Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ರಾಜಕಾರಣದಲ್ಲಿ ಧ್ಯೇಯದ ಅಧ್ಯಾಯ

Tuesday, 16.01.2018, 3:05 AM       No Comments

ಧ್ಯೇಯವು ಸ್ತುತ್ಯವಾಗಿದ್ದರೆ ಎಲ್ಲರೂ ಭಾಗವಹಿಸಬಹುದು. ದೊಡ್ಡ ತೇರನ್ನು ಎಳೆಯುವಾಗ ದೊಡ್ಡ ಹಗ್ಗಗಳನ್ನು ಅಂತಸ್ತು ತಾರತಮ್ಯ ನೋಡದೆ ಎಲ್ಲರೂ ಎಳೆಯುವ ಹಾಗೆ. ಮಹಾಭಾರತದ ಕರ್ಣ, ಆ ತೇರನ್ನು ಎಳೆಯದೇ ದುರ್ಯೋಧನನ ‘ಮಾರಿ’ ತೇರನ್ನು ಎಳೆದು, ಇಬ್ಬರೂ ಶೋಚನೀಯವಾಗಿ ಸತ್ತರು. ಅದೇ, ಅಭಿಮನ್ಯು ಯಾವ ಧ್ಯೇಯಕ್ಕಾಗಿ ಸತ್ತ?

 ರಾಷ್ಟ್ರಪತಿ ಚುನಾವಣೆ ನಡೆದು (ಜುಲೈ 2017) ಕೆಲವು ತಿಂಗಳುಗಳೇ ಸರಿದಿವೆ. ಅದರಲ್ಲಿ ನಿರೀಕ್ಷೆಯಂತೆಯೇ ಎನ್​ಡಿಎ ಅಭ್ಯರ್ಥಿಯಾಗಿದ್ದ ರಾಮನಾಥ ಕೋವಿಂದ ಗೆಲುವು ಸಾಧಿಸಿ ರಾಷ್ಟ್ರಪತಿಯಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಯುಪಿಎ ಅಭ್ಯರ್ಥಿ ಮೀರಾ ಕುಮಾರ್, ‘ನನ್ನ ಸೋಲಿನಲ್ಲಿ ಎಲ್ಲವೂ ಮುಗಿದಿಲ್ಲ. ಧ್ಯೇಯಕ್ಕಾಗಿ ಹೋರಾಡುತ್ತೇನೆ’ ಎಂದು ಹೇಳಿದ್ದು ನಿಮಗೆ ನೆನಪಿರಬಹುದು. ಸಾಮಾನ್ಯವಾಗಿ ಉಪೇಕ್ಷಾರ್ಹವಾದ ಈ ಮಾತಿಗೆ ನಗಬೇಕೋ? ಅಳಬೇಕೋ? ಎಂಬುದನ್ನು ಮೊದಲು ನೀವೇ ನಿರ್ಣಯಿಸಿಕೊಳ್ಳಿ.

ಮೀರಾ ಕುಮಾರರು ಸ್ವಭಾವತಃ ಮಿತಭಾಷಿ, ಮೃದುಭಾಷಿ, ಸಂಸತ್ತನ್ನು ನಡೆಯಿಸಿದ ಜಾಣ್ಮೆ, ಹಗರಣಗಳಲ್ಲಿ ಸಿಲುಕಿಕೊಳ್ಳದೆ, ಎಲ್ಲರ ಗೌರವಕ್ಕೆ, ಮೆಚ್ಚುಗೆಗೆ ಪಾತ್ರರಾದವರು ಎಂಬುದು ನೆನಪಾಗಿಯೂ ಈ ತಿರುವಿನಲ್ಲಿ ಏನನ್ನು ಉದ್ದೇಶಿಸಿ ಹಾಗೆಂದರೋ? ಸೋತ ಮೇಲೆ ಏನಾದರೊಂದು ಹೇಳಬೇಕೆಂದು ಸಾಂರ್ದಭಿಕ ಅರ್ಥಹೀನ ಮಾತನ್ನು ಹೇಳಿದ್ದರೆ ವಿಚಾರ ಮಾಡುವ ಕಾರಣ ಬರುವುದಿಲ್ಲ. ಸೊಫಿಸ್ಟಿಕೇಟೆಡ್ ಎಂಬ ಜಂಭ, ಜಬರದಸ್ತಿನ ಊಟಕೂಟಗಳಲ್ಲಿ, ಪಾರ್ಟಿಗಳಲ್ಲಿ ಭಾಗವಹಿಸುವ ಧನಿಕ, ಪ್ರತಿಷ್ಠಿತ, ಗಣ್ಯಾತಿಗಣ್ಯ ಸ್ತ್ರೀ ಪುರುಷರು ಸೇರುವಾಗ ಒಬ್ಬೊಬ್ಬರು ಇತರರನ್ನು ಮಾತನಾಡಿಸುವ ರ್ಚವಿತಚರ್ವಣ ರೀತಿಯ Hellow! How do you do? ಮೊದಲಾದ ಕೃತಕ ಮಾತುಗಳನ್ನು ಟಿ.ಎಸ್.ಎಲಿಯಟ್ಟನು “Polite meaningless words’ ಎಂದು ವರ್ಗೀಕರಿಸಿದ್ದಾನೆ. ‘ಏನು ಹೇಗಿದ್ದೀರಿ? ಸೌಖ್ಯವೇ?’ ಎಂಬ ಮಾತನ್ನು ಆಸ್ಪತ್ರೆಯಲ್ಲಿ, ಕ್ಲಿನಿಕ್​ಗಳಲ್ಲಿ ವೈದ್ಯರು ನಿಮ್ಮ ತೊಂದರೆ ಕೇಳುವಾಗ ಆಡುವ ಪ್ರಶ್ನೆಗೆ ಅಲ್ಲಿ ಅರ್ಥ ಇರುತ್ತದೆ. ಪಾರ್ಟಿಗಳಲ್ಲಿ ಪೊಳ್ಳುಮಾತು. (ಎಲಿಯಟ್​ನ “The CockTail Party’ ನಾಟಕದಲ್ಲಿ, ಬೇರೆಡೆ ಇಂಥವು ವಿಡಂಬಿತವಾಗಿವೆ). ಮಾತು, ಕೃತಕತೆ, ಕೃತಕ ನಡತೆಯ ಜನರಲ್ಲಿ ಸಹಜ, ಉಪೇಕ್ಷಣೀಯ.

ಲಾಲು, ಮಮತಾ, ರಾಹುಲ್, ಕಮ್ಯೂನಿಸ್ಟ್ ನಾಯಕರು ಈ ಮಾತನ್ನಾಡಿದ್ದರೆ ತಿರಸ್ಕಾರದಿಂದ ನಕ್ಕು ಮರೆಯುವುದು ಸುಲಭವೂ ಸ್ವಾಭಾವಿಕವೂ ಆಗಿರುತ್ತಿತ್ತು. ಆದರೆ ಮೇಲೆ ಉಲ್ಲೇಖಿಸಿದ ಸಂದರ್ಭವೇ ಬೇರೆ. ಕಾಂಗ್ರೆಸ್ಸು ನಶಿಸಿ ಕೊಳೆತು ನಾರುವ ಸ್ಥಿತಿಯಲ್ಲಿದೆ. ಲಾಲು ಜೈಲು ಸೇರಿದ್ದಾರೆ. ಮಮತಾ ಆಕ್ರೋಶ, ಆಟಾಟೋಪಗಳು ಬರಲಿರುವ ಅವರ ಪಕ್ಷದ ವಿನಾಶಕ್ಕೆ ಸೂಚನೆ. ಸೋನಿಯಾ ಕುಟುಂಬ, ಅಳಿಯ ಎಲ್ಲ ಎಲ್ಲೆಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ? ಎಂದು ಜಗತ್ತೇ ಅರಿತಿದೆ. ಇಂಥ 17 ಪಕ್ಷಗಳು ಘಟಬಂಧನ ಮಾಡಿಕೊಂಡು ಒಬ್ಬರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತಾರೆಂದರೆ ಇಲ್ಲಿ ‘ಧ್ಯೇಯ’ ಏನಿದೆ? ಸಾಮೂಹಿಕ ಧ್ಯೇಯವೋ? ಕೌಟುಂಬಿಕ ಧ್ಯೇಯವೋ? ವೈಯಕ್ತಿಕವೋ? ಅದು ಮೋದಿ ವಿರುದ್ಧ, ಅಸಹನೆ, ಅಸಹಕಾರ, ನಕಾರಾತ್ಮಕ ಧ್ಯೇಯವೋ? ಇವರೆಲ್ಲರ ಒಂದಂಶದ ‘ಮೋದಿಯನ್ನು ಕೆಳಗಿಳಿಸಬೇಕು, ರಾಷ್ಟ್ರೀಯತೆ ಬೇಡ, ಅಭಿವೃದ್ಧಿ ಬೇಡ, ಭ್ರಷ್ಟಾಚಾರವೇ ಇರಲಿ, ಮುಂದುವರಿಯಲಿ, 70 ವರ್ಷ ಇಲ್ಲದ್ದು ಈಗ ಅಭಿವೃದ್ಧಿ ಮಂತ್ರ ಏಕೆ ಬೇಕು? ಯಥಾಸ್ಥಿತಿ ಸಾಕು’ ಎಂಬ ಹೇಯ ಧ್ಯೇಯವೋ? ಅಥವಾ ಬೇರೆ ಏನಿದೆ?

ನೋಡೋಣ. ಭಾರತ ಸ್ವತಂತ್ರವಾಗುವ ಪೂರ್ವದಲ್ಲಿ ಆಗಣ ಕಾಂಗ್ರೆಸ್ಸಿಗೆ ಧ್ಯೇಯ ಇತ್ತು. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದರಲ್ಲ ಲೋಕಮಾನ್ಯ ತಿಳಕರು? ಅದು ಧ್ಯೇಯ. ಬರ್ವದ ಮಾಂಡಲೇ ನಗರ ಜೈಲಿನಲ್ಲಿ ಸಿಂಹದಂತೆ ಘರ್ಜಿಸಿದರಲ್ಲ? ಆಗ ಕಾಂಗ್ರೆಸ್ಸಿಗೆ ಧ್ಯೇಯ ಇತ್ತು.

ಗೋಪಾಲಕೃಷ್ಣ ಗೋಖಲೆಯವರು “Servents of(British) India Society’ ಕರೆ ಇತ್ತಾಗ, Domonion Status ಸಾಕೆಂದು ಹೋಂ ರೂಲ್ ಚಳವಳಿ ಆರಂಭವಾದಾಗ ಈ ಧ್ಯೇಯದಲ್ಲಿ ವಿಷ ಬೆರೆಯಿತು. ಗಾಂಧಿಯವರು ‘ಸಂಪೂರ್ಣ ಸ್ವರಾಜ್ಯ’ ಕರೆ ಇತ್ತಾಗ ಮತ್ತೆ ಧ್ಯೇಯದ ಕನಸು ಚಿಗುರಿತ್ತು, ಕೊನರಿತ್ತು. ಅದೇ ಗಾಂಧಿ ಕ್ವಿಟ್ ಇಂಡಿಯಾ ಚಳವಳಿಗೆ ಆಗ್ರಹಿಸಿ ದೇಶವನ್ನು ಎಬ್ಬಿಸಿದಾಗ, ನಾನೂ ‘ಗಾಂಧಿ ಕಿ ಜೈ’ ಎಂದವನೇ! ಆದರೆ ಅದೆ ಗಾಂಧಿ ಖಿಲಾಫತ್ ಚಳವಳಿಗೆ ತಲೆ ಹಾಕಿ ‘ಭಾರತ ಸ್ವಾತಂತ್ರ್ಯಕ್ಕಿಂತ ಇದು ಹೆಚ್ಚು ಮುಖ್ಯ’ ಎಂದಾಗ ಧ್ಯೇಯ ಸತ್ತೇಹೋಯಿತು. ಬೆಳೆಯುವ ತೆಂಗಿಗೆ ಟಿಕ್20 ಸೇರಿಸಿ ನೀರು ಹೊಯ್ದಂತೆ ಆಯಿತು.

ನೆಹರೂ ಯುಗಕ್ಕೆ ಬನ್ನಿ. ಅಲ್ಲಿ ಕಾಂಗ್ರೆಸ್ಸಿನ ಧ್ಯೇಯ ಏನಿತ್ತು? ‘ಸಮಾಜವಾದ ಮಾದರಿಯ ಸಮಾಜ, ವೈಜ್ಞಾನಿಕ ಮನೋಭಾವ, ಅಲಿಪ್ತ ನೀತಿ, ಪಂಚಶೀಲ’ ಯಾವುದರಲ್ಲಾದರೂ ಭಾರತೀಯತೆ ಇತ್ತೇ? ಇವು ಕೃತಕವೇ? ಜನರಿಗೆ ಮಂಕುಬೂದಿಯೇ? ಈ ರೋಗ 70 ವರ್ಷ ನಮ್ಮನ್ನು ಹಿಡಿದು ಸಾಯಿಸಿತ್ತು. ಇಂದಿರಾರ ‘20ಅಂಶಗಳ ಕಾರ್ಯಕ್ರಮ -ಗರೀಬಿ ಹಠಾವೋ’ ಎಲ್ಲ ನಗೆಪಾಟಲಾದದ್ದು ಗೊತ್ತೇ ಇದೆ. ಮೀರಾಕುಮಾರರು ನೂತನ ರಾಷ್ಟ್ರಪತಿಗಳಿಗೆ ‘ಸಂವಿಧಾನದ ಪವಿತ್ರತೆ ಘನತೆಗಳನ್ನು ಎತ್ತಿ ಹಿಡಿಯಿರಿ’ ಎಂಬ ಉಪದೇಶ ಕೊಟ್ಟಿದ್ದಾರೆ! ಭೇಷ್ ನೆಹರೂ ಕಾಲದಿಂದ ರಾಜೀವ್ ಕಾಲದವರೆಗೆ ಆಳುವ ಪಕ್ಷ, ಕುಟುಂಬ ಹಿತಾಸಕ್ತಿಗಳಿಗಾಗಿ ಎಷ್ಟು ಸಲ ಈ ಸಂವಿಧಾನವನ್ನು ಪಂಚ್, ತೂತು ಕೊರೆದು ಕೆಡಿಸಿದ್ದೀರಿ? ತುರ್ತು ಪರಿಸ್ಥಿತಿಯಲ್ಲಿ ‘ಪೂರ್ವಾನ್ವಯ ಆಗುವಂತೆ, ಪ್ರಧಾನಿಯ ನಡತೆ ಪ್ರಶ್ನಾತೀತ’ ಎಂಬ ತಿದ್ದುಪಡಿ ತಂದರಲ್ಲ ಮೀರಾಬಾಯಿಯವರೇ? ನಿಮ್ಮ ಧ್ಯೇಯ ಎಲ್ಲಿ ಸಲ್ಲುತ್ತವೆ? ಷಾ ಬಾನೋ ಪ್ರಕರಣದಲ್ಲಿ ಏನು ಸಂವಿಧಾನ ಪವಿತ್ರತೆ ಉಳಿಯಿತು?

ಇನ್ನೊಂದು ಹೇಳಲೇ? ನಿಮ್ಮ ತಂದೆ ಜಗಜೀವನರಾಂರಿಗೆ ಕಾಂಗ್ರೆಸ್ಸಿನಲ್ಲಿ ಅನ್ಯಾಯವಾಗಿ, ಸಹನೆಯೂ ಮೀರಿ, ಜಯಪ್ರಕಾಶರ ಚಳವಳಿಗೆ ಇಳಿದು ‘ಜನತಾ’ ಪಕ್ಷ ಸೇರಿದರಲ್ಲ? ಸೋನಿಯಾರ ಅತ್ತೆ ವಿರುದ್ಧ ಸಿಡಿದರಲ್ಲ? ಅಲ್ಲಿ ಧ್ಯೇಯ ಇತ್ತು. ನೀವು ಅವರ ಪುತ್ರಿಯಾಗಿ ಸೋನಿಯಾರನ್ನು ಓಲೈಸಿದ್ದು ಯಾವ ಧ್ಯೇಯಾನುಸಾರ? ಘಟಬಂಧನದವರು ನಿಮ್ಮನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದಾಗ ನಿಮಗೆ ಅಲ್ಲಿ ಏನು ಧ್ಯೇಯ ಕಾಣಿಸಿತ್ತು? ಲಾಲು, ಅಖಿಲೇಶ್, ಮಾಯಾವತಿ, ಮಮತಾ ಇಂಥವರ ಚರಿತ್ರೆ ಗೊತ್ತಿರಲಿಲ್ಲವೇ? ಗೊತ್ತಿದ್ದರೆ ಅಲ್ಲಿ ಕಂಡ ಧ್ಯೇಯ ಏನು?

ಕೇಳಿ ನಮ್ಮದು ಭಾರತ ದೇಶ! ಹೌದೇ? ‘ಇಂಡಿಯಾ’ ಎನ್ನುವಿರಾದರೆ ಇಲ್ಲಿನ ಧ್ಯೇಯ ಯಾವುದು? ಸನಾತನ ಧರ್ಮದಲ್ಲಿ ಇಲ್ಲದ ಸಹನೆ, ಸಹಬಾಳ್ವೆ, ಪರರ ಪ್ರೀತಿ, ಬೇರೆ ಎಲ್ಲಿ ಕಾಣುತ್ತೀರಿ? ಸ್ವದೇಶಾಭಿಮಾನದಲ್ಲಿ ಬಾರದ ಬೇರೆ ಧ್ಯೇಯ ಇದ್ದರೆ ಅದು ಯಾವುದು? ಮೋದಿ ಏನು ಅಪರಾಧ ಮಾಡಿದ್ದಾರೆ? ಕಪು್ಪಹಣ ನಿಮೂಲನೆ, ರಾಷ್ಟ್ರ ಗಡಿ ರಕ್ಷಣೆ, ಮಿತ್ರ ಬಳಗವೃದ್ಧಿ, ಶತ್ರುಶಕ್ತಿ ಕ್ಷಯ, ಔದ್ಯೋಗಿಕಾವಕಾಶ ಅಭಿವೃದ್ಧಿ, ತರುಣರಿಗೆ ಆಶಾದಾಯಕ ಭವ್ಯ ಭಾರತ ನಿರ್ಮಾಣ – ಇವು ಯಾವುವು ನಿಮಗೆ ಅಸಹನೀಯ? ಇನ್ನೊಂದು ಮಾತಾಡಲೇ? ಕೋಪಿಸಬೇಡಿ – ‘ಸೂಟ್​ಕೇಸ್ ಸಂಸ್ಕೃತಿ’ ಎಂಬುದು ತಲೆ ಎತ್ತಿ, ವಿಜೃಂಭಿಸಿ, ಆಕ್ರಮಿಸಿ, ವ್ಯಾಪಿಸಿ ಬೆಳೆದದ್ದು ಯಾರ ಕಾಲದಲ್ಲಿ? ಯುಪಿಎ-1 ಮತ್ತು 2 ಕಾಲದಲ್ಲಿ ನಡೆದ ಹಗರಣಗಳು ಯಾವ ಧ್ಯೇಯಕ್ಕೆ ಅನುಗುಣವಾಗಿ ? ಹೈಕಮಾಂಡ್​ಗೆ ಹಣ ನೀರೆರೆದು, ಬೆಳೆಸಿದವರಲ್ಲಿ ಏನು ಧ್ಯೇಯ ಕಂಡಿರಿ? ಅಥವಾ ಕಾಣಲೇ ಇಲ್ಲವೋ? ಕರ್ನಾಟಕದ ಒಂದು ಪಕ್ಷದಲ್ಲೂ ‘ಸೂಟ್​ಕೇಸ್ ಸಂಸ್ಕೃತಿ’ ಇದೆ ಎಂದು ಉಜ್ವಲವಾಗಿ ಪ್ರಜ್ವಲಿಸಿ, ಹಿರಿಯರು ತಣ್ಣೀರು ಸುರಿಸಿ ಆರಿಸಿದರಲ್ಲ? ಅವರೂ ಸೇರಿ ಅಲ್ಲವೆ ಇತರ ಅಂಥವರೂ ನಿಮಗೆ ಓಟು ಹಾಕಿದ್ದು?

ರಾಷ್ಟ್ರ ಬೆಳೆಯಲು, ಉನ್ನತಿಗೇರಲು ಬೇಕಾದ ಧ್ಯೇಯವೇ ಬೇರೆ. ಸ್ವಾರ್ಥ ತ್ಯಾಗ ಇದ್ದಲ್ಲಿ ಮಾತ್ರ ರಾಷ್ಟ್ರೀಯ ಭಾವನೆ ಬರುತ್ತದೆ. ಅದನ್ನು ಬೆಳೆಸಿದವರು ಸುಭಾಷ್, ಸಾವರ್ಕರ್, ಶ್ಯಾಂ ಪ್ರಸಾದ್ ಮುಖರ್ಜಿ, ಇನ್ನೂ ಹಿಂದೆ ಝಾನ್ಸಿ ರಾಣಿ ಮುಂತಾದ ಪ್ರಾತಃಸ್ಮರಣೀಯರು! ಭಗತ್ ಸಿಂಗ್, ಆಜಾದ್ ಇಂಥವರನ್ನು ಕೇಳಿರಬೇಕಲ್ಲ? ಈ ಸಾಲಿನಲ್ಲಿ ರಾಹುಲ್ ಎಲ್ಲಿ ನಿಲ್ಲುತ್ತಾರೆ? ಅವರಲ್ಲವೇ ಈಗ ಕಾಂಗ್ರೆಸ್ಸಿನ ಪಕ್ಷಾಧ್ಯಕ್ಷರು? ಅವರ ಧ್ಯೇಯ ಏನಿದೆ? ದಯವಿಟ್ಟು ಹೇಳಿಬಿಡಿ. ಹಲವು ಸಲ ಹೇಗೋ ಚುನಾವಣೆಗಳಲ್ಲಿ ಗೆಲ್ಲುವುದು ಅಪ್ರಕೃತ. ಆಲಂಕಾರಿಕ ಪದವಿಗಳಲ್ಲಿ ಏರುವುದೂ ಅಪ್ರಸ್ತುತ. ಶ್ರೀರಾಮ ಲಂಕಾ ಸಮುದ್ರದಲ್ಲಿ ಸೇತುವೆ ಕಟ್ಟಿದಾಗ ವಾನರರು ಪರ್ವತ ಕೋಡುಗಳನ್ನೂ ಮರದ ದಿಮ್ಮಿಗಳನ್ನೂ ತಂದು ಸಮುದ್ರದಲ್ಲಿ ಹಾಕಿದಾಗ ಅಲ್ಲಿ ರಾಮಭಕ್ತಿ ಎಂಬ ಧ್ಯೇಯ ಇತ್ತು. ಒಂದು ಸಣ್ಣ ಅಳಿಲು ನೀರಲ್ಲಿ, ಮರಳಲ್ಲಿ ಹೊರಳಿ ಬಿರುಕುಗಳನ್ನು ಬೆಸೆಯಿತು. ಅದೂ ರಾಮಭಕ್ತಿ. ಇದರಲ್ಲಿ ದೊಡ್ಡ ಸೇವೆ, ಸಣ್ಣದು ಎಂಬ ಭೇದ ಇಲ್ಲ. ಮಾನಿನಿಯರೇ! ಅಪಮಾನಕರ ಪಕ್ಷ ತ್ಯಜಿಸಿ, ಸಿಕ್ಕಿದ್ದು ಮಾತನಾಡುವುದು ಬಿಟ್ಟು ಯಾವುದಾದರೂ ಶಾಲೆಗಳಲ್ಲಿ ಹುಡುಗರಿಗೆ ಪಾಠ ಹೇಳಿದರೂ ಧ್ಯೇಯಕ್ಕೆ ಅರ್ಥ ಉಂಟು. ಮಾಜಿ ರಾಷ್ಟ್ರಪತಿ ಕಲಾಂ ಅದನ್ನೇ ಮಾಡಿದರು. ವಿಜ್ಞಾನಿ- ವಿದ್ಯಾರ್ಥಿಗಳನ್ನು ಉದ್ದೇಶಿಸಿ ನೂರಾರು ಸಭೆಗಳಲ್ಲಿ ಮಾತಾಡಿ ಕಿರಿಯರನ್ನು ಉತ್ತೇಜಿಸಿದರು. ಇಂಥ ಧ್ಯೇಯ ಸಾಯುವುದಿಲ್ಲ. ‘ಸೋನಿಯಾ ಸೇವೆ’ ಧ್ಯೇಯವೂ ಆಗಲಾರದು, ಆಗಬಾರದು. ಧ್ಯೇಯವು ಸ್ತುತ್ಯವಾದರೆ ಆಯಿತು. ಎಲ್ಲರೂ ಭಾಗವಹಿಸಬಹುದು. ದೊಡ್ಡ ತೇರನ್ನು ಎಳೆಯುವಾಗ ದೊಡ್ಡ ಹಗ್ಗಗಳನ್ನು ಅಂತಸ್ತು ತಾರತಮ್ಯ ನೋಡದೆ ಎಲ್ಲರೂ ಎಳೆಯುತ್ತಾರಲ್ಲವೇ? ಹಾಗೆ, ಮಹಾಭಾರತದ ಕರ್ಣ, ಆ ತೇರನ್ನು ಎಳೆಯದೇ ದುರ್ಯೋಧನನ ‘ಮಾರಿ’ ತೇರನ್ನು ಎಳೆದು, ಇಬ್ಬರೂ ಶೋಚನೀಯವಾಗಿ ಸತ್ತರು.

ಅಭಿಮನ್ಯು ಅಂತ ಒಬ್ಬ ಇದ್ದನಲ್ಲ? ಅವನು ಯಾವ ಧ್ಯೇಯಕ್ಕಾಗಿ ಸತ್ತ? ನೆನಪಿಸಿಕೊಳ್ಳಿ. ಭಾರತ ಉಳಿಯಬೇಕಾದರೆ ಲಾಲು ಪ್ರೇರಿತ ಚಕ್ರವ್ಯೂಹ, ಘಟಬಂಧನ ಚದುರಬೇಕು. 2018-19ರ ವರೆಗೆ ಕಾಲಾವಕಾಶ ಇದೆ. ಯೋಚಿಸಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top