Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಟೆಕ್ ನಿಪುಣ ಅಧಿಕಾರಿ

Sunday, 05.08.2018, 3:04 AM       No Comments

|ಜ ಉಮೇಶ್ ಕುಮಾರ್ ಶಿಮ್ಲಡ್ಕ

ಧಾರ್ ಕುರಿತ ದೂರು-ದುಮ್ಮಾನಗಳು, ಡೇಟಾ ಪ್ರೖೆವೆಸಿ ಕುರಿತ ಆರೋಪಗಳು ಹೊಸದೇನಲ್ಲ. ಆ ವ್ಯವಸ್ಥೆಯನ್ನು ಸಮರ್ಥಿಸುವವರಿಗೂ ಕೊರತೆಯಿಲ್ಲ. ಆದರೆ ಜು.28ರಂದು ಇದೆಲ್ಲದಕ್ಕೆ ಹೊಸ ಒಂದು ಆಯಾಮ ಸಿಕ್ಕಿತು[email protected] ಎಂಬ ಟ್ವಿಟರ್ ಖಾತೆಯಲ್ಲಿನ ‘ಆಧಾರ್​ನ ವಿನ್ಯಾಸದಲ್ಲೇ ಪ್ರೖೆವೆಸಿ ಇದೆ ಎಂಬ@rssharma3 ಅವರ ಹೇಳಿಕೆ ನನಗೆ ಸಮ್ಮತವಲ್ಲ. ಒಂದೊಮ್ಮೆ ಇದು ನಿಜವೇ ಆಗಿದ್ದಲ್ಲಿ.. ಸುಪ್ರೀಂ ಕೋರ್ಟ್​ನಲ್ಲಿರುವ ಪ್ರಕರಣದಲ್ಲಿ ಸರ್ಕಾರ ಖಾಸಗಿತನಕ್ಕೆ ಬೆದರಿಕೆ ಇಲ್ಲ ಎಂದು ವಾದಿಸುತ್ತಿರಲಿಲ್ಲ. ಆಧಾರ್ ಮಾಫಿಯಾ ಕೂಡ ಭಾರತ ಸರ್ಕಾರವನ್ನು ಗೂಗಲ್, ಫೇಸ್​ಬುಕ್ ಮೊದಲಾದ ಕಂಪನಿಗಳ ಜತೆಗೆ ಹೋಲಿಸುತ್ತಿರಲಿಲ್ಲ’ ಎಂಬ ಸ್ಟೇಟಸ್​ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ(ಟ್ರಾಯ್)ದ ಅಧ್ಯಕ್ಷ ಆರ್.ಎಸ್.ಶರ್ಮಾ (@rssharma3) ಪ್ರತಿಕ್ರಿಯೆ ನೀಡಿದ್ದರು. ಅದೂ ಹೇಗೆಂದರೆ -‘@kingslyj ನನ್ನ ಆಧಾರ್ ಸಂಖ್ಯೆ 7621 7768 2740. ನನಗೇನಾದರೂ ಹಾನಿ ಎಸಗಲು ಸಾಧ್ಯವೇ? ಇದು ನಿಮಗೆ ನನ್ನ ಸವಾಲು’ ಎಂದು ಉತ್ತರಿಸಿದ್ದರು. ಈ ಸವಾಲು ಸೆಕೆಂಡ್​ಗಳಲ್ಲಿ ಟ್ವಿಟರ್​ನಲ್ಲಿ ಟ್ರೆಂಡ್ ಆಯಿತಲ್ಲದೇ, ದೇಶಾದ್ಯಂತ ಸುದ್ದಿಯೂ ಆಯಿತು.

ಇದರ ಬೆನ್ನಿಗೇ ಓರ್ವ ಹ್ಯಾಕರ್ ಶರ್ಮಾ ಅವರ ಬ್ಯಾಂಕ್ ಖಾತೆಗೆ 1 ರೂಪಾಯಿ ಹಾಕಿದ್ದೂ ಸುದ್ದಿಯಾಯಿತು. ನಮಗೆ ಶರ್ಮಾ ವಿಳಾಸ, ಫೋನ್ ನಂಬರ್ ಸಿಕ್ಕಿದವು ಎಂದೆಲ್ಲ ಕೆಲವು ಟ್ವೀಟಿಗರು ಹೇಳಿಕೊಂಡರು. ಇನ್ನು ಕೆಲವರು ಅವರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುವುದಕ್ಕೆ ಪ್ರಯತ್ನಿಸಿದರು. ಇವೆಲ್ಲದಕ್ಕೂ ಅವರು ಪ್ರತಿಕ್ರಿಯಿಸುತ್ತಿದ್ದಾರೆ. ಈ ಬೆಳವಣಿಗೆಯ ಮರುದಿನವೇ ಅವರು ಇಂಡಿಯನ್ ಎಕ್ಸ್ ಪ್ರೆಸ್​ಗೆ ಲೇಖನ ಬರೆದು ಯಾಕೆ ಆ ರೀತಿ ಸವಾಲೆಸೆದೆ ಎಂಬುದನ್ನು ಸ್ಪಷ್ಟಪಡಿಸಿದರು. ಅದರ ಪ್ರಕಾರ, ‘ಆಧಾರ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದರಿಂದ ಬೇರೆಯವರು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದು ಸುಳ್ಳು. ಎಲ್ಲರೂ ಈ ರೀತಿ ಸಾರ್ವಜನಿಕವಾಗಿ ಹಂಚಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿಲ್ಲ ನಾನು. ನನ್ನ ಆಧಾರ್ ಸಂಖ್ಯೆ ಬಹಿರಂಗಪಡಿಸಿದ್ದರಿಂದ ಈಗ ಒಟಿಪಿ ಸಂದೇಶಗಳು ಮೊಬೈಲ್​ನಲ್ಲಿ ತುಂಬಿಕೊಂಡಿವೆ. ಇದು ಬಿಟ್ಟು ಬೇರೇನೂ ಆಗಿಲ್ಲ. ನನ್ನ ವಿಳಾಸ ಮತ್ತು ದೂರವಾಣಿ ಸಂಖ್ಯೆ ಗೂಗಲ್ ಸರ್ಚ್ ಮಾಡಿದರೂ ಸಿಗುತ್ತದೆ’ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಟ್ರಾಯ್ ಮುಖ್ಯಸ್ಥರಾಗಿರುವ ಶರ್ಮಾ ಏಕೆ ಇದಕ್ಕೆ ಪ್ರತಿಕ್ರಿಯಿಸಿದರು ಎಂಬ ಸಂದೇಹ ಮೂಡುವುದು ಸಹಜ. ಅದನ್ನು ತಿಳಿಯಲು ಎಂಟು ವರ್ಷ ಹಿಂದಕ್ಕೆ ಹೋಗಬೇಕು. 2010ರ ಆರಂಭದ ದಿನಗಳು. ಯೋಜನಾ ಆಯೋಗದ ಕಟ್ಟಡದಲ್ಲಿತ್ತು ಶರ್ಮಾ ಅವರ ಕಚೇರಿ. ಅದಾಗಲೇ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ)ದ ಮಹಾನಿರ್ದೇಶಕರ ಹೊಣೆಗಾರಿಕೆ ಅವರ ಹೆಗಲೇರಿತ್ತು. 2014ರ ವೇಳೆಗೆ 60 ಕೋಟಿ ಭಾರತೀಯರ ಆಧಾರ್ ನೋಂದಣಿ ಮುಗಿಸಿ, ಅದನ್ನು ಬಳಕೆಗೆ ತರಬೇಕಾದ ತುರ್ತು ಅವರಿಗೆ ಇತ್ತು. ಇಷ್ಟು ತಳಮಟ್ಟದಲ್ಲಿ ಕೆಲಸ ಮಾಡಿದ ಕಾರಣವೇ ಅವರಿಗೆ ಆಧಾರ್ ವ್ಯವಸ್ಥೆಯ ಬಗ್ಗೆ ಅಷ್ಟೊಂದು ವಿಶ್ವಾಸ. ಇದೇ ಕಾರಣಕ್ಕೆ ಅವರು ಬಹಿರಂಗವಾಗಿ ಆ ಸವಾಲು ಹಾಕಿದ್ದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ರಾಮ ಸೇವಕ್ ಶರ್ವ(ಆರ್.ಎಸ್.ಶರ್ವ) ಅವರ ಪೂರ್ತಿ ಹೆಸರು. 1978ರ ಬ್ಯಾಚಿನ ಜಾರ್ಖಂಡ್ ಕೇಡರ್​ನ ಐಎಎಸ್ ಅಧಿಕಾರಿ. ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಜನನ. 1974ರಲ್ಲಿ ಅಲಹಾಬಾದ್ ವಿವಿಯಲ್ಲಿ ಬಿಎಸ್​ಸಿ ಪದವಿ ಪಡೆದ ಅವರು 1976ರಲ್ಲಿ ಐಐಟಿ ಕಾನ್ಪುರದಲ್ಲಿ ಗಣಿತದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದರು. 1978ರಲ್ಲಿ ಐಎಎಸ್ ಸೇರ್ಪಡೆಯಾದರು.

ಆರಂಭದಲ್ಲಿ ಅವರನ್ನು ಬಿಹಾರ ಕೇಡರ್​ಗೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಧನಾಬಾದ್, ಪೂರ್ನಿಯಾ, ಬೇಗುಸರಾಯ್ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ, ಸಹರ್ಸಾದಲ್ಲಿ ಡೆಪ್ಯುಟಿ ಡೆವಲಪ್​ವೆುಂಟ್ ಕಮಿಷನರ್ ಆಗಿ ಕಾರ್ಯಗೈದಿದ್ದರು. ಈ ನಡುವೆ, ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡ ಅವರು 1986ರಲ್ಲಿ ಡಿಬೇಸ್​ನಲ್ಲಿ ಪ್ರೋಗ್ರಾಂ ಬರೆದರು. ಅಪರಾಧ ಪೀಡಿತ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಕಳವು ದಾಖಲೆಗಳನ್ನು ಸಂಗ್ರಹಿಸುವ ಮತ್ತು ಕಳೆದುಹೋದ ಶಸ್ತ್ರ ಸಿಕ್ಕಾಗ ಅದರ ಇತಿಹಾಸವನ್ನೇ ಹುಡುಕಿ ಕೊಡುವ ಪ್ರೋಗ್ರಾಂ ಇದಾಗಿತ್ತು. ಕೇವಲ ಮೂವತ್ತು ದಿನಗಳ ಅವಧಿಯಲ್ಲಿ ಇಂತಹ 22 ಕೇಸ್​ಗಳನ್ನು ಬಗೆಹರಿಸಿಕೊಟ್ಟು ರಾಜ್ಯಸರ್ಕಾರದ ಮೆಚ್ಚುಗೆಗೆ ಶರ್ಮಾ ಪಾತ್ರರಾದರು.

1990ರ ದಶಕದಲ್ಲಿ ಶರ್ಮಾ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದ ಆರ್ಥಿಕ ವ್ಯವಹಾರ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರಾಗಿದ್ದರು. ಆಗ ಪಿ.ವಿ.ನರಸಿಂಹರಾವ್ ಸರ್ಕಾರ ಇತ್ತು. ಡಾ.ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಈ ನಡುವೆ, 2000ನೇ ಇಸವಿಯಲ್ಲಿ ಅಮೆರಿಕಕ್ಕೆ ತೆರಳಿ ರಿವರ್​ಸೈಡ್ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತರುವಾಯ, ಬಿಹಾರದಿಂದ ಜಾರ್ಖಂಡನ್ನು ಪ್ರತ್ಯೇಕಿಸಿ 2001ರಲ್ಲಿ ಹೊಸ ರಾಜ್ಯ ರಚಿಸಿದಾಗ, ಶರ್ವರನ್ನು ಜಾರ್ಖಂಡ್ ಕೇಡರ್​ಗೆ

ಸೇರಿಸಲಾಗಿತ್ತು. ಮೂವತ್ತು ವರ್ಷ ಕಾಲ ಮಾಹಿತಿ ತಂತ್ರಜ್ಞಾನ ವಿಭಾಗಗಳಲ್ಲಿ ಕೆಲಸ ಮಾಡಿದ್ದರ ಪರಿಣಾಮ ಯಾವ ರೀತಿಯ ತಾಂತ್ರಿಕ ಸವಾಲುಗಳನ್ನು ಬೇಕಾದರೂ ಎದುರಿಸುವುದಕ್ಕೆ ಬೇಕಾದಂತಹ ಅನುಭವ ಶರ್ಮಾ ಅವರಿಗೆ ಕರಗತವಾಯಿತು

ಯುಐಡಿಎಐ ಸ್ಥಾಪನೆಯಾಗಿ ಐಟಿ ದಿಗ್ಗಜ ನಂದನ್ ನಿಲೇಕಣಿ ಅದರ ಮುಖ್ಯಸ್ಥರಾದ ಸಂದರ್ಭದಲ್ಲಿ ಆಧಾರ್ ವ್ಯವಸ್ಥೆ ಅನುಷ್ಠಾನಕ್ಕೆ ಆಯ್ಕೆ ಸಹಜವಾಗಿಯೇ ಶರ್ಮಾ ಆಗಿದ್ದರು. ಅದು 2009ರ ಜೂನ್ 20. ಪ್ರಧಾನಮಂತ್ರಿ ಕಚೇರಿಯಿಂದ ಶರ್ವಗೆ ಫೋನ್ ಕರೆ ಬಂದಿತ್ತು. ಎರಡು ದಿನಗಳ ನಂತರ ದೆಹಲಿಯ ಮೌರ್ಯ ಷೆರ್ಟನ್ ಹೋಟೆಲ್​ನಲ್ಲಿ ನಂದನ್ ನಿಲೇಕಣಿ ಅವರನ್ನು ಭೇಟಿ ಮಾಡಬೇಕೆಂಬ ಸಂದೇಶ ನೀಡಿದ ಕರೆ ಅದಾಗಿತ್ತು. ನಂತರ ಅವರ ಕೆಲಸದ ದಿಶೆಯೇ ಬದಲಾಯಿತು. ಆಧಾರ್ ವ್ಯವಸ್ಥೆ ಜಾರಿಗೊಳಿಸುವ ಮಹತ್ತರ ಹೊಣೆಗಾರಿಕೆ ಹೆಗಲೇರಿತ್ತು. ರಾಜಕೀಯ, ಕಾನೂನಾತ್ಮಕ ಸೇರಿದಂತೆ ಹಲವು ರೀತಿಯ ತೊಡಕುಗಳು, ಸವಾಲುಗಳು ಬೆನ್ನೇರಿದ್ದವು. ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳುತ್ತ ಯಶಸ್ಸು ಹೊಂದಿದ್ದು ಈಗ ಇತಿಹಾಸ. 2013-14ರಲ್ಲಿ ಜಾರ್ಖಂಡ್​ನ ಮುಖ್ಯಕಾರ್ಯದರ್ಶಿಯಾಗಿದ್ದ ಶರ್ವ, ನಂತರ ದೆಹಲಿಗೆ ತೆರಳಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾದರು. 2015ರ ಜುಲೈನಲ್ಲಿ ಅವರನ್ನು ಟ್ರಾಯ್ನ ಚೇರ್ಮನ್ ಆಗಿ ಸರ್ಕಾರ ನೇಮಕ ಮಾಡಿತು.

ಟೆಲಿಕಾಂ ಕ್ಷೇತ್ರದ ಸುಧಾರಣೆಗೆ ಶ್ರಮವಹಿಸುತ್ತಿರುವ ಶರ್ವ, ಸರ್ಕಾರಕ್ಕೆ ಹಲವು ಶಿಫಾರಸುಗಳನ್ನೂ ಮಾಡಿದ್ದಾರೆ. ಅಂತರ್ಜಾಲ ತಾಟಸ್ಥ್ಯ, ಡೇಟಾ ಪ್ರೖೆವೆಸಿಯಂತಹ ಪ್ರಮುಖ ವಿಚಾರಗಳಿಗೆ ಸೂಕ್ತ ನಿಯಮಗಳನ್ನು ರೂಪಿಸುವ ಕೆಲಸಗಳ ಕಡೆಗೂ ಗಮನಹರಿಸಿದ್ದಾರೆ. ‘ಆಧಾರ್’ನಲ್ಲಿನ ಯಶಸ್ಸನ್ನು ಶರ್ಮಾ ಇಲ್ಲಿಯೂ ಪುನರಾವರ್ತಿಸುವರೇ ಎಂಬುದು ಸದ್ಯದ ಕುತೂಹಲ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ [email protected], [email protected]]

Leave a Reply

Your email address will not be published. Required fields are marked *

Back To Top