More

  ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ

  ಗೌರಿಬಿದನೂರು: ಬಡವರ ಮನೆ ಬಾಗಿಲಿಗೆ ಕಂದಾಯ ಸೇವೆ ಒದಗಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ಬೆಂಗಳೂರಿನಿಂದ ಚಾಲನೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

  ನಗರದ ಸಿರುಗುಪ್ಪ ಸಕ್ಕರೆ ಕಾರ್ಖಾನೆ ಬಳಿ ಕರ್ನಾಟಕ ಗೃಹ ಮಂಡಳಿಯಿಂದ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

  ಕಂದಾಯ ಇಲಾಖೆಗೆ ಜಡ ಹಿಡಿದಿದೆ. ಜಿಲ್ಲಾಧಿಕಾರಿ, ತಾಲೂಕು ಕಚೇರಿಗೆ ಅಲೆದು ಚಪ್ಪಲಿ ಸವೆಸಿದರೂ ಕೆಲಸ ಆಗುವುದಿಲ್ಲ ಎಂದು ಜನ ಮಾತನಾಡುತ್ತಾರೆ. ಈ ಭಾವನೆ ಜನರಿಂದ ದೂರವಾಗಬೇಕು. ಸರ್ಕಾರಿ ಕೆಲಸ ಮನೆ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಒಂದು ದಿನ ಜಿಲ್ಲಾಧಿಕಾರಿ, ತಹಸೀಲ್ದಾರ್ ಒಂದು ಗ್ರಾಮ ಆಯ್ಕೆ ಮಾಡಿಕೊಂಡು ಬೆಳಗ್ಗೆ 11 ರಿಂದ 5ರವರೆಗೆ ಗ್ರಾಮದಲ್ಲಿದ್ದು, ಜನರ ಸಮಸ್ಯೆ ಅರಿತು, ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

  ಸೋಮಾರಿತನ ನಿರೀಕ್ಷಿಸುವುದಿಲ್ಲ: ಈ ಹಿಂದೆ ಜಾರ್ಜ್ ಫರ್ನಾಂಡೀಸ್ ರಕ್ಷಣಾ ಸಚಿವರಾಗಿದ್ದಾಗ ಸಿಯಾಚಿನ್ ಗಡಿಯಲ್ಲಿನ ಯೋಧರಿಗೆ ಶೂ ಹಾಗೂ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ಕ್ರಮ ಜರುಗಿಸದಿದ್ದಾಗ ಅವರನ್ನೇ ಸಿಯಾಚಿನ್‌ಗೆ ಕರೆದೊಯ್ದು ಅಲ್ಲಿನ ವಾಸ್ತವ ತಿಳಿಸಿಕೊಟ್ಟಿದ್ದರು. ಬಳಿಕ ಅಧಿಕಾರಿಗಳು ತಕ್ಷಣ ಸೌಲಭ್ಯ ಕಲ್ಪಿಸಿದರು. ಅದೇ ರೀತಿ ಅಧಿಕಾರಿಗಳು ಹಳ್ಳಿಗಳಿಗೆ ಹೋದಾಗ ವಾಸ್ತವ ಅರಿವಾಗಲಿದೆ. ಅಧಿಕಾರಿಗಳಿಂದ ನಾನು ಸೋಮಾರಿತನ ನಿರೀಕ್ಷಿಸುವುದಿಲ್ಲ ಎಂದು ತಿಳಿಸಿದರು.

  ಬಡವ ನಿಧನ ಹೊಂದಿದರೆ ಶವ ಸಂಸ್ಕಾರಕ್ಕೆ 24 ಗಂಟೆಯಲ್ಲಿ 5 ಸಾವಿರ ಪರಿಹಾರ ಹಣ ನೀಡಬೇಕು. ಆದರೆ, 5 ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ. ನಾನು ಅಧಿಕಾರಿಗಳ ಸಭೆ ಕರೆದು ಮೊದಲು ಬಾಕಿ ಇರುವ ಹಣ ಬಿಡುಗಡೆ ಮಾಡುವಂತೆ ಹಾಗೂ ಇನ್ನು ಮುಂದೆ 24 ಗಂಟೆ ಒಳಗೆ ಪರಿಹಾರ ದೊರೆಯುವಂತೆ ಆದೇಶ ಮಾಡಿದ್ದೇನೆ ಎಂದರು.

  ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಎತ್ತಿನಹೊಳೆ ಯೋಜನೆ 2020ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಅನುದಾನ ಕೊರತೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. 10 ಸಾವಿರ ಕೋಟಿ ರೂ. ಅನುದಾನ ಒದಗಿಸುವಂತೆ ಕೇಂದ್ರದ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದು 2022 ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ.

  ಗೌರಿಬಿದನೂರು, ಚಿಕ್ಕಬಳ್ಳಾಪುರ 42 ಕಿ.ಮೀ. ರೈಲು ಮಾರ್ಗವನ್ನು ಮಂಜೂರಾತಿ ಮಾಡಿಸುವ ಜತೆಗೆ ಎಂಜಿ ರಸ್ತೆ ವಿಸ್ತರಣೆಗೆ ಕೇಂದ್ರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
  ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ. ಫೌಜಿಯಾ ತರನುಮ್, ಜಿಪಂ ಸದಸ್ಯರಾದ ಪಿ.ಎನ್.ಪ್ರಕಾಶ್, ಅರುಂಧತಿ, ಪ್ರಮೀಳಾ ಪ್ರಕಾಶ್ ರೆಡ್ಡಿ, ತಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ರತ್ನಮ್ಮ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಉಪಾಧ್ಯಕ್ಷ ಪಿ.ವಿ.ರಾಘವೇಂದ್ರ ಹನುಮಾನ್, ತಾಪಂ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್ ರೆಡ್ಡಿ ಇತರರು ಇದ್ದರು.

  ಭೂ ಕಬಳಿಕೆ ಕಡಿವಾಣ ಹಾಕ: ರಾಜ್ಯದಲ್ಲಿ ಲಕ್ಷಾಂತರ ಎಕರೆ ಭೂ ಒತ್ತುವರಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂ, ಆದಾಯ ಬರುತ್ತದೆ. ಜನಪ್ರತಿನಿಧಿಗಳು, ತಹಸೀಲ್ದಾರ್ ಸೇರಿ ಇತರ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಜಾಗಗಳನ್ನು ಗುರುತಿಸಿ, ಶಾಲೆ, ಸಶ್ಮಾನ, ಸಮುದಾಯ ಭವನ, ಆಸ್ಪತ್ರೆಗೆ ಮೀಸಲಿಟ್ಟರೆ ಭೂಗಳ್ಳರಿಗೆ ಕಡಿವಾಣ ಸಾಧ್ಯ ಎಂದು ಅಶೋಕ್ ತಿಳಿಸಿದರು.

  ಪಿಂಚಣಿಗೆ ಫೈಲೆಟ್ ಯೋಜನೆ : ವಯೋಪಿಂಚಣೆಗಾಗಿ ಅರ್ಜಿ ಹಾಕಿ ಕಚೇರಿಗೆ ಅಲೆದಾಡಿವುದನ್ನು ತಪ್ಪಿಸಲು
  ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಫೈಲಟ್ ಜಾರಿಗೊಳಿಸಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಲಭ್ಯವಿರುವ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಪಟ್ಟಿ ಪರಿಶೀಲಿಸಿ ವಯೋಪಿಂಚಣಿಗೆ ಒಳ ಪಡುವ ಅರ್ಹರನ್ನು ಗುರುತಿಸಿ ಅವರ ಮನೆಗೆ ಸರ್ಕಾರವೇ ಮಾಹಿತಿ ಒದಗಿಸಲಿದೆ. ಸರ್ಕಾರ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದು , ಅಲ್ಲಿಯೂ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು. ತಾಲೂಕಿನಲ್ಲಿ ಉಪವಿಭಾಗಧಿಕಾರಿ ಕಚೇರಿ ಪ್ರಾರಂಭಿಸುವಂತೆ ಶಾಸಕ ಶಿವಶಂಕರ ರೆಡ್ಡಿ ಮನವಿ ಮಾಡಿದ್ದು, ಈ ಬಗ್ಗೆ ಗಮನ ಹರಿಸುವುದಾಗಿ ಸಚಿವರು ಭರವಸೆ ನೀಡಿದರು.

  ಉಪ ಮುಖ್ಯಮಂತ್ರಿಗಳೇ ಚಕ್ಕರ್: ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇನ್ನು ಸಮಾಜ ಕಲ್ಯಾಣ ಇಲಾಖೆಯಿಂದ 7 ಕೋಟಿ ರೂ, ವೆಚ್ಚದಲ್ಲಿ ನಿರ್ಮಿಸಿರುವ ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಬೇಕಿದ್ದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಭಾಗವಹಿಸದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts