ಕಾಫಿ ಬ್ರ್ಯಾಂಡ್ ರೂಪ ಪಡೆಯಲು ಸೂತ್ರ

ಚಿಕ್ಕಮಗಳೂರು: ಭಾರತದ ಕಾಫಿ ತನ್ನದೇ ಆದ ವಿಶಿಷ್ಟ ಸಂಪನ್ನ ಗುಣ ಹೊಂದಿರುವ ಭಾರತದ ಕಾಫಿ ಉತ್ತಮ ಬ್ರ್ಯಾಂಡ್ ರೂಪ ಪಡೆದು ಮಾರುಕಟ್ಟೆ ಪ್ರವೇಶಿಸಿ ಕೃಷಿಕರಿಗೆ ಭರವಸೆಯ ಬೆಳೆಯಾಗಿ ರೂಪುಗೊಳ್ಳಬೇಕಿದೆ.

ಅರೇಬಿಕಾ ಬೆಳೆಗೆ ತಗುಲಿರುವ ಬಿಳಿ ಕಾಂಡಕೊರಕ, ರೋಬಸ್ಟಾ ಬೆಳೆಯನ್ನು ಕಾಡುತ್ತಿರುವ ಬೆರ್ರಿ ಬೋರರ್​ನಂತಹ ಅಪರಿಹಾರ್ಯ ರೋಗಗಳು ಒಂದು ಮಗ್ಗುಲಿನ ಮುಳ್ಳುಗಳಾಗಿ ಚುಚ್ಚುತ್ತಿವೆ. ಹವಾಮಾನ ವೈಪರೀತ್ಯದ ನಡುವೆ ಸಾಲಮನ್ನಾ, ಬಡ್ಡಿಮನ್ನಾ ಹಾಗೂ ಸಾಲಪಾವತಿಯ ಪುನರ್ ವ್ಯವಸ್ಥೆಯ ವಿಚಾರದಲ್ಲಿ ಇನ್ನೊಂದು ಮಗ್ಗುಲ ಬಾಧೆ ಕಾಡುತ್ತಿದೆ.

ಪರಿಸರ ಸ್ನೇಹಿಯಾಗಿ ನೆರಳಿನಲ್ಲಿ ಬೆಳೆಯುವ ಕಾಫಿ ಕೃಷಿಯನ್ನು ಅಭಿವೃದ್ಧಿಪಡಿಸಬೇಕಿದ್ದು, ಅದಕ್ಕಾಗಿ ಬೆಳೆಗಾರರಿಗೆ ಈ ಕೃಷಿಯನ್ನು ಲಾಭಕರವಾಗಿ ಮಾಡಬೇಕಿದೆ.

ಸ್ಥಿರತೆ ಇಲ್ಲದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೆಲೆ ಕುಸಿತದ ಆತಂಕ, ತೋಟಗಳ ನಿರ್ವಹಣೆಗೆ ಹೆಚ್ಚಿದ ವೆಚ್ಚ, ಕಾರ್ವಿುಕರ ಕೊರತೆ ಜತೆಗೆ ಹೆಚ್ಚುತ್ತಿರುವ ವೇತನ, ಕಾರ್ವಿುಕರ ಕೊರತೆಯ ನಡುವೆ ಕಾಫಿ ಕೃಷಿಕರಿಗೆ ಯಾವ ಹೊಸ ವ್ಯವಸ್ಥೆಗಳು ನೆರವಿಗೆ ಬರುತ್ತಿರುವಂತೆ ಕಾಣಿಸುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗಲು ಬೆಳೆಗಾರರಿಗೆ ವಿಜ್ಞಾನಿಗಳು, ಕೆಜಿಎಫ್ ಮಾಜಿ ಅಧ್ಯಕ್ಷರು ಸಲಹೆ ನೀಡಿದ್ದಾರೆ.

ಒಂದು ಉತ್ತಮ ಬ್ರ್ಯಾಂಡ್ ಆಗಬೇಕು: ಗುಣಮಟ್ಟ ಕಾಯ್ದುಕೊಂಡು ರೂಪುಗೊಳ್ಳುವ ಒಂದು ಉತ್ತಮ ಬ್ರ್ಯಾಂಡ್ ಆದಲ್ಲಿ ಮಾತ್ರ ಬೆಳೆಗಾರರು ಚೇತರಿಸಿಕೊಳ್ಳಲು ಸಾಧ್ಯ. ಕಾಫಿ ಉತ್ಪನ್ನ ಒಂದು ಬ್ರ್ಯಾಂಡ್ ಆಗಿ ಮಾನ್ಯತೆ ಪಡೆಯುವಂತೆ ಮಾರುಕಟ್ಟೆ ರೂಪಿಸಬೇಕಾದರೆ ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಬೆಳೆಗಾರರು ಮತ್ತು ಬಂಡವಾಳ ಹೂಡಿಕೆದಾರರು ಕಾಪೋರೇಟ್ ಸಂಸ್ಥೆ ರಚಿಸಿಕೊಂಡು ಕಾಫಿ ಉತ್ಪನ್ನದ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಳ್ಳುವ ಮಾರ್ಗ ರೂಪಿಸಿ ಬ್ರ್ಯಾಂಡ್ ಮಾಡುವ ಅನಿವಾರ್ಯತೆ ಇದೆ ಎಂದು ಕಾಫಿಡೇ ಹಾಗೂ ಎಬಿಸಿ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಹಾಗೂ ವಿಜ್ಞಾನಿ ಡಾ. ಪ್ರದೀಪ್ ಕೆಂಜಿಗೆ ಸಲಹೆ ನೀಡುತ್ತಾರೆ.

ಸರ್ಕಾರ ಕೈಹಾಕಬಾರದು: ಸರ್ಕಾರ ಮಧ್ಯೆ ಪ್ರವೇಶಿಸದೆ ಕೇವಲ ಪೋಷಕ ಪಾತ್ರ ನಿರ್ವಹಿಸಬೇಕು. ಕಾಫಿ ಮಂಡಳಿ ಇಲ್ಲಿ ಬೆಳೆಗಾರರಿಗೆ ಮಾರ್ಗದರ್ಶಿಯಾಗಿ ಇರಬೇಕೇ ವಿನಃ ಯಾವುದೇ ವ್ಯವಹಾರದಲ್ಲಿ ಕೈಹಾಕಬಾರದು. ಬೆಳೆಗಾರರೇ ಒಟ್ಟಾಗಿ ತಮ್ಮ ಕಾಫಿಯ ಗುಣಮಟ್ಟ ಹೆಚ್ಚಿಸುವ ದಾರಿ ನಿರ್ವಣದ ಬಗ್ಗೆ ಯೋಚಿಸುವ ದಾರಿ ರಚನೆಗೊಳ್ಳಬೇಕು. ಸಣ್ಣ ಕಾಫಿ ಬೆಳೆಗಾರರಿಗೂ ಇಲ್ಲಿ ಪ್ರವೇಶವಿರಬೇಕು. ಬೆಳೆಗಾರರಿಂದ ಷೇರುಧನದ ಮೂಲಕ ಹಣ ಹೊಂದಿಸಿ ಲಾಭದ ದೃಷ್ಟಿ ಇರಿಸಿಕೊಳ್ಳುವ ವಿಚಾರದಲ್ಲಿ ಎಲ್ಲಿಯೂ ರಾಜಿಯಾಗದೆ ವೃತ್ತಿಪರತೆಯಿಂದ ಮುಂದುವರಿದರೆ ಸರ್ಕಾರದ ಸಹಾಯವಿಲ್ಲದೆ ಬೆಳೆಗಾರರು ತಮ್ಮ ಕಾಫಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯ ಸರಕಾಗಿ ಬೆಳೆಸಬಹುದು. ಬಂದ ಲಾಭ ಎಲ್ಲಾ ಪಾಲುದಾರರಿಗೂ ಸಲ್ಲಬೇಕು.

ಆಂಧ್ರದ ಅರಕು ವ್ಯಾಲಿ ಮಾದರಿ: ಆಂಧ್ರ ಪ್ರದೇಶದ ಅರಕುವ್ಯಾಲಿಯಲ್ಲಿ ಕೇವಲ ಒಂದೆರಡು ಎಕರೆ ಕಾಫಿ ತೋಟ ಹೊಂದಿರುವ ಗಿರಿಜನರು ಟೆಕ್ ಮಹೇಂದ್ರದಂತಹ ಕಾಪೋರೇಟ್ ಸಂಸ್ಥೆಗಳ ಹೊಣೆಗಾರಿಕೆಯಲ್ಲಿ ಲಾಭ ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ.

ತಮ್ಮದೇ ಆದ ಬ್ರ್ಯಾಂಡ್ ನಿರ್ವಿುಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಹಾಗೂ ಮಾರುಕಟ್ಟೆ ದರಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಬೆಲೆ ಪಡೆಯುತ್ತಿದ್ದಾರೆ. ಇದು ಕಾಫಿ ಬೆಳೆಗಾರರಿಗೆ ಒಂದು ಬೆಳನ ಕಿಂಡಿಯಾಗಿದ್ದು, ಈ ಹಾದಿಯಲ್ಲಿ ಪ್ರಯತ್ನ ನಡೆಸಬಹುದು ಎಂದು ಹೇಳುತ್ತಾರೆ ಕೆಂಜಿಗೆ ಪ್ರದೀಪ್.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ನೂತನ ಸರ್ಕಾರ ಸ್ವಾಮಿನಾಥನ್ ಸಮಿತಿ ಶಿಫಾರಸನ್ನು ತಕ್ಷಣ ಜಾರಿಗೊಳಿಸಬೇಕು. ಕಾಫಿ ಬೆಳೆಗಾರರಿಗೆ ಆಧುನಿಕವಾಗಿ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಯಂತ್ರಗಳ ಆಮದಿಗೆ ಸುಂಕ ವಿಧಿಸಬಾರದು ಎಂದು ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಂ ಸಲಹೆ ನೀಡಿದ್ದಾರೆ. ಸಾಲಮನ್ನಾ, ಬಡ್ಡಿಮನ್ನಾ ಒಂದು ತಾತ್ಕಾಲಿಕ ಪರಿಹಾರ ಎನ್ನುವುದಾದರೂ ಅನಿವಾರ್ಯ. ಜತೆಗೆ ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ಬಲವನ್ನು ಇನ್ನಷ್ಟು ವರ್ಧಿಸಿ ಚುರುಕುಗೊಳಿಸಬೇಕು. ರೋಗ ನಿರೋಧಕ, ಹೆಚ್ಚು ಫಸಲು ನೀಡುವ ತಳಿಗಳನ್ನು ಸಂಶೋಧಿಸಿ ನೀಡಬೇಕು. ರೋಗ ಶಮನಕ್ಕೆ ಅಗತ್ಯ ಸಂಶೋಧನೆ ಪರಿಹಾರ ಕಂಡು ಹಿಡಿಯಬೇಕು ಎನ್ನುತ್ತಾರೆ.

ಬೆಳೆಗಾರರ ನಡುವೆ ಸ್ಪರ್ಧೆ ನಡೆಸಬೇಕು: ಕಾಫಿ ಮಂಡಳಿ ದೇಶದ ಆಂತರಿಕ ಕಾಫಿ ಬಳಕೆ ಹೆಚ್ಚಿಸಲು ಈ ದೇಶದ ವಿಭಿನ್ನ ಸಂಸ್ಕೃತಿ ಮತ್ತು ಆಹಾರ ಬಳಕೆ ಅಭ್ಯಸಿಸಬೇಕು. ಸಣ್ಣ ಬೆಳೆಗಾರರು ಹೊಂದಿರುವ ತೋಟದ ವಿಸ್ತೀರ್ಣಕ್ಕೆ ಅನುಸಾರ ಪ್ರತ್ಯೇಕ ಗುಂಪುಗಳನ್ನು ರಚಿಸಿ ಅವರ ನಡುವೆ ಉತ್ತಮ ಗುಣಮಟ್ಟದ ಕಾಫಿ ಬೆಳೆಯುವ ಸ್ಪರ್ಧೆ ಏರ್ಪಡಿಸಬೇಕು. 10 ಎಕರೆ, 25 ಹಾಗೂ 50 ಎಕರೆ ಕಾಫಿ ಬೆಳೆಗಾರರನ್ನು ಹಾಗೂ 100, 200 ಎಕರೆ ಕಾಫಿ ತೋಟಗಾರರನ್ನು ವರ್ಗೀಕರಿಸಿಯೇ ಈ ಪ್ರಯೋಗ ನಡೆಸಬೇಕು ಎಂದು ನಗರದ ಜಯಂತಿ ಕಾಫಿ ವರ್ಕ್ಸ್​ನ ಆಡಳಿತ ನಿರ್ದೇಶಕ ಎಂ.ಎಸ್.ಜಯರಾಮ್ ಹೇಳುತ್ತಾರೆ. ಕಾಫಿ ತೋಟ ಹಾಗೂ ಬೆಳೆಗಾರರ ಸಮಸ್ಯೆಗಳಿಗೆಲ್ಲ ಸರ್ಕಾರದ ನೆರವನ್ನೇ ನೆಚ್ಚಿಕೊಳ್ಳುವುದು ತರವಲ್ಲ. ಹೊಸದಾಗಿ ಆಲೋಚನೆ ಮಾಡುವುದನ್ನು ಯುವ ಬೆಳೆಗಾರರು ರೂಢಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ.