ಸಿಎಂ ಆಗಲು ಹಿಂದೆ ಆಸೆ ಇತ್ತು, ಈಗ ಇಲ್ಲ; ಗೌಡರು, ಎಚ್‌ಡಿಕೆ ನನ್ನ ಹೆಸರನ್ನೇನು ಸೂಚಿಸಿಲ್ಲ

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಹಿಂದೆ ನನಗೆ ಅಂಥ ಆಕಾಂಕ್ಷೆ ಇತ್ತು. ಈಗ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರೂ ನನ್ನ ಹೆಸರನ್ನೇನೂ ಸೂಚಿಸಿಲ್ಲ ಎಂದು ಕಂದಾಯ ಸಚಿವ ಆರ್​.ವಿ ದೇಶಪಾಂಡೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ” ಎಚ್​.ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಸಿಎಂ ಹುದ್ದೆಗೆ ನಾನು ಅರ್ಹ ಎಂದಷ್ಟೇ ಹೇಳಿದ್ದಾರೆ. ಆದರೆ, ನನ್ನ ಹೆಸರನ್ನು ಅವರು ಸೂಚಿಸಿಲ್ಲ,” ಎಂದು ಹೇಳಿದರು.

ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತು ಸರ್ಕಾರ ಉರುಳಲಿದೆ ಎಂಬ ವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು, “ಆರ್​. ವಿ.ದೇಶಪಾಂಡೆ ಅವರೂ ಮುಖ್ಯಮಂತ್ರಿ ಹುದ್ದೆಗೆ ಅರ್ಹರಿದ್ದಾರೆ,” ಎಂದು ಹೇಳಿದ್ದರು.

ಇದೇ ಧಾಟಿಯಲ್ಲಿ ಮಾತನಾಡಿದ್ದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರು, ” ಧರ್ಮಸಿಂಗ್​ ಮುಖ್ಯಮಂತ್ರಿಯಾದ ಹೊತ್ತಲ್ಲೇ ಆರ್​.ವಿ. ದೇಶಪಾಂಡೆ ಅವರ ಹೆಸರೂ ಸಿಎಂ ಹುದ್ದೆಗೆ ಪ್ರಸ್ತಾಪವಾಗಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ನನ್ನೊಂದಿಗೇ ಸಚಿವರಾಗಿದ್ದ ದೇಶಪಾಡೆ ಅವರು ಸಿಎಂ ಹುದ್ದೆಗೆ ಅರ್ಹರು,” ಎಂದು ಹೇಳಿದ್ದರು.

ಈ ಎಲ್ಲ ಹೇಳಿಕೆಗಳ ಹಿನ್ನೆಲೆಯಲ್ಲಿ ಸಚಿವ ದೇಶಪಾಂಡೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ.