ಪ್ರಗತಿಯಲ್ಲಿದೆ ಸರತಿ ಸಾಲಿನ ಕಾಮಗಾರಿ

4 Min Read
ಪ್ರಗತಿಯಲ್ಲಿದೆ ಸರತಿ ಸಾಲಿನ ಕಾಮಗಾರಿ
ಮಲೆಮಹದೇಶ್ವರ ಬೆಟ್ಟದಲ್ಲಿ ಸರತಿ ಸಾಲಿನ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು.

ಹನೂರು: ತಿರುಪತಿ ಮಾದರಿಯಲ್ಲಿ ಭಕ್ತರಿಗೆ ದೇವರ ದರ್ಶನವಾಗಬೇಕೆಂಬ ನಿಟ್ಟಿನಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ 49 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಸುಸಜ್ಜಿತ ಸರತಿ ಸಾಲಿನ (ಕ್ಯೂ ಲೈನ್) ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಭಕ್ತರ ಸೇವೆಗೆ ಸಮರ್ಪಣೆಯಾಗಲಿದೆ. ಯುಗಾದಿ, ದೀಪಾವಳಿ, ಮಹಾಶಿವರಾತ್ರಿ ಜಾತ್ರೆ, ಮಹಾಲಯ ಅಮಾವಾಸ್ಯೆ ಸೇರಿದಂತೆ ಇತರ ವಿಶೇಷ ಸಂದರ್ಭದಲ್ಲಿ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚಿನ ವರ್ಷಗಳಲ್ಲಂತೂ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಗುಲದಲ್ಲಿ ಬೆಳಗ್ಗೆ 6.30 ರಿಂದ ಸಂಜೆ 6.30 ಹಾಗೂ ರಾತ್ರಿ 8.30 ರಿಂದ ಬೀಗಮುದ್ರೆ ಆಗುವವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸರತಿ ಸಾಲಿನಲ್ಲಿ ತೆರಳಿ ದರ್ಶನ ಪಡೆಯಬಹುದಾಗಿದೆ.

ಸಾಮಾನ್ಯ ದಿನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ದೇವರ ದರ್ಶನ ಪಡೆಯಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದೇ ಸಾಹಸ. ಇದರಿಂದ ಅನಾರೋಗ್ಯಕ್ಕೊಳಗಾದವರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಈ ನಡುವೆ ಕೆಲ ಭಕ್ತರು 500 ರೂ. ಟಿಕೆಟ್ ಪಡೆದು ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು.

ಜತೆಗೆ ಮಳೆ ಬಂದ ವೇಳೆ ದೇಗುಲದ ಆವರಣದ ಸುತ್ತ ಸರತಿ ಸಾಲಿನಲ್ಲಿ ನಿಲ್ಲಲು ಸಮಸ್ಯೆ ಎದುರಿಸುತ್ತಿದ್ದರು. ದೇವರ ದರ್ಶನ ಪಡೆಯಲು ಸಾಧ್ಯವಾಗದ ಕೆಲವರು ದೇಗುಲದ ಆವರಣದಲ್ಲಿನ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವ ವಾಹನಗಳಿಗೆ ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ಹೊರಗಿನಿಂದಲೇ ಕೈಮುಗಿದು ಹಿಂತಿರುಗಬೇಕಾದ ಪರಿಸ್ಥಿತಿ ಇತ್ತು. ಪ್ರಸ್ತುತ ಸ್ಥಿತಿಯೂ ಕೂಡ ಹೀಗೆಯೇ ಇದೆ. ಈ ಬಗ್ಗೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

See also  ಆರೋಗ್ಯ ಸೇವೆಗೆ ಆಗ್ರಹಿಸಿ ಪ್ರತಿಭಟನೆ

49 ಕೋಟಿ ರೂ.ವೆಚ್ಚದ ಕಾಮಗಾರಿ: ಸಮಸ್ಯೆಯನ್ನು ಮನಗಂಡ ಅಭಿವೃದ್ಧಿ ಪ್ರಾಧಿಕಾರ 2020ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿತು. 24 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ಪಡೆದು 2021 ಆಗಸ್ಟ್‌ನಲ್ಲಿ ಕಾಮಗಾರಿಯನ್ನು ಆರಂಭಿಸಲಾಯಿತು. ಈ ನಡುವೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಒಟ್ಟಾರೆ ಕ್ರಿಯಾಯೋಜನೆಯನ್ನು ಮರು ತಯಾರಿಸಿ ಕಾಮಗಾರಿ ಆರಂಭಿಸಲಾಗಿದ್ದು, ನೆಲ ಹಾಗೂ ಮೊದಲನೇ ಮಹಡಿಯಲ್ಲಿ 8 ಬ್ಲಾಕ್‌ಗಳಲ್ಲಿ 6 ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಆಗಸ್ಟ್‌ನಲ್ಲಿ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಶಾಸಕ ಎಂ.ಆರ್ ಮಂಜುನಾಥ್ ಕಾಮಗಾರಿಗೆ ಸ್ಥಳಕ್ಕೆ ಭೇಟಿ ನೀಡಿ ನೀಲಿನಕಾಶೆ ಪರಿಶೀಲಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಜತೆಗೆ ಜ.1 ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರಿಂದ ಮಾಹಿತಿ ಪಡೆದು ಶೀಘ್ರ ಪೂರ್ಣಗೊಳಿಸಿ ಭಕ್ತರ ಸೇವೆಗೆ ಸಮರ್ಪಿಸುವಂತೆ ಸೂಚನೆ ನೀಡಿದ್ದರು.

ದೊರಕುವ ಸೌಕರ್ಯ: ಭಕ್ತರು ದೇವರ ದರ್ಶನ ಪಡೆಯಲು ಪ್ರಸ್ತುತ ನಿರ್ಮಾಣವಾಗುತ್ತಿರುವ ಸರತಿ ಸಾಲಿನ ಸಂಕೀರ್ಣದಿಂದ ದೇಗುಲದ ಆಲಂಬಾಡಿ ದ್ವಾರದವರೆಗೆ 6 ಮೀಟರ್ ಸುರಂಗ ಮಾರ್ಗ (ಗುಹೆ) ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮಾರ್ಗದಲ್ಲಿ ಗಣಕೀಕೃತ ಸೂಚನಾ ಫಲಕಗಳು ಹಾಗೂ ಎಲ್‌ಇಡಿ ಪರದೆಯಲ್ಲಿ ಉಪಯುಕ್ತ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ. ಇನ್ನು ತಲಾ 730 ಚದರ ಮೀಟರ್‌ನ 8 ಬ್ಲಾಕ್‌ಗಳಲ್ಲಿ 500 ರಂತೆ 4 ಸಾವಿರ ಭಕ್ತರು ಕುಳಿತುಕೊಳ್ಳಲು ಆಸನ ವ್ಯವಸ್ಥೆಯೂ ಈ ಯೋಜನೆಯು ಒಳ ಗೊಂಡಿದೆ.


ಪ್ರತಿ ಬ್ಲಾಕ್‌ನಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ, ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಕಾಮಗಾರಿ ಆಗಬೇಕಿದೆಯಷ್ಟೇ. ಹಾಗಾಗಿ ಈ ಯೋಜನೆ ಪೂರ್ಣಗೊಂಡರೆ ಆಗಮಿಸುವ ಭಕ್ತರಿಗೆ ಸುಲಲಿತವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗಲಿದೆ. ಈ ದಿಸೆಯಲ್ಲಿ ಕ್ಯೂ ಲೈನ್ ಸಂಕೀರ್ಣ ನಿರ್ಮಾಣದ ಬಗ್ಗೆ ಭಕ್ತರಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸೇವೆಗೆ ಸಮರ್ಪಿಸುವಂತೆ ಒತ್ತಾಯಿಸಿದ್ದಾರೆ.

See also  ಜ್ಞಾನವಾಪಿಯಂತೆ ಭೋಜಶಾಲಾ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್‌ ಸೂಚನೆ

ಭಕ್ತರ ಸರತಿ ಸಾಲಿನ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಗತ್ಯ ಮಾರ್ಗದರ್ಶನ ಹಾಗೂ ಸೂಚನೆ ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ.
ಸರಸ್ವತಿ, ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.

ಪ್ರತಿ ತಿಂಗಳು ಕುಟುಂಬಸ್ಥರೊಂದಿಗೆ ಮ.ಬೆಟ್ಟಕ್ಕೆ ಭೇಟಿ ನೀಡುತ್ತೇನೆ. ಆದರೆ ಜಾತ್ರೆ ವೇಳೆ ಹಾಗೂ ಇತರ ವಿಶೇಷ ದಿನಗಳಲ್ಲಿ ಹೆಚ್ಚಿನ ಭಕ್ತರು ಆಗಮಿಸುವುದರಿಂದ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಸುಮಾರು 3 ಗಂಟೆ ನಿಲ್ಲಬೇಕಾಗಿತ್ತು. ಇದರಿಂದ ತುಂಬಾ ತೊಂದರೆಯಾಗಿತ್ತು. ಇದೀಗ ಪ್ರಾಧಿಕಾರ ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಕ್ಯೂ ಲೈನ್ ವ್ಯವಸ್ಥೆ ಕಲ್ಪಿಸುತ್ತಿರುವುದು ಖುಷಿಯ ವಿಚಾರ.
ಮನೋಜ್ ಭಕ್ತ, ಮೈಸೂರು.

ಫೋಟೋ
07 ಹನೂರು 1

ಮಲೆಮಹದೇಶ್ವರ ಬೆಟ್ಟದಲ್ಲಿ ಸರತಿ ಸಾಲಿನ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು.

07 ಹನೂರು 1 ಎ

ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ಇತ್ತೀಚೆಗೆ ಭೇಟಿ ನೀಡಿ ನೀಲಿನಕಾಶೆಯನ್ನು ಪರಿಶೀಲಿಸಿದರು. ಶಾಸಕ ಎಂ.ಆರ್ ಮಂಜುನಾಥ್ ಇದ್ದರು.

07 ಹನೂರು 1 ಬಿ
ಹೊಸ ವರ್ಷದ ದಿನದಂದು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತಿದ್ದ ಭಕ್ತರು.

.

Share This Article