More

    ನಾನು ಆಕಸ್ಮಿಕ ಗಾಯಕ… ಎಂದು ಹೇಳಿಕೊಳ್ಳುತ್ತಿದ್ದ ಎಸ್​ಪಿಬಿ! ಸುಗಮವಾಗಿರಲಿಲ್ಲ ಗಾನ ಗಾರುಡಿಗನ ಗಾಯನದ ಹಾದಿ…

    ಭಾರತ ಕಂಡ ಶ್ರೇಷ್ಠ ಗಾಯಕ, ಗಾನ ಗಾರುಡಿಗ ಎಸ್​ಪಿ ಬಾಲಸುಬ್ರಮಣ್ಯಂ ಅವರು ನಮ್ಮನ್ನಗಲಿ ಇದೇ ಸೆ. 25ಕ್ಕೆ ಎರಡು ವರ್ಷ ಗತಿಸಲಿದೆ. ಸ್ವರ ಮಾಂತ್ರಿಕ ಎಸ್​ಪಿಬಿ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಸಾವಿರಾರು ಹಾಡುಗಳ ಮೂಲಕವೇ ಎಲ್ಲರ ನಡುವೆ ಎಂದಿಗೂ ಜೀವಂತವಾಗಿರಲಿದ್ದಾರೆ. ದಿಗ್ಗಜ ಗಾಯಕ ಎಸ್​ಪಿಬಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಕುರಿತಾದ ಒಂದು ವಿಶೇಷ ಲೇಖನ ಇಲ್ಲಿದೆ.

    ಎಸ್​ಪಿಬಿ ಹೆಸರೇಳಿದರೆ ಸಾಕು ಮೊದಲು ತಲೆಗೆ ಬರುವುದೇ ಅವರ ಸುಮಧರ ಕಂಠದ ಹಾಡುಗಳು. ಅವರ ಹಾಡನ್ನು ಮೆಚ್ಚದವರೇ ಇಲ್ಲ. ಸ್ಟಾರ್​ ನಟರಿಗೆ ಅವರದ್ದೇ ಧ್ವನಿಗೆ ಹೋಲಿಕೆಯಾಗುವಂತೆ ಹಾಡುತ್ತಿದ್ದ ಏಕೈಕ ಗಾಯಕ ಅಂದರೆ ಅದು ಎಸ್​ಪಿಬಿ. ಅಲ್ಲದೆ, ಯಾವುದೇ ಸಂಗೀತ ನಿರ್ದೇಶಕರು ಹೊಸ ಹಾಡಿನೊಂದಿಗೆ ಯಾವುದಾದರೂ ಪ್ರಯೋಗ ಮಾಡಬೇಕೆಂದರೆ, ಅವರ ತಲೆಗೆ ಮೊದಲು ಬರುತ್ತಿದ್ದೆ ಎಸ್​ಪಿಬಿ ಹೆಸರು. ಎಲ್ಲ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ದೀರ್ಘಕಾಲ ತಮ್ಮ ಕಂಚಿನ ಕಂಠದ ಮೂಲಕ ನಮ್ಮನ್ನು ರಂಜಿಸಿದ ಎಸ್​ಪಿಬಿ ಯಾವಾಗಲೂ ತಮ್ಮನ್ನು ತಾವು ಆಕಸ್ಮಿಕ ಗಾಯಕನೆಂದು ಕರೆದುಕೊಳ್ಳುತ್ತಿದ್ದರು. ಇದು ಅಚ್ಚರಿಯಾದರೂ ಸತ್ಯವೂ ಹೌದು.

    ಅಪ್ಪನ ಆಸೆ ನೆರವೇರಿಸುವುದೇ ಗುರಿ
    ಎಸ್​ಪಿಬಿ ಅವರ ಸಹೋದರಿ ಹಾಗೂ ಗಾಯಕಿಯು ಆಗಿರುವ ಎಸ್.ಪಿ. ಶೈಲಜಾ, ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದನ್ನು ನಾವಿಲ್ಲಿ ಮೆಲುಕು ಹಾಕಬಹುದು. ಶೈಲಜಾ ಅವರು ಮತ್ತು ಅವರ ಸಹೋದರ ಎಸ್​ಪಿಬಿ ಹೊರತುಪಡಿಸಿ, ಅವರ ಕುಟುಂಬದ ಎಲ್ಲ ಸದಸ್ಯರು ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದವರು. ತನಗೆ ಸಂಗೀತ ಗುರುಗಳಿಲ್ಲ ಮತ್ತು ಗಾಯಕನಾಗುವ ಕನಸೂ ಇಲ್ಲ ಎಂದು ಎಸ್‌ಪಿಬಿ ಆಗಾಗ ಹೇಳುತ್ತಿದ್ದರಂತೆ. ಇಂಜಿನಿಯರ್​ ಆಗಿ ಸರ್ಕಾರಿ ಕೆಲಸ ಗಿಟ್ಟಿಸಬೇಕೆಂಬ ಅಪ್ಪನ ಆಸೆಯನ್ನು ನೆರವೇರಿಸುವುದೇ ನನಗಿರುವ ಒಂದೇ ಒಂದು ಕನಸು ಎಂದು ಎಸ್​ಪಿಬಿ ಹೇಳುತ್ತಿದ್ದರು ಎಂದು ಶೈಲಜಾ ಅವರು ಎಸ್​ಪಿಬಿ ಮಾತುಗಳನ್ನು ಸಂದರ್ಶನದಲ್ಲಿ ನೆನಪಿಸಿದರು.

    ಗಾಯನದ ಮೇಲೆ ಒಲವು ಇರಲಿಲ್ಲ
    ಅನಂತಪುರದ (ಆಂಧ್ರಪ್ರದೇಶ) ಜೆಎನ್‌ಟಿಯು ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಸ್‌ಪಿಬಿ ಅವರ ಸಹಪಾಠಿಯಾಗಿದ್ದ ಬೆಂಗಳೂರಿನ ನಿವಾಸಿ ಕೆಡಿಪಿ ರಾವ್ ಸಹ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾಲೇಜು ದಿನಗಳಲ್ಲಿ ಎಸ್​ಪಿಬಿ ಉತ್ತಮ ವಿದ್ಯಾರ್ಥಿಯಾಗಿದ್ದರಂತೆ. ಆದರೆ, ಗಾಯನ ಕುಟುಂಬದಿಂದ ಬಂದವರಾದರೂ ಹಾಡುಗಾರಿಕೆಯತ್ತ ಅವರು ಒಲವು ತೋರುತ್ತಿರಲಿಲ್ಲವಂತೆ.

    ದಿಕ್ಕು ಬದಲಿಸಿದ ಅನಾರೋಗ್ಯ
    ಜೆಎನ್‌ಟಿಯು ಕಾಲೇಜು ದಿನಗಳಲ್ಲಿ ಅಲ್ಪಕಾಲದ ಅನಾರೋಗ್ಯದ ಕಾರಣ ಎಸ್​ಪಿಬಿ ಅವರು ತನ್ನ ಅಧ್ಯಯನವನ್ನು ಒಂದು ವರ್ಷ ಕಾಲ ನಿಲ್ಲಿಸಬೇಕಾಯಿತು. ಈ ಸಮಯದಲ್ಲಿ ಅವರು ವಿವಿಧ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ನೆಲ್ಲೂರು ಜಿಲ್ಲೆಯ ಗುಡೂರಿನ ಕಾಳಿದಾಸ ಕಲಾನಿಕೇತನದಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಎಸ್​ಪಿಬಿ ಅವರಿಗೆ ಸಿಕ್ಕಿತು. ಈ ವೇಳೆ ಅವರು ಆ ಸಮಯದಲ್ಲಿ ತುಂಬಾ ಖ್ಯಾತಿ ಪಡೆದಿದ್ದ ದಿಗ್ಗಜ ಗಾಯಕಿ ಎಸ್​. ಜಾನಕಿ ಅವರಿಂದ ಎರಡನೇ ಬಹುಮಾನವನ್ನು ಸ್ವೀಕರಿಸಿದರು.

    ಎಸ್​. ಜಾನಕಿ ಮಾತಿನ ಪ್ರಭಾವ
    ಪ್ರಥಮ ಬಹುಮಾನ ಪಡೆದವರಿಗಿಂತ ನಿಮ್ಮ ಗಾಯನ ಚೆನ್ನಾಗಿತ್ತು. ನೀವು ಏಕೆ ಸಿನಿಮಾಗಳಲ್ಲಿ ಹಾಡಬಾರದು ಎಂದು ಮೊದಲ ಬಾರಿಗೆ ಜಾನಕಿ ಅವರು ಎಸ್​ಪಿಬಿ ಅವರನ್ನು ಕೇಳಿದಾಗ, ನಾನು ಸಂಗೀತದಲ್ಲಿ ಯಾವುದೇ ತರಬೇತಿ ಪಡೆದಿಲ್ಲ ಎಂದು ಹೇಳಿ ಎಸ್‌ಪಿಬಿ ನಕ್ಕಿದ್ದರು. ಈ ವೇಳೆ ಜಾನಕಿ ಅವರು ತಮ್ಮನ್ನೇ ಉದಾಹರಣೆಯಾಗಿ ಕೊಟ್ಟು, ನಾನು ಕೂಡ ತುಂಬಾ ಕಡಿಮೆ ತರಬೇತಿ ಪಡೆದಿದ್ದೇನೆ. ಆದರೂ, ನಾನು ಗಾಯಕಿ ಆಗುವುದನ್ನು ತಡೆಯಲಿಲ್ಲ ಅದರಿಂದ ಸಾಧ್ಯವಾಗಲಿಲ್ಲ ಎನ್ನುವ ಮೂಲಕ ಎಸ್​ಪಿಬಿ ಅವರನ್ನು ಪ್ರೋತ್ಸಾಹಿಸಿದರು. ಬಹುಶಃ ಜಾನಕಿ ಅವರು ಹೇಳಿದ ಮಾತುಗಳನ್ನು ಎಸ್​ಪಿಬಿ ಅವರು ಆಗ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಅವರು ಗಾಯಕರಾದರು ಎಂದು ಹೇಳಲಾಗಿದೆ.

    ಗಾಯನವನ್ನೇ ತ್ಯಜಿಸಲು ಮುಂದಾಗಿದ್ದರು
    ಎಸ್​ಪಿಬಿ ಅವರು ತಮ್ಮ ಇಂಜಿನಿಯರಿಂಗ್ ಕೋರ್ಸ್ ಅನ್ನು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಪುನರಾರಂಭಿಸಿದರು. ಇದು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಹಲವಾರು ಸಂಗೀತ ನಿರ್ದೇಶಕರನ್ನು ಭೇಟಿ ಮಾಡಲು ಅವಕಾಶ ನೀಡಿತು. ಆದರೆ, ಆ ಸಮಯದಲ್ಲಿ ಬಹುತೇಕ ಸಂಗೀತ ನಿರ್ದೇಶಕರು ಎಸ್‌ಪಿಬಿ ಅವರ ಧ್ವನಿ “ಪ್ರಬುದ್ಧವಾಗಿಲ್ಲ” ಎಂದು ತಿರಸ್ಕರಿಸಿದರು. ಸುಮಾರು ಎರಡು ವರ್ಷಗಳ ಕಾಲ ಸಂಗೀತ ಸ್ಟುಡಿಯೋಗಳನ್ನು ಸುತ್ತಿದ ನಂತರ, ಎಸ್​ಪಿಬಿ ಗಾಯನವನ್ನೇ ತ್ಯಜಿಸಲು ನಿರ್ಧರಿಸಿದ್ದರು. ಆದರೆ, ವಿಧಿಯ ಯೋಜನೆಯೇ ಬೇರೆ ಇತ್ತು.

    ಹೊಸ ತಿರುವು ಕೊಟ್ಟ ಸಂಗೀತ ಸ್ಪರ್ಧೆ
    ಒಮ್ಮೆ ಆಂಧ್ರ ಸಾಮಾಜಿಕ ಸಾಂಸ್ಕೃತಿಕ ಸಂಘವು ಸಂಗೀತ ಸ್ಪರ್ಧೆಯನ್ನು ಆಯೋಜಿಸಿತ್ತು, ಅಲ್ಲಿ ಪ್ರಮುಖ ಸಂಗೀತ ಮಾಂತ್ರಿಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಎಸ್‌ಪಿಬಿ ಅವರ ಸಂಗೀತ ಪ್ರತಿಭೆಯ ಬಗ್ಗೆ ತಿಳಿದಿದ್ದ ಅವರ ರೂಮ್​ಮೇಟ್​ ಮುರಳಿ, ಎಸ್‌ಪಿಬಿ ಹೆಸರನ್ನು ರಹಸ್ಯವಾಗಿ ಸ್ಪರ್ಧೆಯಲ್ಲಿ ದಾಖಲಿಸಿದರು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಎಸ್​ಪಿಬಿ ಅವರನ್ನು ಒತ್ತಾಯಿಸಿದರು. ಸ್ಪರ್ಧೆಯ ನಿಯಮದ ಪ್ರಕಾರ ಗಾಯಕರು ತಮ್ಮದೇ ಸಂಗೀತ ಸಂಯೋಜನೆಗಳನ್ನು ಅಂದರೆ, ಸಂಗೀತ ಮತ್ತು ಸಾಹಿತ್ಯ ಎರಡನ್ನೂ ಪ್ರಸ್ತುತಪಡಿಸಬೇಕಿತ್ತು. ಇದು ಎಸ್‌ಪಿಬಿಗೆ ತನ್ನನ್ನು ತಾನು ಮರುಶೋಧಿಸಿಕೊಳ್ಳುವ ಅವಕಾಶವನ್ನು ನೀಡಿತು. ವರ್ಣಮಾಲೆಯ ಪ್ರಕಾರ ಸ್ಪರ್ಧೆಯಲ್ಲಿ ಎಸ್​ಪಿಬಿ ಮೊದಲು ಹಾಡಿದರು. ಬಳಿಕ ಪ್ರೇಕ್ಷಕರ ಗ್ಯಾಲರಿಗೆ ಬಂದು ಕುಳಿತು ಇತರೆ ಸ್ಪರ್ಧಿಗಳ ಹಾಡುಗಳನ್ನು ಕೇಳುತ್ತಿರುವಾಗ ಓರ್ವ ವ್ಯಕ್ತಿ ಎಸ್​ಪಿಬಿ ಬಳಿ ಬಂದು ನಮ್ಮ ಸಿನಿಮಾದಲ್ಲಿ ಹಾಡುವಿರಾ ಎಂದು ಕೇಳಿದರು. ಈ ವೇಳೆ ಎಸ್​ಪಿಬಿ ತಮ್ಮನ್ನೇ ನಂಬಲಾಗದೇ ಅವರೆಡೆಗೆ ನಗು ಬೀರಿದರು. ಅಂದಹಾಗೆ ಎಸ್​ಪಿಬಿ ಅವರನ್ನು ಕೇಳಿದ ವ್ಯಕ್ತಿ ಬೇರೆ ಯಾರು ಅಲ್ಲ, ಸಂಗೀತ ನಿರ್ದೇಶಕ ಎಸ್​.ಪಿ. ಕೋದಂಡಪಾಣಿ.

    ಮೊದಲ ಆಡಿಷನ್​ ವಿಫಲ
    ಅಲ್ಲಿಯೇ ಎಸ್‌ಪಿಬಿ ಅವರನ್ನು ಕೆಲವು ದಿನಗಳ ನಂತರ ಆಡಿಷನ್‌ಗೆ ಬರುವಂತೆ ಕೊದಂಡಪಾಣಿ ಮನವೊಲಿಸಿದರು. ಆ ಕ್ಷಣದಲ್ಲಿ ಇಬ್ಬರಿಗೂ ತಿಳಿಯದಿದ್ದರೂ ಕೋದಂಡಪಾಣಿ ಅವರು ದೂರದ ಸಂಬಂಧಿ ಎಂಬುದು ಎಸ್‌ಬಿಪಿಗೆ ಅರಿವಾಯಿತು. ಬಳಿಕ ಎಸ್‌ಪಿಬಿ ಆಡಿಷನ್‌ಗೆ ಹೋದಾಗ, ಚಿತ್ರದ ನಿರ್ಮಾಪಕರ ಅಭಿಪ್ರಾಯವು ಇತರ ಸಂಗೀತ ನಿರ್ದೇಶಕರು ಮೊದಲು ಹೇಳಿದ್ದಕ್ಕಿಂತ ಹೆಚ್ಚು ಭಿನ್ನವಾಗಿರಲಿಲ್ಲ. ಆಡಿಷನ್​ನಿಂದ ತಿರಸ್ಕೃತರಾದರು. ಬಳಿಕ ಕೋದಂಡಪಾಣಿ ಅವರು ಎಸ್‌ಪಿಬಿಗೆ ಧೈರ್ಯ ತುಂಬಿ, ಕೆಲವು ವಾರಗಳ ನಂತರ ಕರೆ ಮಾಡಲು ಹೇಳಿದರು. ಅಷ್ಟೊತ್ತಿಗಾಗಲೇ ಎಸ್​ಪಿಬಿಗೆ ಗಾಯನವೇ ಸಾಕಾಗಿ ಹೋಗಿತ್ತು ಮತ್ತು ಇಂಜಿನಿಯರಿಂಗ್ ಮಾತ್ರ ತನಗಿರುವ ಒಂದೇ ಒಂದು ಆಯ್ಕೆ ಎಂದು ನಿರ್ಧರಿಸಿದ್ದರು.

    ಎರಡನೇ ಯತ್ನದಲ್ಲಿ ಮೊದಲ ಬ್ರೇಕ್​
    ಎಸ್​ಪಿಬಿ ಅವರು ಗಾಯನವನ್ನು ಬದಿಗಿಟ್ಟು ಓದಿನಲ್ಲಿ ಮಗ್ನರಾಗಿ ಒಂದೂವರೆ ವರ್ಷವೇ ಕಳೆದಿತ್ತು. ಆಗ ಕೋದಂಡಪಾಣಿ ಅವರು ಮತ್ತೆ ಎಸ್​ಪಿಬಿ ಅವರನ್ನು ಹುಡುಕಿಕೊಂಡು ಅವರು ಓದುತ್ತಿದ್ದ ಕ್ಯಾಂಪಸ್​ಗೆ ಬಂದಿದ್ದರು. ಅವರಾಗಿಯೇ ಕ್ಯಾಂಪಸ್​ಗೆ ಹುಡುಕಿಕೊಂಡು ಬಂದಿದ್ದರಿಂದ ಎಸ್​ಪಿಬಿ ಇಲ್ಲ ಅನ್ನದೇ ಎರಡನೇ ಪ್ರಯತ್ನಕ್ಕೆ ಒಪ್ಪಿಕೊಂಡರು. ಇದೇ ಸಮಯದಲ್ಲಿ ಎಸ್‌ಪಿಬಿಗೆ ಮೊದಲ ಬ್ರೇಕ್ ಸಿಕ್ಕಿತು. ಅವರು “ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ” ಚಿತ್ರಕ್ಕಾಗಿ ಇತರ ಮೂವರು ಗಾಯಕರೊಂದಿಗೆ ಎಮಿಯೀ ವಿಂತಾ ಮೊಹಮ್ ಹಾಡನ್ನು ಹಾಡಿದರು. ಇದು ನಡೆದಿದ್ದು 1966ರ ಡಿಸೆಂಬರ್​ ತಿಂಗಳಲ್ಲಿ. ಆದರೆ, ಈ ಸಿನಿಮಾ ಬಿಡುಗಡೆ ವಿಳಂಬವಾಯಿತು. ಆದರೆ, ಎಸ್​ಪಿಬಿ ಅವರ ಮೊದಲ ಅಧಿಕೃತ ಹಾಡು 1967ರಲ್ಲಿ ತೆರೆಕಂಡ “ಕಾಲಚಕ್ರಂ” ಸಿನಿಮಾದ ಹಾಡು.

    ಎಸ್​ಪಿಬಿ ಯುಗ ಆರಂಭ
    ಎಸ್​ಪಿಬಿ ಅವರು ಗಾಯಕರಾಗಿ ವೃತ್ತಿ ಜೀವನದ ಪ್ರಯಾಣ ಆರಂಭಿಸಿದರೂ ಅವರ ಹಾದಿ ಸುಗಮವಾಗಿರಲಿಲ್ಲ. ಆ ಸಮಯದಲ್ಲೇ ಅನೇಕ ಖ್ಯಾತ ಹಿನ್ನೆಲೆ ಗಾಯಕರು ಮುನ್ನೆಲೆಯಲ್ಲಿದ್ದರು. ಇದರಿಂದಾಗಿ ಎಸ್​ಪಿಬಿ ಅವರು ಕೋರಸ್​ ಅಥವಾ ಮಿಮಿಕ್ರಿ ಕಲಾವಿದರಿಗೆ ಹಾಡುವುದರಲ್ಲೇ ತೃಪ್ತಿಪಡಬೇಕಾಯಿತು. ಆದರೆ, ಇದೇ ಅವರಿಗೆ ಸಹಾಯವು ಆಯಿತು. ತಮ್ಮ ಧ್ವನಿಯನ್ನು ಮಾರ್ಪಡಿಸಲು ಮತ್ತು ಅವರ ಹಾಡುಗಳಲ್ಲಿ ಮಿಮಿಕ್ರಿ ಮಾಡಲು ಸಹಾಯ ಮಾಡಿತು. ಅವರು ಹೆಚ್ಚು ಹೆಚ್ಚು ಹಾಡುಗಳ ಅವಕಾಶಗಳನ್ನು ಪಡೆಯಲು ಪ್ರಾರಂಭಿಸುತ್ತಿದ್ದಂತೆ, ಗಾಯನ ಅಥವಾ ಎಂಜಿನಿಯರಿಂಗ್ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಸಿಲುಕಿದರು. ನಂತರ ತಮ್ಮ ತಂದೆ ಎಸ್‌ಪಿ ಸಾಂಬಮೂರ್ತಿ (ಹರಿಕಥಾ ಕಲಾವಿದ) ಅವರನ್ನು ಸಂಪರ್ಕಿಸಿ, ಆಯ್ಕೆಯ ಬಗ್ಗೇ ಕೇಳಿದರು. ನಿನ್ನ ಹೃದಯಕ್ಕೆ ಹತ್ತಿರವಾದುದ್ದನ್ನು ಆಯ್ಕೆ ಮಾಡಲು ತಂದೆ ಹೇಳಿದಾಗ, ಎಸ್​ಪಿಬಿ ಗಾಯನವನ್ನು ಆಯ್ದುಕೊಂಡರು. ಅಲ್ಲಿಂದಾಚೆಗೆ ಎಸ್​ಪಿಬಿ ಯುಗ ಆರಂಭವಾಯಿತು.

    ಒಂದು ಶಬ್ದ ಬದಲಾಯಿಸಲು ಫೋನ್​ ಮಾಡಿ ಕೇಳಿದ್ದರು… ಅಬ್ಬಾ! ನೆನೆಸಿಕೊಂಡರೆ ರೋಮಾಂಚನವಾಗುತ್ತೆ…

    ಎಸ್​ಪಿಬಿ ಹಾಡಿದ ಕೊನೆಯ ಹಾಡು ಯಾವ ಹೀರೋಗೆ? ನೀವೇ ನೋಡಿ …

    ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts