More

    ಅಮೆರಿಕ ಅವಳಿ ಗೋಪುರ ದಾಳಿಗೆ 20 ವರ್ಷ! ಯುಎಸ್​ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್? ಹೇಗಿತ್ತು ದಾಳಿಯ ಪ್ಲಾನ್​?

    ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿ ನಡೆದು 20 ವರ್ಷ ಕಳೆದಿವೆ. ಘನಘೋರ ಆತ್ಮಾಹುತಿ ದಾಳಿ ನಡೆಸಿದ ಅಲ್​ಕೈದಾ ಉಗ್ರರು, 3000 ಮಂದಿ ಪ್ರಾಣದ ಜತೆಗೆ ತೆಗೆದಿದ್ದು ಅಮೆರಿಕದ ಮಾನ. ಇದಾದ 10 ವರ್ಷಗಳ ಬಳಿಕ ಲಾಡೆನ್​ನನ್ನು ಹೊಡೆದುರುಳಿಸಿದರೂ, ಅಮೆರಿಕಗೆ ಉಗ್ರವಾದ ಶಮನ ಮಾಡಲು ಸಾಧ್ಯವಾಗಲೇ ಇಲ್ಲ. 20 ವರ್ಷಗಳಿಂದ ಅಮೆರಿಕ ಆಫ್ಘಾನ್​​ನಲ್ಲಿ ಕತ್ತಿವರಸೆ ಮಾಡಿದರೂ, ಯೂಸ್ ಆಗಿಲ್ಲ. ಮೊದಲಿಗಿಂತ ಬಲಿಷ್ಠರಾಗಿ ಬೆಳೆದುನಿಂತಿದೆ ರಣರಕ್ಕಸರ ಹಿಂಡು. ಮತ್ತೆ ರಣದಾಳಿಗೆ ಹೊಂಚುಹಾಕಿ ಕುಳಿತಿದೆ ಅಲ್​ಕೈದಾ ತೋಳ.

    ಅಮೆರಿಕ ಅವಳಿಗೋಪುರ ದಾಳಿಗೆ 20 ವರ್ಷ!
    ಸೆಪ್ಟೆಂಬರ್ 11, 2001…ಅಮೆರಿಕದಂತಹ ಅಮೆರಿಕವೇ ನಡುಗಿಹೋದ ಭೀಭತ್ಸ ಭಯೋತ್ಪಾದಕ ದಾಳಿ ಇದು. ಮೂರು ಸಾವಿರಕ್ಕೂ ಹೆಚ್ಚು ಅಮಾಯಕ ಬಲಿ ಪಡೆದ ಈ ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ್ದು ಆಗಿನ ಮೋಸ್ಟ್ ಡೆಡ್ಲಿ ಟೆರರ್ ಆರ್ಗನೈಸೇಷನ್ ಆಲ್​ಕೈದಾ.!

    ಒಸಾಮಾ ಬಿನ್ ಲಾಡೆನ್​​ನ ಆಲ್​ಕೈದಾ, ತನ್ನ 19 ಆತ್ಮಾಹುತಿ ದಾಳಿಕೋರರ ಮೂಲಕ ನಡೆಸಿದ ಈ ಭೀಕರ ದಾಳಿಯಲ್ಲಿ ಮೂರು ಸಾವಿರ ಮಂದಿ ಪ್ರಾಣ ಕಳೆದುಕೊಂಡರು. ಇದಾದ ಬೆನ್ನಲ್ಲೇ ಉಗ್ರವಾದ ವಿರುದ್ಧ ಯುದ್ಧ ಘೋಷಿಸಿದ ಅಮೆರಿಕಾ, ಅದಾದ 10 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ 9/11ರ ದಾಳಿ ಮಾಸ್ಟರ್ ಮೈಂಡ್ ಒಸಮಾ ಬಿನ್ ಲಾಡೆನ್​​ನನ್ನ ಫಿನಿಷ್ ಮಾಡಿತು. ಅಮೆರಿಕ ನೆಲದ ಮೇಲೆ ರಕ್ತಪಿಪಾಸುಗಳ ಅಟ್ಟಹಾಸ ನಡೆದು 20 ವರ್ಷಗಳೇ ಸಂದಿವೆ. ಆದ್ರೂ ಅಲ್ಲಿನ ನೆತ್ತರ ಘಮಲು ಇನ್ನೂ ಮಾಸಿಲ್ಲ. ಅಷ್ಟೇ ಏಕೆ..ಅಂದಿನ ದಾಳಿಯಲ್ಲಿ ಮೃತಪಟ್ಟ ಇನ್ನೂ 1100ಕ್ಕೂ ಹೆಚ್ಚು ಜನರ ಗುರುತೇ ಪತ್ತೆಯಾಗಿಲ್ಲ. ಒಂದು ದಿನದ ಹಿಂದಷ್ಟೇ ಆಗಿನ ದಾಳಿಯಲ್ಲಿ ಮೃತಪಟ್ಟ ಮತ್ತಿಬ್ಬರ ಐಡೆಂಟಿಟಿ ಪತ್ತೆಯಾಗಿದೆ.

    ಅಮೆರಿಕದ ಮೇಲೆ ದಾಳಿ ನಡಸೋ ಮೂಲಕ ಒಸಮಾ ಬಿನ್ ಲಾಡೆನ್, ಅಮೆರಿಕಾದ ಸ್ವಾಭಿಮಾನಕ್ಕೇ ಗುರಿ ಇಟ್ಟಿದ್ದ. ಇದಾದ ಮೇಲೆ ಆಲ್​ಕೈದಾ, ಇಡೀ ವಿಶ್ವಕ್ಕೇ ಬೆದರಿಕೆಯಾಗಿ ಪರಿಣಮಿಸಿತು. ಇಡೀ ಪ್ರಪಂಚವನ್ನೇ ಕ್ಯಾಲಿಫೈಟ್ ಆಡಳಿತ ಅಂದ್ರೆ ಇಸ್ಲಾಮಿಕ್ಮ ರೂಲ್​ಗೆ ಒಳಪಡಿಸೋ ಕನಸಿನಿಂದ ಶತ್ರುಗಳ ಮೇಲೆ ವಿಧ್ವಂಸಕ ದಾಳಿಗಳನ್ನ ನಡೆಸತೊಡಗಿತು ಜಗತ್ತಿನ ಮೋಸ್ಟ್ ಡೆಡ್ಲಿ ಟೆರರ್ ಆರ್ಗನೈಸೇಷನ್ ಎನಿಸಿದ ಅಲ್​ಕೈದಾ.

    9/11ರ ದಾಳಿ ನಂತರ ಲಾಡೆನ್ ಬೇಟೆಗಿಳಿದ ಅಮೆರಿಕ, ಆಗ ಮಾಡಿದ ಮೊದಲ ಕೆಲಸ ಎಂದ್ರೆ ಅಫ್ಘಾನಿಸ್ತಾನದ ಮೇಲೆ ದಾಳಿ. ಅಫ್ಘಾನಿಸ್ತಾನವನ್ನ ತಾಲಿಬಾನಿಗಳ ಕಪಿಮುಷ್ಠಿಯಿಂದ ಬಚಾವ್ ಮಾಡಿದ ಅಮೆರಿಕ, ಇಲ್ಲೇ ತನ್ನ ಸೇನಾಪಡೆಗಳನ್ನು ನೆಲೆಯೂರುವಂತೆ ಮಾಡಿತು. ವಾರ್ ಅಗೈನ್ಸ್ಟ್​ ಟೆರರಿಸಂ ಧೇಯವಾಕ್ಯದೊಂದಿಗೆ ಉಗ್ರರ ಹಡೆಮುರಿ ಕಟ್ಟಿತು ಅಮೆರಿಕ. ಅಮೆರಿಕಗೆ, ಬ್ರಿಟನ್ ಸೇರಿದಂತೆ ನ್ಯಾಟೋ ಪಡೆಗಳು ಕೂಡ ಸಾಥ್ ಕೊಟ್ಟ ಪರಿಣಾಮ, ಅಫ್ಘನ್​ ನೆಲದಲ್ಲಿ 5 ವರ್ಷ ಆಡಳಿತ ನಡೆಸಿದ್ದ ತಾಲಿಬಾನ್ ಬಾಲ ಮುದುರಿಕೊಂಡು ಓಡಿಹೋಗುವಂತಾಯಿತು. ಇಲ್ಲಿಂದ ಹೇಗೋ ತಪ್ಪಿಸಿಕೊಂಡ ಆಲ್​-ಕೈದಾ ಹಾಘೂ ತಾಲಿಬಾನಿ ಉಗ್ರರು, ಪಾಕಿಸ್ತಾನ ಸೇರಿದಂತೆ ನೆರೆಹೊರೆ ಇಸ್ಲಾಮಿಕ್ ದೇಶಗಳಲ್ಲಿ ತಲೆಮರೆಸಿಕೊಂಡರು.

    ಅಮೆರಿಕ ದಾಳಿ ಬಳಿಕ ಅಫ್ಘಾನಿಸ್ತಾನದಲ್ಲಿ ಉಗ್ರರ ಆರ್ಭಟ ಕಮ್ಮಿಯಾಯ್ತಾದರೂ, ಪೂರ್ಣ ಪ್ರಮಾಣದಲ್ಲಿ ಉಗ್ರರ ನಾಶ ಆಗಲಿಲ್ಲ. ಬದಲಿಗೆ ಡಬಲ್ ಗೇಂ ಆಡಿದ ಪಾಕಿಸ್ತಾನ, ಪರೋಕ್ಷವಾಗಿ ಇಂತಹ ಜಿಹಾದಿ ಉಗ್ರರಿಗೆ ತನುಮನ ಧನ ಸಹಾಯ ಮಾಡತೊಡಗಿತು. ಆದರೂ ಉಗ್ರರ ವಿರುದ್ಧ ಯುದ್ಧದ ಹೆಸರಿನಲ್ಲಿ ಪಾಕ್​ ಅನ್ನೇ ನಂಬಿದ ಅಮೆರಿಕ ತಾನೇ ಬಿಲಿಯನ್ ಬಿಲಿಯನ್ ಡಾಲರ್​ ಹಣ ಕೊಟ್ಟು, ತಾನೇ ಪೆಟ್ಟು ತಿಂದಿತು. ಪಾಕಿಸ್ತಾನ ಆಲ್​​ಕೈದಾ- ತಾಲಿಬಾನ್ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿತು. ಪಾಕ್-ಅಫ್ಘನ್ ಗಡಿ ಪ್ರದೇಶ ಜಿಹಾದಿ ಉಗ್ರರ ತರಬೇತಿ ಕೇಂದ್ರ ವಾಯಿತು. ಅಷ್ಟೇ ಏಕೆ..ಅಮೆರಿಕ ಮೇಲೆ ದಾಳಿ ನಡೆಸಿದ ಬಿನ್ ಲಾಡೆನ್​​ಗೂ ಪಾಕಿಸ್ತಾನ ತನ್ನ ನೆಲದಲ್ಲೇ ಆಶ್ರಯ ಕೊಟ್ಟಿತು.

    ಕೊನೆಗೆ 2011ರಲ್ಲಿ ಪಾಕಿಸ್ತಾನದ ಅಬೆಟೋಬಾದ್​ನಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್​ ಮೇಲೆ ದಾಳಿ ನಡೆಸಿದ ಅಮೆರಿಕ, ಆತನನ್ನ ಖಲಾಸ್ ಮಾಡಿತು. ಒಸಾಮಾ ಬಿನ್ ಲಾಡೆನ್​​ನೇ ಸತ್ತ ಮೇಲೆ ಆಲ್​ಕೈದಾ ನಿರ್ನಾಮವಾಯಿತಾ? ನೋ.. ರಕ್ತಬೀಜಾಸುರರ ರೀತಿ ಮತ್ತೆ ಮತ್ತೆ ಮೇಲೇಳ ತೊಡಗಿದರು ಆಲ್​ಕೈದಾ ಉಗ್ರರು. ನಿಮಗೆ ಗೊತ್ತಿರಲಿ..ಅಮೆರಿಕ ಯಾವಾಗ ಉಗ್ರವಾದ ವಿರುದ್ಧ ಯುದ್ಧ ಅಂತಾ ಘೊಷಿಸಿಕೊಂಡು ಆಲ್​ಕೈದಾ, ತಾಲಿಬಾನಿ ಉಗ್ರರ ಶಿಕಾರಿಗಿಳಿದರೂ, ಈ ರಕ್ಕಸರು ಮಾತ್ರ ಸೈಲೆಂಟ್ ಆಗಲಿಲ್ಲ.

    2001ರ ಸೆಪ್ಟೆಂಬರ್ 11ರ ಅಮೆರಿಕಾ ಅವಳಿ ಗೋಪುರ ದಾಳಿ ಬಳಿಕ ಅಲ್​ಕೈದಾ ಪ್ರಪಂಚದ ವಿವಿಧೆಡೆ ನಡೆಸಿದ ದಾಳಿಗಳ ಸಂಖ್ಯೆ ಕಮ್ಮಿ ಏನಿಲ್ಲ..ಈ ಎರಡು ದಶಕಗಳಲ್ಲಿ ಆಲ್​ಕೈದಾ ಸಂಘಟನೆಯೊಂದೇ ಜಗತ್ತಿನ ವಿವಿಧೆಡೆ ನಡೆಸಿದ ದಾಳಿಗಳ ಲೆಕ್ಕ 50ಕ್ಕೂ ಹೆಚ್ಚು. 2002ರ ಬಾಲಿ ಬಾಂಬ್ ಅಟ್ಯಾಕ್, 2004ರ ಮ್ಯಾಂಡ್ರಿಡ್ ಟ್ರೈನ್ ದಾಳಿ, 2005ರ ಲಂಡನ್ ದಾಳಿ, 2015ರಲ್ಲಿ ನಡೆದ ಪ್ಯಾರಿಸ್ ಶೂಟೌಟ್ ಸೇರಿದಂತೆ ಹಲವಾರು ಕಡೆ ಆತ್ಮಾಹುತಿ ದಾಳಿ, ಕಾರ್ ಬಾಂಬ್ ಅಟ್ಯಾಕ್​..ಹೀಗೆ ಆಲ್​ ಕೈದಾ ಉಗ್ರರು ನೆತ್ತರು ಚೆಲ್ಲಾಡಿದ್ದಾರೆ. ನಾನಾ ರಾಷ್ಟ್ರಗಳಲ್ಲಿ ಈ ಆಲ್​ಕೈದಾ ನರರಾಕ್ಷಸರು ನಡೆಸಿದ ಭೀಕರ ದಾಳಿಗಳಿಗೆ ಬಲಿಯಾದವರ ಸಂಖ್ಯೆ 3000ಕ್ಕೂಅಧಿಕ ಮಂದಿ.

    ಹೀಗೆ ಅಮೆರಿಕ ಭಯೋತ್ಪಾದನೆ ವಿರುದ್ಧ ಯುದ್ಧ ಘೋಷಿಸಿದ ನಂತರವೂ ಆಲ್​ಕೈದಾ ದಿನೇ ದಿನೇ ಬಲಿಷ್ಟವಾಗುತ್ತಾ ಬಂತೇ ಹೊರತು ನಶಿಸಿ ಹೋಗಲಿಲ್ಲ. ಅಷ್ಟೇ ಏಕೆ.. 2011ರಲ್ಲಿ ಆಲ್ ಕೈದಾ ಸರ್ವೋಚ್ಛನಾಯಕ ಒಸಾಮಾ ಬಿನ್ ಲಾಡೆನ್​​ನೇ ಅಮೆರಿಕ ದಾಳಿಗೆ ಖತಂ ಆದರೂ, ಈ ಆಲ್​ಕೈದಾ ನಿರ್ನಾಮವಾಗಿಲ್ಲ. ಲಾಡೆನ್ ಬಲಗೈ ಬಂಟ ಆಯ್ಮನ್ ಅಲ್ ಜವಾಹಿರಿ ಆಲ್​ಕೈದಾ ನೇತೃತ್ವ ವಹಿಸಿಕೊಂಡಿದ್ದಾನೆ. ಉದ್ದುದ್ದ ಭಾಷಣಗಳ ಮೂಲಕ ಉಗ್ರರ ಬ್ರೈನ್ ವಾಷ್ ಮಾಡೋದರಲ್ಲಿ ಎಕ್ಸ್​​ಪರ್ಟ್​ ಆಗಿರೋ ಜವಾಹಿರಿ, ಒಂದೊಮ್ಮೆ ಹತನಾದ ಬಗ್ಗೆ ಸುದ್ದಿಯಿತ್ತು. ಆದ್ರೆ, ಈತ ಅಫ್ಘಾನಿಸ್ತಾನದ ರಹಸ್ಯ ಸ್ಥಳದಲ್ಲಿ ಅಡಗಿಕೂತಿದ್ದಾನೆ ಎನ್ನಲಾಗುತ್ತಿದೆ. ಈತನ ತಲೆ ಮೇಲೆ ಅಮೆರಿಕ ಘೋಷಿಸಿರೋ ಬಹುಮಾನ ಮೊತ್ತ ಎಷ್ಟು ಗೊತ್ತಾ? 25 ದಶಲಕ್ಷ ಡಾಲರ್ ಅಂದ್ರೆ ಸರಿಸುಮಾರು 182 ಕೋಟಿ ರೂಪಾಯಿ.

    ಮೊದಲಿನಿಂದಲೂ ತಾಲಿಬಾನ್- ಆಲ್​ಕೈದಾ ಮಧ್ಯೆ ಅತ್ಯುತ್ತಮ ಬಾಂಡಿಂಗ್ ಇದೆ. ಮೊದಲ ಅವಧಿಯಲ್ಲಿ ಅಂದ್ರೆ 1996ರ ಹೊತ್ತಿಗೆ ಅಫ್ಘನ್​ನಿಂದ ಸೋವಿಯತ್ ರಷ್ಯಾವನ್ನ ಓಡಿಸಿ, ತಾಲಿಬಾನ್​​ ಅನ್ನು ಅಧಿಕಾರಕ್ಕೆ ತರೋದರಲ್ಲಿ ಬಿನ್ ಲಾಡೆನ್ ಶ್ರಮವೂ ಇದೆ. ಅಷ್ಟೇ ಏಕೆ, ಒಸಮಾ ಬಿನ್ ಲಾಡೆನ್ ಸೇರಿದಂತೆ ಹಲವಾರು ಆಲ್​ಕೈದಾ-ತಾಲಿಬಾನ್ ಅಗ್ರಪಂಕ್ತಿ ನಾಯಕರು ತಮ್ಮ ಕುಟುಂಬಗಳಲ್ಲಿ ಪರಸ್ಪರ ಮದುವೆ ನಿಶ್ಚಯಿಸೋ ಮೂಲಕ ಸಂಬಂಧವನ್ನ ಕೂಡ ಗಟ್ಟಿಮಾಡಿಕೊಂಡಿದ್ದಾರೆ. ಹೀಗಾಗಿ ಇತರೆ ಇಸ್ಲಾಮಿಕ್ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಇದ್ರೂ, ಆಲ್​ಕೈದಾ- ತಾಲಿ ಬಾನ್ ಮಾತ್ರ ಭಾಯಿ-ಭಾಯಿ.!

    ತಾಲಿಬಾನ್​ಗೆ ಮೊದಲಿನಿಂದಲೂ ತೆರೆಮರೆ ಸಪೋರ್ಟ್​ ಮಾಡಿಕೊಂಡು ಬಂದ ಆಲ್​ಕೈದಾ, ಕಳೆದ ತಿಂಗಳು ತಾಲಿಬಾನ್​​ ದಿಢೀರ್ ಪ್ರಾಬಲ್ಯ ಸಾಧಿಸೋದರಲ್ಲಿ ಬಿಗ್ ಬ್ರದರ್ ಪಾತ್ರ್ರ ನಿರ್ವಹಿಸಿದೆ. ಹಳೇ ಶಿಷ್ಯಂದಿರನ್ನ ಟ್ರೈನ್ ಮಾಡಿದ ಆಲ್​ಕೈದಾ ನಾಯಕರಿಗೂ ಬಗ್ಗೆ, ತಾಲಿಬಾನಿ ಉಗ್ರರಿಗೆ ಗೌರವಾದರ ಇದೆ. ಇಸ್ಲಾಮಿಕ್ ಉಗ್ರರು ಬೇರೆ ಬೇರೆ ಜಿಹಾದಿ ಸಂಘಟನೆಗಳ ಜತೆ ಚದುರಿಹೋದರೂ, ಆಲ್​ಕೈದಾಗಿರೋ ಗ್ರಿಪ್ ಕಡಿಮೆಯಾಗಿಲ್ಲ. ಐಸಿಸ್ ಜತೆ ಭಿನ್ನಮತವಿದ್ರೂ, ತಾಲಿಬಾನ್​ ಹಿರಿಯರು ಮಾತ್ರ ಆಲ್​ಕೈದಾ ಬಗೆಗಿನ ನಿಷ್ಠೆ ಬದಲಿಸಿಲ್ಲ.

    ಈಗ ತಾಲಿಬಾನಿಗಳು ಅಧಿಕಾರಕ್ಕೇರಿರೋದ್ರಿಂದ ಉಗ್ರರ ಪಾಲಿಗೆ ಅಫ್ಘಾನಿಸ್ತಾನ ಸ್ವರ್ಗವಾಗಿ ರೂಪುಗೊಂಡಿದ್ದು ಗೊತ್ತೇ ಇದೆ. ಅಲ್ಲದೆ, ಆಲ್​ಕೈದಾದಂತಹ ಟೆರರ್ ಗ್ರೂಪ್​ಗಳು ಕೂಡ ಚೇತರಿಸಿಕೊಳ್ಳಲು, ಪುನರ್ ಸಂಘಟಿಸಿಕೊಳ್ಳಲು ಚಾನ್ಸ್ ಸಿಕ್ಕಿದೆ. ಇತ್ತೀಚೆಗೆ ವಿಶ್ವ ಸಂಸ್ಥೆ ಕೊಟ್ಟ ಮಾಹಿತಿಯಂತೆ ಅಫ್ಘಾನಿಸ್ತಾನದ 15 ಭಾಗಗಳಲ್ಲಿ ಆಲ್​ಕೈದಾ ಉಗ್ರರು ಸಕ್ರಿಯರಾಗಿದ್ದಾರೆ. ಪೂರ್ವ, ದಕ್ಷಿಣ ಹಾಗೂ ಆಗ್ನೇಯ ಭಾಗದಲ್ಲಿ ಆಲ್​ಕೈದಾದ ಜಬತ್-ಅಲ್-ನಸ್ರ್ ಬಣ ಪಾರಮ್ಯ ಹೊಂದಿದೆ. ತಾಲಿಬಾನ್​​​ ನಾಯಕರಿಗೆ ರಾಜತಾಂತ್ರಿಕ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿರೋ ಆಲ್​ಕೈದಾ ನಾಯಕರು, ಉದ್ದೇಶಪೂರ್ವಕವಾಗಿ ತೆರೆಮರೆಗೆ ಸರಿದಿದ್ದಾರೆ ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ. ಸದ್ದಿಲ್ಲದೆ ಬೆಂಬಲ ಕ್ರೋಢೀರಿಸಿಕೊಳ್ತಿರೋ ಅಲ್​ಕೈದಾದಂತಹ ರಕ್ಕಸ ಗ್ರೂಪ್​​ಗಳು, ಇದೀಗ ದೊಡ್ಡ ದಾಳಿ ಮೂಲಕ ಜಾಗತಿಕವಾಗಿ ರಕ್ತ ಮುದ್ರೆ ಒತ್ತಲು ಸ್ಕೆಚ್ ಹಾಕುತ್ತಿವೆ. ಮೊದಲೇ ಅಮೆರಿಕಾದ ಘನತೆ ಮಣ್ಣುಪಾಲಾದ ದಿನಗಳಲ್ಲಿ ದೊಡ್ಡಣ್ಣನಿಗೆ ಮತ್ತಷ್ಟು ಆಘಾತ ಕೊಡೋ ಪ್ಲಾನ್ ಕೂಡ ಈ ಸಂಘಟನೆಗಳಿಗೆ ಇದೆ ಎಂಬುದು ಗುಪ್ತಚರ ಮಾಹಿತಿ.

    ಕಾಬೂಲ್​​ನಲ್ಲಿ ಅಮೆರಿಕ ತೆರವಿಗೂ ಮುನ್ನ ಕೊನೇ ಕ್ಷಣದಲ್ಲಿ ನಡೆದ ಆತ್ಮಾಹುತಿ ದಾಳಿಗಳಂತೆ ಇನ್ನೂ ದೊಡ್ಡ ಪ್ರಮಾಣದ ಅಟ್ಯಾಕ್ ನಡೆಸೋಕೆ ಆಲ್​ಕೈದಾ ಸೇರಿ ದಂತೆ ಇತರೆ ಉಗ್ರ ಸಂಘಟನೆಗಳು ತಾಲೀಮು ನಡೆಸಿವೆ. ಈ ಮೂಲಕ ಜಾಗತಿಕವಾಗಿ ಜಿಹಾದ್ ಹೋರಾಟಕ್ಕೆ ಚುರುಕು ಕೊಡೋಕೆ ಆಲ್​ಕೈದಾ ರೆಕ್ಕೆಬಿಚ್ಚುತ್ತಿದೆ. ತಾಲಿಬಾನ್ ಆಸರೆಯಿಂದಾಗಿ.!

    2001ರ 9/11ರಂದು ನಡೆದಿದ್ದೇನು?
    ಸೆಪ್ಟೆಂಬರ್​ 11, 2001ರಂದು ನಡೆದಿದ್ದು ಏನು? ಅಂದು 3000 ಮಂದಿ ಪ್ರಾಣದ ಜತೆ ಹೋಗಿದ್ದು ಅಮೆರಿಕದ ಮಾನ. ವಿಶ್ವದ ದೊಡ್ಡಣ್ಣ ಎಂಬ ಹಮ್ಮಿನಿಂದ ಇದ್ದ ಅಮೆರಿಕ ಸ್ವಾಭಿಮಾನಕ್ಕೇ ಪೆಟ್ಟು.

    ಅಮೆರಿಕಾ ಟಾರ್ಗೆಟ್ ಮಾಡಿದ್ದೇಕೆ ಲಾಡೆನ್?
    ಹಾಗೆ ನೋಡಿದ್ರೆ 1980ರ ದಶಕದಲ್ಲೇ ರೂಪುಗೊಂಡ ಆಲ್​ಕೈದಾ, ಮೊದಲು ತಲೆ ಎತ್ತಿದ್ದು ಅಫ್ಘಾನಿಸ್ತಾನದಲ್ಲಿ. ಜಿಹಾದಿ ಗುಂಪುಗಳ ಜತೆ ಸೇರಿದ ಆಗರ್ಭ ಶ್ರೀಮಂತ ಒಸಮಾ ಬಿನ್ ಲಾಡೆನ್, ಅಫ್ಘಾನಿಸ್ತಾನದಲ್ಲಿ ಪಾರಮ್ಯ ಮೆರೆದಿದ್ದ ರಷ್ಯನ್ನರ ಪ್ರಭುತ್ವ ಅಂತ್ಯಗೊಳಿಸೋ ಗುರಿಯೊಂದಿಗೆ ಅಫ್ಘನ್​​ಗೆ ಕಾಲಿಟ್ಟ. ಆಲ್​ಕೈದಾ ಹುಟ್ಟುಹಾಕಿದ ಒಸಾಮಾ ಬಿನ್ ಲಾಡೆನ್, ಮೊದಲು ರಷ್ಯಾ ಮೇಲೆ ಕೆಂಗಣ್ಣು ಬೀರಿದ್ರೆ, ಆ ಬಳಿಕ ಈತನ ಕಣ್ಣು ಬಿದ್ದಿದ್ದು ಅಮೆರಿಕ ಮೇಲೆ. 1996ರ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಮೇಲುಗೈ ಸಾಧಿಸಿದ ತಾಲಿಬಾನಿಗಳಿಗೆ ಬೆನ್ನೆಲುಬಾಗಿದ್ದೇ ಈ ಲಾಡೆನ್. ಹಾಗೆಯೇ ತಾಲಿಬಾನ್ ಆಡಳಿತದಲ್ಲಿ ಒಸಾಮಾ ಬಿನ್ ಲಾಡೆನ್ ಕೇಂದ್ರ ನೆಲೆಯಾಗಿ ಮಾರ್ಪಾಟಾಯಿತು ಅಪ್ಘಾನಿಸ್ತಾನ. ಆಗ ಅಮೆರಿಕಾ ಮೇಲೆ ದಾಳಿಗೆ ಸ್ಕೆಚ್ ಹಾಕಿದ ಜಿಹಾದಿ ಉಗ್ರರ ಹಾಟ್​ ಸ್ಪಾಟ್ ಆಗಿದ್ದೇ ಈ ಅಫ್ಘಾನಿಸ್ತಾನ. ಮೊದಲೇ ಇರಾಕ್, ಸೋಮಾಲಿಯಾ ಸೇರಿದಂತೆ ಹಲವೆಡೆ ಅಮೆರಿಕ ತಳೆದ ಮುಸ್ಲಿಂ ವಿರೋಧಿ ನೀತಿಗಳ ವಿರುದ್ಧ ಅಲ್​ಕೈದಾ ಆಕ್ರೋಶ ಹೊಂದಿತ್ತು. ನಾನಾ ದೇಶಗಳಲ್ಲಿ ಮುಸ್ಲಿಮರ ಮೇಲೆ ದಾಳಿ ನಡೆಸಲು ಅಮೆರಿಕದ ನೀತಿಗಳೇ ಕಾರಣ ಎಂಬುದು ಅಲ್​ಕೈದಾ ದೂರು. ಅಮೆರಿಕಾದಿಂದ ಮುಸ್ಲಿಮರಿಗೆ ಅಪಾಯ ಇದೆ ಎಂದೇ ನಂಬಿದ ಬಿನ್ ಲಾಡೆನ್, ಇದಕ್ಕಾಗಿ ಆ ದೇಶಕ್ಕೆ ಪಾಠ ಕಲಿಸೋಕೆ ಪ್ಲಾನ್ ಮಾಡಿದ್ದೇ 9/11 ಅಟ್ಯಾಕ್.

    ಅಷ್ಟಕ್ಕೂ ಅಮೆರಿಕಾದ ಅವಳಿ ಗೋಪುರ ಸೇರಿದಂತೆ ವಿವಿಧೆಡೆ ದಾಳಿ ನಡೆಸೋ ಫುಲ್ ಬ್ಲ್ಯೂಪ್ರಿಂಟ್ ರೆಡಿಮಾಡಿದ್ದು ಲಾಡೆನ್​ನ ಆಪ್ತ ಖಲೀದ್ ಶೇಖ್ ಮಹಮದ್. ಇಸ್ರೇಲಿಗಳಿಗೆ ಅಮೆರಿಕ ಬೆಂಬಲ ಕೊಟ್ಟ ಕಾರಣ ದ್ವೇಷ ಬೆಳೆಸಿಕೊಂಡ, ಖಲೀದ್ ಶೇಖ್ ಮಹಮದ್, ಅಮೆರಿಕಾ ಮೇಲಿನ ದಾಳಿಗೆ ಕಂಪ್ಲೀಟ್ ಪ್ಲ್ಯಾನ್ ರೂಪಿಸಿದ. ಇದಕ್ಕೆ ಅಲ್​ಕೈದಾ ಸುಪ್ರೀಂ ಲೀಡರ್ ಬಿನ್ ಲಾಡೆನ್ ಓಕೆ ಎಂದ ಬೆನ್ನಲ್ಲೇ ಅಟ್ಯಾಕ್​​ಗೆ ರೆಡಿಯಾಯಿತು ನೀಲನಕ್ಷೆ. ಇದರಂತೆ 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಿಂದ ನಾಲ್ಕು ಪ್ರಯಾಣಿಕ ವಿಮಾನಗಳನ್ನ ಅಪಹರಿಸಿದರು ದಾಳಿ ನೇತೃತ್ವ ವಹಿಸಿದ ಮಹಮದ್ ಅಟ್ಟಾ ಸೇರಿದಂತೆ 19 ಆತ್ಮಾಹುತಿ ದಳದ ಉಗ್ರರು.

    ಅಮೆರಿಕ ಮೇಲಿನ ದಾಳಿಗೆ ದಿನ ಫೈನಲ್ ಮಾಡಿದ ಅಲ್​ಕೈದಾ ಅಗ್ರನಾಯಕ ಬಿನ್ ಲಾಡೆನ್, ಆತ್ಮಾಹುತಿ ದಾಳಿಕೋರರಿಗೆ ಕಾನ್ಫಿಡೆನ್ಸ್ ಬಿಲ್ಡ್ ಮಾಡೋಕೆ ಪ್ರಾಕ್ಟಿಸ್​​​​ ಎಂಬಂತೆ ಅಟ್ಯಾಕ್​ ಒಂದನ್ನು ನಿರ್ದೇಶಿದ. ಒಂದೇ ಕಲ್ಲಿಗೆ ಎರಡು ಹಕ್ಕಿ ಎಂಬಂತೆ ಆಗ ಲಾಡೆನ್ ಕಣ್ಣುಬಿದ್ದಿದ್ದು ಪಂಜ್​ಶಿರ್ ಸಿಂಹ ಅಹಮದ್ ಶಾ ಮಸೂದ್​ ಮೇಲೆ. ಇದರಂತೆ ಸೆಪ್ಟೆಂಬರ್ 11ಕ್ಕೆ 2 ದಿನ ಮುಂಚೆ ಅಂದ್ರೆ 2001ರ ಸೆಪ್ಟೆಂಬರ್ 9ರಂದು ಅಲ್​ಕೈದಾ ರಕ್ಕಸರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಬಲಿಯಾದರು ಆಗ ತಾಲಿಬಾನ್​ ವಿರುದ್ಧ ಸೆಟೆದು ನಿಂತಿದ್ದ ವೀರ ಅಹಮದ್ ಶಾ ಮಸೂದ್. ಈ ಅಹಮದ್ ಶಾ ಮಸೂದ್ ಬೇರಾರೂ ಅಲ್ಲ..ಈಗಲೂ ತಾಲಿಬಾನಿಗಳಿಗೆ ಸಿಂಹಸ್ವಪ್ನ ಆಗಿರೋ ಅಹಮದ್ ಮಸೂದ್​ನ​ ತಂದೆ.

    ಈ ಫಿದಾಯಿನ್ ದಾಳಿ ಸಕ್ಸಸ್ ಆದ ಬೆನ್ನಲ್ಲೇ ಮತ್ತಷ್ಟು ಉತ್ತೇಜನೆಗೊಂಡ ಅಲ್​ಕೈದಾ, ಅಮೆರಿಕ ಮೇಲಿನ ಉಗ್ರ ದಾಳಿಗೆ ಹೆಜ್ಜೆ ಮುಂದಿಟ್ಟಿತು. ಪ್ರೀಪ್ಲಾನ್​​ನಂತೆ ಅಮೆರಿಕಾದಲ್ಲಿ 4 ವಿಮಾನಗಳನ್ನ ಅಪಹರಿಸಿದ ಅಲ್​ಕೈದಾ ಉಗ್ರರು, ಇವುಗಳ ಪೈಕಿ ಎರಡು ಪ್ಲೇನ್​​ಗಳನ್ನು ನ್ಯೂಯಾರ್ಕ್​ನ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆಸಿದರು. ಉಗ್ರರು ಅಪಹರಿಸಿದ ಮತ್ತೊಂದು ವಿಮಾನ ವಾಷಿಂಗ್​ಟನ್​​ನ ಪೆಂಟಗನ್​ ಮೇಲೆ ಡಿಕ್ಕಿ ಹೊಡೆಯಿತು. ಇನ್ನೊಂದು ಅಪಹೃತ ವಿಮಾನದಲ್ಲಿ ಭಯೋತ್ಪಾದಕರಿಗೆ ಪ್ರಯಾಣಿಕರು ತೀವ್ರ ಪ್ರತಿರೋಧ ತೋರಿದ ಹಿನ್ನೆಲೆ, ದಾಳಿ ವಿಫಲವಾಗಿ ಪ್ಲೇನ್ ಪೆನ್ಸಿಲ್ವೇನಿಯಾದಲ್ಲಿ ವಿಮಾನ ನೆಲಕ್ಕಪ್ಪಳಿಸಿತು.

    ಅವಳಿ ಗೋಪುರ ದಾಳಿಗೆ ಬಲಿಯಾದವರ ಸಂಖ್ಯೆ 2754. ಇನ್ನ, ಪೆಂಟಗಾನ್ ಮೇಲಿನ ಅಟ್ಯಾಕ್​ನಲ್ಲಿ ಮೃತಪಟ್ಟವರು 184. ಪೆನ್ಸಿಲ್ವೇನಿಯಾದಲ್ಲಿ ಕೆಳಕ್ಕುರುಳಿದ ವಿಮಾನದಲ್ಲಿ ಅಸುನೀಗಿದವರು 40 ಮಂದಿ. ಇನ್ನ, ದಾಳಿ ನಂತರ ರಕ್ಷಣಾ ಕಾರ್ಯ ನಡೆಸುವಾಗ ಜೀವಬಿಟ್ಟವ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸಂಖ್ಯೆ 400ಕ್ಕೂ ಹೆಚ್ಚು. ಹಾಗೆಯೇ ಈ ನಾಲ್ಕೂ ವಿಮಾನಗಳನ್ನ ಅಪಹರಿಸಿದ 19 ಆತ್ಮಾಹುತಿ ಸದಸ್ಯರು ಕೂಡ ಬಲಿ ಯಾದರು. ಹೀಗೆ ಅಲ್​ಕೈದಾ ಆತ್ಮಾಹುತಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಒಟ್ಟುಲೆಕ್ಕ 3000ಕ್ಕೂ ಹೆಚ್ಚು. ಇದು ನೇರ ಲೆಕ್ಕವಾದ್ರೆ, ಈ ಘಟನೆ ಯಿಂದ ಪರೋಕ್ಷವಾಗಿ ತೊಂದರೆ ಅನುಭವಿಸುತ್ತಿರೋರು ಸಹಸ್ರಾರು ಮಂದಿ. ದಾಳಿಯಿಂದ ಎದ್ದ ಭೀಕರ ಹೊಗೆ, ಧೂಳು, ಸುತ್ತಮುತ್ತಲಿನ ಜನರ ಬುದಕನ್ನ ಅಸಹನೀಯಗೊಳಿಸಿದೆ. ದಾಳಿ ಬಳಿಕ ಉಸಿರಾಟ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಎದುರಿಸ್ತಿರೋರ ಸಂಖ್ಯೆ 80 ಸಾವಿರ.

    ಭಯೋತ್ಪಾದನೆ ವಿರುದ್ಧ ಯುದ್ಧ ಘೋಷಿಸಿದ ಅಮೆರಿಕಾ, 20 ವರ್ಷಗಳ ಕಾಲ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಕ್ಕೆ ಹಣದ ಹೊಳೆಯನ್ನೇ ಹರಿಸಿದೆ. ಆದ್ರೆ, ಇದರಿಂದ ಆದ ಲಾಭ ಏನು ಅಂತಾ ನೋಡಿದ್ರೆ,..ಕಾಣಸಿಗೋದು ಶೂನ್ಯ.! ಬೆಟ್ಟ ಅಗೆದು ಇಲಿ ಹಿಡಿದ ಕತೆ ನೆನಪಿರಬಹುದು..ಅಮೆರಿಕಾದ್ದು ಅದೇ ಸ್ಟೋರಿ.

    ಯಾವಾಗ 9/11ರಂದು ಅಮೆರಿಕಾದ ಅವಳಿ ಗೋಪುರಗಳ ಮೇಲೆ ಅಲ್​​ಕೈದಾ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ರೋ, ದೊಡ್ಡಣ್ಣನ ಜಂಘಾ ಬಲವೇ ಉದುಗಿಹೋಯಿತು. ಇದರಿಂದ ಸೇಡಿನ ಜ್ವಾಲೆಯಲ್ಲಿ ಧಗಧಗಿಸಿದ ಅಮೆರಿಕಾ, ಆಗ ಘೋಷಿಸಿದ್ದೇ ಉಗ್ರವಾದ ವಿರುದ್ಧದ ಸಮರ. ಇದರ ಎಫೆಕ್ಟ್ ..ಒಸಮಾ ಬಿನ್ ಲಾಡೆನ್ ಅಡಗಿಕೂತಿದ್ದ ಎನ್ನಲಾದ ಅಫ್ಘಾನಿಸ್ತಾನದ ಮೇಲೆ ದಾಳಿ..ತಾಲಿಬಾನ್​ ಉಗ್ರರಿಂದ ಅಫ್ಘಾನಿಸ್ತಾನ ಮುಕ್ತಿ..

    ಈ ಸಂದರ್ಭದಲ್ಲಿ ಲಾಡೆನ್ ಕೈಗೆ ಸಿಗದಿದ್ರೂ, ಅಮೆರಿಕಾ ಅಫ್ಘನ್​​ನಲ್ಲೇ ಠಿಕಾಣಿ ಹೂಡೋ ಮೂಲಕ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸಿತು. ಉಗ್ರವಾದದ ಬೇರುಗಳನ್ನ ಬುಡಸಮೇತ ಕಟ್ ಮಾಡಲೇಬೇಕು ಅಂತಾ ಪಣತೊಟ್ಟ ಅಮೆರಿಕಾ, ಇದಕ್ಕಾಗಿ 20 ವರ್ಷಗಳ ಕಾಲ ಅಫ್ಘನ್​​ನಲ್ಲಿ ತನ್ನ ಸೇನೆಯನ್ನ ನಿಯೋಜಿಸಿತು. ನ್ಯಾಟೋ ಪಡೆಗಳು ಕೂಡ ಅಮೆರಿಕಾಗೆ ಸಾಥ್ ಕೊಟ್ಟವು. ಇನ್ನ, ಅಫ್ಘಾನಿಸ್ತಾನದಲ್ಲಿ ಉಗ್ರರ ಬಾಲ ಕತ್ತರಿಸೋ ಪ್ಲಾನ್​ನಲ್ಲಿ ಅಮೆರಿಕಾ ಥೈಲಿ ಥೈಲಿ ಹಣದ ಹೊಳೆಯನ್ನೇ ಹರಿಸಿದೆ. ಈ 20 ವರ್ಷಗಳ ಕಾಲ ಅಫ್ಘನ್​​ನಲ್ಲಿ ಅಮೆರಿಕಾ ಖರ್ಚು ಮಾಡಿದ ಮೊತ್ತ ಎಷ್ಟು ಗೊತ್ತಾ? 2 ಟ್ರಿಲಿಯನ್ ಡಾಲರ್. ಅಂದ್ರೆ 146 ಲಕ್ಷ ಕೋಟಿ ರೂಪಾಯಿ.

    ಹಾಗೆಯೇ ಅಮೆರಿಕಾ ಮಾಡಿದ ಮತ್ತೊಂದು ಎಡವಟ್ಟು ಎಂದ್ರೆ, ಪಾಕಿಸ್ತಾನಕ್ಕೂ ಕೊಟ್ಟ ಅನುದಾನ. ಭಯೋತ್ಪಾದಕರ ವಿರುದ್ಧ ಹೋರಾಡುವಂತೆ ಪಾಕಿಸ್ತಾನಕ್ಕೆ ಪೂಸಿ ಹೊಡೆದ ಅಮೆರಿಕಾ, ಇದಕ್ಕಾಗಿ ಪ್ರತಿ ವರ್ಷ ಹಣ ಸಂದಾಯ ಮಾಡುತ್ತಾ ಬಂದಿದೆ. ಕಳೆದ 15 ವರ್ಷಗಳಲ್ಲಿ ಅಮೆರಿಕಾ ಪಾಕಿ ಸ್ತಾನಕ್ಕೆ ಕೊಟ್ಟ ಹಣಕಾಸು ನೆರವು 2.40 ಲಕ್ಷ ಕೋಟಿ ರೂಪಾಯಿ. ಉಗ್ರರ ಕಾರ್ಖಾನೆಗೇ ಉಗ್ರ ವಿರುದ್ಧ ಹೋರಾಡಿ ಅಂತಾ ಅಮೆರಿಕಾ ಸುಪಾರಿ ಕೊಟ್ಟಂತಾಯಿತು. ಅಮೆರಿಕಾ ಕೊಟ್ಟ ಕೋಟಿ ಕೋಟಿ ಹಣವನ್ನ ಪಾಕಿಸ್ತಾನ ಬಳಸಿಕೊಂಡಿದ್ದು ತನ್ನ ನೆಲದಲ್ಲಿರೋ ಭಯೋತ್ಪಾದಕರನ್ನ ಸಾಕೋಕೆ. ಇದರಿಂದ ಕೊಬ್ಬಿದ ಉಗ್ರರು, ಅಫ್ಘನ್​​ನಲ್ಲಿದ್ದ ಅಮೆರಿಕ ಸೈನಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದರು. ಇದರಿಂದ ಸಹಸ್ರಾರು ಅಮೆರಿನ್ ಯೋಧರನ್ನ ಕಳೆದುಕೊಂಡಿತು ಅಮೆರಿಕ. ಒಂಥರಾ ಕಾಸು ಕೊಟ್ಟು ದಾಳಿ ಮಾಡಿಸಿಕೊಂಡಂತಾಯಿತು ಅಮೆರಿಕ. ಕೊನೆಗೆ ಒಸಮಾ ಬಿನ್ ಲಾಡೆನ್ ಕೂಡ ಸಿಕ್ಕಿಬಿದ್ದಿದ್ದು ಇದೇ ಪಾಕಿಸ್ತಾನದ ಅಬೆಟೋಬಾದ್​ನಲ್ಲಿ.

    ಇನ್ನ, 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ತನುಮನಧನ ಧಾರೆ ಎರೆದ ಅಮೆರಿಕ ಇಲ್ಲಿ ಸಾಧಿಸಿದ್ದಾದರೂ ಏನು? ವಿಶ್ವಮಟ್ಟದಲ್ಲಿ ಘನತೆ ಮಣ್ಣು ಪಾಲು ಅಷ್ಟೇ. ಶಾಂತಿ ನೆಲಸುವಂತೆ ಮಾಡೋ ಉದ್ದೇಶದಿಂದ ಎರಡು ದಶಕಗಳ ಕಾಲ ಅಫ್ಘನ್​ ನೆಲದಲ್ಲಿದ್ದ ಅಮೆರಿಕ, ಕೊನೆಗೆ ಬರಿಗೈಲಿ ಜಾಗ ಖಾಲಿ ಮಾಡಬೇಕಾಯಿತು. ಕೊನೆ ಕ್ಷಣದಲ್ಲಿ ಕೂಡ ಅಟ್ಟಹಾಸ ಮೆರೆದ ತಾಲಿಬಾನಿಗಳು, ಅಮೆರಿಕಗೇ ವಾರ್ನಿಂಗ್ ಕೊಡುವಷ್ಟರ ಮಟ್ಟಿಗೆ ಚಿಗುರಿ ಬಿಟ್ಟರು. ಇದರಿಂದಾಗಿ ಅಮೆರಿಕ 20 ವರ್ಷಗಳ ಕಾಲ ಅಫ್ಘನ್​ನಲ್ಲಿ ವಹಿಸಿದ ಶ್ರಮ, ಹೊಳೆಯಲ್ಲಿ ಹುಣಸೆ ಕಿವುಚಿದಂತಾಯಿತು ಅಷ್ಟೇ.

    ಇನ್ನೊಂದೆಡೆ, ಅಫ್ಘನ್​ನಲ್ಲಿ ಮುಜುಗರ ಅನುಭವಿಸಿರೋ ಅಮೆರಿಕವನ್ನ ಮತ್ತೆ ಅಣಕಿಸಿದ್ದಾರೆ ತಾಲಿಬಾನ್​ ಉಗ್ರರು. ಅವಳಿ ಗೋಪುರದ ಮೇಲಿನ ದಾಳಿ ನಡೆದ ದಿನ, ಸೆಪ್ಟೆಂಬರ್ 11 ರಂದೇ ಫಿಕ್ಸ್ ಆದಂತಿದೆ ಸೇಡಿನ ಮುಹೂರ್ತ. ಅಂದೇ ನೂತನ ಸರ್ಕಾರದ ಪದಗ್ರಹಣ ಸಮಾರಂಭ ಏರ್ಪಡಿ ಸಲು ಉಗ್ರರು ಮುಂದಾಗಿದ್ದಾರೆ. 20ನೇ ವರ್ಷದ ಕರಾಳ ಆಚರಣೆಯ ದಿನವನ್ನೇ ಪ್ರಮಾಣವಚನಕ್ಕೆ ಆಯ್ದುಕೊಳ್ಳೋ ಮೂಲಕ ಅವಳಿಗೋಪುರ ದಾಳಿಯನ್ನ ಸಂಭ್ರಮಿಸಲು ಹೊರಟಿದ್ದಾರೆ ತಾಲಿಬಾನಿ ರಕ್ಕಸರು. ಅಮೆರಿಕಾಗೆ ಇದೊಂಥರಾ ಡಬಲ್ ಶಾಕ್.

    ಅಮೆರಿಕದ ಪಾಲಿಗೆ ಕರಾಳ ದಿನ ಸೆಪ್ಟೆಂಬರ್ 11. ಇದಕ್ಕಿಂತ ಹೆಚ್ಚಾಗಿ ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿದ ಅಮೆರಿಕ, ಇದರಲ್ಲಿ ಯಶಸ್ವಿ ಯಾಯ್ತಾ? 9/11ರ ಎಫೆಕ್ಟ್ ಏನು ಅಂತಾ ನೋಡಿದ್ರೆ, ಸಿಗೋ ಉತ್ತರ ಅಸ್ಪಷ್ಟ. ಬಿನ್ ಲಾಡೆನ್​​ನನ್ನ ಸದೆಬಡಿದಿದ್ದಷ್ಟೇ ಲಾಭ. 20 ವರ್ಷಗಳಲ್ಲಿ ಇಸ್ಲಾಮಿಕ್ ಉಗ್ರರು ರಕ್ತಬೀಜಾಸುರರ ರೀತಿ ಹರಡಿದ್ದಾರೆ ಹೊರತು ಅಮೆರಿಕಾ ಕನಸು ಕಂಡಂತೆ ಉಗ್ರವಾದದ ದಮನ ಆಗಿಲ್ಲ. ಅಮೆರಿಕದ ಶ್ರಮ ವ್ಯರ್ಥ ಅಂತಾನೇ ಹೇಳಬಹುದು.

    ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

    ತಾಲಿಬಾನ್ ಹೇಳಿದ್ದೇ ಬೇರೆ..ಆಗ್ತಿರೋದೇ ಬೇರೆ! ಬಯಲಾಗ್ತಿದೆ ತಾಲಿಬಾನಿಗಳ ಅಸಲಿ ಮುಖವಾಡ

    ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts