More

    ಎನ್​ಡಿಎಗೆ ನಿತೀಶ್ ವಿದಾಯ? ಮೈತ್ರಿಪಕ್ಷದ ಮೇಲೆ ನಿತೀಶ್ ಆಕ್ರೋಶಕ್ಕೆ ಕಾರಣಗಳು ಹೀಗಿವೆ…

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಅಧಿಕಾರಕ್ಕೆ 2 ವರ್ಷವಾಗಿದ್ದರೂ ಬಿಜೆಪಿ ಜತೆಗೆ ನಿತೀಶ್ ಕುಮಾರ್ ಸಂಬಂಧ ಅಷ್ಟಕ್ಕಷ್ಟೇ. ಕೇಂದ್ರ ಸರ್ಕಾರದ ಹಲವು ಮಹತ್ವದ ಸಭೆಗಳಲ್ಲಿ ಗೈರಾಗುವ ಕೇಂದ್ರದ ನಾಯಕರಿಗೆ ತಮ್ಮ ಮುನಿಸಿನ ಕುರಿತ ಪರೋಕ್ಷ ಸಂದೇಶಗಳನ್ನು ರವಾನಿಸುತ್ತಿದ್ದ ನಿತೀಶ್, ಇಂದು (ಆ.9) ಪಟನಾದಲ್ಲಿ ಜೆಡಿಯು ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರೊಂದಿಗೆ ಸಭೆ ಕರೆದಿದ್ದು ರಾಜಕೀಯ ವಲಯದಲ್ಲಿ ವ್ಯಾಪಕ ಕುತೂಹಲ ಕೆರಳಿಸಿದೆ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ.

    ಮತ್ತೊಂದೆಡೆ ಆರ್​ಜೆಡಿ (ರಾಷ್ಟ್ರೀಯ ಜನತಾ ದಳ) ನಾಯಕ ತೇಜಸ್ವಿ ಯಾದವ್ ಕೂಡ ಪಕ್ಷದ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಆರ್​ಜೆಡಿ ಉಪಾಧ್ಯಕ್ಷ ಶಿವಾನಂದ ತಿವಾರಿ ಕೂಡ ನಿತೀಶ್ ಕುಮಾರ್ ಎನ್​ಡಿಎ ಮೈತ್ರಿಕೂಟ ತೊರೆದಲ್ಲಿ, ಅವರನ್ನು ಆಲಂಗಿಸಲು ನಾವು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ವಿರುದ್ಧದ ರಾಜಕೀಯ ಅಭಿಯಾನಕ್ಕೆ ನಿತೀಶ್ ಜತೆ ಕೈಜೋಡಿಸಲು ಸಿದ್ಧ ಎಂಬ ಸಂದೇಶ ಆರ್​ಜೆಡಿ ಕಡೆಯಿಂದ ಬಂದಿರುವುದರಿಂದ ಬಿಹಾರ ಎನ್​ಡಿಎ ಸರ್ಕಾರ ತನ್ನ ಕೊನೆ ದಿನಗಳನ್ನು ಎಣಿಸುತ್ತಿದೆ ಎಂಬ ಮಾತುಗಳು ದಟ್ಟವಾಗಿವೆ.

    ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದರೂ ಆಡಳಿತಾರೂಢ ಜೆಡಿಯು ಬಗ್ಗೆ ಆರ್​ಜೆಡಿ ಮೌನವಹಿಸಿತ್ತು. ಅದೇ ರೀತಿ ಹಲವು ವಿಷಯಗಳಲ್ಲಿ ನಿತೀಶ್ ಬಗ್ಗೆ ಆರ್​ಜೆಡಿ ಮೌನವಹಿಸಿರುವುದು ಜೆಡಿಯು-ಆರ್​ಜೆಡಿ ಮರುಮೈತ್ರಿಯ ಸಂಕೇತ ಎನ್ನಲಾಗುತ್ತಿದೆ. ನಿತೀಶ್ ಕುಮಾರ್ ಕಾಲಕಾಲಕ್ಕೆ ರಾಜಕೀಯ ಮಿತ್ರರನ್ನು ಬದಲಿಸುವ ಕಾರಣಕ್ಕಾಗಿಯೇ ಅವರನ್ನು ಪಲ್ಟು ರಾಮ್ ಎಂದು 2017ರಲ್ಲಿ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದರು. ಅಂದಿನಿಂದ ವಿರೋಧಿಗಳು ನಿತೀಶ್​ರನ್ನು ಪಲ್ಟು ರಾಮ್ ಎಂದೇ ವ್ಯಂಗ್ಯವಾಡುತ್ತಾರೆ.

    2014ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೊಷಿಸಿದ ಕಾರಣಕ್ಕಾಗಿ ಬಿಜೆಪಿ ಜತೆಗಿನ 20 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದ ನಿತೀಶ್ ಕುಮಾರ್, 2015ರ ವಿಧಾನಸಭೆ ಚುನಾವಣೆಗೆ ಸಾಂಪ್ರದಾಯಿಕ ವಿರೋಧಿ ಆರ್​ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಆಡಳಿತದಲ್ಲಿ ಲಾಲು ಯಾದವ್ ತೀವ್ರ ಹಸ್ತಕ್ಷೇಪದಿಂದ ಬೇಸತ್ತಿದ್ದ ನಿತೀಶ್ ಕುಮಾರ್, 2017ರಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ವಾಪಸಾದರು. 2020ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಮೂಲೆಗುಂಪು ಮಾಡಲೆಂದೇ ಬಿಜೆಪಿ ನಾಯಕರು ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್​ರನ್ನು ಅಸ್ತ್ರವನ್ನಾಗಿ ಬಳಸಿಕೊಂಡರು ಎಂಬ ಆಕ್ರೋಶ ಈಗಲೂ ನಿತೀಶ್​ಗಿದೆ. ಆದರೆ, ಸಿಎಂ ಸ್ಥಾನದ ಗೌರವ ನೀಡಿದ್ದರಿಂದ ನಿತೀಶ್ ಸುಮ್ಮನಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು 44 ಸೀಟುಗಳನ್ನಷ್ಟೇ ಗೆದ್ದರೂ ನಿತೀಶ್ ಮುಖ್ಯಮಂತ್ರಿ ಪದವಿಗೇರಿದ್ದರು.

    ದೆಹಲಿ ನಾಯಕರ ಮೇಲೆ ಅಸಮಾಧಾನ?
    ರಾಜ್ಯ ಸರ್ಕಾರ ಹಾಗೂ ಮಂತ್ರಿ ಮಂಡಲದ ಮೇಲೆ ಬಿಜೆಪಿಯ ದೆಹಲಿ ನಾಯಕರು (ಮುಖ್ಯವಾಗಿ ಅಮಿತ್ ಷಾ) ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಅಸಮಾಧಾನ ನಿತೀಶ್​ಗಿದೆ ಎಂಬ ಮಾತುಗಳಿವೆ. ಭಾನುವಾರ ನೀತಿ ಆಯೋಗದ ಸಭೆಯಿಂದಲೂ ಅವರು ದೂರವಿದ್ದರು. ನಿರ್ಗಮಿತ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗೆ ಎನ್​ಡಿಎ ನಾಯಕರು ಏರ್ಪಡಿಸಿದ್ದ ವಿದಾಯ ಕಾರ್ಯಕ್ರಮದಲ್ಲೂ ಭಾಗಿಯಾಗಲಿಲ್ಲ. 2024ರ ಲೋಕಸಭೆ ಚುನಾವಣೆ ಹಾಗೂ 2025ರ ವಿಧಾನಸಭೆ ಚುನಾವಣೆಯನ್ನು ಜೆಡಿಯು-ಬಿಜೆಪಿ ಒಟ್ಟಾಗಿ ಎದುರಿಸಲಿದೆ ಎಂದು ಕೆಲ ದಿನಗಳ ಹಿಂದೆ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಆದರೆ, ಉಭಯ ಪಕ್ಷಗಳ ಸಂಬಂಧ ಸದ್ಯದಲ್ಲೇ ಕೊನೆಗೊಳ್ಳುವ ಲಕ್ಷಣ ಕಾಣುತ್ತಿದೆ. ಕೇಂದ್ರದ ಎನ್​ಡಿಎ ಸರ್ಕಾರದಲ್ಲಿ ಜೆಡಿಯು ನಾಯಕ ಆರ್​ಸಿಪಿ ಸಿಂಗ್​ರನ್ನು ಮಂತ್ರಿ ಮಾಡಬೇಕೆಂದು ನಿತೀಶ್ ಬಯಸಿರಲಿಲ್ಲ. ಆದರೆ, ಬಿಜೆಪಿ ಜತೆಗಿನ ಆತ್ಮೀಯತೆಯಿಂದಾಗಿ ಬಿಜೆಪಿ ನಾಯಕರೇ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ನೇಮಿಸಿದ್ದರು. ಇದೇ ಕಾರಣಕ್ಕಾಗಿ ಆರ್​ಸಿಪಿ ಸಿಂಗ್ ರಾಜ್ಯಸಭೆ ಅವಧಿ ಮುಕ್ತಾಯಗೊಂಡ ಬಳಿಕ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡಲು ಮುಂದಾಗಲಿಲ್ಲ.

    ಸೋನಿಯಾ ಭೇಟಿಗೆ ಉತ್ಸುಕ
    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಗೆ ನಿತೀಶ್ ಸಮಯ ಕೇಳಿದ್ದಾರೆ. ಸದ್ಯ ರಾಜ್ಯದಲ್ಲಿ 19 ಕಾಂಗ್ರೆಸ್ ಶಾಸಕರಿದ್ದಾರೆ. ಆರ್​ಜೆಡಿ ಬಳಿ 79 ಶಾಸಕರಿದ್ದರೆ, ಜೆಡಿಯು 45 ಶಾಸಕರಿದ್ದಾರೆ. ಈ ಮೂರೂ ಪಕ್ಷಗಳು ಮೈತ್ರಿಯಾದಲ್ಲಿ ಸಂಖ್ಯಾ ಬಲ 143ಕ್ಕೇರಲಿದೆ. 242 ಶಾಸಕರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 122 ಶಾಸಕರ ಸಂಖ್ಯಾಬಲವಿದ್ದರೆ ಸಾಕು. ಜೆಡಿಯು-ಆರ್​ಜೆಡಿ ಮೈತ್ರಿಕೂಟ ಸರ್ಕಾರ ಬಂದರೆ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಬಹುದು. ಹೀಗಾಗಿ, ಕಾಂಗ್ರೆಸನ್ನೂ ಸೇರಿಸಿಕೊಂಡು ಸರ್ಕಾರ ರಚಿಸಿದಲ್ಲಿ ಹೊಸ ಸರ್ಕಾರ ರಾಜಕೀಯವಾಗಿ ಬಲಿಷ್ಠಗೊಳ್ಳಲಿದೆ ಎನ್ನುವುದು ನಿತೀಶ್ ಲೆಕ್ಕಾಚಾರ ಎನ್ನಲಾಗಿದೆ.

    ನಿತೀಶ್​ಗೆ ಲಾಭವೇನು?
    ಎನ್​ಡಿಎ ತೊರೆದು ನಿತೀಶ್ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ, ಇದರಿಂದಾಗುವ ರಾಜಕೀಯ ಲಾಭದ ಬಗ್ಗೆ ಸ್ಪಷ್ಟತೆ ಇಲ್ಲ. 2025ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರಾ ಎಂಬುದಕ್ಕೂ ಈಗ ಉತ್ತರ ಸಿಗದು.

    ನಿತೀಶ್ ಆಕ್ರೋಶಕ್ಕೆ ಕೆಲ ಕಾರಣಗಳು
    – ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್​ರನ್ನು (ಬಿಜೆಪಿ ಶಾಸಕ) ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆಗೆ ಒಪ್ಪಿಲ್ಲ.
    – ರಾಜ್ಯ ಮಂತ್ರಿಮಂಡಲಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ವೇಳೆ ತಮ್ಮ ಅಭಿಪ್ರಾಯಕ್ಕೆ ಆದ್ಯತೆ ಸಿಗುತ್ತಿಲ್ಲ.
    – ಅಮಿತ್ ಷಾ ಪ್ರಾಬಲ್ಯ ತಪ್ಪಿಸುವುದು ನಿತೀಶ್ ಉದ್ದೇಶ. ಆದರೆ ಇದು ಸಾಧ್ಯವಾಗುತ್ತಿಲ್ಲ.
    – ಬಿಹಾರದಲ್ಲಿ ಜಾತಿ ಆಧರಿತ ಜನಗಣತಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ.
    – ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯಬೇಕು ಎಂಬ ಕೇಂದ್ರದ ಪ್ರತಿಪಾದನೆಗೆ ನಿತೀಶ್ ಒಪ್ಪುತ್ತಿಲ್ಲ.

    ಸಾಧನೆ ಮಾಡ್ಬೇಕು ಅಂತ ಮನೆ ಬಿಟ್ಟು ಹೋಗಿ ಅಡ್ಡದಾರಿ ಹಿಡಿದಿದ್ದ ಮಾರಿಮುತ್ತು ಮೊಮ್ಮಗಳ ಜೀವನ ಬದಲಾಗಿದ್ಹೇಗೆ?

    ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲದಿರಬಹುದು! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ತಾಪ್ಸಿ ಪನ್ನು

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts