ಅಡಕೆಗೋಯ್ತು ಶಿವಮೊಗ್ಗ ಮಾನ

|ಅರವಿಂದ ಅಕ್ಲಾಪುರ

ಶಿವಮೊಗ್ಗ: ಗುಣಮಟ್ಟದ ಅಡಕೆಗೆ ಮಲೆನಾಡು ಹೆಚ್ಚು ಪ್ರಸಿದ್ಧಿ. ಆದರೆ, ಅತಿಯಾಸೆಗೆ ಬಿದ್ದ ಕೆಲ ವರ್ತಕರಿಂದ ಶಿವಮೊಗ್ಗ ಅಡಕೆ ಮಾರುಕಟ್ಟೆಗೆ ಮತ್ತೊಮ್ಮೆ ಕಳಂಕ ಬಂದಿದೆ. ಗುಟ್ಖಾ ಕಂಪನಿಗೆ ಕಳುಹಿಸುವುದೇ ಎರಡನೇ ದರ್ಜೆಯ ಅಡಕೆ. ಅಂಥದ್ದರಲ್ಲಿ ಅದೂ ಕಳಪೆ ಗುಣಮಟ್ಟದ್ದು ಎಂದು ತಿರಸ್ಕರಿಸಿದರೆ?! ಇಲ್ಲಾಗಿದ್ದೂ ಅದೇ… ಶಿವಮೊಗ್ಗದ ಕೆಲ ವರ್ತಕರ ಅಡಕೆ ಗುಣಮಟ್ಟದಿಂದ ಕೂಡಿಲ್ಲವೆಂದು ಗುಜರಾತ್​ನ ಗುಟ್ಖಾ ಕಂಪನಿಯೊಂದು ವಾಪಸ್ ಕಳುಹಿಸಿದೆ.

ಶಿವಮೊಗ್ಗ ಎಪಿಎಂಸಿಯಿಂದ ವರ್ತಕ ರೊಬ್ಬರು ಕಳುಹಿಸಿದ್ದ 71 ಲಕ್ಷ ರೂ. ಮೌಲ್ಯದ ಒಂದು ಲಾರಿ ಅಡಕೆಯನ್ನು ಗುಜರಾತ್​ನ ಗುಟ್ಖಾ ಕಂಪನಿಯೊಂದು ಹಿಂದಕ್ಕೆ ಕಳಿಸಿದ್ದು, ಮಂಗಳವಾರ ನಗರಕ್ಕೆ ವಾಪಸ್ ಬಂದಿದೆ.

ಕಳಪೆ ಅಡಕೆ ಮಿಶ್ರಣವಾಗಿದೆ ಎಂಬ ಕಾರಣ ನೀಡಿ ಕಂಪನಿಯು ವಾಪಸ್ ಕಳುಹಿಸಿದ್ದು, ಶಿವಮೊಗ್ಗ ಅಡಕೆ ಮಾರುಕಟ್ಟೆಯನ್ನು ಪ್ರಶ್ನೆ ಮಾಡುವಂತಾಗಿದೆ.

ಕಲಬೆರಕೆಗೆ ಅಸ್ಸಾಂ, ಕೇರಳ ಅಡಕೆ: ಗುಜರಾತ್​ನಿಂದ ಕಳಪೆ ಅಡಕೆ ಹಿಂದಕ್ಕೆ ಪಡೆದ ವರ್ತಕರೆ ಅಸ್ಸಾಂನಿಂದ ಒಂದು ಲೋಡ್ ಅಡಕೆ ಆಮದು ಮಾಡಿಕೊಂಡಿದ್ದರು. ಮತ್ತೊಬ್ಬ ವರ್ತಕ ಪಶ್ಚಿಮ ಬಂಗಾಳ ಹಾಗೂ ಕೇರಳದಿಂದ ತಲಾ ಒಂದು ಲೋಡ್ ಅಡಕೆ ತರಿಸಿರುವುದು ಬೆಳಕಿಗೆ ಬಂದಿದೆ. ಇದೆಲ್ಲವನ್ನೂ ಮಲೆನಾಡಿನ ಗುಣಮಟ್ಟದ ಅಡಕೆಯೊಂದಿಗೆ ಮಿಶ್ರಣ ಮಾಡಿ ಹೆಚ್ಚು ಲಾಭ ಪಡೆಯುವ ಉದ್ದೇಶ ಹೊಂದಿದ್ದೇ ಈ ಮುಖಭಂಗಕ್ಕೆ ಕಾರಣವಾಗಿದೆ.

ದಂಧೆಯಾದ ವ್ಯವಹಾರ

1990ರ ದಶಕದಿಂದೀಚೆಗೆ ಅಡಕೆಗೆ ಉತ್ತಮ ಧಾರಣೆ ಬರತೊಡಗಿತು. ಆ ಬಳಿಕ ಅತಿಯಾಸೆಗೆ ಬಿದ್ದ ಕೆಲ ವರ್ತಕರು ಇನ್ನಷ್ಟು ದುಡ್ಡು ಮಾಡಲು ಮುಂದಾದರು. ಅಲ್ಲಿಯವರೆಗೂ ವ್ಯವಹಾರವಾಗಿದ್ದ ಅಡಕೆ ದಂಧೆಯ ರೂಪ ಪಡೆಯಿತು. ಈಗಾಗಲೇ ಹಲವು ಬಾರಿ ಅಡಕೆ ಕಲಬೆರಕೆಯಾಗಿ ಹೆಸರು ಕೆಡಿಸಿಕೊಂಡಿದ್ದ ಶಿವಮೊಗ್ಗ ಮಾರುಕಟ್ಟೆಯು ಈಗ ಈ ಪ್ರಕರಣದಿಂದ ಮತ್ತೊಮ್ಮೆ ಸುದ್ದಿಗೆ ಬಂದಿದೆ.

ಲೋಡ್​ಗೆ 25 ಲಕ್ಷ ಲಾಭ!

ಅಡಕೆ ಕಲಬೆರಕೆ ಮಾಡಿ ಮಾರಾಟ ಮಾಡಿದರೆ ಒಂದು ಲೋಡ್​ಗೆ ಕನಿಷ್ಠ 25 ಲಕ್ಷ ರೂ. ಲಾಭ ಪಡೆಯಬಹುದು ಎಂಬ ಅಂಶ ಬಯಲಾಗಿದೆ. ಅಸ್ಸಾಂ, ಕೇರಳದಿಂದ ಒಂದು ಲೋಡ್ ಅಡಕೆಯನ್ನು 40 ಲಕ್ಷ ರೂ.ಗೆ ಖರೀದಿ ಮಾಡುವ ವರ್ತಕರು, ಅದಕ್ಕೊಂದಿಷ್ಟು ಬಣ್ಣ ಹಾಕಿ ಗುಣಮಟ್ಟದ ಅಡಕೆಯೊಂದಿಗೆ ಮಿಶ್ರಣ ಮಾಡುತ್ತಾರೆ. ಬಳಿಕ ಅದನ್ನು ಗುಟ್ಖಾ ಕಂಪನಿಗಳಿಗೆ ರವಾನಿಸುತ್ತಾರೆ. ಆಗ ಒಂದು ಲಾರಿ ಅಡಕೆ ಮೌಲ್ಯ 71 ಲಕ್ಷ ರೂ.ಗೆ ಏರಿಕೆಯಾಗುತ್ತದೆ. ಎಲ್ಲ ಖರ್ಚು ಕಳೆದರೂ ಕನಿಷ್ಠ 25 ಲಕ್ಷ ರೂ. ಲಾಭ ಸಿಗುತ್ತದೆ.

ಕಳಪೆ ಅಡಕೆ ಆಮದು ಮಾಡಿಕೊಂಡು ಕಲಬೆರಕೆ ಮಾಡಲಾಗುತ್ತಿದೆ ಎಂಬ ಸ್ಪಷ್ಟ ಸುಳಿವು ಸಿಕ್ಕಿತ್ತು. ಹೀಗಾಗಿ ಎಪಿಎಂಸಿ ಗೇಟ್​ನಲ್ಲಿ ಲಾರಿಗಳನ್ನು ಪರಿಶೀಲಿಸಿದಾಗ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳದ ಅಡಕೆ ಪತ್ತೆಯಾಗಿದೆ. ಅದನ್ನು ಇಲ್ಲಿನ ಅಡಕೆಯೊಂದಿಗೆ ಮಿಶ್ರಣ ಮಾಡಿ ಮಲೆನಾಡಿನ ಅಡಕೆ ಮಾನ ತಗೆಯಲಾಗುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ.

| ಕೆ.ಪಿ.ದುಗ್ಗಪ್ಪ ಗೌಡ, ಎಪಿಎಂಸಿ ಅಧ್ಯಕ್ಷ

ಅಧ್ಯಕ್ಷರಿಗೆ ಬೆದರಿಕೆ ಕರೆ?

ಕಲಬೆರಕೆ ಜಾಲ ಪತ್ತೆ ಮಾಡಿದ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ಕೆ.ಪಿ.ದುಗ್ಗಪ್ಪ ಗೌಡರಿಗೆ ಈಗಾಗಲೇ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಕಳಪೆ ಅಡಕೆ ಸಾಗಣೆ ಮಾಡುತ್ತಿರುವ ಲಾರಿಗಳ ಪರಿಶೀಲನೆ ನಡೆಸಿದ ಅವರಿಗೆ ಕೆಲ ವರ್ತಕರು ಪರೋಕ್ಷವಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳಪೆ ಆಮದು

ನೆರೆ ರಾಷ್ಟ್ರಗಳಿಂದ ಕಳಪೆ ಅಡಕೆ ಆಮದು ಮಾಡಿಕೊಂಡು ಇಲ್ಲಿನ ರೈತರ ಮೇಲೆ ಪ್ರಹಾರ ಮಾಡಲಾಗುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ಹೀಗಾಗಿ ಪದೇಪದೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಡಕೆ ಆಮದು ಸುಂಕ ಹೆಚ್ಚಿಸುವಲ್ಲಿ ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿವೆ. ಆದರೆ ಅತೀ ದೊಡ್ಡ ಅಡಕೆ ಮಾರುಕಟ್ಟೆ ಎನಿಸಿರುವ ಶಿವಮೊಗ್ಗ ಎಪಿಎಂಸಿಯ ಕೆಲ ವರ್ತಕರೇ ಕಳಪೆ ಅಡಕೆ ಆಮದಿಗೆ ಮುಂದಾಗಿದ್ದಾರೆ. ಈಗಾಗಲೇ ಅಡಕೆ ಸಂಸ್ಕರಣಾ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು ಕೆಲ ದಿನಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಆವಕವಾಗಲಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಅನಪೇಕ್ಷಿತ ಬೆಳವಣಿಗೆ ಧಾರಣೆ ಮೇಲೂ ಪ್ರಭಾವ ಬೀರಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಎಪಿಎಂಸಿಯಲ್ಲಿ ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಮಲೆನಾಡಿನ ಅಡಕೆಯ ಮಾನ ಹರಾಜಾಗುವುದು ನಿಶ್ಚಿತ.


ಶ್ರೀಲಂಕಾ ಅಕ್ರಮ ಆಮದಿಗೆ ಬೇಕು ಬ್ರೇಕ್

ಶಿರಸಿ: ಐದು ವರ್ಷಗಳಿಂದ ಮಲೇಷ್ಯಾದ ಅಡಕೆ ಶ್ರೀಲಂಕಾ ಮೂಲಕ ಅಕ್ರಮವಾಗಿ ಭಾರತದ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಅದರ ದುಷ್ಪರಿಣಾಮ ಶಿರಸಿ ಅಡಕೆ ಮಾರುಕಟ್ಟೆ ಮೇಲೆ ಬೀರುತ್ತಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಭಾರತಕ್ಕೆ ಅಕ್ರಮವಾಗಿ ಅಡಕೆ ಕಳುಹಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದ್ದು, ಇನ್ನಾದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು ಎಂಬ ಆಶಾಭಾವ ವ್ಯಾಪಾರಸ್ಥರು, ರೈತರಲ್ಲಿ ಮೂಡಿದೆ.

ಶಿರಸಿ ಅಡಕೆ ಚಿಕ್ಕ ಆಕಾರದ್ದಾಗಿದ್ದು, ಉತ್ತರ ಭಾರತದಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವರ್ತಕರು ಉತ್ತರ ಭಾರತಕ್ಕೆ ಅಡಕೆ ಕಳಿಸುತ್ತಿದ್ದ ಜಾಗದಲ್ಲಿ ಶ್ರೀಲಂಕಾ ಮೂಲಕ ಭಾರತಕ್ಕೆ ಬಂದ ಅಡಕೆ ವ್ಯಾಪಿಸಿ, ಬೇಡಿಕೆ ಕುಸಿತದ ದುಷ್ಪರಿಣಾಮ ಎದುರಿಸಿದ್ದಾರೆ.

ಸಾರ್ಕ್ ಒಪ್ಪಂದವನ್ನು ಶ್ರೀಲಂಕಾ ದುರುಪಯೋಗ ಪಡಿಸಿಕೊಳ್ಳುತ್ತಿದೆ. ನೇಪಾಳಕ್ಕೆ ಅಡಕೆ ಮಾರಾಟದ ಹೆಸರಿನಲ್ಲಿ ಕೋಲ್ಕತ ಬಂದರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಕೋಲ್ಕತ ಬಂದರಿಗೆ ಬಂದ ಅಡಕೆ ನೇಪಾಳಕ್ಕೆ ಹೋಗದೆ ಸ್ಥಳೀಯವಾಗಿಯೇ ಖಾಲಿಯಾಗುತ್ತಿದ್ದವು. ಶಿರಸಿಯ ಕೆಲ ವರ್ತಕರು ಈ ಅಂಶವನ್ನು ತಿಳಿದು ಸಂಘ ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ಈ ಅಕ್ರಮ ಆಮದು ನಿಯಂತ್ರಿಸಲು ಯತ್ನಿಸಿದ್ದರು.

ಅಕ್ರಮ ತಡೆ ವಿಶ್ವಾಸ: ಜಿಎಸ್​ಟಿ ಜಾರಿ ಬಳಿಕ ದೇಶದಲ್ಲಿ ದೋ ನಂಬರ್ ವ್ಯವಹಾರವಿಲ್ಲ. ಎಲ್ಲವೂ ತೆರಿಗೆಯ ವ್ಯಾಪ್ತಿಯಲ್ಲಿಯೇ ವಹಿವಾಟು ನಡೆಯುತ್ತಿದೆ. ಆದರೆ, ಶ್ರೀಲಂಕಾದಿಂದ ದೇಶದೊಳಗೆ ನುಸುಳುವ ಅಡಕೆ ಸ್ಥಗಿತಗೊಂಡರೆ ನಮ್ಮ ಅಡಕೆಗೆ ಬೇಡಿಕೆ, ದರ ಬರಲಿದೆ. ಭಾರತಕ್ಕೆ ಅಕ್ರಮ ಅಡಕೆ ಸಾಗಾಟದಲ್ಲಿ ಶ್ರೀಲಂಕಾದ ಪ್ರಮುಖ ವ್ಯಕ್ತಿಗಳೇ ಭಾಗಿಯಾಗಿದ್ದಾರೆ. ಅಕ್ರಮ ತಡೆಗೆ ಸರ್ಕಾರಗಳು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಶಿರಸಿ ಟಿಎಸ್​ಎಸ್​ನ ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.