ನವದೆಹಲಿ: ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ ಎಂಬಂತೆ ಮಹಾಮಾರಿ ಕರೊನಾ ವೈರಸ್ ನಾನಾ ರೂಪದಲ್ಲಿ ವಕ್ಕರಿಸುತ್ತಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ತತ್ತರಿಸಿ ಹೋಗಿದ್ದ ಜನರು ಇದೀಗ ಮೂರನೇ ಅಲೆಯನ್ನು ಎದುರಿಸುತ್ತಿದ್ದಾರೆ. ಈ ಬಾರಿ ಕರೊನಾ ಒಮಿಕ್ರಾನ್ ರೂಪದಲ್ಲಿ ದಾಂಗುಡಿ ಇಟ್ಟಿದ್ದು, ಪ್ರರಕಣಗಳು ದಿನದಿಂದ ದಿನಕ್ಕೇ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದ್ದು, ಮೂರನೇ ಅಲೆ ಯಾವಾಗ ಮುಗಿಯಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವೈದ್ಯಕೀಯ ತಜ್ಞರು ನೀಡಿರುವ ಕೆಲವು ವರದಿಗಳ ಪ್ರಕಾರ ಒಮಿಕ್ರಾನ್ ಜನವರಿಯಲ್ಲಿ ವಿಶ್ವದಾದ್ಯಂತ ಉತ್ತುಂಗವನ್ನು ತಲುಪಲಿದ್ದು, ಮಾರ್ಚ್ ಮಧ್ಯದಲ್ಲಿ ಸಂಪೂರ್ಣ ಕಡಿಮೆಯಾಗಲಿದೆ.
ಇಲ್ಲಿಯವರೆಗೆ ದಾಖಲಾದ ಡೇಟಾ ನೋಡಿದರೆ, ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯನ್ನು ಮೀರಿಸುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಏಕೆಂದರೆ ರೂಪಾಂತರವು ಪ್ರಪಂಚದ ಎಲ್ಲಾ ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಒಮಿಕ್ರಾನ್ ನಿಧಾನವಾಗಿ ತನ್ನ ವೇಗವನ್ನು ಕಳೆದುಕೊಳ್ಳುವ ಸಮಯದಲ್ಲಿ ಮಾರ್ಚ್ ಮಧ್ಯದ ವೇಳೆಗೆ ಸಂಪೂರ್ಣ ನಿಲ್ಲುತ್ತದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಒಮಿಕ್ರಾನ್ ಸಂಖ್ಯೆ ಬೇರೆಡೆಗಿಂತ ಹೆಚ್ಚಾಗುತ್ತಿದೆ. ಅಲ್ಲಿ ಪ್ರತಿ 24 ಗಂಟೆಗಳ ಒಳಗೆ 22,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆರೋಗ್ಯ ತಜ್ಞರು ಜನರಿಗೆ ಬಹಳ ಜಾಗರೂಕರಾಗಿರಲು ಮಾರ್ಗಸೂಚಿಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ದೆಹಲಿ, ಕೊಲ್ಕತ್ತಾ ಮತ್ತು ಮುಂಬೈನಲ್ಲಿ ಸಕ್ರಿಯ ಒಮಿಕ್ರಾನ್ ಪ್ರಕರಣಗಳು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಭಾರತದಲ್ಲಿ ಒಟ್ಟು 1,79,723 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಮತ್ತು ಇದುವರೆಗೆ ಒಟ್ಟು 4,033 ಓಮಿಕ್ರಾನ್ ರೂಪಾಂತರ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಭಾರತದಲ್ಲಿ ಒಟ್ಟು ಪ್ರಕರಣಗಳು 35,528,004 ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,83,936ಕ್ಕೇರಿದೆ. ಆದರೆ, ಎರಡನೆ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. (ಏಜೆನ್ಸೀಸ್)