More

    ತಾಲಿಬಾನ್ ಹೇಳಿದ್ದೇ ಬೇರೆ..ಆಗ್ತಿರೋದೇ ಬೇರೆ! ಬಯಲಾಗ್ತಿದೆ ತಾಲಿಬಾನಿಗಳ ಅಸಲಿ ಮುಖವಾಡ

    ಕಳೆದ ವಾರ ಆಫ್ಘನ್ ವಶಪಡಿಸಿಕೊಂಡ ತಾಲಿಬಾನಿಗಳು ಮೊದಲು ಹೊರಡಿಸಿದ ಘೋಷಣೆ ಅಂದ್ರೆ ಈ ಹಿಂದೆ ಅಮೆರಿಕಾ ಜತೆ ಕೈಜೋಡಿಸಿದ್ದ ಎಲ್ಲರಿಗೂ ಕ್ಷಮಾದಾನ…. ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಶಾಂತಿ ಸ್ಥಾಪನೆ. ಆದರೆ, ಇದನ್ನ ಹೇಳಿ ಒಂದೇ ವಾರದೊಳಗೆ ಬಯಲಾಗಿದೆ ತಾಲಿಬಾನಿ ಅಸಲಿ ವ್ಯಾಘ್ರ ಮುಖವಾಡ!

    ತಾಲಿಬಾನ್ ಹೇಳಿದ್ದೇ ಬೇರೆ..ಆಗ್ತಿರೋದೇ ಬೇರೆ
    ಕಳೆದ ವಾರ ಕಾಬೂಲ್ ಕೈವಶದೊಂದಿಗೆ ಯಾವಾಗ ತಾಲಿಬಾನ್ ಇಡೀ ಆಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಾಗ ತಾಲಿಬಾನ್ ಕೊಟ್ಟ ಅಭಯವಿದು. ಯಾವಾಗ ಆಫ್ಘನ್ ತಾಲಿಬಾನ್ ವಶವಾಯ್ತೋ ಇಡೀ ಜಗತ್ತು ಭಾವಿಸಿದ್ದು ಅಲ್ಲಿ ಶತ್ರುಗಳಿಗೆ, ಮಹಿಳೆಯರಿಗೆ ಉಳಿಗಾಲ ಕಷ್ಟ ಅಂತ. ಹೀಗಾಗಿ ಈ ಅಪನಂಬಿಕೆ ಹೋಗಲಾಡಿಸೋ ನಿಟ್ಟಿನಲ್ಲಿ, ವಿಶ್ವಾಸವೃದ್ಧಿಗಾಗಿ ಮೊದಲೇ ಸುದ್ದಿಗೋಷ್ಠಿ ನಡೆಸಿದ ತಾಲಿಬಾನಿಗಳು, ಎಲ್ಲರ ಸುರಕ್ಷತೆ ಬಗ್ಗೆ ಭರವಸೆ ಕೊಟ್ಟರು. ಅಮೆರಿಕಾ ಜತೆ ಈ ಹಿಂದೆ ಕೈಜೋಡಿಸಿದವರ ಮೇಲೆ ಸೇಡು ತೀರಿಸಿಕೊಳ್ಳಲ್ಲ ಅಂತಾ ಅಭಯ ಕೊಟ್ಟ ತಾಲಿಬಾನಿಗಳು, ಮಹಿಳೆಯರ ಶಿಕ್ಷಣ ಹಾಗೂ ಉದ್ಯೋಗಕ್ಕೂ ಅವಕಾಶ ಮಾಡಿಕೊಡೋ ಬಗ್ಗೆ ಪ್ರಾಮಿಸ್ ಮಾಡಿದರು.

    ಇದಾಗಿ 5-6 ದಿನ ಕಳೆದಿರಬಹುದು ಅಷ್ಟೇ. ಆಗಲೇ ತಾಲಿಬಾನಿಗಳ ಬಣ್ಣ ಬಯಲಾಗತೊಡಗಿದೆ. ಆಫ್ಘನ್ ​ಹಿಡಿತಕ್ಕೆ ಪಡೆದ ಲಗಾಯ್ತಿನಿಂದಲೂ ತಾಲಿಬಾನಿಗಳು ನಡೆಸಿಕೊಂಡುಬಂದಿರೋದು ಹಿಂಸೆ..ರಕ್ತಪಾತವನ್ನೇ.!

    ಪೊಲೀಸ್ ಮುಖ್ಯಸ್ಥನ ಬರ್ಬರ ಹತ್ಯೆ
    ಅಮೆರಿಕಾ ಹಾಗೂ ಮಿತ್ರಪಡೆಗಳ ಜತೆ ಕೈಜೋಡಿಸಿದ ಯಾರ ವಿರುದ್ಧವೂ ಪ್ರತೀಕಾರ ಕೈಗೊಳ್ಳಲ್ಲ ಅಂತಾ ಬಡಾಯಿ ಕೊಚ್ಚಿಕೊಂಡ ತಾಲಿಬಾನಿಗಳು, ಇದೀಗ ಹೇಯ ಕಾರ್ಯಕ್ಕೆ ಕೈಹಾಕಿದ್ದಾರೆ. ಅಮೆರಿಕಾ ಬೆಂಬಲಿತ ಸರ್ಕಾರದಲ್ಲಿ ಬಾದ್​​ಗೀಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರಾಗಿದ್ದ ಹಾಜಿ ಮುಲ್ಲಾ ಅಚಕ್ ​ಝೈರನ್ನ ತಾಲಿಬಾನಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಅಫ್ಘನ್ ಸೇನೆ ಪರ ಹೋರಾಡಿದ ವೀರರಲ್ಲಿ ಪ್ರಮುಖರೆನಿಸಿದ ಹಾಜಿ ಮುಲ್ಲಾರನ್ನ ಕಳೆದ ವಾರವಷ್ಟೇ ವಶಕ್ಕೆ ಪಡೆದಿದ್ದ ತಾಲಿಬಾನಿಗಳು, ಹೇರಾತ್ ಬಳಿ ಬರ್ಬರವಾಗಿ ಕೊಂದು ಹಾಕಿದ್ದಾರೆ. ಈ ಸಂಬಂಧದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಉಗ್ರರು ಶೇರ್ ಮಾಡಿದ್ದಾರೆ.

    60 ವರ್ಷದ ಹಾಜಿ ಮುಲ್ಲಾ ಅಚಕ್​ಝೈರ ಕೈಗಳು ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ ಮಂಡಿಯೂರಿ ಕೂರಿಸಿದ ತಾಲಿಬಾನಿ ಉಗ್ರರು, ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದ ಹಾಜಿ, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಳೆದ ವಾರ ತುರ್ಮೆನಿ ಸಿಸ್ತಾನ್ ಗಡಿ ಪ್ರದೇಶದಲ್ಲಿ ಹಾಜಿರನ್ನ ಹಿಡಿದಿಟ್ಟುಕೊಂಡಿದ್ದ ತಾಲಿಬಾನಿ ಉಗ್ರರು ಒಂದು ವಾರ ಕಾಲ ಅವರನ್ನ ಸೆರೆಮನೆಯಲ್ಲಿಟ್ಟಿದ್ದರು. ಕೊನೆಗೆ ಇದೀಗ ಹಾಜಿ ಮುಲ್ಲಾ ಅಚಕ್​ಝೈ ಅಮಾನುಷ ಹತ್ಯೆ ವಿಡಿಯೋ ವೈರಲ್ ಆಗಿದೆ.

    ನಾಟೋ ಬೆಂಬಲಿಗರೇ ಈಗ ಟಾರ್ಗೆಟ್!
    ಇತ್ತ ಆಫ್ಘನ್ ಪೊಲೀಸ್ ಮುಖ್ಯಸ್ಥನನ್ನ ಭೀಕರವಾಗಿ ಕಗ್ಗೊಲೆಗೈದ ತಾಲಿಬಾನಿಗಳು, ಇನ್ನೊಂದೆಡೆ, ಅಫ್ಘಾನಿಸ್ತಾನ ಸರ್ಕಾರ ಹಾಗೂ ನ್ಯಾಟೋ ಪಡೆಗಳ ಜತೆ ಕೈಜೋಡಿಸಿದ್ದ ಅಫ್ಘನ್​​ ನಾಗರೀಕರನ್ನ ಟಾರ್ಗೆಟ್ ಮಾಡಿದೆ. ದೇಶದ ನಾನಾ ಕಡೆಗಳಲ್ಲಿ ಮನೆ ಮನೆಗಳ ಮೇಲೂ ತಾಲಿಬಾನಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಪ್ರತಿಮನೆಯಲ್ಲೂ ಶೋಧ ನಡೆಸುತ್ತಿರೋ ತಾಲಿಬಾನಿ ಉಗ್ರರು, ಅನುಮಾನ ಬಂದವರನ್ನ ಎಳೆದೊಯ್ಯುತ್ತಿದ್ದಾರೆ. ಹೀಗೆ ಸೆರೆಸಿಕ್ಕವರ ಪ್ರಾಣಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ..!

    ಈ ಬಗ್ಗೆ ಖುದ್ದು ನಾರ್ವೇಯನ್ ಸೆಂಟರ್ ಫಾರ್ ಗ್ಲೋಬಲ್ ಅನಾಲಿಸಿಸ್ ಸಂಸ್ಥೆ ಕೂಡ ಗುಪ್ತಚರ ಮಾಹಿತಿಗಳನ್ನ ಆಧರಿಸಿ ರಿಪೋರ್ಟ್​ ಒಂದನ್ನ ಕೊಟ್ಟಿದೆ. ಈ ಹಿಂದಿನ ಆಫ್ಘಾನಿಸ್ತಾನ ಆಡಳಿತದ ಪರ ಕೆಲಸ ಮಾಡಿದ ದೊಡ್ಡ ಸಂಖ್ಯೆ ಅಫ್ಘನ್ ಜನರೇ ಈ ತಾಲಿಬಾನಿಗಳ ಸದ್ಯದ ಟಾರ್ಗೆಟ್. ಈ ಮಂದಿ ಸ್ವಯಂ ಆಗಿ ಶರಣಾಗತಿ ಆಗದಿದ್ರೆ, ಅಂಥಹವರನ್ನ ಮುಲಾಜಿಲ್ಲದೇ ವಶಕ್ಕೆ ಪಡೆಯೋ ತಾಲಿಬಾನಿಗಳು, ಆನಂತರ ವಿಚಾರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಒಂದೊಮ್ಮೆ ಅಂಥವರು ಸಿಗದೇ ತಪ್ಪಿಸಿಕೊಂಡ್ರೆ, ಕುಟುಂಬ ಸದಸ್ಯರನ್ನೂ ಹಿಂಸಿಸುತ್ತಿದ್ದಾರೆ ನೆತ್ತರಾಸುರ ತಾಲಿಬಾನಿಗಳು. ಈ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆ ವರದಿಯಲ್ಲಿ ಆತಂಕ ವ್ಯಕ್ತಪಡಿಸಿಲಾಗಿದೆ.

    ಪತ್ರಕರ್ತ ಸಿಗದಿದ್ದಾಗ, ಸಂಬಂಧಿಯೇ ಫಿನಿಷ್!
    ಇಷ್ಟಕ್ಕೇ ಬಿಡುತ್ತಿಲ್ಲ ಈ ತಾಲಿಬಾನಿ ಭಯೋತ್ಪಾದಕರು..ಈ ರಕ್ತಪಿಪಾಸುಗಳ ಕಣ್ಣು ಇದೀಗ ಪತ್ರಕರ್ತರ ಮೇಲೂ ಬಿದ್ದಿದೆ. ಜರ್ಮನಿಯಲ್ಲಿ ಕಾರ್ಯನಿರ್ವಹಿಸ್ತಿರೋ ಸ್ಥಳೀಯ ಮೂಲದ ಪತ್ರಕರ್ತನಿಗಾಗಿ ಮನೆಮನೆ ಹುಡುಕಿದ ಉಗ್ರರು, ಕೊನೆಗೆ ಈತ ಸಿಗದೇ ಇದ್ದಾಗ ಸಂಬಂಧಿಕರನ್ನೇ ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಮತ್ತೋರ್ವ ಸಂಬಂಧಿಗೂ ಗಾಯಗಳಾಗಿವೆ. ಉಳಿದ ಸಂಬಂಧಿಕರು ಉಗ್ರರ ಕೈನಿಂದ ತಪ್ಪಿ ಸಿಕೊಳ್ಳುವಲ್ಲಿ ಹೇಗೋ ಯಶಸ್ವಿಯಾಗಿದ್ದಾರೆ.

    ಹಜಾರಿಗಳ ಹತ್ಯಾಕಾಂಡ ನಡೆಸಿದ ರಕ್ಕಸರು
    ಒಂದೆಡೆ, ಪೊಲೀಸ್ ಅಧಿಕಾರಿ ಆಯ್ತು..ಪತ್ರಕರ್ತ ಕೂಡ ಆಯ್ತು.,.ಮುಸ್ಲಿಂರಲ್ಲೇ ಇರೋ ಅಲ್ಪಸಂಖ್ಯಾತ ಪಂಗಡ ಹಜಾರಿಗಳನ್ನೂ ಬಿಟ್ಟಿಲ್ಲ ಈ ತಾಲಿಬಾನಿ ರಕ್ತಬೀಜಾಸುರರು. ಕಳೆದ ತಿಂಗಳು ಘಜ್ನಿ ಪ್ರಾಂತ್ಯದ ಮಾಲಿಸ್ತಾನ ಜಿಲ್ಲೆಯ ಮುಂಡಾರಖ್ತ್ ಗ್ರಾಮಕ್ಕೆ ನುಗ್ಗಿದ ತಾಲಿಬಾನಿ ಉಗ್ರರು, ಮಾರಣಹೋಮ ನಡೆಸಿದ್ದಾರೆ. 6 ಹಜಾರಿಗಳ ಮೇಲೆ ಗುಂಡಿನ ದಾಳಿ ನಡೆಸೋ ಮೂಲಕ ಹತ್ಯೆಗೈದ್ರೆ, ಇನ್ನೋರ್ವನ ಕೈ ಕತ್ತರಿಸಿ ಭೀಕರವಾಗಿ ಕೊಲ್ಲಲಾಘಿದೆ. ಮತ್ತೋರ್ವನನ್ನ ಆತನ ಸ್ಕಾರ್ಫ್ ನಲ್ಲೇ ನೇಣುಬಿಗಿದು ಸಾಯಿಸಲಾಗಿದೆ. ಈ ಹತ್ಯಾಕಾಂಡದಲ್ಲಿ ಒಟ್ಟು 9 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಅಮ್ನಿಸ್ಟಿ ಇಂಟರ್​ನ್ಯಾಷನಲ್ ಸಂಸ್ಥೆ ಮೂಲಕ ತಡವಾಗಿ ಬೆಳಕಿಗೆ ಬಂದಿದೆ.

    ತಾಲಿಬಾನಿ ಉಗ್ರರ ಕೈಲಿದೆ ‘ಬ್ಲಾಕ್​ಲಿಸ್ಟ್’​!
    ಇಷ್ಟು ಮಾತ್ರವಲ್ಲ..ಈ ಹಿಂದಿನ ಅಮರಿಕಾ ಬೆಂಬಲಿತ ಸರ್ಕಾರಕ್ಕೆ ಬೆಂಬಲ ಕೊಟ್ಟವರ ಬ್ಲಾಕ್ ಲಿಸ್ಟ್​ ಒಂದು ತಾಲಿಬಾನಿಗಳ ಕೈಲಿದೆಯಂತೆ. ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸುಮ್ಮನೆ ಬಿಡೋದಿಲ್ಲ ಅಂತಾ ಪಣತೊಟ್ಟಿರೋ ತಾಲಿಬಾನಿ ಅಸುರರು, ಹಂತಹಂತವಾಗಿ ಇವರನ್ನ ಪತ್ತೆಹಚ್ಚಿ ಕೊಲ್ಲೋ ಕೆಲಸ ಮಾಡುತ್ತಿದ್ದಾರೆ. ತಾಲಿಬಾನಿಗಳ ಸೇಡಿನ ದಾಹಕ್ಕೆ ಸಾಮೂಹಿಕ ಹತ್ಯಾಕಾಂಡಗಳು ಜರುಗೋ ಭೀತಿಯನ್ನ ಅಂತಾರಾಷ್ಟ್ರೀಯ ಸಂಸ್ಥೆಗಳೇ ವ್ಯಕ್ತಪಡಿಸುತ್ತಿವೆ.

    ತಾಲಿಬಾನ್​​ನಲ್ಲಿ ಹಿಂಸೆಯ ಬೆಂಕಿ ಧಗಧಗಿಸುತ್ತಿದೆ. ಯಾವ ರೋಡ್ ನಲ್ಲಿ​ ನೋಡಿದ್ರೂ ತಾಲಿಬಾನಿಗಳ ರಣಕೇಕೆ. ಬಂದೂಕಿನ ನಳಿಕೆ ಮೇಲೆ ಉಗ್ರರು ಇಟ್ಟ ಕೈ ಕೆಳಗೆ ಜಾರಿಲ್ಲ. ಇವರ ಹಿಂಸಾ ಉನ್ಮಾದದಲ್ಲಿ ಮಹಿಳೆಯರು-ಮಕ್ಕಳು ಎಂಬ ಅನುಕಂಪವೂ ಇಲ್ಲ. ಕಟುಕನ ಕೈಗೆ ಸಿಕ್ಕ ಕುರಿ ಯಂತಾಗಿದೆ ಅಫ್ಘಾನಿಗಳ ಬದುಕು.

    ಎತ್ತ ನೋಡಿದರೂ ರಕ್ತ..ಗುಂಡಿನ ಸದ್ದು..ಹಿಂಸೆ!
    ಬೆಕ್ಕಿನ ವೇಷ ತೊಟ್ಟ ತಾಲಿಬಾನಿಗಳ ಹುಲಿ ನಿಜ ಅವತಾರ ಒಂದೊಂದಾಗೇ ಬಯಲಿಗೆ ಬರುತ್ತಿದೆ. ಅಫ್ಘಾನಿಸ್ತಾನಕ್ಕೆ ಕೋಟಿ ಕೋಟಿ ಡಾಲರ್ ನೆರವನ್ನ ನೀಡಿದ ಭಾರತವನ್ನೂ ಬಿಟ್ಟಿಲ್ಲ ಈ ನಮಕ್​ ಹರಾಮ್​ ಗಳು. ಅಫ್ಘನ್​​ನಲ್ಲಿ ದೊಡ್ಡ ಡ್ಯಾಂ ನಿರ್ಮಿಸಿಕೊಟ್ಟ ಭಾರತ, ಆ ದೇಶಕ್ಕೆ ಕೋಟ್ಯಾಂತರ ಡಾಲರ್ ಮೌಲ್ಯದ ಸೇನಾ ಹೆಲಿಕಾಪ್ಟರ್​ಗಳು ಸೇರಿದಂತೆ ಅಪಾರ ಸಹಾಯ ಮಾಡಿದೆ. ಆದ್ರೂ ಭಾರತದ ಮೇಲೆ ಸೇಡಿಗೆ ಮುಂದಾಗಿರೋ ತಾಲಿಬಾನಿಗಳು, ಇದೀಗ ಭಾರತದ ರಾಯಭಾರ ಕಚೇರಿಯನ್ನೇ ಪುಡಿಗಟ್ಟಿದ್ದಾರೆ.

    ಕಂದಹಾರ್ ಹಾಗೂ ಹೇರತ್​​ನಲ್ಲಿರೋ ಭಾರತೀಯ ಧೂತವಾಸ ಕಚೇರಿಗಳ ಮೇಲೆ ತಾಲಿಬಾನಿ ಉಗ್ರರು ದಾಳಿ ನಡೆಸಿದ್ದಾರೆ. ಅಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ ಉಗ್ರರು, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಇಷ್ಟಲ್ಲದೇ. ರಾಯಭಾರ ಕಚೇರಿ ಎದುರು ನಿಲ್ಲಿಸಲಾಗಿದ್ದ ಕಾರ್​ಗಳನ್ನೂ ಉಗ್ರರು ಹೊತ್ತೊಯ್ದಿದ್ದಾರೆ. ಎರಡು ದಿನಗಳ ಹಿಂದಷ್ಟೇ ದೆಹಲಿ ಸಂಪರ್ಕಿಸಿದ್ದ ತಾಲಿಬಾನಿಗಳು, ಕಾಬೂಲ್ ರಾಯಭಾರ ಕಚೇರಿ ತೆರವುಗೊಳಿಸದಂತೆ ಮನವಿ ಮಾಡಿದ್ದರು. ಇದೀಗ ತಾಲಿಬಾನಿಗಳ ಕಳ್ಳಾಟ ಬಯಲಾಗಿದೆ.

    ಇನ್ನೊಂದೆಡೆ, ತಾಲಿಬಾನ್ ಆಡಳಿತ ಅಂದ್ರೆ ಏನು ಅನ್ನೋದಕ್ಕೆ ಸಾಕ್ಷಿಯಾಗಿದೆ ಆಫ್ಘಾನಿಸ್ತಾನ. ಇಲ್ಲಿ ತಾಲಿಬಾನೇ ಸರ್ವಸ್ವ. ತಾಲಿಬಾನಿಗಳ ಎದುರಾಡಿದ್ರೆ ಮುಗೀತು ಕತೆ. ರಸ್ತೆಗಳಲ್ಲಿ ಸಾಗೋ ಸಾಲು ವಾಹನಗಳು.,,ಇದರಲ್ಲಿ ಏಳೆಂಟು ಉಗ್ರರ ಕೈಲಿ ಗನ್. ಬಂದೂಕಿನಿಂದ ಮನ ಬಂದಂತೆ ಗುಂಡು..!

    ಆಫ್ಘಾನ್​​ನ ರಸ್ತೆರಸ್ತೆಗಳಲ್ಲೂ ತಾಲಿಬಾನ್ ಉಗ್ರರದ್ದೇ ದರ್ಬಾರ್.! ಅಮೆರಿಕಾ ಸೇನೆಗೆ ಬೆಂಬಲ ಕೊಟ್ಟವರನ್ನು ತಾಲಿಬಾನಿಗಳು ಘನ ಘೋರವಾಗಿ ಹಿಂಸಿಸುತ್ತಿದ್ದಾರೆ. ಆಫ್ಘನ್ ಸರ್ಕಾರ, ನಾರ್ದನ್ ಅಲಿಯನ್ಸ್ ಪರ ನಿಂತವರು..ತಾಲಿಬಾನಿಗಳ ವಿರುದ್ಧ ಬೀದಿಗಳಿದು ಹೋರಾಟ ಮಾಡಿದವರ ವಿರುದ್ಧ ತಾಲಿಬಾನಿಗಳು ಅಮಾನುಷವಾಗಿ ವರ್ತಿಸಿದ್ದಾರೆ. ರಸ್ತೆರಸ್ತೆಗಳಲ್ಲೇ ಶೂಟ್ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ, ವಿರೋಧಿಗಳನ್ನ ತಾಲಿಬಾನಿ ಉಗ್ರರು ಮನಬಂದಂತೆ ಥಳಿಸೋ ಮೂಲಕ ರಕ್ಕಸತನ ಮೆರೆದಿದ್ದಾರೆ. ಮಹಿಳೆಯರು, ಮಕ್ಕಳು ಎಂಬುದನ್ನೂ ನೋಡದೇ ಇಚ್ಛಾನುಸಾರ ಬಡಿದಿದ್ದಾರೆ ತಾಲಿಬಾನಿಗಳು.

    ಜತೆಗೆ ಕೇಳದ ಎರಡು ದಿನಗಳಿಂದ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಹೋರಾಟ ಕಾವೇರಿದೆ. ಹಲವೆಡೆ ತಾಲಿಬಾನ್ ಧ್ವಜ ತೆಗೆದು ಆಫ್ಘಾನಿಸ್ತಾನದ ಧ್ವಜ ಹಾರಿಸಲಾಗಿದೆ. ಅಲ್ಲದೇ. ಕಾರು, ಬೈಕ್​ಗಳಲ್ಲೂ ಇದೇ ರೀತಿ ಧ್ವಜಗಳು ಕಂಡುಬಂದಿವೆ. ಮೊದಲೇ ಕ್ರೂರಿಗಳಾದ ತಾಲಿಬಾನ್ ಇದನ್ನ ನೋಡಿದ್ರೆ ಸುಮ್ನೆ ಬಿಟ್ಟಾರೆಯೇ? ಇನ್ನ, ವಿರೋಧಿಗಳ ಮೇಲೆ ಪ್ರತಿಕಾರ ಕೈಗೊಳ್ತಿರೋ ತಾಲಿಬಾನಿಗಳು, ಬಹಿರಂಗವಾಗಿ ಮಸಿ ಬಳಿಯುತ್ತಿದ್ದಾರೆ.

    ಮನುಷ್ಯರಿಗೆ ಮಾತ್ರವಲ್ಲ, ಮಹಿಳೆಯರು ಕಾಣಿಸಿಕೊಂಡ ಜಾಹೀರಾತುಗಳಿಗೂ ಮಸಿಯೇ ಗತಿ ಎಂಬಂತಾಗಿದೆ. ಅಂಗಡಿ-ಮುಂಗಟ್ಟುಗಳ ಎದುರು ಇದ್ದ ಮಹಿಳಾ ರೂಪದರ್ಶಿಯರ ಮುಖವನ್ನ ಕೂಡ ಕವರ್ ಮಾಡಲಾಗುತ್ತಿದೆ. ಹೇಗಾದ್ರೂ ಮಾಡಿ ದೇಶದಿಂದ ತಪ್ಪಿಸಿಕೊಂಡ್ರೆ ಸಾಕು ಅಂತಾ ಏರ್ಪೋರ್ಟ್​ಗೆ ಬಂದ್ರೆ, ಎಲ್ಲೂ ನೆಮ್ಮದಿ ಕೊಟ್ಟಿಲ್ಲ ಈ ಕಿರಾತಕರು. ಅಲ್ಲೂ ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಇದಲ್ಲದೇ, ಏರ್ಪೋರ್ಟ್​ ಕ್ಲೋಸ್ ಮಾಡಿರೋ ಉಗ್ರರು, ಇಲ್ಲಿಗೆ ಬಂದ ಜನ ಎತ್ತಲೂ ಸುಳಿಯದಂತೆ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದ್ದಾರೆ. ಏರ್ಪೋರ್ಟ್​ನಲ್ಲೇ ಉಳಿದ ಸಹಸ್ರಾರು ಮಂದಿ ವಿಮಾನದ ನಿರೀಕ್ಷೆ ಯಲ್ಲಿ ಪ್ರಾಣ ಕೈಲಿಟ್ಟುಕೊಂಡಿದ್ದಾರೆ.

    ಸದ್ಯ ತಾಲಿಬಾನಿಗಳ ಉಪಟಳದಿಂದ ರೋಸಿಹೋದ ಯುವತಿಯರು, ಬಾಲಕಿಯರು ಕಣ್ಣೀರು ಸುರಿಸಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಕೊಡೋ ಅಭಯ ಕೊಟ್ಟ ತಾಲಿಬಾನಿಗಳು, ಇದೀಗ ಶರಿಯರ್ ಕಾನೂನು ಜಾರಿ ಬಗ್ಗೆ ಮಾತನಾಡುತ್ತಿರೋದು ಭೀತಿ ಹುಟ್ಟು ಹಾಕಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ಎಂಬುದು ಮರೀಚಿಕೆಯಾಗಿದೆ. ಅಫ್ಘಾನಿಸ್ತಾನದ ಜನರ ಬದುಕು ಅಸಹನೀಯವಾಗಿದೆ. ತಾಲಿಬಾನಿಗಳ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನ ಅಕ್ಷರಶಃ ನರಕ ವಾಗಿದೆ. ಶಾಂತಿ, ಸಮಾನತೆ ಬಗ್ಗೆ ಬೊಗಳೆ ಬಿಟ್ಟ ತಾಲಿಬಾನಿಗಳು, ಇದೀಗ 1996ರಲ್ಲಿ ಅನುಸರಿಸಿದ ಹಳೇ ನೀತಿಗೇ ಜೋತು ಬಿದ್ದಿದ್ದಾರೆ. ಧರ್ಮಾಂಧತೆ ಎದುರು ಮನುಷ್ಯತ್ವ ಮರೆಯಾಗಿದೆ.

    ವಿನಾಶಕಾರಿ ಶಕ್ತಿಗಳ ಪ್ರಾಬಲ್ಯ ಕೆಲಸಮಯದವರೆಗೆ ಮಾತ್ರ. ಉಗ್ರವಾದ ಸಿದ್ಧಾಂತ ಯಾವತ್ತೂ ಶಾಶ್ವತವಲ್ಲ..ಇದು ಪ್ರಧಾನಿ ನರೇಂದ್ರ ಮೋದಿ, ತಾಲಿಬಾನ್ ಆಡಳಿತ ಬಗ್ಗೆ ಕಕೊಟ್ಟ ಫಸ್ಟ್ ರಿಯಾಕ್ಷನ್. ಇದು ಭಾರತ ಸರ್ಕಾರದ ದನಿ ಕೂಡ ಹೌದು. ತಾಲಿಬಾನಿಗಳು ನಿಧಾನವಾಗಿ ಅಸಲೀ ಮುಖ ತೋರುತ್ತಿದ್ದಾರೆ. ಕೆಲರಾಷ್ಟ್ರಗಳ ಮಸಲತ್ತಿನಿಂದಾಗಿ, ಆಫ್ಘಾನಿಸ್ತಾನದ ಚುಕ್ಕಾಣಿ ಹಿಡಿದ ತಾಲಿಬಾನಿಗಳ ನೆತ್ತರ ದಾಹ, ಅಫ್ಘಾನಿಸ್ತಾನವನ್ನ ನರಕಕೂಪವನ್ನಾಗಿಸಿದೆ. ತಾಲಿಬಾನಿಗಳ ರಣಹಿಂಸೆಗೆ ಸಾಮಾನ್ಯ ಜನ ತತ್ತರಿಸಿ ಹೋಗಿ ದ್ದಾರೆ. ಉದ್ಯೋಗ ಸೇರಿದಂತೆ ನಾನಾ ಕಾರ್ಯನಿಮಿತ್ತ ಅಫ್ಘಾನ್​ಗೆ ತೆರಳಿದ್ದ ಭಾರತೀಯರು ಸೇರಿದಂತೆ ಹಲವು ದೇಶಗಳ ಜನ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸಕ್ಕೆ ಖುದ್ದು ಅಫ್ಘನ್ ಮಹಿಳೆಯರೇ ರೊಚ್ಚಿಗೆದ್ದಿದ್ದಾರೆ. ತಾಲಿಬಾನಿಗಳ ಗನ್​ಗಳಿಗೂ ಬೆದರದ ಈ ನಾರಿಯರು, ಬೀದಿಗಿಳಿದು ಮಾಡು ಇಲ್ಲಾ ಮಡಿ ಎಂಬಂತೆ ಹೋರಾಟ ನಡೆಸಿದ್ದಾರೆ.

    ಇನ್ನ, ತಾಲಿಬಾನ್ ಮೇಲುಗೈ ಬಗ್ಗೆ ಪರೋಕ್ಷ ಪ್ರಸ್ತಾಪಿಸಿರೋ ಪ್ರಧಾನಿ ಮೋದಿ, ವಿನಾಶಕಾರಿ ಶಕ್ತಿಗಳು ಮತ್ತು ಉಗ್ರವಾದದ ಮೂಲಕ ಸಾಮ್ರಾಜ್ಯ ಸ್ಥಾಪನೆ ಸಿದ್ಧಾಂತ ಹೊಂದಿದ ಜನರ ಪ್ರಾಬಲ್ಯ ಕೆಲ ಸಮಯದವರೆಗೆ ಮಾತ್ರ ಎಂದಿದ್ದಾರೆ. ಮಾನವೀಯತೆಯನ್ನೂ ಎಂದೂ ಮಟ್ಟ ಹಾಕಲು ಸಾಧ್ಯವಿಲ್ಲದ ಕಾರಣ ಇಂಥ ಶಕ್ತಿಗಳ ಅಸ್ತಿತ್ವ ಶಾಶ್ವತವಾಗಿರೋದಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ತಾಲಿಬಾನ್ ಉಗ್ರರ ಯಶಸ್ಸು ತಾತ್ಕಾಲಿಕ ಮಾತ್ರ ಎಂದು ಪರೋಕ್ಷವಾಗಿ ಪ್ರಸ್ತಾಪಿಸೋದ್ರೊಂದಿಗೆ ಪ್ರಧಾನಿ ಮೋದಿ, ವಿನಾಶಕಾರಿ ಶಕ್ತಿಗಳ ವಿರುದ್ಧ ನಿಲುವು ತಳೆದಿದ್ದಾರೆ.

    ಈವರೆಗೂ ತಾಲಿಬಾನ್ ಆಡಳಿತ ಬಗ್ಗೆ ಅಧಿಕೃತವಾಗಿ ಭಾರತ ಏನನನ್ನೂ ಹೇಳದೇ ಇದ್ರೂ, ಉಗ್ರವಾದಿಗಳ ಯಶಸ್ಸನ್ನ ಹಿಂದೂಸ್ತಾನ ಮಾನ್ಯ ಮಾಡೋ ಸಾಧ್ಯತೆ ಕಡಿಮೆ. ಈ ಹಿಂದಿನ ಆಫ್ಘಾನಿಸ್ತಾನ ಸರ್ಕಾರ ಆಡಳಿತ ವೇಳೆ ಅಲ್ಲಿನ ಅಭಿವೃದ್ಧಿಗೆ ಕೈಜೋಡಿಸಿದ್ದ ಭಾರತ, ಕೋಟ್ಯಾಂತರ ಡಾಲರ್ ಮೊತ್ತದ ನಾನಾ ಕಾಮಗಾರಿಗಳನ್ನ ಕೈಗೊಂಡಿದೆ. ಅಲ್ಲಿನ ಮಹಿಳೆಯರು ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭಾರತ ಭಾರಿಉತ್ತೇಜನ ಕೊಟ್ಟಿದೆ. ಪ್ರತಿ ವರ್ಷ 1000 ಮಂದಿಗೆ ಸ್ಕಾಲರ್ ಶಿಪ್ ನೀಡೋ ಮೂಲಕ ಭಾರತದಲ್ಲೇ ಉಚಿತ ಶಿಕ್ಷಣ ನೀಡಲಾಗುತ್ತಿದೆ.

    ಅಫ್ಘಾನಿಸ್ತಾನ ಪ್ರಜೆಗಳಿಗೆ ಭಾರತ ಇಷ್ಟೆಲ್ಲಾ ಸಹಾಯಹಸ್ತ ಚಾಚಿದ್ರೂ, ತಾಲಿಬಾನಿಗಳಿಗೆ ನಿಯತ್ತು ಎಂಬುದಿಲ್ಲ. ಅಫ್ಘನ್​​ನಲ್ಲಿರೋ ಭಾರತದ ರಾಜತಾಂತ್ರಿಕ ಕಚೇರಿಗಳ ಮೇಲೂ ತಾಲಿಬಾನಿ ಅಸುರರು ದಾಳಿ ನಡೆಸಿದ್ದಾರೆ. ಒಟ್ಟಾರೆ, ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸೋ ಶಾಂತಿ ನೆಲೆಸುವಂತೆ ಮಾಡೋ ತಾಳಿಬಾನ ಭರವಸೆ ಆರಂಭದಲ್ಲೇ ಹುಸಿಯಾಗಿದೆ. ಮುಂದಿನ ದಿನಗಳ್ಲಲಿ ಇನ್ನೂ ಎಂತೆಂಥಾ ಹಿಂಸೆಗಳನ್ನ ಜಗತ್ತು ಸಹಿಸಿಕೊಳ್ಳಬೇಕಿದ್ಯೋ?

    ಧರ್ಮಾಂಧತೆ ಆಧಾರದ ಮೇಲೆಯೇ ಆಫ್ಘಾನಿಸ್ತಾನ ವಶಪಡಿಸಿಕೊಂಡ ತಾಲಿಬಾನಿಗಳು ಹೇಳೋದು ಒಂದು..ಮಾಡೋದು ಒಂದು ಎಂಬುದು ದೃಢಪಟ್ಟಿದೆ. ಬಾಯಲ್ಲಿ ಶಾಂತಿ, ಸಮಾನತೆ ಮಂತ್ರ ಪಠಿಸುತ್ತಾ, ಕೈಲಿರೋ ಗನ್ ಗೂ ಕೆಲಸ ಕೊಡುತ್ತಿದ್ದಾರೆ. ಗುಂಡಿನ ಸುರಿಮಳೆ ಗೈಯುಯುತ್ತಿದ್ದಾರೆ. ವಿರೋಧಿಗಳನ್ನ, ಮಹಿಳೆಯರನ್ನ ಬೆಂಬಿಡದೇ ಬಲಿ ಹಾಕುತ್ತಿದ್ದಾರೆ ನೆತ್ತರಪಿಪಾಸು ಉಗ್ರರು. ಶಾಂತಿ ಪೋಸ್ ಕೊಡುತ್ತಾ ತಮ್ಮ ಮೂಲ ಸ್ವರೂಪ ಎನಿಸಿದ ಭಯೋತ್ಪಾದನೆ ಬೀಜ ಬಿತ್ತುತ್ತಿದೆ ಈ ತಾಲಿಬಾನಿ ಸೈತಾನ್ ಪಡೆ. ಇದಕ್ಕೇ ನಮ್ಮಲ್ಲೊಂದು ನಾಣ್ಣುಡಿ ಇದೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ.. ಇದು ತಾಲಿಬಾನ್​ ಉಗ್ರರಿಗೆ ಹೇಳಿಮಾಡಿಸಿದ ನುಡಿಗಟ್ಟು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts