, ಯೂಸುಫ್ ಪಠಾಣ್, ಸಿದ್ಧಾರ್ಥ್ ಕೌಲ್ ಬದಲಿಗೆ ಕ್ರಮವಾಗಿ ರಿಕಿ ಭುಯಿ, ಅಭಿಷೇಕ್ ಶರ್ಮ ಹಾಗೂ ಖಲೀಲ್ ಅಹ್ಮದ್ ಸ್ಥಾನ ಪಡೆದರು. ಡೆಲ್ಲಿ ಪರ ಕಾಲಿನ್ ಇನ್​ಗ್ರಾಮ್ ಬದಲಿಗೆ ಕಾಲಿನ್ ಮನ್ರೊ ಹಾಗೂ ರಾಹುಲ್ ತೆವಾಟಿಯಾ ಬದಲಿಗೆ ಅಮಿತ್ ಮಿಶ್ರಾ ಕಣಕ್ಕಿಳಿದರು.

ಡೆಲ್ಲಿಗೆ ಶ್ರೇಯಸ್-ರಿಷಭ್ ಆಸರೆ

ಕಾಲಿನ್ ಮನ್ರೊ ಔಟಾದ ಬಳಿಕ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ (45 ರನ್, 40 ಎಸೆತ, 5 ಬೌಂಡರಿ) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ (23 ರನ್, 19 ಎಸೆತ, 3 ಬೌಂಡರಿ) ಜೋಡಿ ಸನ್​ರೈಸರ್ಸ್ ತಂಡದ ಬಲಿಷ್ಠ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿ 4ನೇ ವಿಕೆಟ್​ಗೆ ಉಪಯುಕ್ತ 56 ರನ್ ಕಲೆಹಾಕಿತು. ಅಂತಿಮವಾಗಿ ವೇಗಿ ಭುವನೇಶ್ವರ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಬಳಿಕ ಡೆಲ್ಲಿ ದಿಢೀರ್ ಕುಸಿತ ಕಂಡಿತು. ಕ್ರಿಸ್ ಮಾರಿಸ್ (4), ಕಿಮೊ ಪೌಲ್ (7) ನಿರಾಸೆ ಅನುಭವಿಸಿದರು. ಕೊನೇ ಹಂತದಲ್ಲಿ ಅಕ್ಷರ್ ಪಟೇಲ್ (14*ರನ್, 11 ಎಸೆತ, 1 ಬೌಂಡರಿ) ತಂಡದ ಮೊತ್ತವನ್ನು 150ರ ಗಡಿ ದಾಟಿಸಲು ನೆರವಾದರು.

ಕ್ಯಾಪಿಟಲ್ಸ್ ತಂಡಕ್ಕೆ ಕರ್ನಾಟಕದ ಜೆ.ಸುಚಿತ್

ಬೆಂಗಳೂರು: ಕರ್ನಾಟಕದ 25 ವರ್ಷದ ಎಡಗೈ ಸ್ಪಿನ್ನರ್ ಜೆ. ಸುಚಿತ್ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಂಡಿದ್ದಾರೆ. ಡೆಲ್ಲಿ ತಂಡದ ವೇಗಿ ಹರ್ಷಲ್ ಪಟೇಲ್, ಬಲಗೈ ಮೂಳೆ ಮುರಿದುಕೊಂಡಿರುವ ಕಾರಣ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಯಾಗಿ ಜೆ. ಸುಚಿತ್​ರನ್ನು ಆಯ್ಕೆ ಮಾಡಲಾಗಿದೆ. ಸುಚಿತ್ ಹಿಂದೆ ಪೂರ್ಣ ಐಪಿಎಲ್ ಆಡಿದ್ದು 2015ರಲ್ಲಿ. ಮುಂಬೈ ಇಂಡಿಯನ್ಸ್ ತಂಡ ಮೂಲಬೆಲೆ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತ್ತು. ಆ ವರ್ಷ ಮುಂಬೈ ಪರ ಆಡಿದ 13 ಪಂದ್ಯಗಳಿಂದ 10 ವಿಕೆಟ್ ಉರುಳಿಸಿ ಗಮನಸೆಳೆದಿದ್ದರು. 2016ರಲ್ಲಿ ಮುಂಬೈ ಪರವಾಗಿ ಒಂದೇ ಪಂದ್ಯವನ್ನು ಆಡಿದ್ದ ಸುಚಿತ್, ನಂತರದ 2 ಆವೃತ್ತಿಗಳಲ್ಲಿ ಐಪಿಎಲ್ ಒಪ್ಪಂದ ಪಡೆಯಲು ವಿಫಲರಾಗಿದ್ದರು.