More

  ಬಡತನ ಗೆದ್ದು ಜನರ ಕೈಹಿಡಿದ ಆರ್. ವೆಂಕಟೇಶ್: ಸಂಕಷ್ಟದ ಅನುಭವವೇ ಸೇವಾಕಾರ್ಯಕ್ಕೆ ಸ್ಪೂರ್ತಿ

  ಬಡ ಕುಟುಂಬದಲ್ಲಿ ಜನಿಸಿದ ವೆಂಕಟೇಶ್ ಆರ್. ಅವರು ಕೋರಮಂಗಲದಲ್ಲಿ ‘ವಿಲೇಜ್ ವೆಂಕಟೇಶ್’ ಎಂದೇ ಸುಪರಿಚಿತರು. ಸಚಿವ ರಾಮಲಿಂಗಾ ರೆಡ್ಡಿ ಅವರ ಪಕ್ಕಾ ಅಭಿಮಾನಿಯಾಗಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡವರು. ಬಡವರ ಸಂಕಷ್ಟಕ್ಕೆ ಮಿಡಿಯುವ ಹೃದಯವುಳ್ಳ ವೆಂಕಟೇಶ್, ಕಳೆದ 18 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕರೊನಾ ಸಂದರ್ಭದಲ್ಲಿ ಪ್ರತಿ ದಿನ 3 ಸಾವಿರ ಜನರಿಗೆ ಫುಡ್ ಕಿಟ್ ವಿತರಿಸಿದ್ದಾರೆ. ಬಡ ಕುಟುಂಬಗಳಿಗೆ ವೈದ್ಯಕೀಯ ಸೇವೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯಧನ, ಯುವಜನತೆಗೆ ಉದ್ಯೋಗ, ನಿರಾಶ್ರಿತರಿಗೆ ಒಂಟಿ ಮನೆ, ನಿರ್ಗತಿಕರಿಗೆ ದಿನಸಿ ವಿತರಿಸುವ ಮೂಲಕ ವೆಂಕಟೇಶ್ ಜನಮನದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರದ್ಧೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮದ ಗುಣಗಳಿಂದ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡಿರುವ ಇವರಿಗೆ ‘ವಿಜಯವಾಣಿ’ ಪತ್ರಿಕೆ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

  ಬೆಂಗಳೂರು: ಬಡತನವನ್ನು ಒಂದು ಅನುಭವವಾಗಿ ಪರಿಗಣಿಸಿದರೆ, ಅದೇ ‘ಸಿರಿತನ’. ಕಾರಣ, ಆ ಹಂತದಿಂದ ಮೇಲೇಳುವ ಯತ್ನಕ್ಕೆ ಬೇಕಾದ ಶಕ್ತಿ ಹಾಗೂ ಸ್ಪೂರ್ತಿ ಹುಟ್ಟುವುದು ಅಲ್ಲಿಂದಲೇ. ಸಮಾಜ ಸೇವಕ ಆರ್. ವೆಂಕಟೇಶ್ ಈ ಮಾತಿಗೇ ಸರಿಹೊಂದುವಂಥ ವ್ಯಕ್ತಿತ್ವದವರು. ಸಾಮಾನ್ಯ ಆಟೋ ಚಾಲಕರಾಗಿದ್ದ ಅವರು, ಇಂದು ಹತ್ತಾರು ಮಂದಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ.

  ವೆಂಕಟೇಶ್, ಕಾಂಗ್ರೆಸ್​ನ ಕೋರಮಂಗಲ ಬ್ಲಾಕ್ ಎಸ್ಸಿ-ಎಸ್ಟಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಬೆಂಗಳೂರು ನಗರ ಎಸ್ಸಿ-ಎಸ್ಟಿ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಅಧಿಕಾರ ಇಲ್ಲದಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಸದಾ ಅವರ ಮಧ್ಯೆಯೇ ಇದ್ದು ತಮ್ಮನ್ನು ನಿರಂತರ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವುದೇ ವೆಂಕಟೇಶ್ ಹೆಗ್ಗಳಿಕೆ. ಕರೊನಾ ಸಮಯದಲ್ಲಿ ಮಕ್ಕಳು ಶಾಲಾ- ಕಾಲೇಜುಗಳ ಶುಲ್ಕ ಕಟ್ಟಲಾಗದೆ ಪರದಾಡಿದ ಪಾಲಕರ ನೆರವಿಗೆ ನಿಂತಿದ್ದಾರೆ. ಸಕಾಲದಲ್ಲಿ ‘ವರ್ಗಾವಣೆ ಪ್ರಮಾಣ’ ಪತ್ರ (ಟಿಸಿ) ಕೊಡಿಸಿ ನ್ಯಾಯ ಒದಗಿಸಿದ್ದರು. ಕೋರಮಂಗಲ ಭಾಗದ ಜನರಿಗೆ ವೆಂಕಟೇಶ್ ಎಂದರೆ ಎಲ್ಲಿಲ್ಲದ ಅಭಿಮಾನ. ಒಂದು ರೀತಿಯಲ್ಲಿ ಮನೆಮಗನಂತೆ ಬಡಜನರ ಕಷ್ಟಗಳಿಗೆ ಮಿಡಿಯುತ್ತಾರೆ. ‘ಕಷ್ಟ ಎಂದು ಮನೆಬಾಗಿಲಿಗೆ ಬಂದವರನ್ನು ವೆಂಕಟೇಶ್ ಯಾವತ್ತೂ ಬರಿಗೈಯಲ್ಲಿ ಕಳುಹಿಸುವುದಿಲ್ಲ’ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಇಲ್ಲಿ ಅವರು ‘ವಿಲೇಜ್ ವೆಂಕಟೇಶ್’ ಎಂದೇ ಹೆಸರುವಾಸಿ. ವೆಂಕಟೇಶ್ ತಂದೆ ರಾಮಯ್ಯ, ತಾಯಿ ಗುಳ್ಳಮ್ಮ. 5 ಗಂಡು 3 ಹೆಣ್ಣು ಸೇರಿ 8 ಮಕ್ಕಳಿರುವ ದೊಡ್ಡ ಕುಟುಂಬ. ವೆಂಕಟೇಶ್ ಚಿಕ್ಕ ವಯಸ್ಸಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡರು. ವೆಂಕಟೇಶ್ ಅವರಿಗೆ ಮೂರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದಾನೆ. ದೊಡ್ಡ ಮಗಳು ಶಾಂತಾ ಬಾಬು, ಸಿಂಗಸಂದ್ರ ವಾರ್ಡ್​ನ ಕಾಪೋರೇಟರ್ ಆಗಿ ಸೇವೆ ಸಲ್ಲಿಸಿದವರು. ಎರಡನೇ ಮಗಳು ಹೇಮಾವತಿ ಡಿಪ್ಲೋಮಾ ಮುಗಿಸಿದ್ದು, ತಂದೆಯಂತೆ ಇವರೂ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರನೇ ಮಗಳು ರೇಣುಕಾ ಗೃಹಿಣಿ. ಮಗ ಯೋಗೇಶ್ ಬಿ.ಇ. ಮುಗಿಸಿ ಬಿಬಿಎಂಪಿಯಲ್ಲಿ ಇಂಜಿನಿಯರ್ ಆಗಿದ್ದಾರೆ.

  ನಾನು ಮಾಡಿರುವ ಸಮಾಜಸೇವೆಯನ್ನು ಗುರುತಿಸಿ ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿದೆ. ಈ ಪ್ರತಿಷ್ಠಿತ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಮತ್ತಷ್ಟು ಸಮಾಜಸೇವೆಯನ್ನು ಮಾಡಲು ಸ್ಪೂರ್ತಿ ನೀಡಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ನನ್ನ ಪಾಲಿನ ದೇವರು. ಬಡವರ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇದೆ. ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿದರೂ ತಲೆಬಾಗಿ ಕೆಲಸ ಮಾಡುತ್ತೇನೆ.

  | ಆರ್. ವೆಂಕಟೇಶ್ ಸಮಾಜ ಸೇವಕ

  ಬದುಕು ಕಟ್ಟಿಕೊಟ್ಟ ದೊರೆ
  2008ರಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಆಗ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಅವರನ್ನು ರಾಮಲಿಂಗಾ ರೆಡ್ಡಿ ಅವರು ಕರೆದು ಬದುಕುವುದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹೀಗಾಗಿ ರಾಮಲಿಂಗಾ ರೆಡ್ಡಿ ಅವರನ್ನು ದೈವಸಮಾನರಾಗಿ ವೆಂಕಟೇಶ್ ಪೂಜಿಸುತ್ತಾರೆ. ಕಳೆದ 18 ವರ್ಷಗಳಿಂದ ಅವರ ಜತೆಗೆ ಇದ್ದಾರೆ. ಜನಸೇವೆಯಲ್ಲಿ ತೊಡಗಿಸಿ ಕೊಳ್ಳುವುದಕ್ಕೂ ರಾಮಲಿಂಗಾರೆಡ್ಡಿ ಅವರೇ ಸ್ಪೂರ್ತಿ. ರಾಮನ ಭಕ್ತ ಹನುಮನಂತೆ ಸದಾ ಅವರ ಅನುಯಾಯಿಯಾಗಿದ್ದಾರೆ. ರೆಡ್ಡಿ ಮಾರ್ಗದರ್ಶನದಲ್ಲಿ ಹಲವು ಸಮಾಜಮುಖಿ ಕೆಲಸಗಳನ್ನು ನೆರವೇರಿಸಿದ ಸಂತೃಪ್ತಿಯೂ ಇವರಿಗಿದೆ.

  ಶ್ರಮವೇ ಯಶಸ್ಸಿನ ಕೀಲಿಕೈ
  ಕಡುಬಡತನದಲ್ಲಿ ಜನಿಸಿದ ವೆಂಕಟೇಶ್ ಅವರದ್ದು ಪ್ರೇಮ ವಿವಾಹ. ಮದುವೆಯ ನಂತರ ಹಲವು ಸಂಕಷ್ಟಗಳನ್ನು ಇವರು ಎದುರಿಸಬೇಕಾಯಿತು. ಆರಂಭದಲ್ಲಿ ಆಟೋ ಚಾಲಕರಾಗಿ ಕುಟುಂಬವನ್ನು ನಿರ್ವಹಿಸಿದರು. ನಂತರ ಅಪಘಾತವಾಗಿ ಕಾಲು ಮುರಿದುಕೊಂಡು ಆರು ತಿಂಗಳು ಆಸ್ಪತ್ರೆಯಲ್ಲಿದ್ದರು. ‘ಆಗ ಜೀವನ ಅಂದರೆ ಏನು ಎಂದು ಅರ್ಥವಾಯಿತು. ಆ ಸಮಯದಲ್ಲಿ ಗಂಜಿ ಕುಡಿದು ಬದುಕು ನಡೆಸಿದ್ದಿದೆ’ ಎಂದು ಆ ದಿನಗಳನ್ನು ವೆಂಕಟೇಶ್ ನೆನಪಿಸಿಕೊಳ್ಳುತ್ತಾರೆ. ಸಂಕಷ್ಟ ಕಾಲದಲ್ಲಿ ತಳೆಯುವ ನಿರ್ಧಾರ ಅಚಲವಾಗಿರುತ್ತದೆ. ಇದಾದ ಬಳಿಕ ವೆಂಕಟೇಶ್ ಬದುಕು ಬದಲಾವಣೆ ಹಾದಿ ಹಿಡಿಯಿತು. ನಂತರ ಕಾರು, ಟೆಂಪೋ, ಲಾರಿ ಚಾಲಕನಾಗಿ ಹಗಲು-ರಾತ್ರಿ ದುಡಿದರು. ಆದರೆ ವಿಧಿಲಿಖಿತ ಬೇರೆಯೇ ಆಗಿತ್ತು. ಪತ್ನಿಯನ್ನು ಕಳೆದುಕೊಂಡರು. ಬಳಿಕ ಜೀವನವಿಡೀ ಮಕ್ಕಳಿಗಾಗಿ ಮೀಸಲು ಎಂದು ನಿಶ್ಚಯಿಸಿದರು. ಈ ನಿಶ್ಚಯವನ್ನು ಸಾಕಾರಗೊಳಿಸಿ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಯಶಸ್ಸು ಕಂಡಿದ್ದಾರೆ.

  ಹತ್ತಾರು ಸಹಾಯಗಳು
  ಬಡವರಿಗೆ ವೈದ್ಯಕೀಯ ಸೇವೆ, ನಿರ್ಗತಿಕ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಯುವಕ- ಯುವತಿಯರಿಗೆ ವೆಂಕಟೇಶ್ ಉದ್ಯೋಗ ಕೊಡಿಸಿದ್ದಾರೆ. ವೃದ್ಧರಿಗೆ ಪಿಂಚಣಿ ವ್ಯವಸ್ಥೆ, ವಿಧವಾವೇತನ- ಹೀಗೆ ಸಹಾಯ ಬಯಸಿ ಬಂದವರಿಗೆ ಆಸರೆಯಾಗಿದ್ದಾರೆ. ಕೋರಮಂಗಲ, ಕೋರಮಂಗಲ ವಿಲೇಜ್, ಮೇಸ್ತ್ರಿಪಾಳ್ಯ, ಸಿದ್ಧಾರ್ಥ ಕಾಲನಿಯಲ್ಲಿ ಒಂಟಿಮನೆ ಯೋಜನೆ ಬಡವರಿಗೆ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ. 400- 500 ಮಂದಿಗೆ ಈ ಯೋಜನೆ ದೊರಕುವಂತೆ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್, ಯಶಸ್ವಿನಿ ಕಾರ್ಡ್ ಮತ್ತು ಲೇಬರ್ ಕಾರ್ಡ್​ಗಳನ್ನು ಮಾಡಿಸಿಕೊಟ್ಟಿದ್ದಾರೆ. ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ. ಮಹಿಳೆಯರಿಗೆ ಹೊಲಿಗೆ ತರಬೇತಿ, ಬ್ಯೂಟಿಷಿಯನ್ ತರಬೇತಿಗೆ ವ್ಯವಸ್ಥೆ ಮಾಡಿ, ಸ್ವಾವಲಂಬಿ ಬದುಕಿನ ಪಥದತ್ತ ಸಾಗಲು ಪ್ರೇರಣೆಯಾಗಿದ್ದಾರೆ. ಬಡ ವಿದ್ಯಾರ್ಥಿನಿಯರಿಗೆ ಲ್ಯಾಪ್​ಟಾಪ್, ಸ್ಕಾಲರ್​ಶಿಪ್, ಸೈಕಲ್, ನಿರುದ್ಯೋಗಿ ಯುವಕರಿಗೆ ಉಚಿತ ಆಟೋ, ಸ್ವಉದ್ಯೋಗ ಕೈಗೊಳ್ಳುವವರಿಗೆ ಆರ್ಥಿಕ ನೆರವು, ಅಂಗವಿಕಲರಿಗೆ ದ್ವಿಚಕ್ರ ವಾಹನ ಒದಗಿಸುವ ಕಾರ್ಯದಲ್ಲೂ ವೆಂಕಟೇಶ್ ತೊಡಗಿದ್ದಾರೆ.

  ನಾಡು- ನುಡಿ ಕೈಂಕರ್ಯ
  ಜನಪರ ಕಾಳಜಿಯ ಜತೆಗೆ ದೇಶಪ್ರೇಮ ಮೂಡಿಸುವ ಚಟುವಟಿಕೆಗಳನ್ನು ವೆಂಕಟೇಶ್ ಹಮ್ಮಿಕೊಳ್ಳುತ್ತಾರೆ. ದೇಶ, ನೆಲ, ಜಲ, ಭಾಷೆ ಬಗ್ಗೆ ಹೇರಳ ಅಭಿಮಾನಿ ಹೊಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಜಯಂತಿಗಳನ್ನು ಆಚರಣೆ ಮಾಡುತ್ತಾರೆ. ಆ ಮೂಲಕ ಇಂದಿನ ಯುವಪೀಳಿಗೆಗೆ ನಾಡಿನ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದಾರೆ. ಪ್ರತಿ ಬಾರಿಯೂ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಅನ್ನದಾಸೋಹ ಏರ್ಪಡಿಸುತ್ತಾರೆ. ಪುರುಷ ಹಾಗೂ ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡುತ್ತಾರೆ. ಈ ಕಾರ್ಯಕ್ಕೆ ರಾಮಲಿಂಗಾರೆಡ್ಡಿ ಹಾಜರಿಯೇ ವಿಶೇಷತೆ. ಜಾತಿ, ಧರ್ಮ, ಬಡವ- ಬಲ್ಲಿದ ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವ ಸಮಸಮಾಜದ ಆಶಯವನ್ನು ವೆಂಕಟೇಶ್ ಅಕ್ಷರಶಃ ಪಾಲಿಸುತ್ತಿದ್ದಾರೆ.

  ಕರೊನಾ ವೇಳೆ ಕೈಹಿಡಿದರು
  ರಾಮಲಿಂಗಾರೆಡ್ಡಿ ಅವರ ಸಲಹೆಯಂತೆ ಕರೊನಾ ಸಂದರ್ಭದಲ್ಲಿ ವೆಂಕಟೇಶ್ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಸಂತ್ರಸ್ತರ ಸೇವೆಗೆ ಅಣಿಯಾದರು. ಕ್ಯಾಂಟೀನ್​ವೊಂದನ್ನು ತೆರೆದು ಪ್ರತಿದಿನ 2ರಿಂದ 3 ಸಾವಿರ ಜನರಿಗೆ ಆಹಾರ ನೀಡುವ ಪುಣ್ಯದ ಕೆಲಸವನ್ನು ಮಾಡಿದರು. ತರಕಾರಿ ಕಿಟ್, ದಿನಸಿ ಕಿಟ್, ಆಕ್ಸಿಜನ್, ಅಗತ್ಯವುಳ್ಳವರಿಗೆ ಔಷಧಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಆಗಿನ ಸೇವೆಯನ್ನು ಜನರು ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ತಮ್ಮ ಮೇಲಿನ ಜನರ ಗೌರವ ಭಾವ ಅರಿತ ವೆಂಕಟೇಶ್, ಇನ್ನಷ್ಟು ವಿನೀತರಾಗಿದ್ದಾರೆ.

  ವಿಎನ್​ಎಸ್ ಪುನರ್ವಸತಿ ಕೇಂದ್ರ
  ವೆಂಕಟೇಶ್ ‘ವಿಎನ್​ಎಸ್ ಪುನರ್ವಸತಿ ಕೇಂದ್ರ’ ತೆರೆದಿದ್ದು, ತಮ್ಮ ಸೇವಾ ಕಾರ್ಯಗಳ ವ್ಯಾಪ್ತಿಯನ್ನು ಮಗದಷ್ಟು ಹಿಗ್ಗಿಸಿದ್ದಾರೆ. ನೂರಾರು ಮಂದಿಯನ್ನು ಮದ್ಯಪಾನದ ಚಟದಿಂದ ಮುಕ್ತರನ್ನಾಗಿಸುವ ಕಾಯಕದಲ್ಲಿ ತೊಡಗಿದ್ದಾರೆ. ಎಲ್ಲದಕ್ಕೂ ರಾಮ ಲಿಂಗಾರೆಡ್ಡಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವೇ ದಾರಿ ದೀಪವಾಗಿದೆ ಎಂಬುದನ್ನು ಪದೇಪದೆ ನೆನಪಿಸುತ್ತಾರೆ.

  ವೆಂಕಟೇಶ್ ಅವರು ಬಡವರಿಗೆ ತುಂಬ ಸಹಾಯ ಮಾಡುತ್ತಾರೆ. ಸ್ವಂತ ಉದ್ಯೋಗಕ್ಕಾಗಿ ನನಗೆ ಹಣದ ಸಹಾಯ ಮಾಡಿದ್ದಾರೆ. ಅಣ್ಣನ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ನೀಡುತ್ತಾರೆ. ಇವರು ಮಾಡಿರುವ ಸಹಾಯವನ್ನು ನಾವು ಎಂದಿಗೂ ಮರೆಯುವುದಿಲ್ಲ. ಇಂಥವರು ಭವಿಷ್ಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂಬುದು ನಮ್ಮೆಲ್ಲರ ಆಸೆ.

  | ಲಕ್ಷ್ಮೀ ಕೋರಮಂಗಲ ನಿವಾಸಿ

  ಸಂಕ್ರಾಂತಿ ಸಂಭ್ರಮ
  ಸಿಲಿಕಾನ್ ಸಿಟಿ ಜನರಿಗೆ ಹಳ್ಳಿ ಸೊಗಡಿನ ಪರಿಚಯ ಮಾಡಿಕೊಡಬೇಕೆಂಬ ಹಂಬಲದಿಂದ ಪ್ರತಿವರ್ಷ ಸಂಕ್ರಾಂತಿ ಸಂಭ್ರಮವನ್ನು ವೆಂಕಟೇಶ್ ಅದ್ದೂರಿಯಾಗಿ ಆಯೋಜಿಸುತ್ತಾರೆ. ಎತ್ತುಗಳನ್ನು ಸಿಂಗರಿಸಿ ಬೆಂಕಿಯಲ್ಲಿ ಕಿಚ್ಚು ಹಾಯಿಸುತ್ತಾರೆ. ವಿವಿಧ ರೀತಿ ಸ್ಪರ್ಧೆಗಳನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನಗಳನ್ನು ನೀಡುತ್ತಾರೆ. ಇದಕ್ಕೆ ರಾಮಲಿಂಗಾರೆಡ್ಡಿಯವರೇ ಆಗಮಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸುತ್ತಾರೆ. ಜನರೊಂದಿಗೆ ಬೆರೆಯುವ, ಅವರಲ್ಲಿ ಸಂತಸ ಮೂಡಿಸುವ ಅವಕಾಶವನ್ನು ಇದು ನಮಗೆ ನೀಡುತ್ತದೆ ಎಂದು ಹೇಳುತ್ತಾರೆ ವೆಂಕಟೇಶ್.

  ವೆಂಕಟೇಶ್ ಅವರು ಕರೊನಾ ವೇಳೆ ಜನರಿಗೆ ತುಂಬ ಸಹಾಯ ಮಾಡಿದ್ದಾರೆ. ನಾನು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆ. ಕರೊನಾ ಸಮಯದಲ್ಲಿ ನಮ್ಮ ಕಷ್ಟವನ್ನು ವೆಂಕಟೇಶಣ್ಣನ ಬಳಿ ಹೇಳಿಕೊಂಡಾಗ ಆರ್ಥಿಕವಾಗಿ ಸಹಾಯ ಮಾಡಿದ್ದರು. ಈಗ ಟೇಲರಿಂಗ್ ಮಾಡಬೇಕೆಂದು ನಿರ್ಧರಿಸಿದ್ದೇನೆ. ಸ್ವಂತ ಅಂಗಡಿ ಮಾಡಲು ಹಣ ನೀಡಿದ್ದಾರೆ. ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ.

  | ಎಸ್ತರ್ ರಾಜೇಂದ್ರನಗರ ನಿವಾಸಿ

  ಬಡವರ ಕಷ್ಟಗಳಿಗೆ ವೆಂಕಟೇಶ್ ಕೂಡಲೇ ಸ್ಪಂದಿಸುತ್ತಾರೆ. ಯಾರೇ ಸಮಸ್ಯೆ ಹೇಳಿಕೊಂಡು ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸುವುದಿಲ್ಲ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಸಹಾಯ ಮಾಡಿದ್ದಾರೆ. ನನಗೆ ಮನೆ ಕಟ್ಟಲು ಸಹಾಯ ಮಾಡಿದ್ದಾರೆ. ವೆಂಕಟೇಶ್ ಅವರನ್ನು ಆ ಭಗವಂತ ಚೆನ್ನಾಗಿ ಇಟ್ಟಿರಲಿ.

  | ರಾಜಮ್ಮ, ಕೋರಮಂಗಲ 8ನೇ ಮುಖ್ಯರಸ್ತೆ ನಿವಾಸಿ

  ಜನರ ಸಮಸ್ಯೆ ಆಲಿಸಲು ಕಚೇರಿ
  ಪ್ರತಿನಿತ್ಯ ಸಮಸ್ಯೆಗಳನ್ನು ಹೊತ್ತು ತರುವ ಜನರಿಗೆ ಸಹಾಯ ಮಾಡಲೆಂದೇ ವೆಂಕಟೇಶ್ ಅವರು ಕೋರಮಂಗಲದಲ್ಲಿ ಕಚೇರಿ ತೆರೆದಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಈ ಕೆಲಸಕ್ಕೆಂದೇ ಸಮಯವನ್ನು ಮೀಸಲಿಟ್ಟಿದ್ದು, ತಮ್ಮಲ್ಲಿಗೆ ಬರುವ ಬಡಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ.

  ವೆಂಕಟೇಶ್ ಅವರು ಜನಸೇವೆ ಮಾಡಲು ಸದಾ ಸಿದ್ಧರಿರುತ್ತಾರೆ. ಕಷ್ಟ ಬಂದಾಗ ಜನರು ಅವರ ಮನೆಯ ಬಳಿ ಯಾವುದೇ ಸಮಯದಲ್ಲಿ ಹೋದರೂ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಸ್ಪಂದಿಸುತ್ತಾರೆ. ವಾರ್ಡ್​ನಲ್ಲಿ ಯಾವುದೇ ಸಮಸ್ಯೆ ಇದ್ದರೂ ನೆರವಿಗೆ ಧಾವಿಸುತ್ತಾರೆ. ಇಂತಹವರು ವಿರಳರಲ್ಲೇ ವಿರಳ ಎನ್ನಬಹುದು.

  | ಲಕ್ಷ್ಮಮ್ಮ ಕೋರಮಂಗಲ 8ನೇ ಬ್ಲಾಕ್ ನಿವಾಸಿ

  ಜವಾಬ್ದಾರಿ ಕೊಟ್ಟರೆ ನಿಭಾಯಿಸುವೆ
  ಹಾಲಿ ಸಾರಿಗೆ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಅವರು ನನ್ನಂಥ ಸಾವಿರಾರು ಮಂದಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ನನ್ನನ್ನು ಇವತ್ತು ಸಮಾಜದಲ್ಲಿ ಒಬ್ಬ ಮಾದರಿ ವ್ಯಕ್ತಿಯನ್ನಾಗಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಸೇವೆ ಮಾಡುತ್ತೇನೆ. ಅವರ ಆಶೀರ್ವಾದವೇ ನನ್ನ ಈ ಏಳಿಗೆಗೆ ಕಾರಣ ಎನ್ನುತ್ತಾರೆ ವೆಂಕಟೇಶ್.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts