More

  ಸರ್ಕಾರಕ್ಕೆ ತಿವಿಯುತ್ತಲೇ ಸಲಹೆ ನೀಡಿದ ಆರ್.ಅಶೋಕ್

  ಬೆಂಗಳೂರು: ಕುಡಿಯುವ ನೀರಿನ ಅಭಾವ ನಿವಾರಣೆ, ಸಮರ್ಪಕ ಪೂರೈಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಜೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿವಿಯುತ್ತಲೇ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೈಗೊಳ್ಖಬೇಕಾದ ಕ್ರಮಗಳ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರೆ.

  ಸಾಮಾಜಿಕ ಜಾಲತಾಣದ ತಮ್ಮ ಖಾತೆ ಮುಖೇನ ಸರಣಿ‌ ಸಂದೇಶಗಳನ್ನು ಆರ್.ಅಶೋಕ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಮಧ್ಯಾಹ್ನ  ಸಂಬಂಧಪಟ್ಟವರ ಸಭೆ ಕರೆದಿದ್ದಾರೆ.

  ಬರಗಾಲವಿದೆ ಅಂತ ಗೊತ್ತಿದ್ದರೂ ಕಳೆದ ಆರೇಳು ತಿಂಗಳಿಂದ ಯಾವುದೇ ಮುಂಜಾಗ್ರತೆ ವಹಿಸದೆ, ಪೂರ್ವಸಿದ್ಧತೆ ಮಾಡಿಕೊಳ್ಳದೆ, ಪರ್ಯಾಯ ಮಾರ್ಗಗಳನ್ನು ಹುಡುಕದೆ ಕಾಲಹರಣ ಮಾಡಿದ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯೇ ಇಂದಿನ ಸಮಸ್ಯೆಗೆ ಕಾರಣವೆಂದು ಟೀಕಿಸಿದ್ದಾರೆ.

  ಕಾಟಾಚಾರಕ್ಕೆ ಬೇಡ

  ನಾಳೆ ಕರೆದಿರುವ ಸಭೆಯೂ ಸಹ ಕೇವಲ ಕಾಟಾಚಾರಕ್ಕೆ ನಡೆಯುವ ಮತ್ತೊಂದು ನಾಮಕಾವಸ್ತೆ ಸಭೆ ಆಗದಿರಲಿ ಎನ್ನುವ ಉದ್ದೇಶದಿಂದ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ ಎಂದಿರುವ ಆರ್.ಅಶೋಕ್, ಪ್ರಮುಖ ಆರು ಸಲಹೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

  ಟ್ಯಾಂಕರ್ ಗಳ ನೋಂದಣಿಗೆ ನೀಡಲಾಗಿದ್ದು ಗಡುವು ಮುಕ್ತಾಯವಾಗಿ ಎರಡು ದಿನಗಳು ಕಳೆದಿವೆ, ಇನ್ನೂ ಟ್ಯಾಂಕರ್ ಗಳ ನೋಂದಣಿ ಪೂರ್ತಿಯಾಗಿಲ್ಲ. ಬೆಂಗಳೂರಲ್ಲಿ 3,500ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್ ಗಳಿವೆ. ಆದರೆ ನೋಂದಣಿ ಆಗಿರುವುದು ಕೇವಲ 1,700 ಮಾತ್ರ. ಅಂದರೆ ಶೇ.50%ಕ್ಕೂ ಹೆಚ್ಚು ಟ್ಯಾಂಕರ್ ಗಳು ಇನ್ನೂ ನೋಂದಣಿ ಆಗಿಲ್ಲ. ಟ್ಯಾಂಕರ್ ಮಾಫಿಯಾ, ಸುಲಿಗೆಗೆ ಕಡಿವಾಣ ಹಾಕಬೇಕಾದರೆ ಕಡ್ಡಾಯವಾಗಿ ಯಾವುದೇ ಮುಲಾಜಿಲ್ಲದೆ ಎಲ್ಲಾ ಟ್ಯಾಂಕರ್ ಗಳ ನೋಂದಣಿ ಮಾಡಿಸಬೇಕು.

  ಜಲಮಂಡಳಿ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡುವ ಟ್ಯಾಂಕರ್ ಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಕಡ್ಡಾಯ ಎಂಬ ನಿಯಮ ಇದ್ದರೂ ಇನ್ನೂ ಹಲವಾರು ಕಡೆ ಸ್ಟಿಕ್ಕರ್ ಅಂಟಿಸಿಲ್ಲ. ಸ್ಟಿಕ್ಕರ್ ಇಲ್ಲದಿದ್ದರೆ ನೀರಿನ ದುರ್ಬಳಕೆ ಆಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಡ್ಡಾಯವಾಗಿ ಸ್ಟಿಕ್ಕರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು.

  ನೋಂದಣಿಗೊಂಡಿರುವ ಖಾಸಗಿ ಟ್ಯಾಂಕರ್ ಗಳಿಗೆ ವಿಶೇಷ ಸಂಖ್ಯೆ ನೀಡಿ, ಗುರುತಿನ ಚೀಟಿ ಅಂಟಿಸಬೇಕು. ಜಿಲ್ಲಾಡಳಿತ ನೀಡಿರುವ ದರ ಪಟ್ಟಿ ಹಾಗೂ ದೂರು ಸಂಖ್ಯೆಯನ್ನು ಟ್ಯಾಂಕರ್ ಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು.

  ಅಕ್ರಮ ತಡೆಯಲು ಟ್ಯಾಂಕರ್ ಗಳಿಗೆ ಜಿಪಿಎಸ್ ಟ್ರಾಕರ್ ಅಳವಡಿಸಬೇಕು. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು.

  ಸಾರ್ವಜನಿಕರಿಗೆ ನೀಡಿರುವ ಜಲಮಂಡಳಿ/ ಬಿಬಿಎಂಪಿ ಸಹಾಯವಾಣಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು, ಖಾಸಗಿ ಕಾಲ್ ಸೆಂಟರ್ ತೆರೆಯುವ ಮೂಲಕ ಜಲಮಂಡಳಿ ಸಹಾಯವಾಣಿಯನ್ನು ಜನಸ್ನೇಹಿ ಮಾಡಲು ಕ್ರಮಕೈಗೊಳ್ಳಬೇಕು.

  ಕೇವಲ ಬೆಂಗಳೂರಿನ ಹೃದಯ ಭಾಗ ಮತ್ತು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರವಲ್ಲದೆ ಬಿಬಿಎಂಪಿ ಹೊರವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿನ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಕೂಡ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

  ಸರ್ಕಾರ ಸಮರೋಪಾದಿಯಲ್ಲಿ ಈ ಮೇಲಿನ ಕ್ರಮಗಳನ್ನು ಜಾರಿ ಮಾಡಿದರೆ ಮಾತ್ರ ನಾಳಿನ ಸಭೆಯಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ, ಟಾರ್ಗೆಟ್ ಹಾಗೂ ಕಾಲಮಿತಿ ನಿಗದಿ ಮಾಡಲು ಸಾಧ್ಯ. ಇಲ್ಲವಾದರೆ ಇದು ಮತ್ತೊಂದು ಕಾಟಾಚಾರದ ಸಭೆ ಆಗುವುದರಲ್ಲಿ ಸಂದೇಹವಿಲ್ಲ ಎಂದು ಆರ್.ಅಶೋಕ್ ಕಾಲೆಳೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts