ತಿರುವನಂತಪುರ: ಬಾಳಿ ಬದುಕಬೇಕಾದ ಹಾಗೂ ಅನೇಕರ ಬದುಕಿನ ಆಶಾಕಿರಣವಾಗಿದ್ದ ಕೇರಳ ಯುವ ವೈದ್ಯೆ ವಿಸ್ಮಯ ನಾಯರ್ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಆರೋಪಿ ಪತಿ ಕಿರಣ್ ಕುಮಾರ್ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.
ಪ್ರಕರಣ ಪ್ರಮುಖ ಆರೋಪಿಯಾಗಿರುವ ಪತಿ ಕಿರಣ್ಗೆ ಕೇರಳ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಕಿರಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಸಾಂವಿಧಾನಿಕ ಪೀಠ ಜಾಮೀನು ನೀಡಿದೆ. ಜಾಮೀನು ದೊರೆತಿರುವುದು ಕಿರಣ್ ನಗುವಿಗೆ ಕಾರಣವಾಗಿದ್ದರೆ, ಕಿರಣ್ಗೆ ಜಾಮೀನು ದೊರೆತಿರುವುದು ಅನೇಕರ ಮನಸ್ಸಲ್ಲಿ ಬೇಸರವನ್ನೂ ಉಂಟು ಮಾಡಿದೆ.
ಪ್ರಕರಣದ ಹಿನ್ನೆಲೆ ಏನು?
ವಿಸ್ಮಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್ ಕುಮಾರ್ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿತ್ತು.
2020ರ ಮೇ ತಿಂಗಳಲ್ಲಿ ವಿಸ್ಮಯ ಮತ್ತು ಕಿರಣ್ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಮುಖ್ಯಮಂತ್ರಿಯಿಂದಲೂ ಖಂಡನೆ
ವಿಸ್ಮಯ ಸಾವಿನ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ವಿಶೇಷ ತನಿಖೆ ನಡೆಸುವಂತೆ ಆದೇಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ವಿಸ್ಮಯ ಪ್ರಕರಣದ ಬಗ್ಗೆ ಬಹಳ ಚರ್ಚೆ ನಡೆದಿತ್ತು.
ಅದ್ಧೂರಿ ಮದುವೆ
ಸಾರಿಗೆ ಅಧಿಕಾರಿಯಾಗಿದ್ದ ಕಿರಣ್ ಜತೆ ಮದುವೆ ಮಾಡಿಕೊಡಲು ವರದಕ್ಷಿಣೆಯಾಗಿ 800 ಗ್ರಾಂ ಚಿನ್ನ, ಒಂದು ಎಕರೆಗೂ ಅಧಿಕ ಜಮೀನು, 10 ಲಕ್ಷ ಮೌಲ್ಯದ ಕಾರನ್ನು ವಿಸ್ಮಯ ಪಾಲಕರು ನೀಡಿದ್ದರು. ಮದುವೆ ನಂತರವೂ ಕಿರಣ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ವಿಸ್ಮಯ ಒಮ್ಮೆ ತವರಿಗೂ ಹೋಗಿದ್ದಳು. ಬಳಿಕ ಹಿರಿಯರ ಮುಂದೆ ಸಂಧಾನ ನಡೆದು ಮತ್ತೆ ಗಂಡನ ಮನೆ ಸೇರಿದ್ದಳು. ಕೊನೆಗೆ ಆತನ ಕಾಟವನ್ನು ಸಹಿಸದೇ ಇನ್ನೆಂದು ಮತ್ತೆ ಬಾರದ ಲೋಕಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾಳೆ.
ಕೆಲಸದಿಂದಲೇ ವಜಾ
ಘಟನೆಯ ಬೆನ್ನಲ್ಲೇ ಕಿರಣ್ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಲ್ಲದೆ, ಅವರನ್ನು ಕೆಲಸದಿಂದ ಆ ಕ್ಷಣದಲ್ಲಿ ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಇದರ ನಡುವೆ ಕಿರಣ್ರನ್ನು ಶಾಶ್ವತವಾಗಿ ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ. 35 ವರ್ಷದ ಕಿರಣ್ ಕುಮಾರ್ ಕೇರಳ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ.
ಇದೀಗ ಆರೋಪಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದು ಅನೇಕ ಮಂದಿಗೆ ಬೇಸರವಾಗಿರುವುದರಲ್ಲಿ ಸಂಶಯವೇ ಇಲ್ಲ. (ಏಜೆನ್ಸೀಸ್)
ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್ ಚಾರ್ಜ್ಶೀಟ್ನಲ್ಲಿ ಗಂಡನ ಕರಾಳ ಮುಖ ಬಯಲು!
ಈ ಒಂದು ಕಾರಣಕ್ಕೆ ನಾನಿನ್ನೂ ಮದುವೆ ಆಗಿಲ್ಲ: ನಟ ಪ್ರಭಾಸ್ ಅಚ್ಚರಿಯ ಹೇಳಿಕೆ
ಯೂಕ್ರೇನ್-ರಷ್ಯಾ ಯುದ್ಧದ ಬಗ್ಗೆ US ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೊಟ್ಟ ಹೇಳಿಕೆಗೆ ಭಾರೀ ಆಕ್ರೋಶ!