‘ಕತಾರ್​ ಕನ್ನಡ ಹಬ್ಬ’ ರಸಾನುಭವ ಉಣಬಡಿಸಿದ ವಿಕ್ರಂ ಸೂರಿ

ನವೆಂಬರ್​ ತಿಂಗಳು ಬಂದ್ರೆ ಸಾಕು… ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಖುಷಿ ಪಡ್ತಾರೆ. ಅಂದಹಾಗೆ ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲಿ ಮತ್ತು ಸಾಗರದಾಚೆ ನೆಲೆಸಿರುವ ಅನಿವಾಸಿ ಕನ್ನಡಿಗರೂ ಕೂಡ ತಾವಿರುವೆಡೆಯೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮ ಪಟ್ಟಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾರತದಿಂದ 2,885 ಕಿ.ಮೀ. ದೂರದಲ್ಲಿರುವ ಕತಾರ್​​ನಲ್ಲಿ “ಕತಾರ್​ ಕನ್ನಡ ಸಂಘ” ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಈ ಸಮಾರಂಭದಲ್ಲಿ ಸ್ಯಾಂಡಲ್​ವುಡ್​ ತಾರೆಯರು, ನೃತ್ಯಪಟುಗಳು, ಗಾಯಕರು, ಕಿರುತೆರೆ ಕಲಾವಿದರು ಪಾಲ್ಗೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೃತ್ಯಪಟು ಮತ್ತು ಕಲಾವಿದ ವಿಕ್ರಮ್​ ಸೂರಿ ತಮ್ಮ ಅನುಭವವನ್ನು ವಿಜಯವಾಣಿ.ನೆಟ್ https://www.vijayavani.net/​ ಜತೆ ಹಂಚಿಕೊಂಡಿದ್ದಾರೆ.

| ಯೋಗಿತಾ ಬಿ.ಆರ್​.ಗೌಡ

ಕಲಾವಿದರ ದಂಡೇ ಬಂದಿತ್ತು…
ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ಸಾಹಿತಿ ಜಯಂತ್​ ಕಾಯ್ಕಿಣಿ, ನಟ ಸೃಜನ್​ ಲೋಕೇಶ್​, ಗಾಯಕರಾದ ವ್ಯಾಸರಾಜ್​ ಮತ್ತು ಜ್ಯೋತಿ ವ್ಯಾಸ್​ರಾಜ್​, ನೃತ್ಯ ಪಟುಗಳಾಗಿ ನಾನು ಮತ್ತು ನನ್ನ ಪತ್ನಿ ನಟಿ ನಮಿತಾ ರಾವ್​ ಪಾಲ್ಗೊಂಡಿದ್ದೆವು.

ದಶಾವತಾರಕ್ಕೆ ಮೆಚ್ಚುಗೆ…
ನಾನು, ನಮಿತಾ ಕತಾರ್​ನಲ್ಲಿ ‘ಪುಷ್ಪಾಂಜಲಿ’ ‘ದಶಾವತಾರ’ ‘ನಿಯೋ ಕಥಕ್​’ ಥೀಮ್​ಗಳನ್ನಿಟ್ಟುಕೊಂಡು ಸುಮಾರು 45 ನಿಮಿಷ ಪ್ರದರ್ಶನ ನೀಡಿದೆವು. ನಮ್ಮ ದಶಾವತಾರ ಪ್ರದರ್ಶನಕ್ಕೆ ಅತ್ಯಂತ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ಹಿರಿಯರು ಗ್ರೀನ್​ ರೂಂಗೆ ಬಂದು, ‘ಆಗಿನ ಕಾಲದಲ್ಲಿ ನಮಗೆ ಅಜ್ಜಿಯಂದಿರು ಕತೆಗಳನ್ನು ಹೇಳುತ್ತಿದ್ದರು. ಆದರೆ, ಆ ಸಂಸ್ಕೃತಿಯೇ ಕ್ಷೀಣಿಸುತ್ತಿದೆ. ನಿಮ್ಮ ನೃತ್ಯದಲ್ಲಿ ಬಹಳ ಅಚ್ಚುಕಟ್ಟಾಗಿ ಕತೆಯನ್ನು ವಿವರಿಸಿದಿರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ನಾಡಿನಲ್ಲೇ ಇದ್ದ ಅನುಭವವಾಯ್ತು
ಹಲವಾರು ಅನಿವಾಸಿ ಭಾರತೀಯರು ಪ್ರತಿ ವರ್ಷ ನವೆಂಬರ್​ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಅದೇ ರೀತಿ ಕತಾರ್​ನಲ್ಲಿಯೂ ಕತಾರ್​ ಕನ್ನಡ ಸಂಘ ನವೆಂಬರ್​ 16ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಮ್ಮ ನಾಡಿನಿಂದ ಅಷ್ಟು ದೂರು ಪ್ರಯಾಣ ಬೆಳೆಸಿದ್ದರೂ ನಮ್ಮ ನಾಡಿನಲ್ಲೇ ಇದ್ದೆ ಎನ್ನುವಂಥ ಅನುಭವವಾಯಿತು.

ಕತಾರ್​ ಕನ್ನಡಿಗರು ಆಪ್ತರೆನಿಸಿದರು
ದುಬೈ, ನ್ಯೂಯಾರ್ಕ್​, ಕ್ಯಾಲಿಫೋರ್ನಿಯಾ, ಅಬುದಾಬಿ, ಬಹ್ರೇನ್​ ಸೇರಿ ಹಲವೆಡೆ ನಾನು ಪ್ರದರ್ಶನ ನೀಡಿದ್ದೇನೆ. ಆದರೆ ಈ ಬಾರಿ ಕತಾರ್​ನಲ್ಲಿ ನೀಡಿದ ಪ್ರದರ್ಶನ ನನಗೆ ಹೆಚ್ಚು ಆಪ್ತವೆನಿಸಿತು. ಇಲ್ಲೇ ಹುಟ್ಟಿ ಬೆಳೆದ ಮಕ್ಕಳು ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿರುವುದು, ಅಚ್ಚುಕಟ್ಟಾದ ಕನ್ನಡದಲ್ಲಿ ಮಾತನಾಡಿದ್ದು ವಿಶೇಷ. ಅಮೆರಿಕದಂಥ ದೇಶಗಳಲ್ಲಿ ಈಗಿನ ತಲೆಮಾರಿನ ಮಕ್ಕಳು ಹೆಚ್ಚಾಗಿ ಅಯಾ ದೇಶದ ಸಂಸ್ಕೃತಿಗೆ ಹೊಂದಿಕೊಂಡಿರುತ್ತಾರೆ. ಆದರೆ ಇಲ್ಲಿ ನನಗೆ ಆ ಕರ್ನಾಟಕದಲ್ಲಿರುವ ಮಕ್ಕಳಿಗೂ ಕತಾರ್​ನಲ್ಲಿ ಬೆಳದ ಮಕ್ಕಳಿಗೂ ಹೆಚ್ಚು ವ್ಯತ್ಯಾಸ ಕಾಣಿಸಲಿಲ್ಲ.

ಎಷ್ಟು ಮಾತನಾಡಿದರೂ ಸಾಲದು
ಹೊರದೇಶದಲ್ಲಿದ್ದುಕೊಂಡು ತಮ್ಮ ವೃತ್ತಿ, ವೈಯಕ್ತಿಕ ಜೀವನದ ಒತ್ತಡದ ಮಧ್ಯೆ ನಮ್ಮ ಭಾಷೆಗಾಗಿ ಇಷ್ಟೊಂದು ಕೆಲಸ ಮಾಡುತ್ತಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿ. ಇವರ ಬ್ಗಗೆ ಎಷ್ಟು ಮಾತನಾಡಿದರೂ ಸಾಲದು. ಕರ್ನಾಟಕದಿಂದ ಕಲಾವಿದರನ್ನು ಕರೆಸಿಕೊಂಡು ಆತಿಥ್ಯ ನೀಡಿ, ಅಲ್ಲಿ ಪ್ರವಾಸಕ್ಕೂ ಕರೆದುಕೊಂಡು ಹೋಗಿ, ನಮಗೆ ಸಂಭಾವನೆ ಕೊಟ್ಟು ತಮ್ಮವರಂತೆ ನೋಡಿಕೊಂಡು ಅಷ್ಟೇ ಪ್ರೀತಿಯಿಂದ ಬೀಳ್ಕೊಡುಗೆ ಕೊಟ್ಟರು.

ದರ್ಶನ್ ಈಗ ಕನ್ನಡ ಕಲಾ ಕುಲ ತಿಲಕ